ಮರೆತು ಮನದಲ್ಲಿ ಬಸವನ
————————————
ಮರೆತು ಮನದಲ್ಲಿ ಬಸವನ
ವನವ ಸುತ್ತಿದರೇನು ?
ಜಡಗೊಂಡ ಕಾಯವು
ಕಲ್ಯಾಣಕೆ ಹಾತೊರೆಯೇ
ಕುರಿ ಹಿಂಡು ಮೇಯಲು
ಕಬ್ಬಿನ ತೋಟ ಹೊಕ್ಕಂತೆ
ಅರಿವು ಆಚಾರ ಅನುಭಾವ
ಗುರು ಲಿಂಗ ಜಂಗಮವು
ಶ್ರಮ ದುಡಿಮೆಕಾಯಕ
ಧರ್ಮ ಸಾಧನ ದೀಕ್ಷೆಯು
ದಾಸೋಹ ಸಮಪಾಲು
ಸಹ ಬಾಳ್ವೆಯ ಜೀವನ
ಅಪ್ಪ ಬಸವನ ವಚನ
ಮನುಕುಲದ ಪಾವನ
ಅಷ್ಟ ಮದಗಳ ಸುಟ್ಟು
ಅಷ್ಟಾವರಣ ಧರಿಸುತ
ಶಿವನೊಲುಮೆಯ ಪರಿಯು
ಶಿವಾಚಾರದ ನಡೆಯು
ಭವಿ ಬಿಟ್ಟ ಭಕ್ತನು
ನರನೋಗಿ ಹರನಾದ
ಮನುಜನೆ ಮಹದೇವ
ಕಲ್ಯಾಣವೇ ಕೈಲಾಸ
ಉಳವಿ ಹೆಬ್ಬಾಗಿಲು
ವಚನಗಳ ಕ್ರಾಂತಿಗೆ
ಜಗವೆಲ್ಲಾ ನಡುಗಿಹುದು
ಅನುಭಾವದ ಕಿಚ್ಚಿಗೆ
ಅಡಿಗಡಿಗೆ ವಚನಗಳ
ನಡೆ ನುಡಿವ ಮಹಾಪುರುಷ
ಕಾಯಕವೇ ಕೈಲಾಸ
ಮರಣವೇ ಮಹಾನವಮಿ
ಧರ್ಮಕ್ಕೆ ದಯೆ ಮೂಲ
ಇಲ್ಲಾ ಶೋಷಣೆಯ ಶೂಲ
ಮರ್ತ್ಯಲೋಕದ ದೀಪ
ಬಸವ ಮಂತ್ರದ ಧೂಪ
ಬಸವ ಶಕ್ತಿಯ ಪರುಷ
ಬಸವ ಬಾಳಿನ ಹರುಷ
————————–
ಸಾಹಿತ್ಯ ಸಮ್ಮೇಳನ
___________________
ಸಾಹಿತ್ಯ ಸಮ್ಮೇಳನ
ದೊಡ್ಡ ಶಾಮಿಯಾನ
ಝಗ ಮಗಿಸುವ
ಲೈಟು ಬೆಳಕು
ಮೈಕಿನ ಕಿರುಚಾಟ
ಮೈಕಿನ ಮುಂದೆ
ಶುದ್ಧ
ನರ ಸಂಹಾರಿ
ಶಾಖೆಹಾರಿ ಭಾಷಣ.
ವೇಷಧಾರಿಗಳ ಕುಣಿತ
ಡೊಳ್ಳು ವಾದ್ಯ ಬಡಿತ
ಅಕ್ಷರ ಜಾತ್ರೆ
ಶಬ್ದಗಳ ಸಂಭ್ರಮ
ಬಂದವರ ಮಾತು
ಉಂಡು ಸಾಗುವ
ಕೊಂಡು ಹೋಗುವ
ಪುಂಡರ ಸಂತೆ
ಬಾಡೂಟಕೆ ಸಂಪು
ಭರ್ಜರಿ ಊಟ
ಕನ್ನಡ ಉಳಿಸ ಬನ್ನಿ
ಸಂಜೆ ಮಂತ್ರಿಯ ಕರೆ
ಟಿವಿ ಪತ್ರಿಕೆ
ಮಾಧ್ಯಮದವರ ಹಬ್ಬ
ಮೂಲೆಯಲ್ಲಿ
ಸೊರಗುವ ಪುಸ್ತಕ
ಸಾಯದೆ ಕೈ ಕಟ್ಟಿ
ನಿಂತ ಲೇಖಕ ಪ್ರಕಾಶಕ
ಮಾಡಿ ಮುಗಿಸುವರು
ಸಾಹಿತ್ಯ ಯಾತ್ರೆ
ಮೊದಲಿನಂತೆ
ಬದಲಾಗಿಲ್ಲ
ಬದಲಾಗುವುದಿಲ್ಲ
ಬಡವಾಯಿತು ಕನ್ನಡ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ