ನಿಮಗಿದು ಗಮನದಲ್ಲಿರಲಿ ಇವರ್ಯಾರು ಮೂಡಲಗಿಯ ಪುರಸಭೆ ಸದಸ್ಯರಲ್ಲ !
ಮೂಡಲಗಿ: ಸ್ಥಳೀಯ ಆಡಳಿತದಲ್ಲಿ ಮಹಿಳೆಯರದೂ ಪಾತ್ರ ಇರಲಿ, ಅವರಿಗೂ ಸಮಾನತೆ ಸಿಗಲಿ ಎಂಬ ಉದ್ದೇಶದಿಂದ ಪುರಸಭೆಗಳಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿದರೆ ಅವರು ಹೆಸರಿಗೆ ಮಾತ್ರ ಸದಸ್ಯರಂತಾಗಿದ್ದು ಅವರ ಗಂಡಂದಿರು, ಗಂಡು ಮಕ್ಕಳು ಪರೋಕ್ಷವಾಗಿ ಆಡಳಿತ ನಡೆಸುತ್ತಿರುವ ಪ್ರಸಂಗ ಮೂಡಲಗಿ ಪುರಸಭೆಯಲ್ಲಿ ಕಾಣಬಹುದು.
ಪುರಸಭೆಯ ಕೆಲವೇ ಕೆಲವು ಸದಸ್ಯರ ಕುಟುಂಬದವರ ವರ್ತನೆಯಿಂದ ಸಾರ್ವಜನಿಕರು ಕೂಡ ರೋಸಿ ಹೋಗಿದ್ದಾರೆ.
ಮೂಡಲಗಿಯಲ್ಲಿ ನಡೆದ ಕಾರ್ಯಕ್ರಮವೊಂದರ ನಿಮಿತ್ತವಾಗಿ ಶಾಸಕರ ಜೊತೆಯೇ ತಮ್ಮ ಫೋಟೋ ಹಾಕಿಕೊಂಡು, ಕೆಳಗೆ ಪುರಸಭಾ ಸದಸ್ಯರು ಎಂದು ಶರಾ ಹಾಕಿಕೊಂಡಿರುವ ಇವರು ಯಾರೂ ಪುರಸಭಾ ಸದಸ್ಯರಲ್ಲ ಎಂಬುದು ವಿಚಿತ್ರವಾದರೂ ಸತ್ಯ. ಇದು ಶಾಸಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ.
ಪತ್ನಿಯ ಅಧಿಕಾರ …. ಪತಿಯ ದರ್ಬಾರ …..ಜೊತೆಗೆ ತಾಯಂದಿರ ಆಡಳಿತ ನಡೆಸುತ್ತಿರುವ ಮಕ್ಕಳು !
ಇದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ ಹಾಗೂ ಬ್ಯಾನರ್ ಗಳಲ್ಲಿ ಇವರೇ ಮೂಡಲಗಿ ಪುರಸಭೆ ಸದಸ್ಯರು ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ನಡೆದಿದ್ದು ಇದೆಲ್ಲ ಗೊತ್ತಿದ್ದೂ ಉಳಿದ ಸದಸ್ಯರು, ಪುರಸಭಾ ಅಧ್ಯಕ್ಷರು ಮೌನವಹಿಸಿರುವುದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ವಿಚಿತ್ರವೆಂದರೆ ಇವರ ಜೊತೆ ನಾಮ ನಿರ್ದೇಶಿತ ಸದಸ್ಯರೂ ಸೇರಿಕೊಂಡಿದ್ದು ತಮ್ಮನ್ನು ತಾವು ಪುರಸಭಾ ಸದಸ್ಯರೆಂದೇ ಬಿಂಬಿಸಿಕೊಂಡು ಜಾಹೀರಾತು ಹಾಕಿದ್ದಾರೆ.
ಹಲವು ವರ್ಷಗಳಿಂದ ಈ ಕೆಟ್ಟ ಸಂಪ್ರದಾಯ ಮೂಡಲಗಿ ಪುರಸಭೆಯಲ್ಲಿ ನಡೆದುಕೊಂಡು ಬಂದಿದ್ದು ಮೊದಲೇ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಪುರಸಭೆಯಲ್ಲಿ ಇದು ಕಾಮನ್ ಎಂಬ ಭಾವನೆ ಸಾರ್ವಜನಿಕರಲ್ಲಿದೆ ಆದರೂ ಆಕ್ರೋಶ ಮಡುಗಟ್ಟಿದ್ದು ಇಂತಹವರ ಸದಸ್ಯತ್ವ ರದ್ದು ಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಸದಸ್ಯತ್ವ ರದ್ದು ಪಡಿಸಿ ಎನ್ನುತ್ತಿದ್ದಾರೆ ಸಾರ್ವಜನಿಕರು.
ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇವರೇ ಪುರಸಭೆ ಸದಸ್ಯರೆಂದು ಎಲ್ಲ ಕಡೆ ಪೋಸ್ಟ್ ಮಾಡುತ್ತಿದ್ದಾರೆ. ತಮಗೆ ಅಧಿಕಾರವಿಲ್ಲದಿದ್ದರೂ ಮೂಡಲಗಿ ಪುರಸಭೆಯ ಕೆಲವೆ ಕೆಲವು ಸದಸ್ಯರ ಪತಿರಾಯರು ಹಾಗೂ ಸದಸ್ಯರ ಮಕ್ಕಳು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದು ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿದ್ದು ಇಲ್ಲಿಯ ಅಧಿಕಾರಿಗಳಿಗೂ ಕೂಡ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಸಾಬೀತಾದಂತಾಗಿದೆ.
ಇವರ ಈ ನಡವಳಿಕೆಯನ್ನು ಪ್ರಶ್ನಿಸಿ ನಗರದ 4 ನೇ ವಾರ್ಡ್ ಸದಸ್ಯ ಶಿವಾನಂದ ಸಣ್ಣಕ್ಕಿಯವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ಪುರಸಭಾ ಸದಸ್ಯರಲ್ಲದವರು ಯಾವ ಆಧಾರದ ಮೇಲೆ ಸದಸ್ಯರು ಎಂದು ಫ್ಲೆಕ್ಸ್ ಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಉತ್ತರ ನೀಡಬೇಕು ಎಂದು ಬರೆದಿದ್ದಾರೆ. ನಾಗರಿಕರ ಪತ್ರಗಳಿಗೆ ಸಹಜವಾಗಿಯೇ ಹಾರಿಕೆಯ ಉತ್ತರ ನೀಡುವ ಮುಖ್ಯಾಧಿಕಾರಿ ಈ ಪತ್ರಕ್ಕೂ ಹಾರಿಕೆಯ ಉತ್ತರ ನೀಡಿದರೆ ಆಶ್ಚರ್ಯವಿಲ್ಲ.
ಸ್ಥಳೀಯ ಸಾಮಾಜಿಕ ಸಂಘಟನೆಗಳು ಆದಷ್ಟು ಬೇಗ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಬೇಕಾಗಿದೆ.