ಚೆಂದುಳ್ಳಿ ಮಿಂಚುಳ್ಳಿ
ಬೆಳ್ಳಿಯ ಬಣ್ಣದವಳು
ಮೊಗ್ಗಿನ ಜಡೆಯವಳು
ಅಲ್ಲೂ ಇಲ್ಲೂ
ಎಲ್ಲೂ ಎಲ್ಲೆಲ್ಲೂ
ಕಾಣುತಿರುವೆ
ಒಳಗೂ ಹೊರಗೂ
ಒಳಗೊಳಗೂ
ಕಾಡುತಿರುವೆ
ಮನದರಸಿಯೆ ಪಟ್ಟದರಸಿಯೆ
ಕಾಣುತಿರುವೆ ಕಾಡುತಿರುವೆ
ಬಾಗಿ ಬಳುಕಿ
ತುಂಬಿ ತುಳುಕಿ
ಜಗದಗಲಕೆ ಪ್ರೀತಿ ಹಬ್ಬಿಸಿ
ಮಿರಿ ಮಿರಿ ಮಿನುಗುವ ನಗುವ ಚೆಲ್ಲಿ
ಕ್ಷಣ ಕ್ಷಣ ಅನುಕ್ಷಣ ಹಾಕಿ ಅನುರಾಗದ ರಂಗವಲ್ಲಿ
ರೆಕ್ಕೆ ಬಿಚ್ಚಿ ಹಾರಿತು ಉಲ್ಲಾಸದಿ ಉಕ್ಕಿತು ಹರೆಯ ಅಲ್ಲಿ
ಬಾಗಿಲ ಬಳಿ
ಬಂದು ನಿಂದು
ಮಂದಾರ ಗಂಧ ತಂದು
ಕತ್ತಲನು ದೂರ ಸರಿಸಿ
ಎದೆಯೊಳಗೆ ಹೃದಯದೊಳಗೆ ಚೆಲ್ಲಿದೆ ಬೆಳಕನು ಬಿಟ್ಟು ಬಿಡದೆ
ಚೆಲುವೆಯ ಮುಂದೊಂದು ಚೆಲುವಾದ
ಚೆಲುವನ್ನಿಟ್ಟಂತೆ
ಎದೆಯ ಗೂಡಿನಲ್ಲಿ ಕುಳಿತೆ
ಮಿಡಿದೆ ಹೃದಯ ವೀಣೆ
ಏಕೋ ಕಾಣೆ
ಏನೋ ಕಾಣೆ
ನಿನ್ನ ಕಾಣದೆ ಮಂಕಾಗಿದೆ
ಮುಡಿಗೆ ಮುಡಿವ ಮಲ್ಲಿಗೆ
ನಿನ್ನ ಮುಡಿಗೆ ಕಾದಿದೆ
ಬಾಡದೆ ಘಮ ಚೆಲ್ಲಿದೆ
ಸುಮ ಘಮ ಘಮ ಸುಮ
ಅರಳಿ ಮರಳಿ
ಮರಳಿ ಅರಳಿ ಮೆಲ್ಲಗೆ ಒಲವಿನ ಬೆಸುಗೆಗೆ
ನೀನಿರದ ಈ ದಿನ ನೀನಿರದ ಈ ಕ್ಷಣ
ಕೆನ್ನೆ ಕಣ್ಣೀರಲ್ಲಿ ತೊಯ್ದು ತೊಪ್ಪೆಯಾಗಿದೆ
ಬಿಕ್ಕು ಒತ್ತರಿಸಿದೆ
ಒಲವು ತತ್ತರಿಸಿದೆ
ಸಿಕ್ಕಿದೆ ಮನ ಸವಿ ಸವಿ ನೆನಪಿನ ಸುಳಿಗೆ
ಕೊರೆವ ಚಳಿಯ ತಂಪನಿರುಳು
ನೀನಿಲ್ಲದೆ ಸುಖವೆಲ್ಲಿದೆ?
ಚೆಂದುಳ್ಳಿಯ ಮಿಂಚುಳ್ಳಿಯ ಮಿಂಚಿಲ್ಲದೆ…..
=================
ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142