ಬೆಳಗಾವಿಃ ಸ್ಥಳೀಯ ಭಾರತೀಯ ಗಾಯನ ಸಮಾಜದಲಿ ಶಿವರಾತ್ರಿಯ ‘ಶಿವತತ್ವ ಪ್ರಸ್ತುತಿ’ ಕಾರ್ಯಕ್ರಮ ಭಕ್ತಿ ಸಂಗೀತ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಗಾಯನ ಸಮಾಜದ ಅಧ್ಯಕ್ಷರಾದ ವಿದುಷಿ. ಡಾ. ರೋಹಿಣಿ ಗಂಗಾಧರ್ “ಭಾರತೀಯರಿಗೆ ಶಿವನೇ ಆದಿದೈವ. ಸಾಕ್ಷಾತ್ ಮಹೇಶ್ವರ. ಶಿವರಾತ್ರಿಯ ಇಂದು ಶಿವ ಜಾಗೃತ ಪ್ರಜ್ಞೆ ನಮ್ಮದಾಗಬೇಕು. ಓಂಕಾರ ಸ್ವರೂಪನಾದ ಶಿವನನನ್ನು ನಾದ ರೂಪದಲ್ಲಿ ನಮ್ಮವರು ಆರಾಧಿಸಿಕೊಂಡು ಬಂದಿದ್ದಾರೆ.
ಶಿವಭಕ್ತಿಯು ನಮ್ಮ ಜಾಗೃತಿಯ ಸಂಕೇತ. ಶಿವನ ಅನಂತ ಲೀಲಾವಳಿಗಳನ್ನು ಶಿವಭಜನೆಯನ್ನು ಕೇಳಿ ಇಂದು ನಾವೆಲ್ಲರೂ ಪಾವನರಾಗಬೇಕು. ಭಕ್ತಿ ಸಂಗೀತವು ಮನಸ್ಸಿನ ಕ್ಲೇಶಗಳನ್ನು ಕಳೆದು ಆತ್ಮೋಲ್ಲಾಸವನ್ನು ನಮಗೆ ನೀಡುತ್ತದೆ. ಶಿವನಾಮಾವಳಿಗಳನ್ನು ಕೇಳಿ ದೈವತ್ವದ ಮೊರೆ ಹೋಗಲು ಶಿವರಾತ್ರಿಯ ಈ ದಿನ ಪ್ರಶಸ್ತವಾಗಿದೆ.
ಭಾರತದ ಸಕಲ ಲಲಿತಕಲೆಗಳಿಗೆ ಶಿವನೇ ಅಗ್ರದೇವತೆ. ನಮ್ಮಲ್ಲಿ ರಾಜಸ, ತಾಮಸ ಗುಣಗಳಳಿದು ಸಾತ್ವಿಕಗುಣ ಬರುವಂತೆ ಮಾಡುವುದೇ ಶಿವರಾತ್ರಿಯ ಮಹಿಮೆ. ಶಿವನಾಮ ಸ್ಮರಣೆ ನಮ್ಮೆಲ್ಲರ ಬದುಕಿಗೆ ಹೊಸ ಚೈತನ್ಯವನ್ನು ತರಲೆಂದು” ತಮ್ಮ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ತನ್ನಿಮಿತ್ತ ಶಿವಭಕ್ತಿ ಸಂಗೀತವನ್ನು ಪ್ರಸ್ತುತಪಡಿಸಲಾಗಿತ್ತು. ವೇದಪ್ರಕಾಶ ತಬಲಾ ಸಾಥ್ ಹಾಗೂ ಪ್ರಣವ ವಿನಾಯಕ ಹಾರ್ಮೋನಿಯಂ ಸಾಥ್ ನೀಡಿದರು. ವಚನ, ಭಜನ್, ಸಂಸ್ಕೃತದ ಹಲವು ಶ್ಲೋಕಗಳನ್ನು ಈ ಕಾರ್ಯಕ್ರಮದಲ್ಲಿ ಹಾಡಲಾಯಿತು.