ಗುರುವಿಗೆ ಕಂಬನಿ
ಕರುನಾಡ ನೆಲದಲ್ಲಿ
ಹುಲುಸು ಧಾರವಾಡದ ಪುರವು
ಕರ್ನಾಟಕ ಕಾಲೇಜಿನಲ್ಲಿ
ಇದ್ದರೊಬ್ಬರು ಗುರು ಇಲ್ಲದಂತೆ
ಅತಿ ಶಿಸ್ತಿನ ಶಿಕ್ಷಕ
ಸಮಯ ಪಾಲಕ
ಗಂಭೀರ ನಡೆ ಸೌಮ್ಯ ನುಡಿ
ಪಾಠ ಮಾಡುವ ಕಾರ್ಯ
ಜಪ ತಪ ಪೂಜೆ
ಮಂದಹಾಸದ ನಗೆ
ವಿದ್ಯಾರ್ಥಿಗಳ ಚಿಲುಮೆ
ಬರಹ ಓದು ಕವನ
ನಾಟಕಗಳ ಗೀಳು
ಅದೆಷ್ಟೋ ಮಕ್ಕಳಿಗೆ ಮಾರ್ಗದರ್ಶಿ
ಸ್ನೇಹ ಸಮತೆಯ ಪ್ರೇಮದರ್ಶಿ
ಚೆಲುವಾಯಿತು ಕನ್ನಡವು
ಗೋಕಾಕ ಚಳವಳಿಯು
ವಿದ್ಯಾವರ್ಧಕ ಭವನದ
ಹೊನ್ನ ಗುಡಿಯು
ಭರತೇಶನ ಭೋಗವೈಭವ
ಕಾವ್ಯ ಕುಸುಮವು ನಿಮಗೆ
ಯಾರಿಲ್ಲದ ಹಾದಿಯಲಿ
ಸದ್ದಿಲ್ಲದೇ ಹೋದಿರಿ
ಬಿಕ್ಕುತಿಹೆವು ನಾವು
ನಿಮ್ಮ ಕರುಣೆ ಕುಡಿಗಳು
ಹೋಗಿ ಬನ್ನಿರಿ ಗುರುಗಳೇ
ನಿಮಗಿಂದು ವಿದಾಯ
ನಾನು ಏಕಲವ್ಯನಾದೆ ಗುರುವೇ
ಆಗಲಿಲ್ಲ ನೀವು ದ್ರೋಣರು
ನಿಮ್ಮ ನೆನಪಿನಲಿ ನಡೆಯುವೆವು
ಬಿ ವಿ ಗುಂಜೆಟ್ಟಿಯವರೇ
ನಿಮಗೆ ನಮ್ಮ ಶೋಕದ
ನೋವಿನ ಕಂಬನಿ ಅರ್ಪಣೆ
————————————–
ಡಾ.ಶಶಿಕಾಂತ ಪಟ್ಟಣ ರಾಮದುರ್ಗ
(ನಾನು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗ ಐಚ್ಚಿಕ ಹಿಂದಿ ವಿಷಯವನ್ನು ತೆಗೆದು ಕೊಂಡಿದ್ದರೂ ನನ್ನ ಸಾಹಿತಿಕ ಅಭಿರುಚಿ ಗುರುತಿಸಿ ಬರೆಯಲು ಬೆನ್ನು ತಟ್ಟಿದ ನನ್ನ ಗುರುಗಳು. ಅವರೊಬ್ಬ ಭವ್ಯ ಮಾನವ ವಿದ್ಯಾರ್ಥಿಗಳನ್ನು ಅತಿಯಾಗಿ ಪ್ರೀತಿಸಿ ಪ್ರೋತ್ಸಾಹಿಸಿದ ಶಿಸ್ತಿನ ಶಿಪಾಯಿ. ಮೃತರ ಕುಟುಂಬಕ್ಕೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ರಾಮದುರ್ಗದ ವತಿಯಿಂದ ಭಕ್ತಿಪೂರ್ವಕ ಶೋಕದ ನಮನಗಳು.)