spot_img
spot_img

ಸಾವಲ್ಲೂ ಸಾರ್ಥಕತೆ ಮೆರೆದ ದೇಹದಾನಿ ಕಾಲವಾಡ ಶಿವಪ್ಪ ಹೂಗಾರ

Must Read

- Advertisement -

೧೩-೨-೨೦೨೨ ರಂದು ಆತ್ಮೀಯ ಸ್ನೇಹಿತ ನಾಗರಾಜ ಹೂಗಾರ ಅವರ ತಂದೆ ಶಿವಪ್ಪ ಹೂಗಾರ ನಿಧನ ವಾರ್ತೆಯನ್ನು ವ್ಯಾಟ್ಸಪನಲ್ಲಿ ಹಾಕಿದ್ದರು. ವಿಕಲಚೇತನ ಮಕ್ಕಳ ಶಿಕ್ಷಣದಲ್ಲಿ ತಂದೆಗೆ ತಕ್ಕ ಮಗನಾಗಿ ನಾಗರಾಜ ಸೇವೆ ಸಲ್ಲಿಸುತ್ತಿರುವುದನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ತಂದೆಯ ನಿಧನವಾರ್ತೆ ಕೇಳಿದಾಗ ಕೆಲಕ್ಷಣ ಮಾತೇ ಹೊರಡಲಿಲ್ಲ. ಅವರ ದುಃಖದಲ್ಲೂ ಸಾಂತ್ವನದ ಮಾತುಗಳನ್ನು ಹೇಳಿದೆ. ಕಡು ಬಡತನದ ನಡುವಲ್ಲಿಯೂ ವೃತ್ತಿ ಕಾಯಕ ಸೇವೆಗಳ ಮೂಲಕ ತಮ್ಮ ನಿತ್ಯಜೀವನದ ನೊಗ ಹೊತ್ತುಕೊಂಡು ಸಾಮಾಜಿಕ ಜೀವನದಲ್ಲಿ ಬಸವಾದಿ ಶಿವಶರಣರ ಸನ್ಮಾರ್ಗದಲ್ಲಿ ನಡೆದುಕೊಂಡು ಬರುವ ಮೂಲಕ ತಮ್ಮ ಇಳಿವಯಸ್ಸಿನಲ್ಲೂ ಸಮಾಜದ ಇತರರಿಗೂ ದಾರಿ ದೀಪವಾಗಿ ಬೆಳಗುವ ದೀವಿಗೆಯಾದ ಶಿವಪ್ಪ ಭೀಮರಾಶಿ ಹೂಗಾರ ಅವರು. ತಮ್ಮ ಇಳಿ ವಯಸ್ಸಿನಲ್ಲೂ ಮಾರ್ಗದರ್ಶನ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದರೊಂದಿಗೆ ತಮ್ಮ ಮರಣ ನಂತರ ದೇಹವನ್ನು ಕರ್ನಾಟಕ ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ ಹುಬ್ಬಳ್ಳಿ ಇವರಿಗೆ ದೇಹದಾನ ಮಾಡುವ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆದವರು.

ತಮ್ಮ ೭೫ ನೆಯ ವಯಸ್ಸಿನಲ್ಲಿ ನಿಧನರಾದ ಹೂಗಾರರ ಬದುಕಿನ ಸಾರ್ಥಕ ದಿನಗಳ ಹಿನ್ನೋಟವನ್ನು ಅವರ ಮಗ ನಾಗರಾಜ ಮೂಲಕ ತಿಳಿದುಕೊಂಡೆನು.

- Advertisement -

ಇವರು ಭಾರತದ ಸ್ವಾತಂತ್ರ‍್ಯ ಪೂರ್ವದಲ್ಲಿ ಅಂದರೆ ದಿ ೨೮/೬/೧೯೪೭ ರಲ್ಲಿ ವೃತ್ತಿ ಕಾಯಕದ ಮೇರು ಪರ್ವತ ಎನ್ನುವ ಭೀಮರಾಶಿ ಮತ್ತು ದೇವಕ್ಕೆಮ್ಮ ಹೂಗಾರ ದಂಪತಿಗಳಲ್ಲಿ ಮೂವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ೬ನೇ ಪುತ್ರನಾಗಿ ಜನಿಸಿದರು.

ಬಾಲ್ಯಾವಸ್ಥೆಯಲ್ಲಿ ಅತಿ ಕಡು ಬಡತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ವೃತ್ತಿ ಕಾಯಕದಲ್ಲಿ ಶಿವಭಕ್ತರಿಗೆ ಹೂ ಪತ್ರಿ ನೀಡುವದು ಹಾಗೂ ನವಲಗುಂದ ತಾಲ್ಲೂಕು ಕಾಲವಾಡ ಗ್ರಾಮದಲ್ಲಿ ಶ್ರೀ ಕರಿಯಮ್ಮ ಮತ್ತು ಕಲ್ಯಾಣ ಬಸವೇಶ್ವರ ದೇವಾಲಯಗಳ ಪೂಜಾರಿಕೆಯ ಸೇವಾ ಕೈಂಕರ್ಯದಲ್ಲಿ ನಿರತರಾಗಿದ್ದರು.

ಬಾಲ್ಯದ ದಿನಗಳನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಮತ್ತು ಹೂಲಿಕಟ್ಟಿ ಗ್ರಾಮದಲ್ಲಿ ಸೋದರ ಮಾವಂದಿರರಾದ ಮಹಾದೇವಪ್ಪ, ಶಂಕರಪ್ಪ ಹಾಗೂ ಹನುಮಂತಪ್ಪ ಹೂಗಾರ ಇವರ ಆಶ್ರಯ ಮತ್ತು ಮಾರ್ಗದರ್ಶನದಲ್ಲಿ ಕಳೆದು ಬೆಳೆದರು.

- Advertisement -

ಅಂದಿನ ಕಾಲದಲ್ಲಿ ಶೈಕ್ಷಣಿಕವಾಗಿ ೭ನೇ ತರಗತಿಯನ್ನು ತೇರ್ಗಡೆಯಾದರು. ಶೈಕ್ಷಣಿಕವಾಗಿ ಅಪಾರ ಆಸಕ್ತಿ ಹೊಂದಿದ್ದರು, ಮನೆ ಪರಿಸ್ಥಿತಿಯು ಶಿಕ್ಷಣದ ಪ್ರಗತಿಯನ್ನು ಕುಂಠಿತಗೊಳಿಸಿತು. ತದನಂತರದ ದಿನಗಳಲ್ಲಿ ನವಲಗುಂದ ತಾಲ್ಲೂಕು ಕಾಲವಾಡ ಗ್ರಾಮದಲ್ಲಿ ಮನೆಯ ಜವಾಬ್ದಾರಿ ಹೊತ್ತಿದ್ದ ಇವರು ಕೃಷಿ ಕಾಯಕ ಹಾಗೂ ಹೂಗಾರಿಕೆ ನಿರ್ವಹಣೆ ಇವರ ನಿತ್ಯದ ವೃತ್ತಿಪರ ಕಾಯಕವಾಗಿ ರೂಢಿಸಿಕೊಂಡರು.

ಆದರೆ ಪ್ರವೃತ್ತಿಯಿಂದ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ನಂತರದ ದಿನಗಳಲ್ಲಿ ಬಾಳಸಂಗಾತಿಯಾಗಿ ಧಾರವಾಡದ ಶಿವಶರಣ ಮೂಗಬಸಪ್ಪ ಹಾಗೂ ಯಲ್ಲಮ್ಮ ಹೂಗಾರ ಇವರ ಪುತ್ರಿ ಬಸವಣ್ಣೆವ್ವ ಇವರನ್ನು ವರಸಿದರು. ಇವರು ಒಬ್ಬ ಪುತ್ರ, ಮೂವರು ಹೆಣ್ಣು ಮಕ್ಕಳ ತುಂಬು ಕುಟುಂಬದ ಜೀವನವನ್ನು ನಡೆಸಲಾರಂಬಿಸಿದರು.

ಮೊದಲಿಂದಲೂ ಶೈಕ್ಷಣಿಕವಾಗಿ ತುಂಬಾ ಆಸಕ್ತಿ ಹೊಂದಿದ್ದರಿಂದ ಮತ್ತು ತಮ್ಮ ಕಡುಬಡತನದ ಜೀವನದಲ್ಲಿ ಅನುಭವಿಸಿದ ಪರಿಸ್ಥಿತಿ ಅರಿತು, ಗ್ರಾಮಾಂತರ ಪ್ರದೇಶಗಳಲ್ಲಿ ಬಡತನದ ಬವಣೆಯಲ್ಲಿರುವ ಕುಟುಂಬಗಳಿಗೆ ಆಸರೆಯಾಗಲಿ ಎಂಬುದನ್ನು ಮನಗಂಡು ನವಲಗುಂದ ತಾಲ್ಲೂಕು ಕಾಲವಾಡ ಗ್ರಾಮದಲ್ಲಿ ಆರೂಡ ಸಂಸ್ಥೆಯ ಮೂಲಕ ಅಕ್ಷರ ಕಿಡ್ಸ್ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲೆ ಆರಂಬಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆದರು. ಇದಕ್ಕೆ ಗ್ರಾಮದ ಪ್ರಗತಿಪರ ರೈತರು ಹಾಗೂ ಶರಣಜೀವಿ ಲಿಂಗರಡ್ಡಿ ನಿಂಗಪ್ಪ ನವರ ಸಹಕಾರ ಮತ್ತು ಸಹಾಯದಿಂದ ಆರಂಭಿಸಲಾಯಿತು.

ಇತ್ತೀಚಿನ ದಿನಗಳ ನಡುವೆ ಮಹಾಮಾರಿ ಕೋವಿಡ ೧೯ ಅಟ್ಟಹಾಸದ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದರೂ ಸಹಿತ ಆರೂಡ ಸಂಸ್ಥೆ ಹಾಗೂ ಎಪಿಡಿ ಬೆಂಗಳೂರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸಹಕಾರದಿಂದ ಮಕ್ಕಳು, ವಿಕಲಚೇತನರು ಮಹಿಳೆಯರು, ಕೂಲಿ ಕಾರ್ಮಿಕರು ಸೇರಿದಂತೆ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿವವರಿಗೆ ಉಚಿತವಾಗಿ ಅನ್ನ ಆಹಾರದ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಾನವೀಯ ಮೌಲ್ಯದ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಾಗಿದೆ. ವಿದ್ಯಾವಂತ ಯುವ ಜನರಿಗೆ ವೃತಿ ತರಬೇತಿ ನೀಡಿ ಉದ್ಯೋಗ ಅವಕಾಶ ಒದಗಿಸು ಕಾರ್ಯವನ್ನು ಇವರ ಸಂಸ್ಥೆಯ ಮೂಲಕ ಜರುಗಿಸುತ್ತಿರುವುದು ಮಹತ್ವದ್ದಾಗಿದೆ.

ಅಷ್ಟೇ ಅಲ್ಲದೇ ಮಕ್ಕಳು ಮಹಿಳೆಯರು ವಯೋವೃದ್ದರಿಗೆ ವಿವಿಧ ಸಂಘಟನೆ, ಇಲಾಖೆಗಳ ಸಹಕಾರದಿಂದ ಕಾನೂನು ಅರಿವು ನೆರವು,ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ತಪಾಸಣೆ ಶಿಬಿರಗಳನ್ನು ಸಂಸ್ಥೆಯ ಮೂಲಕ ಏರ್ಪಡಿಸಿಕೊಂಡು ಬರಲಾಗುತ್ತಿದೆ.

ಇಂತಹ ಸಮಾಜಮುಖಿ ಕಾರ್ಯಗಳನ್ನು ತಮ್ಮ ಇಳಿ ವಯಸ್ಸಿನಲ್ಲೂ ಮಾರ್ಗದರ್ಶನ ನೀಡುವುದರೊಂದಿಗೆ ತಮ್ಮ ಮರಣ ನಂತರ ದೇಹವನ್ನು ಕರ್ನಾಟಕ ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ ಹುಬ್ಬಳ್ಳಿ ಇವರಿಗೆ ದೇಹದಾನ ಮಾಡುವ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆದವರು.

ಮೃತರ ಶಿವಗಣಾರಾಧನೆಯನ್ನು ದಿನಾಂಕ ೧೫.೨.೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಧಾರವಾಡ ಶಹರದ ಮಾಳಾಪುರ, ಕಂಬಾರ ಓಣಿ, ದ್ಯಾಮವ್ವನಗುಡಿ ಹತ್ತಿರ, ಮಠದ ಸರ ಅವರ ಬಿಲ್ಡಿಂಗ್ ಇಲ್ಲಿ ನೆರವೇರಿಸಲಾಯಿತು.

ಶಿವಪ್ಪ ಭೀಮರಾಶಿ ಹೂಗಾರ ಇವರು ತಮ್ಮ ಹೂಗಾರಿಕೆ ಕಾಯಕ, ಕೃಷಿಕರು ಜೊತೆಗೆ, ಬಡತನದ ಬವಣೆ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮಕ್ಕಳ ಆರೋಗ್ಯ, ಶಿಕ್ಷಣ, ಸ್ವಾವಲಂಬನೆ ಜೀವನ ನಿರ್ವಹಣೆಯೊಂದಿಗೆ, ಪಾಲನೆ ಪೋಷಣೆ ಉದ್ದೇಶದಿಂದ ಅದರಲ್ಲೂ ವಿಶೇಷ ಚೇತನ ಮಕ್ಕಳ ಸರ್ವಾಂಗೀಣ ಸುಧಾರಣೆಗಾಗಿ ಆರೂಡ ಸಂಸ್ಥೆ ಅಕ್ಷರ ಕಿಡ್ಸ್ ಸ್ಕೂಲ್ ಮತ್ತು ಕಿಡ್ಸ್ ಹೋಮ್ ಕಾಲವಾಡ ಇದರ ಮುಖ್ಯಸ್ಥರಾಗಿ ಸೇವೆಗೈದರು. ಇವರಿಗೆ ನಾಲ್ಕು ಜನ ಮಕ್ಕಳು, ಇವರಲ್ಲಿಮೊದಲನೆಯವರು ಶ್ರೀಮತಿ ನೀಲಮ್ಮ ಶಿವಾನಂದ ಹೂಗಾರ ಸಾ. ಹೆಬಸೂರ ತಾ ಹುಬ್ಬಳ್ಳಿ ಇಲ್ಲಿ ಸಂಪ್ರದಾಯಿಕ ಕಾಯಕ ಮತ್ತು ಕೃಷಿಕರು ಗೃಹಿಣಿ. ಎರಡನೇ ಮಗನಾಗಿ ನಾನು ನಾಗರಾಜ ಶಿವಪ್ಪ ಹೂಗಾರ ಎಮ.ಎ ಪತ್ರಿಕೋದ್ಯಮ ಪದವಿ ಪಡೆದು ಮಕ್ಕಳ ಕ್ಷೇತ್ರದಲ್ಲಿ ಸುಮಾರು ೨೦ ವರ್ಷಗಳಿಂದ ವಿವಿಧ ಸಂಸ್ಥೆಗಳ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತದ್ದಾರೆ. ೨೦೧೫ ರಲ್ಲಿ ಅರಿಲ್ ಅಸೋಸಿಯೇಷನ್ ಆಫ್ ರೂರಲ್ ಆಂqಅರ್ಬನ್ ಡೆವಲಪ್ಮೆಂಟ್ (ಆರೂಡ ಸಂಸ್ಥೆ) ಸಂಸ್ಥೆಯನ್ನು ಸ್ಥಾಪಿಸಿ ಬಿಬಿಎ ಶಿಕ್ಷಣ ಹೊಂದಿದ ಶ್ರೀಮತಿ ಮಾಧವಿ ನಾಗರಾಜ ಹೂಗಾರ ಇವರು ಸಂಸ್ಥಾಪಕ ಅದ್ಯಕ್ಷರಾಗಿ ನೇಮಕಗೊಂಡರು.

ಸಂಸ್ಥೆಯ ಮೂಲಕ ಧಾರವಾಡ ಶಹರದಲ್ಲಿ ಆರೂಡ ಮಕ್ಕಳ ಹಾಗೂ ಮಹಿಳೆಯರ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಕೇಂದ್ರ, ವಿದ್ಯಾವಂತ ಯುವಜನತೆಗಾಗಿ ಕೌಶಲ್ಯ ತರಬೇತಿ ಹಾಗೂ ಪುನರ್ವಸತಿ ಕೇಂದ್ರ ಧಾರವಾಡ ಹಾಗೂ ಕಾಲವಾಡಗಳಲ್ಲಿ ಸ್ಥಾಪಿಸಿದರು.

ಅಕ್ಷರ ಕಿಡ್ಸ್ ಸ್ಕೂಲ್ ಹಾಗೂ ಅಕ್ಷರ ಕಿಡ್ಸ್ ಹೋಮ್ ವಸತಿ ಸಹಿತ ಶಿಕ್ಷಣಕ್ಕಾಗಿ ಕಾಲವಾಡ ಮತ್ತು ಧಾರವಾಡಗಳಲ್ಲಿ ಆರಂಬಿಸಿರುವರು.ಮೂರನೆಯ ಮಗಳು ಶ್ರೀಮತಿ ದ್ರಾಕ್ಷಾಯಿಣೆ ಎಸ ಪೂಜಾರ ಸಾ. ಹರ್ತಿ ತಾ/ಜಿ ಗದಗ. ಇಲ್ಲಿ ಗೃಹಿಣಯಾಗಿ ಜೀವನ ನಡೆಸುತ್ತಿರುವರು. ನಾಲ್ಕನೆಯ ಮಗಳಾ ಶ್ರೀಮತಿ ಮಂಜುಳಾ ಎಮ್ ಹೂಗಾರ ಸಾ.ಬೆಟಸೂರ ತಾ/ಸವದತ್ತಿ. ಜಿ ಬೆಳಗಾವ, ಸಂಪ್ರದಾಯಿಕ ಕಾಯಕ ಮತ್ತು ಕೃಷಿ ಮಾಡುವ ಮೂಲಕ ತಮ್ಮ ಜೀವನವನ್ನು ತುಂಬು ಕುಟುಂಬದೊಂದಿಗೆ ನಿರ್ವಹಿಸುತ್ತಿರುವರು.ಹೆಣ್ಣು ಮಕ್ಕಳಿಗೂ ಕೂಡ ಉತ್ತಮ ಸಂಸ್ಕಾರ ನೀಡಿದ ತಂದೆಯಾಗಿ ಗಂಡು ಮಗನನ್ನು ಜವಾಬ್ದಾರಿಯ ಬದುಕನ್ನು ನೀಡಿ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಿದ ಹೂಗಾರ ಅವರ ಬದುಕು ಇತರರಿಗೂ ಮಾದರಿ.

ಅವರ ನೆನಪಿನೊಂದಿಗೆ ಅವರ ಎಲ್ಲ ಮಕ್ಕಳೂ ತಂದೆಯ ಅಗಲಿಕೆಯ ನೋವನ್ನು ಮರೆಯುವ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದಿನ ಬದುಕನ್ನು ರೂಪಿಸಿಕೊಳ್ಳಲಿ.ಅವರ ಸ್ಮರಣೆಯನ್ನು ನಿರಂತರವಾಗಿ ಮಾಡುತ್ತ ಅವರ ಆದರ್ಶಗಳನ್ನು ಅಳವಡಿಸಿಕೊಂಡು ತಂದೆಯ ಹೆಸರನ್ನು ಉಳಿಸುವ ಮೂಲಕ ತಮ್ಮ ಬದುಕನ್ನು ಎಂದಿನಂತೆ ಮುನ್ನಡೆಸಿಕೊಂಡು ಹೋಗಲಿ ಎಂದು ನಾಗರಾಜರಿಗೆ ಸಾಂತ್ವನದ ನುಡಿಗಳನ್ನು ಹೇಳುವ ಮೂಲಕ ಅವರ ಬದುಕು ತಂದೆಯಂತೆಯೇ ಆದರ್ಶದೊಂದಿಗೆ ಮುಂದೆಯೂ ತಮ್ಮ ಸಂಸ್ಥೆಯನ್ನು ಉತ್ತರೋತ್ತರವಾಗಿ ಬೆಳೆಸಿಕೊಂಡು ಮುನ್ನಡೆಯಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ಮೂಡಲಗಿಯಲ್ಲಿ ಸ್ವಚ್ಛತೆ ಮಾಯ ; ಎಲ್ಲೆಡೆ ಕಂಗೊಳಿಸುತ್ತಿವೆ ತಿಪ್ಪೆಗಳು !

ಮೂಡಲಗಿ - ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಸ್ವಚ್ಛ ಭಾರತ ಅಭಿಯಾನವೆಂಬುದು ಕಾಣೆಯಾಗಿದ್ದು ನಗರದ ಎಲ್ಲೆಡೆ ಕಸ, ಕಡ್ಡಿ, ತಿಪ್ಪೆಗಳು ಕಂಗೊಳಿಸುತ್ತಿವೆ. ಇದರಿಂದ ನಗರದ ತುಂಬೆಲ್ಲ ಸೊಳ್ಳೆಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group