spot_img
spot_img

ವಿದ್ವತ್ತಿನ ಮೇರು ಶಿಖರ ಡಾ. ಕೆ. ರವೀಂದ್ರನಾಥ

Must Read

- Advertisement -
[ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ರವೀಂದ್ರನಾಥ ಅವರು ಇಂದು ಸೇವಾನಿವೃತ್ತಿಯಾಗುತ್ತಿದ್ದಾರೆ. ಅವರ ಶಿಷ್ಯ ಬಳಗ ಇಂದು ಅವರ ಅಭಿನಂದನ ಸಮಾರಂಭ ಏರ್ಪಡಿಸಿದ್ದಾರೆ. ಈ ನಿಮಿತ್ಯ ಲೇಖನ]

ಡಾ. ಎಂ. ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ ಅವರಂತಹ ಸಂಶೋಧಕರು ಕಣ್ಮರೆಯಾದ ನಂತರ, ಕನ್ನಡ ಸಂಶೋಧನಾ ವಿದ್ವತ್ ಪರಂಪರೆ ಅನಾಥವಾಯಿತೆಂದು ಕೆಲವರು ಭಾವಿಸಿದರು. ಆದರೆ ಈ ವಿದ್ವಾಂಸರ ವಾರಸುದಾರಿಕೆಯನ್ನು ನಿಜವಾದ ಅರ್ಥದಲ್ಲಿ ಮುಂದುವರಿಸಿ, ಗುರುಕಾಣಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಲ್ಲಿಸಿದ ಹಿರಿಯ ವಿದ್ವಾಂಸರಲ್ಲಿ ಡಾ. ರವೀಂದ್ರನಾಥ ಅವರು ಒಬ್ಬರು ಎಂದು ಹೇಳಲು ಹೆಮ್ಮೆ ಮತ್ತು ಅಭಿಮಾನ ಎನಿಸುತ್ತದೆ.

ಡಾ. ರವೀಂದ್ರನಾಥ ಅವರನ್ನು ನಾನು ಮೊದಲು ಭೇಟಿಯಾದುದು ೨೦೦೨ರಲ್ಲಿ. ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದಲ್ಲಿ ನಾನು ಡಾ. ಎಸ್. ಆರ್. ಗುಂಜಾಳ ಅವರ ಶಿಷ್ಯನಾಗಿ ಕೆಲಸ ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ಹಸ್ತಪ್ರತಿ ಅಧ್ಯಯನ ಶಿಬಿರವನ್ನು ಆಯೋಜಿಸಿದ್ದರು. ಮೂರು ದಿನಗಳ ಅವಧಿಯಲ್ಲಿ ಡಾ. ರವೀಂದ್ರನಾಥ ಸರ್ ಅವರ ಕ್ರಿಯಾಶೀಲ ವ್ಯಕ್ತಿತ್ವ ಕಂಡು ನನಗರಿವಿಲ್ಲದೆಯೇ ನಾನು ಅವರ ಅಭಿಮಾನಿಯಾಗಿಬಿಟ್ಟೆ. ೧೯೯೬ರಲ್ಲಿ ಅವರು ಕನ್ನಡ ಸಾಹಿತ್ಯಕ್ಕೆ ಮಠಮಾನ್ಯಗಳ ಕೊಡುಗೆ ಎಂಬ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿಯನ್ನು ಸಂಪಾದಿಸಿದ್ದರು. ಈ ಕೃತಿ ಸೊಂಡೂರು ಪ್ರಭುದೇವ ಸಂಸ್ಥಾನಮಠದಿಂದ ಪ್ರಕಟಗೊಂಡಿತ್ತು. ಆಗಲೇ ‘ಮಾನ್ಯ’ ಎಂಬ ವಿಮರ್ಶಾ ಸಂಕಲನವೊಂದು ಪ್ರಕಟವಾಗಿತ್ತು. ತಮ್ಮ ಮೊದಲ ಬರಹಗಳಲ್ಲಿಯೇ ತಾವೊಬ್ಬ ಪ್ರಬುದ್ಧ ಸಂಶೋಧಕ ಬರಹಗಾರ ಎಂಬುದನ್ನು ಸಾಬೀತುಗೊಳಿಸಿದ್ದರು. ಈ ಎರಡೂ ಕೃತಿಗಳನ್ನು ನಾನು ಓದಿ, ತುಂಬ ಪ್ರಭಾವಿತನಾದೆ.

೨೦೧೫ರ ಏಪ್ರಿಲ್ ತಿಂಗಳ ದವನದ ಹುಣ್ಣಿಮೆ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನನ್ನ ಮತ್ತು ಡಾ. ರವೀಂದ್ರನಾಥ ಸರ್ ಅವರ ಪುಣ್ಯಪುರುಷ ಮಾಲೆಯ ಕೃತಿಗಳು ಏಕಕಾಲಕ್ಕೆ ಲೋಕಾರ್ಪಣೆಯಾದವು. ಅಂದಿನ ಜಗದ್ಗುರುಗಳಾಗಿದ್ದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪುಸ್ತಕದ ಸ್ವಾಮೀಜಿಯಾಗಿದ್ದರು. ಜಾತ್ರೆಯಲ್ಲಿ ಅತ್ಯುತ್ತಮ ಕೃತಿಗಳು ಲೋಕಾರ್ಪಣೆಯಾಗಬೇಕೆಂಬುದು ಅವರ ಅದಮ್ಯ ಅಭಿಪ್ಸೆಯಾಗಿತ್ತು. ಪೂಜ್ಯರ ಅಪ್ಪಣೆಯ ಮೇರೆಗೆ ಡಾ. ರವೀಂದ್ರನಾಥ ಅವರು ‘ಬಿ. ಎಂ. ಹೊರಕೇರಿ’ ಅವರ ಜೀವನ ಚರಿತ್ರೆ ಬರೆದಿದ್ದರು, ನಾನು ‘ಬ.ಮ.ಏಳುಕೋಟಿ’ ಅವರನ್ನು ಕುರಿತು ಬರೆದಿದ್ದೆ. ಒಂದೇ ವೇದಿಕೆ ಮೇಲೆ ನಮ್ಮಿಬ್ಬರನ್ನು ಪೂಜ್ಯ ಜಗದ್ಗುರುಗಳು ಸನ್ಮಾನಿಸಿ ಆಶೀರ್ವದಿಸಿದ ಘಟನೆ ಇನ್ನೂ ಹಚ್ಚ ಹಸಿರಾಗಿದೆ.

- Advertisement -

೨೦೧೮ ಅಕ್ಟೋಬರ್ ೨೦ರಂದು ಗದುಗಿನ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗೈಕ್ಯರಾದರು. ನನಗಂತೂ ಆಕಾಶವೇ ಮೇಲೆ ಬಿದ್ದಂತಾಯಿತು, ಕಣ್ಣಿಗೆ ಕಾರ್ಗತ್ತಲು ಕವಿದಂತಾಯಿತು. ಅವರ ನೆನಪಿನಲ್ಲಿ ಒಂದು ವಾರ ನಿದ್ರೆಯೇ ಬರಲಿಲ್ಲ. ಕೊನೆಗೆ ಪೂಜ್ಯರ ಚರಿತ್ರೆಯನ್ನಾದರೂ ಬರೆಯಬೇಕೆಂದು ನಿರ್ಧರಿಸಿ, ಕೇವಲ ಒಂದು ವಾರದಲ್ಲಿ ೧೦೦ ಪುಟಗಳ ಕೃತಿಯೊಂದನ್ನು ಬರೆದೆ. ಅದನ್ನು ಪ್ರಕಟಿಸಲು ಯಾರನ್ನು ಕೇಳಲಿ ಎಂದು ಆಲೋಚಿಸುತ್ತಿರುವಾಗ ನನಗೆ ತಟ್ಟನೇ ನೆನಪಾದವರು ಸಂಡೂರು ಪ್ರಭುದೇವ ವಿರಕ್ತಮಠದ ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳು. ಪೂಜ್ಯರಿಗೆ ನನ್ನ ಹಸ್ತಪ್ರತಿ ಕಳಿಸಿಕೊಟ್ಟೆ. ತಕ್ಷಣ ಪೂಜ್ಯರು ಇನ್ನೊಂದು ಹಸ್ತಪ್ರತಿಯನ್ನು ಡಾ. ರವೀಂದ್ರನಾಥ ಅವರಿಗೆ ಕಳಿಸಿ ಎಂದು ಹೇಳಿದರು. ಡಾ. ರವೀಂದ್ರನಾಥ ಅವರು ನನ್ನ ಕೃತಿಯನ್ನು ಅವಲೋಕಿಸಿ, ತಕ್ಷಣ ಫೋನ್ ಮಾಡಿ, ‘ನಿನ್ನ ಕೃತಿಯನ್ನು ಸಂಡೂರು ವಿರಕ್ತಮಠದಿಂದ ಪ್ರಕಟ ಮಾಡುತ್ತೇವೆ, ಆದಷ್ಟು ಬೇಗ ಗದುಗಿನ ತ್ವರಿತ ಮುದ್ರಣಾಲಯಕ್ಕೆ ಪ್ರಕಟಣೆಗೆ ಕಳಿಸು’ ಎಂದು ಹೇಳಿದರು. ಪುಸ್ತಕ ಒಂದು ವಾರದಲ್ಲಿ ಪ್ರಕಟವಾಯಿತು. ಈ ಕೃತಿಯನ್ನು ಗದುಗಿನ ತೋಂಟದಾರ್ಯಮಠದ ನವೆಂಬರ್ ೧೯ರಂದು ಜರುಗುವ ಶಿವಾನುಭವ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಬೇಕೆಂದು ಸಂಡೂರು ಪೂಜ್ಯ ಶ್ರೀ ಪ್ರಭು ಸ್ವಾಮೀಜಿ ನಿರ್ಧರಿಸಿದರು. ಜಗದ್ಗುರುಗಳು ಲಿಂಗೈಕ್ಯರಾಗಿ ಕೇವಲ ಒಂದು ತಿಂಗಳಾಗಿತ್ತು. ಒಂದು ತಿಂಗಳಲ್ಲಿಯೇ ಈ ನನ್ನ ಕೃತಿ ತೋಂಟದಾರ್ಯಮಠದಲ್ಲಿ ಲೋಕಾರ್ಪಣೆಯಾದುದು ಒಂದು ಯೋಗಾಯೋಗ. ಈ ಕೃತಿಯ ಅವಲೋಕನವನ್ನು ಡಾ. ರವೀಂದ್ರನಾಥ ಅವರು ಮಾಡಿದರು. ಕಿರಿಯನಾದ ನನ್ನ ಕೃತಿಯನ್ನು ದೊಡ್ಡ ವಿದ್ವಾಂಸರ ಕೃತಿಗೆ ಹೋಲಿಸಿ, ನನ್ನ ಬರವಣಿಗೆಯನ್ನು ಕುರಿತು ತುಂಬ ಮೆಚ್ಚುಗೆಯ ಮಾತುಗಳನ್ನಾಡಿದರು. ಆ ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಡಾ. ಗುರುಪಾದ ಮರಿಗುದ್ದಿ ಅವರು ಭಾಗವಹಿಸಿದ್ದರು. ಗದುಗಿನ ತೋಂಟದಾರ್ಯಮಠಕ್ಕೆ ನೂತನವಾಗಿ ಪಟ್ಟಾಭಿಷಿಕ್ತರಾದ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕೃತಿ ಲೋಕಾರ್ಪಣೆ ನೆರವೇರಿಸಿದರು.

ಡಾ. ರವೀಂದ್ರನಾಥ ಅವರು ಸಂಡೂರು ವಿರಕ್ತಮಠದ ಪ್ರಸಾರಾಂಗದ ನಿರ್ದೇಶಕರಾದ ಸಂದರ್ಭದಲ್ಲಿ ನನ್ನ ಕೃತಿಯೊಂದು ಅಲ್ಲಿಂದ ಪ್ರಕಾಶನಗೊಂಡದ್ದು ನನಗಂತೂ ತುಂಬ ಸಂತೋಷವನ್ನುಂಟು ಮಾಡಿತು. ಅದಾದ ಕೆಲವೇ ದಿನಗಳಲ್ಲಿ ಸೊಂಡೂರು ವಿರಕ್ತಮಠದಲ್ಲಿ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿದರು. ಅದೇ ಆಗ ಲಿಂಗೈಕ್ಯರಾಗಿದ್ದ ಗದುಗಿನ ಜಗದ್ಗುರುಗಳು, ಇಳಕಲ್ಲ ಶ್ರೀಗಳ ಕುರಿತು ಈ ವಿಚಾರ ಸಂಕಿರಣ ಆಯೋಜಿಸಿದ್ದರು. ಗದುಗಿನ ಜಗದ್ಗುರುಗಳನ್ನು ಕುರಿತು ಉಪನ್ಯಾಸ ಮಾಡಲು ನನ್ನನ್ನು ಆಹ್ವಾನಿಸಿದರು. ಅದೊಂದು ಅಪೂರ್ವ ಘಳಿಗೆಯೆಂದೇ ನಾನು ಭಾವಿಸಿದ್ದೇನೆ.

ಪ್ರತಿವರ್ಷ ಜನವರಿ ತಿಂಗಳಲ್ಲಿ ಸೊಂಡೂರು ವಿರಕ್ತಮಠದಲ್ಲಿ ವಿಶೇಷ ವಿಚಾರ ಸಂಕಿರಣ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಇದರ ಎಲ್ಲ ನಿರ್ದೇಶನ ಡಾ. ರವೀಂದ್ರನಾಥ ಅವರದೇ. ೨೦೨೦ರಲ್ಲಿ ಬಸವಣ್ಣನವರ ಕುರಿತು ಪ್ರಕಟವಾದ ನಾಟಕಗಳ ಅವಲೋಕನ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿದರು. ಈ ಸಂದರ್ಭದಲ್ಲಿ ನನಗೆ ‘ಏಣಗಿ ಬಾಳಪ್ಪನವರ ಬಸವೇಶ್ವರ ನಾಟಕ’ ಕುರಿತು ಮಾತನಾಡಲು ಹೇಳಿದರು. ಈ ಸಮಾರಂಭದಲ್ಲಿ ಡಾ. ಗುರುಲಿಂಗ ಕಾಪಸೆ, ಬಿ. ನಂಜುಂಡಸ್ವಾಮಿ, ಎಫ್.ಟಿ. ಹಳ್ಳಿಕೇರಿ ಮೊದಲಾದ ಹಿರಿಯರೊಂದಿಗೆ ವೇದಿಕೆ ಮೇಲೆ ಮಾತನಾಡುವ ಅವಕಾಶ ನನಗೆ ದೊರೆಯಿತು.

- Advertisement -

ಡಾ. ರವೀಂದ್ರನಾಥ ಅವರೊಂದಿಗೆ ಒಂದು ಅಪರೂಪದ ಗ್ರಂಥವನ್ನು ಸಂಪಾದನೆ ಮಾಡುವ ಸದವಕಾಶ ನನಗೆ ದೊರೆತದ್ದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ. ಸಂಡೂರು ವಿರಕ್ತಮಠದ ಪೂಜ್ಯರು ಬರುವ ವರ್ಷ ಯಾವುದಾದರೂ ಒಳ್ಳೆಯ ಕೃತಿ ಇದ್ದರೆ ಸಿದ್ಧ ಮಾಡಿ, ಎಷ್ಟೇ ದೊಡ್ಡದಿರಲಿ ನಾವು ಪ್ರಕಟಿಸುತ್ತೇವೆ ಎಂದು ಅಭಯ ನೀಡಿದರು. ಆಗ ನಾನು ಮತ್ತು ಡಾ. ರವೀಂದ್ರನಾಥ ಸರ್ ಅವರು ಕೂಡಿ ‘ಗುಮ್ಮಳಾಪುರದ ಸಿದ್ಧಲಿಂಗರ ಶೂನ್ಯಸಂಪಾದನೆ’ಯನ್ನು ಸಂಪಾದಿಸಬೇಕೆಂದು ನಿರ್ಧರಿಸಿದೆವು. ೧೯೭೨ರಲ್ಲಿ ಡಾ. ಆರ್. ಸಿ. ಹಿರೇಮಠ ಅವರು ಈ ಕೃತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಿಸಿದ್ದರು. ಈ ಕೃತಿ ಪ್ರಕಟವಾಗಿ ೫೦ ವರ್ಷಗಳೇ ಕಳೆದಿದ್ದವು. ಅಲ್ಲದೆ ಈ ಕೃತಿ ಈಗ ಯಾರಿಗೂ ದೊರೆಯುತ್ತಿರಲಿಲ್ಲ. ಹೀಗಾಗಿ ಶೆಕಟರೆಫೆ ಬಳಸದೆ, ಜನಪ್ರಿಯ ಆವೃತ್ತಿ ಮಾದರಿಯಲ್ಲಿ ಈ ಕೃತಿಯನ್ನು ಸಂಪಾದಿಸಲಾಯಿತು. ಈ ಕೃತಿಗೆ ಡಾ. ರವೀಂದ್ರನಾಥ ಅವರು ಬೆಲೆಯುಳ್ಳ ಪ್ರಸ್ತಾವನೆಯನ್ನು ಬರೆದರು. ೨೦೨೨ರಲ್ಲಿ ಈ ಕೃತಿ ಪ್ರಕಟಗೊಂಡಿತು. ನಾಡಿನ ಹಿರಿಯ ವಿದ್ವಾಂಸರಾದ ಡಾ. ಬಸವರಾಜ ಕಲ್ಗುಡಿ ಅವರು ಬೆನ್ನುಡಿ ಬರೆದು, ಇದೊಂದು ದಾಖಲಾರ್ಹ ಕರ್ಯವೆಂದು ಕರೆದರು. ನಾಡಿನ ಹಿರಿಯ ವಚನಶಾಸ್ತ್ರವಿದ್ವಾಂಸರಾದ ಡಾ. ವೀರಣ್ಣ ರಾಜೂರ ಅವರು ಕೃತಿಯನ್ನು ಅತ್ಯಂತ ಶಾಸ್ತ್ರಶುದ್ಧ ಆಧುನಿಕ ಗ್ರಂಥಸಂಪಾದನಾಶಾಸ್ತ್ರಕ್ಕೆ ಅನುಗುಣವಾಗಿ ಸಂಪಾದಿಸಿದ ನಿಮ್ಮ ಕಾರ್ಯ ಶ್ಲಾಘನೀಯವೆಂದು ಪತ್ರ ಬರೆದರು. ನಾಡಿನ ಅನೇಕ ಜನ ಮಠಾಧೀಶರು, ಹಿರಿಯ ವಿದ್ವಾಂಸರು ಮೆಚ್ಚುಗೆಯ ಮಾತುಗಳನ್ನು ಬರೆದರು. ಇದೊಂದು ಡಾ. ರವೀಂದ್ರನಾಥ ಸರ್ ಅವರೊಂದಿಗೆ ಕೂಡಿ ಮಾಡುವ ಕೆಲಸ ದೊರೆತದ್ದು ನನಗೆ ವೈಯಕ್ತಿಕವಾಗಿ ತುಂಬ ಸಂತೋಷವನ್ನುಂಟು ಮಾಡಿತು.

ಇಂದಿಗೂ ಡಾ. ರವೀಂದ್ರನಾಥ ಸರ್ ಅವರು ಮೇಲಿಂದ ಮೇಲೆ ಫೋನ್ ಮಾಡಿ ನನ್ನ ಸಾಹಿತ್ಯಿಕ ಬೆಳವಣಿಗೆಯ ಕುರಿತು ಮಾತನಾಡುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ. ತಮಗೆ ಯಾವುದಾದರೂ ಮಾಹಿತಿ ಬೇಕಾಗಿದ್ದರೆ, ತಕ್ಷಣ ನನಗೆ ಫೋನ್ ಮಾಡುತ್ತಾರೆ. ವಿದ್ವತ್ತಿನ ಮೇರು ಶಿಖರವೇ ಅವರಾಗಿದ್ದರೂ ನಮ್ಮಂತಹ ಸಣ್ಣವರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ನಮ್ಮ ಬರವಣಿಗೆಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಹುಮ್ಮಸ್ಸು ತುಂಬುತ್ತಾರೆ.

೨೦೧೮ರಲ್ಲಿ ಬೆಳಗಾವಿಯಲ್ಲಿ ೧೮ನೇ ಹಸ್ತಪ್ರತಿ ಸಮ್ಮೇಳನವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಎರಡು ದಿನಗಳ ಕಾಲ ನಾನು ಅವರೊಂದಿಗೆ ಕಾಲ ಕಳೆದೆ. ಸಮಾರೋಪ ಸಮಾರಂಭದಲ್ಲಿ ನನಗೂ ಅಭಿಪ್ರಾಯ ಹೇಳಲು ಅವಕಾಶ ಮಾಡಿಕೊಟ್ಟರು. ಹೀಗೆ ಗುಣಗ್ರಾಹಿಗಳಾಗಿರುವ ಡಾ. ರವೀಂದ್ರನಾಥ ಸರ್ ಅವರು ಯಾವ ವಿದ್ಯಾರ್ಥಿಯಲ್ಲಿ ಎಂತಹ ಪ್ರತಿಭೆ ಇದೆ ಎಂಬುದನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದವರು. ಶಿಷ್ಯ ವಾತ್ಸಲ್ಯದ ಪ್ರತಿಮಾ ಸ್ವರೂಪ ಆಗಿರುವ ಡಾ. ರವೀಂದ್ರನಾಥ ಸರ್ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ ಬಹುತೇಕ ವಿದ್ಯಾರ್ಥಿಗಳು ಮಾಹಿತಿಗಳನ್ನು ಸಂಗ್ರಹಿಸಲು ನನ್ನ ಹತ್ತಿರ ಬಂದಾಗಲೆಲ್ಲ, ಅವರ ಘನವ್ಯಕ್ತಿತ್ವದ ವಿದ್ಯಾರ್ಥಿ ಪರಾಧೀನ ನಿಲುವಿನ ಅಸಾಮಾನ್ಯ ಅಧ್ಯಾಪಕತ್ವದ ಗುಣಗಳನ್ನು ಹೃದಯತುಂಬಿ ಹೇಳುವಾಗ ನನಗೂ ಅವರ ವಿದ್ಯಾರ್ಥಿಯಾಗುವ ಭಾಗ್ಯ ದೊರೆಯಲಿಲ್ಲವೆಂದು ಅನ್ನಿಸುತ್ತಿತ್ತು. ಅಷ್ಟು ವಿದ್ಯಾರ್ಥಿಗಳನ್ನು ಪ್ರೀತಿಸುವ, ಹಸ್ತಪ್ರತಿಗಳನ್ನು ಗೌರವಿಸುವ, ಸಂಶೋಧನೆಯನ್ನು ವ್ರತವನ್ನಾಗಿ ಮಾಡಿಕೊಂಡಿರುವ ಡಾ. ರವೀಂದ್ರನಾಥ ಸರ್ ಅವರು ಡಾ. ಕಲಬುರ್ಗಿ ಅವರಂತಹ ವಿದ್ವತ್ತವಲಯದ ವಾರಸುದಾರಿಕೆಯನ್ನು ಅಕ್ಷರಶಃ ಮುಂದುವರಿಸಿದ್ದಾರೆ. ಡಾ. ಕಲಬುರ್ಗಿ ಅವರು ಸಮಗ್ರ ವಚನ ಸಾಹಿತ್ಯ ಸಂಪುಟಗಳನ್ನು ಮೊದಲ ಬಾರಿಗೆ ಪ್ರಕಟಿಸಿದ್ದರು. ಅವರಿಲ್ಲದ ಕಾಲದಲ್ಲಿ ಎರಡು ವಚನ ಸಂಪುಟಗಳನ್ನು ಡಾ. ರವೀಂದ್ರನಾಥ ಅವರು ಪರಿಷ್ಕರಿಸಿ ಸಂಪಾದಿಸಿರುವುದು ನಿಜಕ್ಕೂ ವಿದ್ವತ್ ವಲಯ ಹೆಮ್ಮೆ ಪಡುವ ಸಂಗತಿಯಾಗಿದೆ. ಅಲ್ಲದೆ ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆಯಲ್ಲಿ ಐದು ಬೃಹತ್ ಸಂಪುಟಗಳನ್ನು ಸಂಪಾದಿಸುವ ದೊಡ್ಡ ಜವಾಬ್ದಾರಿಯನ್ನು ಡಾ. ರವೀಂದ್ರನಾಥ ಅವರು ನಿಭಾಯಿಸಿರುವುದು ಅವರ ವಿದ್ವತ್ ಪ್ರೀತಿಗೆ ಸಾಕ್ಷಿಯಾಗಿದೆ.

ಆಡಾಡತ ಆಯುಷ್ಯ ಕಳೆದು ಹೋಗುತ್ತದೆ ಎಂದು ಹೇಳುವ ಹಾಗೆ, ಈಗ ಡಾ. ರವೀಂದ್ರನಾಥ ಸರ್ ಅವರಿಗೆ ೬೦ ವಸಂತಗಳು. ವಯೋಸಹಜ ಕಾರಣವಾಗಿ ಅವರು ವಿಶ್ವವಿದ್ಯಾಲಯ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ, ಆದರೆ ಅವರ ಸಾಹಿತ್ಯ ರಚನೆ, ಸೊಂಡೂರು ಶ್ರೀಮಠದ ಪ್ರಸಾರಾಂಗದ ಮುನ್ನಡೆಸುವಿಕೆ ಮೊದಲಾದ ಗುರುತರ ಜವಾಬ್ದಾರಿಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅವರಿಗೆ ಒಂದಿಷ್ಟು ಸಮಯಾವಕಾಶ ದೊರೆಯಬಹುದು ಎಂದು ನಾನು ಭಾವಿಸಿದ್ದೇನೆ.

ಇಂತಹ ವಿದ್ವಜ್ಜನರ ಒಡನಾಟದಲ್ಲಿ ನಾನು ನನ್ನ ಜ್ಞಾನದ ಕ್ಷಿತಜವನ್ನು ವಿಸ್ತರಿಸಿಕೊಂಡಿದ್ದೇನೆ. ಹಸ್ತಪ್ರತಿ, ವಚನ ಸಾಹಿತ್ಯ ಕುರಿತು ನಾವಿಬ್ಬರೂ ಪರಸ್ಪರ ಅನೇಕ ಸಲ ಚರ್ಚಿಸಿದ್ದೇವೆ. ಅವರಿಂದ ನಾನು ಪಡೆದುಕೊಂಡದ್ದು ಬಹಳಷ್ಟು. ನಮ್ಮಿಬ್ಬರಲ್ಲಿ ಸಮಾನ ಆಸಕ್ತಿ ಇರುವ ಕಾರಣ, ಮೇಲಿಂದ ಮೇಲೆ ಅವರೊಂದಿಗೆ ಮಾತನಾಡುವುದು ಎಂದರೆ ಜ್ಞಾನದ ಪರ್ವತವನ್ನು ಒಳಹೊಕ್ಕು ಬಂದ ಅನುಭವ ಆಗುತ್ತದೆ. ಇಂತಹ ಹಿರಿಯ ವಿದ್ವಾಂಸರು ಇನ್ನೂ ನೂರ್ಕಾಲ ನಮ್ಮ ಮಧ್ಯದಲ್ಲಿರಲಿ, ತಮ್ಮ ಸಂಶೋಧನ ಬರಹಗಳಿಂದ ಕನ್ನಡದ ಜ್ಞಾನ ಪ್ರಪಂಚವನ್ನು ಸಿರಿವಂತಗೊಳಿಸಲಿ, ನಮ್ಮಂತಹ ಕಿರಿಯರಿಗೆ ನಿತ್ಯನಿರಂತರ ಮಾರ್ಗದರ್ಶನ ಮಾಡುತ್ತಿರಲಿ ಎಂದು ಆಶಿಸುವೆ.

ಪ್ರಕಾಶ ಗಿರಿಮಲ್ಲನವರ
ಐ.ಟಿ.ಐ. ಕಾಲೇಜು
ಶಿವಬಸವನಗರ, ಬೆಳಗಾವಿ-೫೯೦೦೧೦
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group