ಸತ್ತ ಹೆಣಗಳ ತಿನ್ನುವ ನರಮಾನವರು
ಸತ್ತ ಹೆಣಗಳ ತಿನ್ನುವ ನರಮಾನವರು
ಇನ್ನೂ ಇಲ್ಲೇ ಇದ್ದಾರೆ
ಅಳುವ ಧ್ವನಿಗೆ ಧ್ವನಿಯಾಗದೆ
ರಾಗ ರಂಜನೆಗೆ
ಸಿಡಿ ಮದ್ದಾಗಿದ್ದಾರೆ
ಸಿಡಿ ಸಿಡಿದು
ಸೀಳುವ ಬಂದೂಕುಧಾರಿಗಳು
ಬಗಲಲ್ಲೆ ಕೂತು ಹೆಣವಾಗಿದ್ದಾರೆ
ಇವರಿಗೆ ಇವರದೇ ಗೋಳು
ಅಳುವ ಗೋರಿಯೊಳಗಿನ
ಹೆಣವಾಗಿದ್ದಾರೆ
ಪಾತ್ರ ಒಂದೇ ಬಣ್ಣ ಹಚ್ಚುವ ಮುಖವಾಡಕ್ಕೆ ಮೊಗವ ತೋರಿಸಿ ನಲಿಯುವ ರಣ ಹದ್ದುಗಳು ಆಗಿದ್ದಾರೆ
ಅರಿತರೂ ಅರಿಯದ ನಾಜೂಕು
ಸ್ತ್ರೀ ಮೊಗ ಹೊತ್ತು ತಿರುಗುವ
ಗಾವಿಲರಾಗಿದ್ದಾರೆ
ಇವರಿಗೆ ಜಯಕಾರ ಬೇರೆ ಕೇಡು
ಊಸರವಳ್ಳಿಯ ಬದುಕು
ಭಾವನೆಗಳಿಲ್ಲದ ಬೆಲ್ಲದೊಳಗಿನ
ನೊಣವಾಗಿದ್ದಾರೆ
ಹೊಡೆದರೂ ಹೊಡೆಯಿಸಿಕೊಳ್ಳುವ
ಲಂಗು ಲಗಾಮು ಇಲ್ಲದೇ ತಿರುಗುವ
ಪೇಟೆಯೊಳಗಿನ ದನವಾಗಿದ್ದಾರೆ
—————————
ಡಾ ಸಾವಿತ್ರಿ ಕಮಲಾಪೂರ