ಪ್ರೀತಿ ಮತ್ತು ನೆರಳು
ನನ್ನ ನಿನ್ನ ಸ್ನೇಹ ಭಾವ
ಅರಳಿ ನಗುವ ಸೂಸಲಿ
ಮುನಿಸು ಕರಗಿ ಕನಸು ಮೂಡಿ
ಮನಸು ಮನಸು ಬೆರೆಯಲಿ ನಿನ್ನ ಪ್ರೀತಿ ನೆರಳಲಿ…
ಕವಿದ ಇರುಳ ಕೊರಳ ಬಗೆದು
ಬೆಳಕು ಇಣುಕಿ ಚುಕ್ಕಿ ತೆರಳಿ
ಹಕ್ಕಿಗೊರಳು ಹಾಡಲಿ
ಭುವನ ಬೆಳಗಿ ನಲಿಯಲಿ ನಿನ್ನ ಪ್ರೀತಿ ನೆರಳಲಿ…..
ಶರಧಿ ಎದೆಗೆ ಒರಗಿ ನಗುವ
ನದಿಯ ಹೃದಯ ಮಿಡಿತ ಮಧುರ..
ತೀರದಲ್ಲಿ ಅಲೆಯ ನಾದ
ಅನವರತ ಮಿಡಿಯಲಿ ನಿನ್ನ ಪ್ರೀತಿ ನೆರಳಲಿ….
ಮೌನದಲ್ಲಿ ಹೂವು ನೊಂದು
ಹೃದಯ ದೂರವಾಗೆ ಬೆಂದು
ಬಣ್ಣದ ಬಿಲ್ಲೊಂದು ಬಾಗಿ
ಬಾನು ಭುವಿಯ ಬೆಸೆಯಲಿ ನಿನ್ನ ಪ್ರೀತಿ ನೆರಳಲಿ….
ಮೋಡದಲ್ಲಿ ತೇಲಿ ಬಂದ
ಮುಗಿಲ ದೊರೆಯ ಮೋಡಿಯಲ್ಲಿ
ಲೀನವಾಗೆ ಜೀವ ಭಾವ
ತಾರೆಯೆಲ್ಲ ನಲಿಯಲಿ ನಿನ್ನ ಪ್ರೀತಿ ನೆರಳಲಿ…..
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ