ಅಮ್ಮಾ ನೀ ಮಾನವೀಯತೆಗೆ ಮಾದರಿ
ಅಮ್ಮಾ , ನೀ ಸುಖ ದುಃಖಗಳ ಗಣಿ,
ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ
ತುಂಬಿದ ಅವಿಭಕ್ತ ಕುಟುಂಬವ ಸೇರಿ
ಎಲ್ಲರ ಸಂತೈಸುವುದರಲ್ಲೇ ಅರ್ಧ ಬದುಕು ಕಳೆದ,
ಗೃಹಿಣಿಯಾಗಿ ಅರ್ಧ ದಶಕ ಕಳೆದರೂ ಮಕ್ಕಳಾಗಲಿಲ್ಲ ಎಂಬ
ಜನರ ಚುಚ್ಚುಮಾತ ಹೇಗೆ ಸಹಿಸಿದೆಯಮ್ಮ ?
ಅರ್ಧ ದಶಕದ ನಂತರ ನಾ ಜನಿಸಿದಾಗ
ಗಂಡಾದರೇನು ಕಾಲು ಸರಿಯಿಲ್ಲ
ಎಂಬ ಚುಚ್ಚು ಮಾತುಗಳ ಹೇಗೆ ಸಹಿಸಿದೆಯಮ್ಮ ?
ಮಗುವಾದ ಸಂತಸ ಒಂದೆಡೆ ,
ವಿಕಲಾಂಗನೆಂಬ ದುಃಖ ಮತ್ತೊಂದೆಡೆ
ಹೇಗೆ ಎದುರಿಸಿದೆಯಮ್ಮಾ ಆ ದಿನಗಳ..
ಮನೆಗೆಲಸದಲ್ಲಿ ನೀನೊಬ್ಬ ಸಿಪಾಯಿ
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ
ಸರಳ ಸುಂದರ ಸಂಸಾರ ನಡೆಸಿದ ನೀನು
ಸೊಸೆ ತರುವಾಗಲು ಶ್ರೀಮಂತಿಕೆಯ
ಆಸೆ ತೋರಲಿಲ್ಲವಲ್ಲ – ಏನಮ್ಮಾ ನಿನ್ನ ಮನಸು !!
ಅತ್ತೆ ಮಾವಂದಿರ ಸೇವೆ
ಬರುವ ಬಂಧು ಬಳಗದವರ ಸೇವೆ,
ಅಕ್ಕ ಪಕ್ಕದ ಬಡವರ, ಆಶಕ್ತರ ಸೇವೆ
ಚಿಕ್ಕಮಕ್ಕಳ ಬಾಳ ಕಷ್ಟಗಳಿಗೆ ಸ್ಪಂದಿಸಿದ
ನಿನ್ನಲ್ಲೊಬ್ಬ ಸಮಾಜ ಸೇವಕಿಯ ನಾ ಕಂಡೆ..
ಮಕ್ಕಳು ಮೊಮ್ಮಕ್ಕಳೊಂದಿಗೆ
ನಲಿಯುತ್ತಿದ್ದ ನಿನ್ನ ಮನಕೆ
ಹಠಾತ್ ಸಿಡಿಲ ಬಡಿತ
ಪ್ರಾಣದಂತೆ ಪ್ರೀತಿಸುತ್ತಿದ್ದ
ಮಗಳಿಗೆ ಕ್ಯಾನ್ಸರ್ ರಾಕ್ಷಸನ ಆಕ್ರಮಣ..
ಹಣ್ಣಾದ ಜೀವಕೆ ಸಿಡಿಲ ಮೊರೆತ
ಮಗಳ ಸಾವಿನ ಆಕ್ರಂದನ
ಎಲ್ಲ ಮೌನದಿ ಸಹಿಸಿದೆಯಲ್ಲ ಅಮ್ಮಾ,
ಭವಿಷ್ಯದ ಕನಸುಗಳ ಕಟ್ಟುತ್ತಲೇ
ಪರಿಸರದಲ್ಲಿ ಲೀನವಾಗಿ ಬಿಟ್ಟೆಯಲ್ಲ ಮಹಾತಾಯಿ,
ದೇವರು ನೀಡಿದ ಎಲ್ಲ ನೋವುಗಳ
ನಗುನಗುತ್ತಲೇ ಕ್ಷಮಿಸಿಬಿಟ್ಟ
ನೀನು ನಿಜವಾಗಿಯೂ
ಭೂಮಿಯಂತೆ ಕ್ಷಮಯಾಧರಿತ್ರಿ..
ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು
ಸಾಹಿತಿಗಳು,ಪತ್ರಕರ್ತರು
ಮೈಸೂರು

