ಸ್ತ್ರೀ ಸಹೃದಯಿ
ಮನೆಯ ಬೆಳಕಲ್ಲ ಅವಳು ಜಗದ ಬೆಳಕು
ತೊಟ್ಟಿಲಲಿ ತೂಗಿದಳು ತ್ರೀ ಮೂರ್ತಿಗಳನ್ನು
ದೇವಾನುದೇವತೆಗಳು ಶಿರಬಾಗಿದರು
ಅವಳಿಗೆ ಸರಿ ಸಮನಾರಿಲ್ಲವೆಂದರು||
ಎಲ್ಲಕ್ಕಿಂತ ಶ್ರೇಷ್ಠಳು ತಾಯಿ ಜಗದಿ
ಕಷ್ಟಗಳ ಬಚ್ಚಿಡುವಳು ಮನದಿ
ಸಂಸಾರವನು ಸರಿದೂಗಿಸುವ ಸುಮತಿ
ಸಂತಸವನು ಸುರಿಯುವ ಸಹೃದಯಿ||
ಆಕಾಶದೆತ್ತರಕೆ ಹರಡಿಹುದು ಕೀರ್ತಿ
ಇತಿಹಾಸದ ಪುಟಗಳಲಿ ಅವಳದೇ ಛಾತಿ
ಸೋಲೆಂಬುದಿಲ್ಲ ಇವಳ ಕಾಯಕದಲಿ
ಪ್ರೀತಿಗೆ ಕೊನೆ ಇಲ್ಲ ಇವಳ ಮಡಿಲಲಿ||
ಮಗಳಾಗಿ ಅಕ್ಕರೆಯ ಸಿಹಿ ತರುವಳು
ಸಹೋದರಿಯಾಗಿ ಸವಿ ಪ್ರೀತಿ ಎರೆವಳು
ಸಂಗಾತಿಯಾಗಿ ಬಾಳಿಗೊಲವ ತರುವಳು
ತಾಯಿಯಾಗಿ ಸರ್ವಸ್ವವನ್ನೂ ಧಾರೆ ಎರೆವಳು||
ಅವಳು ಸೇವೆ ಮಾಡದ ಕ್ಷೇತ್ರಗಳಿಲ್ಲ
ಹೇಳುತ್ತ ಹೋದರೆ ಸಮಯ ಸರಿಯುವುದೆಲ್ಲ
ಅದೆಂತಹ ಶಕ್ತಿ ಅಡಗಿಹುದು ಅವಳಲಿ
ಸಕಲರು ಸೋತಿಹರು ಅವಳ ಪ್ರೇಮದಲಿ||
ಸ್ತ್ರೀ ಎಂದರೆ ಭೋಗದ ವಸ್ತುವಲ್ಲ
ಭಾಗ್ಯತರುವ ದೇವತೆ ತಿಳಿಯಿರೆಲ್ಲ
ಇಷ್ಟಾದರೂ ನಿಲ್ಲುತಿಲ್ಲ ಅತ್ಯಾಚಾರ ಗಳ ಪ್ರಕರಣ
ಯಾವಾಗ ಬರುವುದು ಮತಿಗೇಡಿಗಳಿಗೆ ಒಳ್ಳೆತನ||
ಸಹೋದರರೇ ಮರೆಯದಿರಿ ನೀವು
ನಿಮ್ಮ ಹೆತ್ತ ತಾಯಿಯೂ ಹೆಣ್ಣೆಂಬುದನು
ಪೆಣ್ಣ ಪೂಜಿಸುವ ನಾಡು ನಮ್ಮದು
ಅವಳ ರಕ್ಷಣೆಯ ಹೊಣೆ ನಿಮ್ಮದೆಂದೆಂದು||
ರಚನೆ ಶ್ರೀಮತಿ ಜ್ಯೋತಿ ಕೋಟಗಿ, ಶಿಕ್ಷಕಿ
ಸ ಮಾ ಪ್ರಾ ಶಾಲೆ, ತಲ್ಲೂರ
ತಾ ಸವದತ್ತಿ ಜಿ ಬೆಳಗಾವಿ