ಸಾವಿರದ ವಿಶ್ವಮಾನ್ಯಳು.
ಹಸಿರನು ಉಸಿರಾಗಿಸಿಕೊಂಡವಳು
ಬಿಸಿಲಿನ ಬೇಗೆ-ಧಗೆ ನಿವಾರಕಳು
ಪರಿಸರಪ್ರೇಮಿ ಪ್ರಿಯರ ಪ್ರೇರಕಳು
ಕೋಟಿ ಮರನೆಟ್ಟ ಕೋಟ್ಯಧೀಶಳು./1/
ಸಕಲ ಜೀವರಾಶಿಯ ಮಾತೆಯಿವಳು
ಮಕ್ಕಳಂತೆ ಮರಗಳ ಪೋಷಿಸಿಹಳು
ಪಯಣಿಗರ ದಣಿವು ಪರಿಹರಿಸಿದವಳು
ನಾಡಿನ ಜೀವಜಾಲಕೆ ತಂಪನೆರೆದಿಹಳು/2/
ಮರಗಳು ಮರುಗುತ ರೋಧಿಸುತಲಿಹವು
ವ್ರೃಕ್ಷಮಾತೆಯ ಅಗಲಿಕೆ ತಾಳದಂತಾಗಿಹವು
ಅನಾಥ ಪರಿಸರ ನಿಸ್ವಾರ್ಥ ಸಂರಕ್ಷಕಳು
ಜೀವಪ್ರದಾಯಿನಿ ಸಾಲುಮರದ ತಿಮ್ಮಕ್ಕಳು/3/
ಹಸಿರು ಕ್ರಾಂತಿಯ ಹರಿಕಾರಳು
ಹೆಮ್ಮೆಯ ಅಪೂರ್ವ ಮಹಾಸಾಧಕಳು
ಪರಿಸರವಾದಿ ಅಜರಾಮರಳು
ಆಮ್ಲಜನಕ ಪುನರುಜ್ಜೀವಕಳು/4/
ಕಾಯಕದಲ್ಲಿ ಕೈಲಾಸ ಕಂಡುಂಡವಳು
ಪ್ರಕ್ರೃತಿ ಸಂಸ್ಕೃತಿ ಸಂಸ್ಕರಿಸಿಹಳು
ವ್ರೃಕ್ಷೋದ್ಯಾನ ನಾಮಾಂಕಿತಳು
ಯವಪೀಳಿಗೆಗೆ ಸ್ಪೂರ್ತಿದಾಯಕಳು/5/
ಇಂದಿರಾ ಪ್ರಿಯದರ್ಶಿನಿ, ವೃಕ್ಷಮಿತ್ರ
ನಾಡೋಜ,ಪ್ರತಿಷ್ಠಿತ ಪದ್ಮಶ್ರೀ, ರಾಜ್ಯೋತ್ಸವ
ಗೌಡಾ,ರಾಷ್ಟ್ರೀಯ ಪೌರ ಪ್ರಶಸ್ತಿ ಪುರಸ್ಕೃತಳು
ವೃಕ್ಷಮಹಾಮಾತೆ ವಿಶ್ವಮಾನ್ಯಳು/6/
ಸಾವಿರದ ಸಾಲುಮರದ ತಿಮ್ಮಕ್ಕಳು
ಮಕ್ಕಳಿಲ್ಲದವರಿಗೆ ಸ್ಪೂರ್ತಿದಾಯಕಳು
ಅನಕ್ಷರಸ್ಥ ಗ್ರಾಮೀಣ ಸಾಮಾನ್ಯ ಜೀವಿಯಿವಳು
ನಿಮಗಿದೋ ಅನಂತಾನಂತ ನುಡಿ ನಮನಗಳು/7/

ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಕವಿಯಿತ್ರಿ, ಸಂಶೋಧಕರು
ಗದಗ.

