ಮೌನವ ತಬ್ಬಿಕೋ
ಮೌನದೊಡವೆಯಲಿ ಸಿಂಗರಿಸಿಬಿಡು
ಧ್ಯಾನದ ಹೊನಲಲಿ ತೇಲಿಬಿಡು
ಸುಖದ ಉತ್ತುಂಗಕ್ಕೆ ಏರಬಹುದು
ಅಂತರಾಳದ ನೋವಿಗೂ ಕಸಿವಿಸಿಯಾದೀತು.
ಜಗದ ಜಂಜಡದ ನಡುವೆ
ಮೋಹದ ಬಲೆ ಸೆಳೆತಕ್ಕೆ
ವ್ಯಾಮೋಹದ ಹಂಗು ತೊರೆಯಲು
ಅಹಂಭಾವ ಗೋಡೆ ಕಳಚೀತು.
ಮಾತಿನ ಭರಾಟೆಗೆ ಬೇಸತ್ತು
ಗತ್ತಿನ ನಡೆಯ ಮೂರ್ತರೂಪಕೆ
ಮುತ್ತಿರುವ ಬಯಕೆ ಹತ್ತಿಕ್ಕಲು
ಮೌನವೆಂಬುದು ಅಗಮ್ಯ ಚೇತನವಾದೀತು.
ಕರಾಳ ಮುಖ ತಿಳಿಗೊಳಿಸಿ
ನಿರಾಳ ಬದುಕಿನ ಅರ್ಥಕಲ್ಪಿಸಿ
ಸರಳ ಜೀವನಕೆ ಅಡಿಪಾಯ ಹಾಕಲು
ಮಾತಿನ ವಿರಾಮ ಬಲ ನೀಡಿತು.
ಅಪ್ಪಿಕೋ ಮೌನ ಧ್ಯಾನವ
ತಪ್ಪಿ ನಡೆಯದಂತೆ ತಡೆಯಲು
ಬಂದುದ ಸಹಿಸುವುದಕೆ
ವಿಚಲತೆಗೆ ಕಡಿಗೀಲಾದೀತು.
ಮೌನವ ತಬ್ಬಿಕೊ
ಒಲವ ಧಾರೆ ಎರೆದು
ಗುಲ್ಲೆಬ್ಬಿಸುವದನು ತಬ್ಬಿಬ್ಬುಗೊಳಿಸಿ
ಛಲದ ಬದುಕಿಗೆ ಮುನ್ನುಡಿಯಾದೀತು.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

