Homeಲೇಖನಪರಸಗಡ ನಾಟಕೋತ್ಸವ ೨೦೨೨

ಪರಸಗಡ ನಾಟಕೋತ್ಸವ ೨೦೨೨

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ. ಈಗ ಇದು ಸವದತ್ತಿ ಎಲ್ಲಮ್ಮಾ ವಿಧಾನ ಸಭಾ ಕ್ಷೇತ್ರವೆಂದೂ ಹೆಸರಾಗಿದೆ. ಇದು ಬೆಳಗಾವಿ ಜಿಲ್ಲಾ ಕೇಂದ್ರದಿಂದ ೮೮ ಕಿ,ಮೀ, ಧಾರವಾಡ ಜಿಲ್ಲಾ ಕೇಂದ್ರದಿಂದ ೩೮ ಕಿ.ಮೀ. ಅಂತರದಲ್ಲಿದ್ದು ತಾಲೂಕ ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಆಣೆಕಟ್ಟು. ಮುನವಳ್ಳಿ ಸಕ್ಕರೆ ಕಾರ್ಖಾನೆ,ಸಿರಸಂಗಿ ಲಿಂಗರಾಜರಂತಹ ಅನೇಕ ಪ್ರಸಿದ್ದ ತಾಣಗಳನ್ನು ಹೊಂದಿದ ತಾಲೂಕಾ ಕೆಂದ್ರ.

ಸವದತ್ತಿ ಪ್ರವೇಶವಾಗುತ್ತಿದಂತೆ ಕೋಟೆಯೊಂದು ಕಾಣತೊಡಗುತ್ತದೆ. ಇದು ಎರಡನೇ ಜಾಯಗೊಂಡ ದೇಸಾಯಿ ನಿರ್ಮಿಸಿದ ಕೋಟೆ.ಸರಕಾರ ಹಾಗೂ ಸ್ಥಳೀಯ ಪುರಸಭೆ ಈ ಕೋಟೆಯನ್ನು ಅಭಿವೃದ್ದಿ ಪಡಿಸಿದ ಕಾರಣ ಇದೊಂದು ಐತಿಹಾಸಿಕ ಪ್ರವಾಸೀ ತಾಣವಾಗಿದೆ. ಈ ಕೊಟೆಯೊಳಗಡೆ ಪ್ರತಿವರ್ಷ ಸ್ಥಳೀಯ ರಂಗ ಕಲಾವಿದರ ಸಂಘಟನೆಯು ನೀನಾಸಂ,ರಂಗಾಯಣದಂಥ ರಾಜ್ಯದ ಖ್ಯಾತ ನಾಟಕ ಸಂಘಟನೆಗಳ ನಾಟಕಗಳನ್ನೊಳಗೊಂಡ ನಾಟಕೋತ್ಸವ ನಡೆಸುತ್ತಿದೆ.

ಹೀಗಾಗಿ ಹಗಲು ಪ್ರವಾಸೀ ತಾಣವಾದ ಈ ಕೋಟೆ ಪ್ರತಿವರ್ಷ ಹಲವು ದಿನಗಳು ರಾತ್ರಿಯಾಗುತ್ತಿದ್ದಂತೆ ಕೋಟೆಯೊಳಗಿನ ಹುಲ್ಲುಹಾಸು, ಅಲ್ಲಿನ ಕಟ್ಟೆ, ರಂಗ ಆರಾಧಕರ ಮೂಲಕ ನಾಟಕ ತಾಣವಾಗಿ ಗಮನ ಸೆಳೆಯುತ್ತದೆ.ತಂಪಾದ ಗಾಳಿ ಮೆತ್ತನೆಯ ಹುಲ್ಲುಹಾಸು, ತೆರೆದ ಕಟ್ಟೆಯ ಮೇಲೆ ಪರದೆಗಳು ರಂಗ ಸಜ್ಜಿಕೆಗಳು ದ್ವನಿವರ್ಧಕಗಳು ಬಣ್ಣಬಣ್ಣದ ವಿದ್ಯುತ್ ದೀಪಗಳು ಪ್ಲಾಸ್ಟಿಕ್ ಖುರ್ಚಿಗಳು ಕಾಣತೊಡಗುತ್ತವೆ. ೭ ಗಂಟೆಗೆ ನಾಟಕ ಪ್ರಾರಂಭಗೊಂಡು ಎರಡು ತಾಸುಗಳವರೆಗೆ ಪ್ರದರ್ಶನಗೊಳ್ಳುವ ಮೂಲಕ ರಂಗಾಸಕ್ತರ ಮನಸೂರೆಗೊಳ್ಳುತ್ತವೆ.

ಪರಸಗಡ ನಾಟಕೋತ್ಸವದ ಈ ಬಾರಿಯ ವಿಶೇಷತೆ ಏನೆಂದರೆ ರಂಗ ಆರಾಧನಾ ಸಾಂಸ್ಕ್ರತಿಕ ಸಂಘಟನೆಯು ಜನ್ಮ ತಳೆದು ಬರೊಬ್ಬರಿ ೨೫ ವರ್ಷಗಳು ಕಳೆದವು, ೨೫ನೇ ವರ್ಷದ ಆಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕೆಂಬ ಪರಿಕಲ್ಪನೆಯೋಂದಿಗೆ ೨೫ ನಾಟಕಗಳನ್ನು ಮಾಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಲಿದೆ.

೨೫ ನಾಟಕಗಳನ್ನು ೩ ಹಂತದಲ್ಲಿ ಪಬ್ಲಿಕ್ ಪ್ರದರ್ಶನ ಮಾಡುತ್ತಿದ್ದು  ಪ್ರಥಮ ಹಂತ ಪೆಬ್ರುವರಿ ೧೯ ರಿಂದ ಪೆಬ್ರುವರಿ ೨೮ರ ವರೆಗೆ ನಡೆಯಲಿದೆ.

ಮೊದಲ ಹಂತ ವಿಧಾನಸಭೆ ಉಪ ಸಭಾಧ್ಯಕ್ಷರಾದ ಆನಂದ ಮಾಮನಿಯವರು ಉದ್ಘಾಟಿಸಲಿದ್ದಾರೆ ಗಣ್ಯರಾದ ರೇಣುಕಾ ಪಾಟೀಲ [ಪದಕಿ] ಮೌನೇಶ್ವರ ಸುಳ್ಳದ, ಬಸವರಾಜ ಕಾರದಗಿ, ಡಾ. ಅಭಿನಂದನ ಕಬ್ಬಿಣ,ಸಿದ್ದಯ್ಯ ವಡೆಯರ ಸೇರಿದಂತೆ ಸ್ಥಳೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ, ಅಂದಿನ ವೇದಿಕೆ ಮೇಲೆ ದಿವಂಗತ  ಚಂದ್ರಶೇಖರ ಮಾಮನಿಯವರ ಸ್ಮರಣಾರ್ಥವಾಗಿ ಇಟ್ಟಿರುವ “ರಂಗ ಚಂದ್ರಮ” ಪ್ರಶಸ್ತಿಯನ್ನು ಶ್ರೀಪತಿ ಮಂಜನಬೈಲು ಅವರಿಗೆ ನೀಡಲಾಗುವುದು. ವಿನೋದ ಅಂಬೇಕರ ರವರಿಗೆ ರುದ್ರಪ್ಪ ಶಿಂದೆ ಇವರು “ರಂಗ ಆರಾಧಕ” ಪ್ರಶಸ್ತಿಯನ್ನು ನೀಡುವರು. ದಿವಂಗತ ಚಂದ್ರಕಾಂತ ಸುಳ್ಳದ ರವರ ಸ್ಮರಣಾರ್ಥ ಇಟ್ಟಿರುವ “ರಂಗ ಕಲಾವಿದ” ಪ್ರಶಸ್ತಿಯನ್ನು ಶಿರೀಷ ಜೋಶಿಯವರಿಗೆ ನೀಡಲಾಗುವುದು.

ದ್ವಿತೀಯ ಹಂತದಲ್ಲಿ ಮಾರ್ಚ ೩ ರಿಂದ ಮಾರ್ಚ ೧೩ ರವರೆಗೆ ವಿಭಿನ್ನ ನಾಟಕಗಳನ್ನು ಪ್ರದರ್ಶಿಸಲಾಗುವುದು. ಮಾರ್ಚ ೨೦ ರಿಂದ ೨೭ ರವರೆಗೆ ಆರು ನಾಟಕಗಳು ಪ್ರದರ್ಶನವಾಗಲಿವೆ. ೨೫ ನಾಟಕಗಳನ್ನು ಆಡಿಸಲು ೨೫ನೇಯ ವರ್ಷದ ಸಂಭ್ರಮ ಪ್ರಯುಕ್ತ ಅತ್ಯಂತ ಭರ್ಜರಿಯಾಗಿ ಪ್ರದರ್ಶನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ, ಕನ್ನಡ ಮತ್ತು ಸಂಸ್ಕ್ರತಿ ನಿರ್ದೆಶನಾಲಯ ಬೆಂಗಳೂರು. ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ಜರುಗುವ ನಾಟಕೋತ್ಸವದಲ್ಲಿ ಧಾರವಾಡದ ಸಮುದಾಯ ಹಾಗೂ ರಂಗ ಪರಿಸರ, ಹುಬ್ಬಳ್ಳಿಯ ಸುನಿಧಿ ಕಲಾಸೌರಭ, ಕೆ ವಿ ಸುಬ್ಬಣ್ಣ ರಂಗ ಸಮಾಜ ಹೇಗ್ಗೂಡು ಇನ್ನೂ ಅನೇಕ ತಂಡಗಳು ಬಾಗವಹಿಸಲಿವೆ.

ತಾಲೂಕಿನ ರಂಗ ಕಲಾವಿದರ ಸಾಹಿತಿಗಳ ರಂಗ ಪೋಷಕರ ರಂಗ ಆಸಕ್ತರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ,ಈ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಮುಖ್ಯ ರೂವಾರಿಗಳು ಕಲಾವಿದರಾದ ಝಾಕೀರಹುಸೇನ ನದಾಫ ರವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ.

ನಾವೆಲ್ಲ ನಾಟಕಗಳನ್ನು ಥಿಯೇಟರ್ ಅಥವ ಟೆಂಟ್‌ಗಳಲ್ಲಿ ನೋಡುವುದು ಸಾಮಾನ್ಯ ಸಂಗತಿ. ಆದರೆ ಸವದತ್ತಿಯ ರಂಗಾಸಕ್ತರು ಐತಿಹಾಸಿಕ ಕೋಟೆಯ ಒಳಗಿನ ಆವರಣವನ್ನು ತಮ್ಮ ರಂಗ ಚಟುವಟಿಕೆಗಳಿಗೆ ಪ್ರತಿ ವರ್ಷಕ್ಕೊಂದು ಸಲ ಬಳಕೆ ಮಾಡಿಕೊಂಡು ಕೋಟೆಯ ಚಾರಿತ್ರಿಕ ಹಿನ್ನೆಲೆಯನ್ನು ಕೂಡ ಜನ ಗಮನಿಸುವಂತೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ.ಅದು ಕೂಡ ಕಳೆದ ೨೫ ವರ್ಷದಿಂದ ಈ ಪ್ರಕ್ರಿಯೆ ಜರುಗುತ್ತ ಬಂದಿದ್ದು ದಾಖಲಾರ್ಹ ಸಂಗತಿ.ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ(ರಿ) ಸವದತ್ತಿಯ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ ೨೦೨೨ ಜರುಗುತ್ತಿದೆ.

ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ(ರಿ) ಸವದತ್ತಿ:

ಸವದತ್ತಿಯ ರಂಗಾಸಕ್ತ ಮಿತ್ರರೆಲ್ಲ ವೃತ್ತಿರಂಗಭೂಮಿ ಶೈಲಿಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲಿ ಬದಲಾವಣೆ ಬಯಸಿ ಹವ್ಯಾಸಿ ನಾಟಕಗಳನ್ನು ಪ್ರಸ್ತುತಪಡಿಸಲು ನಿರ್ಧರಿಸಿ, ೧೯೯೭ ರಲ್ಲಿ ಹುಟ್ಟುಹಾಕಿದ ರಂಗಸಂಸ್ಥೆಯೇ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ. ಝಕೀರ ನದಾಫ, ರಾಜು ಬದಾಮಿ, ಪ್ರದೀಪ ಸಾತಕ್ಕನವರ, ರವಿ ಭಜಂತ್ರಿ, ಎಸ್.ಬಿ. ಜಗಾಪೂರ, ಸುನೀಲ ಪತ್ರಿ, ದಿಲಾವರ ನದಾಫ, ಸದಾಶಿವ ಮಿರಜಕರ, ಶಿವಾನಂದ ತಾರೀಹಾಳ ಇನ್ನೂ ಹಲವಾರು ಜನ ಇದರ ಸಂಸ್ಥಾಪನಾ ಸದಸ್ಯರು. ಅಂದಹಾಗೆ ಇವರೆಲ್ಲ ವೃತ್ತಿ ರಂಗಭೂಮಿಯಿಂದ ಬಂದವರಲ್ಲ.ಹವ್ಯಾಸಿ ಕಲಾವಿದರು. ಒಬ್ಬೊಬ್ಬರದು ಒಂದೊಂದು ವೃತ್ತಿ ಈ ತಂಡದಲ್ಲಿ ಉಪನ್ಯಾಸಕರಿದ್ದಾರೆ, ಶಿಕ್ಷಕರಿದ್ದಾರೆ, ಪರ್ತಕರ್ತರಿದ್ದಾರೆ, ವ್ಯಾಪಾರಿಗಳಿದ್ದಾರೆ, ವಿದ್ಯಾರ್ಥಿಗಳಿದ್ದಾರೆ ಹೀಗೆ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವರ್ಷಕ್ಕೊಮ್ಮೆ ಕೋಟೆಯ ಆವರಣದಲ್ಲಿ ರಂಗ ಆರಾಧನಾ ಸಂಸ್ಥೆಯ ಮೂಲಕ ನಾಟಕಗಳನ್ನು ಮಾಡುತ್ತ ತಮ್ಮ ಹವ್ಯಾಸಕ್ಕೊಂದು ಇಂಬು ಕೊಡುತ್ತಿರುವರು.

ಇವರೆಲ್ಲರೂ ಸೇರಿ ೧೯೯೭ ರಲ್ಲಿ ರಂಗತಜ್ಞ ವಿನೋದ ಅಂಬೇಕರ ನಿರ್ದೇಶನದಲ್ಲಿ ಒಂದು ತಿಂಗಳ “ರಂಗ ತರಬೇತಿ ಶಿಬಿರ” ನಡೆಸಿ, “ಮೃಚ್ಛಕಟಿಕ” ನಾಟಕದ ಎರಡು ಪ್ರದರ್ಶನವನ್ನು ಇಲ್ಲಿ ನೀಡಿದರು. ಅದು ಜನರ ಗಮನ ಸೆಳೆಯಿತಲ್ಲದೇ ಅವರಿಂದ ಮತ್ತೆ ಮುಂದಿನ ವರ್ಷ ನಾಟಕ ಪ್ರದರ್ಶನ ನೀಡುವಂತೆ ಪ್ರೋತ್ಸಾಹ ಕೂಡ ದೊರೆಯಿತು.

ಅದರ ಫಲವಾಗಿ ೧೯೯೮ ರಲ್ಲಿ ಮತ್ತೆ ಅದೇ ನಿರ್ದೇಶಕರಿಂದ “ಉದ್ಭವ” ನಾಟಕದ ಎರಡು ಪ್ರದರ್ಶನ ನೀಡಲಾಯಿತು.ಇದು ಕೂಡ ರಂಗಾಸಕ್ತರ ಗಮನ ಸೆಳೆಯಿತು. ೧೯೯೯ ರಲ್ಲಿ ವಿಭಿನ್ನ ರೀತಿಯಲ್ಲಿ ಸವದತ್ತಿಯ ಕೋಟೆಯ ಆವರಣವನ್ನೇ ರಂಗಸಜ್ಜಿಕೆಯನ್ನಾಗಿ ಪರಿವರ್ತಿಸಿ, ದೆಹಲಿ ನಾಟಕ ಶಾಲೆಯ ಪದವೀಧರ ದಿ. ಜಯತೀರ್ಥ ಜೋ಼ಶಿಯವರ ನಿರ್ದೇಶನದಲ್ಲಿ “ಗುಲಾಮನ ಸ್ವಾತಂತ್ರ್ಯಯಾತ್ರೆ” ಎನ್ನುವ ನಾಟಕವನ್ನು ಪ್ರದರ್ಶಿಸಿದಾಗ, ನಾಡಿನ ಬಹುತೇಕ ರಂಗಾಸಕ್ತರು ಹಾಗೂ ರಂಗಕರ್ಮಿಗಳು ಬಂದು ನಾಟಕವನ್ನು ವೀಕ್ಷಣೆ ಮಾಡಿದ್ದು ಈ ತಂಡದ ಹೆಮ್ಮೆಯ ಸಂಗತಿ.  ಮತ್ತು ಆ ನಾಟಕ ೧೧ ಪ್ರದರ್ಶನಗಳನ್ನು ಕಂಡು, ಕಲಬುರಗಿಯ ದೂರದರ್ಶನ ಕೇಂದ್ರದಿಂದ ಪ್ರಸಾರಗೊಂಡಿತು.

2೦೦೦ನೇ ಇಸ್ವಿಯಲ್ಲಿ “ಪರಸಗಡ ನಾಟಕೋತ್ಸವ” ಹೆಸರಿನಲ್ಲಿ ನಾಟಕೋತ್ಸವವನ್ನು ಪ್ರಾರಂಭಿಸಿ ಬೇರೆ ಬೇರೆ ನಾಟಕಗಳ ಪ್ರದರ್ಶನಗಳನ್ನು ಕೋಟೆಯ ಆವರಣದಲ್ಲಿ ಆಯೋಜಿಸಲಾಯಿತು. ಇದರಲ್ಲಿ ಧಾರವಾಡ, ಬೆಳಗಾವಿ, ಗದಗದ ಹವ್ಯಾಸಿ ಕಲಾ ತಂಡಗಳು ಭಾಗವಹಿಸಿದವು. ಹಾಗೂ ಹೆಗ್ಗೋಡಿನ ನೀನಾಸಂ, ಸಾಣೆ ಹಳ್ಳಿಯ ಶಿವಸಂಚಾರ, ಚಿತ್ರದುರ್ಗದ ಜಮುರಾ ಕಲಾಲೋಕ ತಂಡಗಳು ಕೂಡ ಇವರ ಕರೆಗೆ ಓಗೊಟ್ಟು ಇಲ್ಲಿನ ರಂಗಪ್ರೇಮಿಗಳಿಗೆ ತಮ್ಮ ಪ್ರಯೋಗಾತ್ಮಕ ನಾಟಕದ ಸವಿಯನ್ನು ಉಣಬಡಿಸಿದವು.  ಇದರ ಪ್ರತಿಫಲ ಕಳೆದ ೨೫ ವರ್ಷಗಳಿಂದ ಸಂಸ್ಥೆ ತನ್ನ ರಂಗಸೇವಾ ಕಾಯಕವನ್ನು ಮುಂದುವರೆಸಿದೆ. ಇಲ್ಲಿಯವರೆಗೂ ಸ್ವಂತಕ್ಕೊಂದು ಸೂರಿಲ್ಲದ ತಂಡ ಸವದತ್ತಿಯ ರೋಟರಿ ಕ್ಲಬ್, ಜೈಂಟ್ಸ್ ಗ್ರುಪ್, ಚೌಕಿಮಠ, ಇವುಗಳ ಆಶ್ರಯದಲ್ಲಿ ತನ್ನ ನಾಟಕಗಳನ್ನು ತಯಾರಿಸಿದೆ  ಹಾಗೂ ಕಳೆದ ೭ ವರ್ಷಗಳಿಂದ ಸವದತ್ತಿಯ ಹಿರಿಯ ನ್ಯಾಯವಾದಿ ವ್ಹಿ.ಆರ್.ಕಾರದಗಿ, ಚೇರಮನ್ನರು ಸವದತ್ತಿ ಅರ್ಬನ್ ಕೊ-ಆಪ್ ಕ್ರೆಡಿಟ್ ಸೊಸೈಟಿಇವರ ಆಶ್ರಯದಲ್ಲಿ ತನ್ನ ಚಟುವಟಿಕೆಯನ್ನು ನಡೆಸುತ್ತಿದೆ.

ಪ್ರತಿ ವರ್ಷ ಹೊಸ ನಾಟಕ ತಯಾರಿಸುವ ಸಂಸ್ಥೆ ಇಲ್ಲಿಯ ವರೆಗೆ ೨೧ ಬೇರೆ ಬೇರೆ ನಾಟಕಗಳ ೪೫ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಸವದತ್ತಿ ಹಾಗೂ ಬೇರೆ ಊರುಗಳಲ್ಲಿ ನೀಡಿದೆ.

ಹಾಗೂ ಹೊರಗಿನ ತಂಡಗಳ ೬೦ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನವನ್ನು ಸವದತ್ತಿಯಲ್ಲಿ ಆಯೋಜಿಸಿದೆ.

ತಂಡ ಇದುವರೆಗೂ ಆಡಿಸಿದ ಪ್ರಮುಖ ನಾಟಕಗಳು:

ಮೃಚ್ಛಕಟಿಕ, ಉದ್ಭವ, ಗುಲಾಮನ ಸ್ವಾತಂತ್ರ‍್ಯ ಯಾತ್ರೆ, ಅಕ್ಷರಾ ಬಾಳಿಗೊಂದು ಉತ್ತರಾ, ಮಿಂಚು, ಮೆಟ್ಟಲೇರುವ ಗಡಿಬಿಡಿಯಲ್ಲಿ ಕೊಡೆ ಮರೆತವರು, ಪ್ರತಿಶೋಧ, ದಾರಿ ಯಾವುದಯ್ಯಾ ವೈಕುಂಠಕೆ, ಹಸಿರೆಲೆ ಹಣ್ಣೆಲೆ, ಚೋರ ಚರಣದಾಸ, ಹಸ್ತಾಂತರ, ಬಿಳುಪಿನ ಹೆಣ, ತ್ಯಾಗವೀರ ಶಿರಸಂಗಿ ಲಿಂಗರಾಜರು, ತೇರು,  ಗಾಂಧಿಯ ಅಂತಿಮ ದಿನಗಳು, ಕಲ್ಲೂರ ವಾಡೆದಾಗ, ಮಣ್ಣು, ಶಿವರಾತ್ರಿ, ಕದಡಿದ ನೀರು, ಲವ್ ಇನ್ ಚಿತ್ರದುರ್ಗ, ಬೀರವ್ವನ ಬಾಳೇಹಣ್ಣು, ರುದ್ರಸರ್ಜನ ಪ್ರೇಮ ಪ್ರಸಂಗ, ಜಾಳ್ ಪೋಳ್, ಸುಡಗಾಡು ಸಿದ್ದನ ಪ್ರಸಂಗ, ಮೆಹಮೂದ್ ಗಾವಾನ್, ಕಾತ್ರಾಳ ರತ್ನಿಯ ಚಾದಂಗಡಿ., ದೇಸಗತಿ, ಸುಳ್ಳು ಸಂಸಾರದಾಟ.

ಚುಕ್ಕಿ ಮದುವೆ, ಸಾವಿಂಗೆ ಸಂಗಡವಾರು, ೩೦ ನಾಟಕಗಳು ಹೊಸ ರೀತಿಯ ಪ್ರಯೋಗಾತ್ಮಕ ಜೊತೆಗೆ ಸ್ಥಳೀಯ ಲೇಖಕರ ಕಥೆಗಳನ್ನು ಕೂಡ ನಾಟಕಗಳನ್ನಾಗಿಸಿ ಅದಕ್ಕೊಂದು ಸ್ವರೂಪ ನೀಡುತ್ತಿರುವ “ರಂಗ ಆರಾಧನಾ ಸಂಸ್ಥೆ”ಯು ಇನ್ನೂ ಉತ್ತರೋತ್ತರವಾಗೆ ಬೆಳೆಯಬೇಕು ಇದಕ್ಕೆ ಸ್ಥಳೀಯ ಸಂಸ್ಥೆಗಳು ರಂಗಾಸಕ್ತರೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಲಿ.ಇಂದು ಅಳಿಯುತ್ತಿರುವ ರಂಗ ಚಟುವಟಿಕೆಗಳು ನಿರಂತರವಾಗಿ ಇಂತಹ ಪ್ರತಿಭೆಗಳ ಮೂಲಕ ರಂಗ ಕಲೆಯನ್ನು ಉಳಿಸುವಂತಾಗಬೇಕು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ-೫೯೧೧೧೭

RELATED ARTICLES

Most Popular

error: Content is protected !!
Join WhatsApp Group