ಅಹಮದಾಬಾದ – ಗುಜರಾತ್ ನ ಅಹಮದಾಬಾದ್ ನಗರದ ನಿಶಾನ್ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮತ ಚಲಾಯಿಸಿದರು.
ಅತ್ಯಂತ ಸರಳವಾಗಿ ಎಲ್ಲರೊಳಗೆ ಒಂದಾಗಿ ಸಾಮನ್ಯ ಜನರಂತೆ ಸರದಿ ಸಾಲಿನಲ್ಲಿ ನಿಂತು ಪ್ರಧಾನಿ ಮತ ಚಲಾಯಿಸಿದರು.
ಮೋದಿಯವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಸಾಥ್ ನೀಡಿದರು.
ಆಕರ್ಷಕ ಕೇಸರಿ ಬಣ್ಣದ ಜಾಕೆಟ್ ಧರಿಸಿ ನಡೆಯುತ್ತ ಬಂದ ಮೋದಿಯವರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸುತ್ತ ಆಗಮಿಸಿ ಮತ ಚಲಾಯಿಸಿದರು.
ಮತ ಚಲಾವಣೆಯ ನಂತರ ಮಾತನಾಡಿದ ಅವರು, ನಮ್ಮ ದೇಶದಲ್ಲಿ ದಾನಕ್ಕೆ ಒಂದು ಮಹತ್ವವಿದೆ. ಇದು ಸಾಮಾನ್ಯ ದಾನವಲ್ಲ. ಎಲ್ಲರೂ ಮತದಾನ ಮಾಡಬೇಕು. ಭಾರತದ ಪ್ರಜಾಪ್ರಭುತ್ವದ ದೃಢತೆಗೆ ಮತದಾನ ಮತ್ತಷ್ಟು ಬಲ ಕೊಡುತ್ತದೆ ಎಂದರು.
ಬಿಸಿಲಿನ ದಿನದಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜನರಿಗೆ ಕರೆ ಕೊಟ್ಟರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಮೋದಿ ಮೋದಿ ಎಂಬ ಹರ್ಷೋದ್ಗಾರ ಮಾಡುತ್ತ ಮೋದಿಯವರನ್ನು ಕಂಡು ಖುಷಿ ಪಟ್ಟರು. ಈ ನಡುವೆ ತಮ್ಮ ಭಾವ ಚಿತ್ರ ಬರೆದಿದ್ದ ಇಬ್ಬರು ಕಲಾವಿದರ ಚಿತ್ರಗಳಿಗೆ ಮೋದಿಯವರು ಹಸ್ತಾಕ್ಷರ ನೀಡಿದರು.