ಮುಂಗಾರಿನ ಮುಗುಳು
ನೋಡಿರೈ ದಿಗಂತದಾಚೆ
ಮಳೆಹನಿ ರತಿರೂಪದೆ
ಬೀಸಿ ಕರೆದಂತೆ ಕೈಚಾಚಿ
ಎನ್ನ ಕವಿಮನಸು ಕರಗುತಿದೆ
ಕಳ್ಳಾಟವಿದೆ ಬಾನಂಚಲಿ
ಮತಿಗೆಟ್ಟ ದಿನಕರನಾವಳಿ
ಕೊಟ್ಟು ಹೊಂಬಣ್ಣ ಹನಿಗೆ
ಇಟ್ಟ ಕವಿಯ ಚಿತ್ತ ತಪಾಸಿಗೆ
ಬಿಸಿಲ್ಗೋಲು ಮೂಡಿದರೆ
ಮೈಮನವೆ ಹಗುರಾದಂತೆ
ನನ್ನೆದೆಯ ಇಂಗಿತಕೆ
ಹೊಸ ಜೀವ ಬಂದಂತೆ
ಮುಂಗಾರಿನ ಮುಗುಳುನಗೆಯ
ಬಲೆಗೆ ಬಿದ್ದಿದೆ ಕವಿಹೃದಯ
ಅರಿವಾಗದನುಭೋಗ ದಾಳಿಗೆ
ಸಿಲುಕಿ ಸಿಹಿ ಸಂಕಟವೆನಗೆ
ಹೇಗೆಂದು ವಿವರಿಸಲಿ
ಯಾರಲ್ಲಿ ಬಣ್ಣಿಸಲಿ
ಮನ್ಮಥನ ಮುಗುಳುಗಣೆ
ಹಿತಭಾವ ವಿಶ್ಲೇಷಣೆ
ನಿಲ್ಲದಿರೆ ಮಳೆಗಾನ
ನಿಶ್ಶಬ್ದ ಬೇಡಿಕೆ
ಕಳೆಯೆ ದುಖ-ದುಮ್ಮಾನ
ಕವಿಯ ಒಡಂಬಡಿಕೆ
ಡಾ.ಭವ್ಯ ಅಶೋಕ ಸಂಪಗಾರ