ಬೀದರ್: ಯುದ್ಧ ಪೀಡಿತ ಉಕ್ರೇನ್ ನಲ್ಲಿ ನಮ್ಮ ಮಕ್ಕಳಿಗೆ ತಿನ್ನಲು ಆಹಾರ, ಕುಡಿಯಲು ನೀರು ಸಿಗುತ್ತಿಲ್ಲ ಅವರನ್ನು ಬೇಗ ಭಾರತಕ್ಕೆ ಕರೆದುಕೊಂಡು ಬನ್ನಿ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಮುಂದೆ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಉಕ್ರೇನ್ ನ ಖಾರ್ಕಿವ್ ನಲ್ಲಿ ಸದ್ಯ ಭಯಂಕರ ಯುದ್ಧ ನಡೆಯುತ್ತಿದ್ದು ನಮ್ಮ ಮಕ್ಕಳು ವಾಸವಾಗಿರುವ ಬಂಕರ್ ಮೇಲೆ ಮಿಸೈಲ್ ಗಳು ಹಾಗೂ ಬಾಂಬ್ ಗಳು ಸ್ಫೋಟವಾಗುತ್ತಿವೆ ಎಂದು ಪೋಷಕರು ಬಾವುಕರಾದರು.
ಉಕ್ರೇನ್ ನಲ್ಲಿ ಸಿಲುಕಿರುವ ಆರು ಜನ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಅಮೀತ್, ಶಶಾಂಕ ಹಾಗೂ ವಿವೇಕ್ ಪೋಷಕರು ಇಂದು ಕೇಂದ್ರ ಸಚಿವ ಭಗವಂತ್ ಖೂಬಾ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಉಕ್ರೇನ್ ನಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿ ತಮ್ಮ ಮಕ್ಕಳನ್ನು ಆದಷ್ಟು ಬೇಗ ಭಾರತಕ್ಕೆ ಕರೆತರುವಂತೆ ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಸಚಿವರು ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಮಕ್ಕಳು ಭಾರತಕ್ಕೆ ವಾಪಸಾಗಿದ್ದಾರೆ ಉಳಿದವರನ್ನೂ ಬೇಗನೆ ಕರೆತರಲಾಗುವುದು ಎಂದು ಭರವಸೆ ನೀಡಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ