ನಾನೂ ಮನುಷ್ಯನಾಗಬೇಕು
ಹಣ್ಣು ಹಣ್ಣು
ಮುದುಕಿಯೊಂದು
ನಳನಳಿಸಿ
ರಸ್ತೆಯ ದಾಟುವಾಗ
ನಾನು
ಕೈಹಿಡಿದು ನಡೆಸಲಿಲ್ಲ
ಸುಕ್ಕುಗಟ್ಟಿದ ಆ ಮುದುಕಿಯ ಕೈಗಳು
ನನ್ನದೇ ಭವಿಷ್ಯದ ಕನ್ನಡಿಯಾಗಿತ್ತು;
ಅದನ್ನು ನೋಡಿ
ಮುಖ ತಿರುಗಿಸಿದೆ
ಅವಳಾರೋ….
ಗೊತ್ತಿಲ್ಲ
ಕೃತಕ ಬಣ್ಣ
ಬಳಿದು
ಮುಗುಳು ನಗೆ ಬೀರಿದ
ಕೋಮಲೆ ಕರೆಗೆ
ಜೊಲ್ಲು ಸುರಿಸುತ
ಓಡಿದೆ
ನನಗೆ ಹಸಿವಾಗಿತ್ತು;
ಧರ್ಮದ ಮುಖವಾಡವನ್ನೇ ಕಳಚಿದೆ.
ಮೊದ ಮೊದಲು ಎಡವಿದ್ದು
ಗೊತ್ತಾಗಲಿಲ್ಲ
ಮುದುಕಿಯ ಕಣ್ಣೀರು ಬತ್ತಿದ ನದಿಯಾಗಿತ್ತು
ಅಲ್ಲಿ ದಾಹ ತೀರಿಸುವ
ಯಾವ ಲಕ್ಷಣವಿರಲಿಲ್ಲ
ಮತ್ತೊಮ್ಮೆ
ಅವ್ವನ ಸುಕ್ಕುಗಳಲ್ಲಿ
ಅಡಗಿದ್ದ
ಕಾಶಿಯನ್ನು ನಾನು
ಕಾಣಲಿಲ್ಲ,
ಸಿಡಿಮಿಡಿಗೊಂಡು
ರೇಗಾಡಿದೆ
ನಿನ್ನೆ ಮೊನ್ನೆ
ಬಂದವಳು
ಕಣ್ಣಿನ ಸಂಚಿನಲಿ ಕೈಲಾಸವ ಕಂಡೆ
ಮಾತಿನ ಚಕಮುಖಿಯ
ಅವಳ ನಗೆಯ
ಓಘವು
ನನ್ನ ಪಾಲಿಗೆ ವೇದವಾಗಿತ್ತು
ಮುಗುಧನಾಗಿ
ನಗುತ
ಅವಳ ಸೆರಗು ಹಿಡಿದು
ಸಾಧುವಿನಂತೆ ಬೆರೆತೆ
ಆದರೆ ಕರುಣೆಯಿಲ್ಲದವನಾಗಿ ಕಾಲವನು ಕೊಂದೆ.
ಮುದುಕಿಯ ಕೈಗಳು
ಬಾಡಿ ಹೋದ ಹೂವಿನ ದಳಗಳು
ಹರಿದು ಹೋದ
ಹಳೆಯ ಭೂಪಟ
ಮೋಹಕ್ಕೆ ಮರುಳಾಗಿ ಕ್ಷಣಿಕ ಮೆರುಗು ಅಹಂಕಾರದ ಕಚಗುಳಿ
ನಾನು ಮತ್ತು ನನ್ನವಳು
ಅವ್ವನ ಕರೆಯು
ಜೀವನದ ಹಾದಿ.,
ನೆರೆ ಕೆನ್ನೆಯ ಸುಕ್ಕುಗಳ
ಅಸ್ಥಿಪಂಜರವು ನನ್ನರಿವಿಗೆ ಬರಬೇಕಿತ್ತು
ಹೆಗಲ ಮೇಲಿನ
ಬಾಳ ಕಂಬಳಿ
ಅದನ್ನೆ….
ಕ್ಷಣಿಕ ತೋಳುಗಳನು
ಹೊದ್ದುಕೊಂಡು
ಮತ್ತೆ ಮತ್ತೆ ಎಡವಿದೆ
ಅವಳು ಯಾರೋ..?
ನಕ್ಕಿದು
ಧರ್ಮ ಸಂಕಟದ ಕವಲು ದಾರಿ,
ಜೇಬಿನಲ್ಲಿರುವ
ಸುಟ್ಟ ನಾಣ್ಯ
ಆದರೆ ನಾನು….
ಮಾಯೆಯನು ಮೋಹಿಸುವ ಭ್ರಮೆಯಲಿ
ಮಾನವೀಯತೆಯ ದಹನ ಮಾಡಿದೆ.
ಬಾಗಿ ನಡೆಯುವ ಮುದುಕಿ,
ಧರ್ಮದ ಬೇರಾಗಿದ್ದಳು
ಸಾಕಿ ಸಲುಹಿದ
ಅವ್ವ ಬದುಕು
ಕಲಿಸಿದ್ದಳು
ತೂಗಿ ನಡೆಯುವ ನನ್ನವಳು ಕೇವಲ ಗಾಳಿಯಾಗಿದ್ದಳು
ತಾಯಿ ಬೇರನ್ನೆ ಕಡೆಗಣಿಸಿ, ಗಾಳಿಯನ್ನಪ್ಪಿದ ಮೇಲೆ
ನನ್ನ ಬದುಕಿನ ಮರಕ್ಕೆ ಫಲವೆಲ್ಲಿಂದ ಬಂದೀತು?
ನಾನೂ ಮನುಷ್ಯನೆ…?
ಎಷ್ಟು ಬಾರಿ ಎಡವಿ ಬೀಳಬೇಕು?
“””””””””””‘””””‘”””””””””””””””””
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

