ಮೂಡಲಗಿ -ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಬಹುಪ್ರಮುಖವಾದ ಅಂಶವಾಗಿದ್ದು ಪ್ರತಿಯೊಬ್ಬರೂ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಶಿಕ್ಷಣದವರೆಗೆ ಗಳಿಸಿದ ಜ್ಞಾನದಿಂದ ತಮಗೆ ಇಷ್ಟವಾದ ಕಾರ್ಯದ ಜೊತೆಗೆ ದಯೆ, ಅನುಕಂಪ, ಮಾನವೀಯತೆಯನ್ನು ಮೈಗೂಡಿಸಿಕೊಂಡು ತಂದೆ ತಾಯಿಗಳ ಕಷ್ಟವನ್ನು ಅರಿತುಕೊಂಡು ಉತ್ತಮ ನಾಗರಿಕರಾಗಿ ಬಾಳಿ ಅವರ ಋಣ ತೀರಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ವಾಯ್. ಮಾದರ ಕರೆ ನೀಡಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮದರ್ಜೆ ಕಾಲೇಜು ಮೂಡಲಗಿಯಲ್ಲಿ ಹಮ್ಮಿಕೊಂಡ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ. ಎನ್,ಎಸ್,ಎಸ್, ಭಾರತ್ ಸ್ಕೌಟ್ & ಗೈಡ್ಸ, ಯುವ ರೆಡ್ ಕ್ರಾಸ್ ಘಟಕ ಇವುಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ಪ್ರತಿಯೊಬ್ಬರ ಜೀವನವೂ ಅಮೂಲ್ಯವಾದುದು ಯಾವುದೇ ಕೆಲಸ ಮಾಡಿದರೂ ತುಂಬಾ ಶ್ರದ್ಧೆಯಿಂದ ಮಾಡಬೇಕು. ಕೆಳಹಂತದ ಕಾರ್ಯದಿಂದ ಹಿಡಿದು ಉನ್ನತ ಹಂತದವರೆಗಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಚ್ಚುಕಟ್ಟುತನ ಇದ್ದರೆ ಎಲ್ಲಾ ಕೆಲಸಗಳಲ್ಲಿ ಪ್ರಗತಿ ಸಾಧಿಸಬಹುದು. ಸರಕಾರಿ ಕಾಲೇಜುಗಳಲ್ಲಿ ಅನೇಕ ಕಡೆ ಸರಿಯಾದ ಸೌಲಭ್ಯಗಳಿಲ್ಲದೆ ಉನ್ನತ ಶಿಕ್ಷಣ ಕುಂಟುತ್ತಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಈ ಸರ್ಕಾರಿ ಕಾಲೇಜು ಜಿಲ್ಲೆಯಲ್ಲಿಯೇ ಅತ್ಯುತ್ತಮ ಕಾಲೇಜು ಎಂದು ಹೆಸರು ಪಡೆದಿದ್ದು ಅಂತಹ ಕಾಲೇಜಿಗೆ ಪ್ರವೇಶ ಪಡೆದ ನೀವೆಲ್ಲರೂ ಧನ್ಯರು. ಇಲ್ಲಿನ ಪ್ರಾಧ್ಯಾಪಕರಿಂದ ಉತ್ತಮ ಮಾರ್ಗದರ್ಶನ ಪಡೆದುಕೊಂಡು ತಂದೆ ತಾಯಿಗಳು ಪಡುವ ಕಷ್ಟವನ್ನು ನೆನೆದು ಉತ್ತಮ ಶಿಕ್ಷಣ ಪಡೆದು ಸುಂದರ ಜೀವನ ನಡೆಸಿ” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಹೇಶ ವಾಯ್. ಕಂಬಾರರವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ, “ಮಹಾವಿದ್ಯಾಲಯ ಇಂದು ಸಾಕಷ್ಟು ಅಗಾಧವಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ಅವರ ಅಗತ್ಯಗಳನ್ನು ಪೂರೈಸಲು ಸದಾ ಸಿದ್ಧವಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಕಾಳಜಿಯ ಜೊತೆಗೆ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ವಿದ್ಯಾರ್ಥಿಯ ತೊಂದರೆಗೆ ಸದಾ ಸ್ಪಂದನೆ ಮಾಡಿ ಅವರನ್ನು ಉನ್ನತ ಬದುಕಿಗೆ ದಾರಿ ಮಾಡುತ್ತಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ನಿಮ್ಮ ಹೆತ್ತವರಿಗೂ ಕಲಿಸಿದ ಗುರುಗಳಿಗೂ ಕೀರ್ತಿ ತರಬೇಕು ” ಎಂದು ಹಾರೈಸಿದರು.
ಈ ಒಂದು ಕಾರ್ಯಕ್ರಮದಲ್ಲಿ ೨೦೨೩-೨೪ ನೇ ಸಾಲಿನಲ್ಲಿ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಉನ್ನತ ಶ್ರೇಣಿ ಪಡೆದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ ಹಾಗೂ ಬಿ.ಎಸ್.ಡಬ್ಲೂ ವಿಭಾಗದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಇಡೀ ಮಹಾವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕ ಪಡೆದ ಬಿ.ಎಸ್.ಡಬ್ಲೂ ವಿಭಾಗದ ಶಿಲ್ಪಾ ಉಪ್ಪಿನ ಅವರಿಗೆ ಮೂಡಲಗಿಯ ಸಮತೋಲ ಪತ್ರಿಕೆಯ ವರದಿಗಾರರು ಹಾಗೂ ಶಿಕ್ಷಣ ಪ್ರೇಮಿಗಳೂ ಆದ ಸಚಿನ ಪತ್ತಾರರವರು ಒಂದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ನೀಡಿ ಸತ್ಕರಿಸಿದರು. ಅದೇ ರೀತಿ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಸ್ನಾತಕೋತ್ತರ ಶಿಕ್ಷಣ ಪಡೆದು ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ/ನಿಯರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ೨೦೨೪-೨೫ ನೇ ಸಾಲಿನಲ್ಲಿ ನಮ್ಮ ಮಹಾವಿದ್ಯಾಲಯಕ್ಕೆ ಹೊಸದಾಗಿ ಆಗಮಿಸಿದ ಏಳು ಜನ ಸಹಾಯಕ ಪ್ರಾಧ್ಯಾಪಕರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಇತಿಹಾಸ ವಿಭಾಗದಿಂದ ಪ್ರಸ್ತುತ ಓದುತ್ತಿರುವ ಬಿಎ ಪದವಿಯ ಇತಿಹಾಸ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರುಗಳಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಖುರಷಾದ ಅನ್ವರ ನದಾಫ್ ಅಧ್ಯಕ್ಷರು, ಪುರಸಭೆ, ಮೂಡಲಗಿ ಇವರನ್ನು ಆತ್ಮೀಯವಾಗಿ ಕಾಲೇಜಿನ ಪರವಾಗಿ ಸತ್ಕರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಡಿಸಿ ಸದಸ್ಯರಾದ ಸಂಜು ಮೊಕಾಶಿ, ಐ.ಕ್ಯೂ.ಎ.ಸಿ ಹಾಗೂ ಕ್ರೀಡಾ ಸಂಯೋಜಕರಾದ ಚೇತನ್ ರಾಜ್ ಬಿ, ಎನ್.ಎಸ್.ಎಸ್ ಸಂಯೋಜಕರಾದ ಸಂಜೀವ ಮದರಖಂಡಿ, ಸಿಬ್ಬಂದಿ ಕಾರ್ಯದರ್ಶಿಯಾದ ಬಿ.ಎಸ್. ಕೆಸರಗೊಪ್ಪ, ಮಹಿಳಾ ವೇದಿಕೆಯ ಸಂಚಾಲಕರಾದ ಶ್ರೀಮತಿ ಗಾಯತ್ರಿ ಸಾಳೋಖೆ, ಹಿರಿಯ ಉಪನ್ಯಾಸಕರಾದ ಎ.ಜಿ. ಗಿರೆನ್ನವರ, ಶ್ರೀಮತಿ ಸುಮಿತ್ರಾ ಮಾಸ್ತಿ, ಶಿವಕುಮಾರ, ಬಸಪ್ಪ ಹೆಬ್ಬಾಳ, ಶ್ರದ್ಧಾ ಬೇವಿನಕಟ್ಟಿ, ಶ್ರೀಕಾಂತ ಬಿರಾದಾರ, ಯೋಗಿನಿ ಕೆ. ಸಂಜು ಗಾಣಿಗೇರ ಮತ್ತಿತರರು ಭಾಗವಹಿಸಿದ್ದರು. ಸಹನಾ ಕರಗಣ್ಣಿ ಪ್ರಾರ್ಥಿಸಿದರು. ಪವಿತ್ರಾ ಹಿರೇಮಠ ಸುಭಾಸ ಲಂಗೋಟಿ ಸ್ವಾಗತಿಸಿದರು. ಐಶ್ವರ್ಯ ಕತ್ತಿ ವಂದಿಸಿದರು. ಸಾಂಸ್ಕೃತಿಕ ಸಂಯೋಜಕರಾದ ಶಿವಾನಂದ ಚಂಡಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಷೇಕ ಕಕಮರಿ ಹಾಗೂ ರೂಪಾ ಅಸ್ಕಿ ನಿರೂಪಿಸಿದರು.