- Advertisement -
ಬೇಕೆನಗೆ ಸಾಂಗತ್ಯ
ನೀ ಬಂದ ಗಳಿಗೆ
ಸಂಭ್ರಮದ ಹೋಳಿಗೆ
ನೋವೆಲ್ಲಾ ಮರೆಸಿ
ಕರುಳ ಸಂಬಂಧ ಆದರಿಸಿ.
- Advertisement -
ನನ್ನದ್ದೆಲ್ಲವ ತೊರೆದು
ನಿನ್ನಲ್ಲಿ ನಾ ಬೆರೆತು
ಸ್ವರ್ಗ ಧರೆಗಿಳಿದಂತೆ
ನಿನ್ನಾರೈಕೆಯ ಹೆಗಲ ಹೊತ್ತು.
ಬೆಳೆಸಿದೆ ಬಾಂಧವ್ಯ
ಬೇಕು ಬೇಡಿಕೆಗಳ ಪೂರೈಸಿ
ಉರುಳುತಿದೆ ದಿನಮಾನ
ನಾನೇನಾ ಎಂಬ ಅನುಮಾನ.
ದಡ ಸೇರಿಸುವ ಹೊಣೆ
ಮುಡಿಗೇರಿದ ಬವಣೆ
ಹಗಲು ಇರುಳಿನ ಪರಿವೆಯಿಲ್ಲ
ಮುಗುಳು ನಗೆಯ ಮುನಿಸೆಲ್ಲ.
- Advertisement -
ಬೆಳೆದು ನೀನಾದೆ ಹೆಮ್ಮರ
ಮೈದಳೆದ ಹೊಸ ಆಶಯದಿ
ಬರಿದು ಕಾನನ ನಾನು
ಮುಕ್ಕಿ ತಿನ್ನುತಿಹ ಒಂಟಿತನ.
ಕೇಳುವವರಿಲ್ಲದ ಬೆಂಗಾಡು
ಮೊದಲಿತ್ತಿದು ನಂದನ
ಕೈಚೆಲ್ಲಿದೆ ನಿರ್ಲಕ್ಷಿಸಿ
ನೇವರಿಸುವರಿಲ್ಲದ ಕೊರಗು.
ಬೇರೇನೂ ಬೇಡ
ಆಲಂಗಿಸಿ ಬಿಡೊಮ್ಮೆ
ಆದರಿಸಿ ಸಂತೈಸೊಮ್ಮೆ
ಕರುಣೆ ಅನುಬಂಧದಿ ನೋಡ.
ಅಗಲಿದಾಗ ಕಣ್ಣೀರು ಬೇಡ ಎನಗೆ
ಹೋಗುವ ಮುನ್ನ ಅಲಿಂಗನದ ಬಯಕೆ
ಸಾಂಗತ್ಯ ಗೀತೆ ಗಡಿಬಿಡಿ
ಪ್ರೀತಿ ತೋಟದ ಹೂವು ಅರಳಲು ಬಿಡಿ.
ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು