ಮರಗಳಾ ಮಹಾತಾಯಿಗೊಂದು ನುಡಿ ನಮನ
ಹಸಿರನ್ನೇ ಉಸಿರಾಗಿಸಿ, ಉಸಿರು ಬಿಟ್ಟ
ಕಾಯಕಯೋಗಿಣಿ ಮಹಾನ್ ಸಾಧಕಿ,
ನಿಸ್ವಾರ್ಥ ಸೇವೆಗೈದು ಅಮರತ್ವಕ್ಕೇರಿದಾ ಮಾತೆ
ಪದ್ಮಶ್ರೀ ಪಡೆದ ತಿಮ್ಮಕ್ಕನಿಗೆನ್ನ ನುಡಿ ನಮನ
ಗಿಡಮರಗಳನು ಕಂದಮ್ಮಗಳಂತೆ ಸಾಕಿ
ಬೆಳೆಸಿದಾ ಕರುಣಾಮಯಿ ವೃಕ್ಷ ಮಾತೆ
ನಿಷ್ಕಲ್ಮಶ ಬದುಕಿನ ಶತಾಯುಷಿ ಸರಳ ಮಾತೆ
ಸಾಲು ಮರದ ತಿಮ್ಮಕ್ಕನಿಗೆನ್ನ ನುಡಿ ನಮನ
ಬಡತನದಾ ಬೇಗೆಯಲಿ ಮಿಂದರೂ
ಇಳೆಯ ಮೇಲೊಂದು ಸಾರ್ಥಕ ಬೆಳೆ
ಬೆಳೆದು ವಿಶ್ವಮಟ್ಟದಾಮೇರು ಮಾತೆ
ಎನಿಸಿದಾ ತಿಮ್ಮಕ್ಕನಿಗೆನ್ನ ನುಡಿ ನಮನ
ಚೈತನ್ಯದಾ ಚಿಲುಮೆ ಸಸ್ಯಲೋಕದಾತೆ
ಪರಿಸರವಾ ಉಳಿಸಿ ಬೆಳೆಸುವಾ ಆದರ್ಶಮಾತೆ
ವೃಕ್ಷ ಪ್ರೀತಿ ನಿಸರ್ಗ ಪ್ರೇಮವಾ ಬೋಧಿಸಿದಾ
ಮರಗಳಾ ಮಹಾತಾಯಿಗೊಂದು ನುಡಿ ನಮನ.
ಶ್ರೀ ಸುತ ಮಹಂತ
ಮಹಾಂತೇಶ ನರೇಗಲ್ಲ
ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ

