ಕವನ: ಮಣ್ಣಿನ ಗಾಯದ ಮೇಲೆ

Must Read

ಮಣ್ಣಿನ ಗಾಯದ ಮೇಲೆ

ಅಲ್ಲಿ ಯಾರೋ

ಮಾಂಸ ಸುಡುತ್ತಿದ್ದಾರೆ

ಕತ್ತಲೊಳಗೆ

ಕಾಡಿನ ನೀರವತೆಯಲ್ಲಿ

ದಿಗಂತಕ್ಕೇರುತಿದೆ ಹೊಗೆ

ಒಂದಿಷ್ಟು ಬೆಳಕೂ

ಬಸುರಾದಂತೆ ಕಾಣುತ್ತಿದೆ

ಚುಕ್ಕಿಗಳು ಕಕ್ಕಾಬಿಕ್ಕಿ 

ಹಕ್ಕಿಗಳು,

ಕಣ್ಣ ಕುಕ್ಕಿಸುವ ಬೆಂಕಿಯ ಕಂಡು,

ಚಿಕ್ಕ ಮರಿಗಳ ಜೀವವ ನಾಜೂಕಾಗಿ ಕಾಪಾಡಲು

ಎದೆ ಬಡಿತದ ಸದ್ದಡಗಿಸಿ

ಗಾಯ ಮಾಡಿಕೊಂಡಿವೆ

ಅಂವಾ  ಮುಲ್ಲಾ ಇರಬಹುದೇನೋ…?

ಬೆಳದಿಂಗಳಿಗೆ ಚೂರಿ ಹಾಕಿದ್ದಾನೆ

ಮಣ್ಣು ಗಾಯವಾದಂತೆಲ್ಲಾ

ಮುಚ್ಚುತ್ತಲಿರುವನು ನೆತ್ರದ ತೆಗ್ಗು

ಅವನ ಕೈಚಳಕದಲಿ 

ನಿರಾಳವಾಗಿ ನರ್ತಿಸುತ್ತವೆ

ಸತ್ತ ಜಿಂಕೆ ಮೊಲಗಳ ಡಿಂಬ-

ಕಿಚ್ಚಿನೊಳಗೆ

ಅಲ್ಲಿ ನೋಡು,

ಹಸಿದ ರಾಜಕೀಯ ನಶೆಯ ಚಹರೆಗಳಿಗೆ

ಎಸರು ಕುದಿಸಿದ ರಸಂ- ಕೊಡುತ್ತಾ…..ಎದುರಿಸಿರು

ಬಿಡುತ್ತಾ ಗಡ್ಡ ನೀವುತ್ತ,

ಗರೀಬಿ ಹಠಾವೋ ಎನ್ನುವವರಿಗೆ ಮುಖವಾಡ ತೊಡಿಸುತ್ತಿದ್ದಾನೆ ಅಧಿಕಾರಿ

ಅರೆರೆ ತಡಕಾಡಬೇಡ

ಸುತ್ತ ನೋಡು

ಜಗದ ಬೆವರ  ನುಂಗಿದವರ ತಾಲೀಮು

ಅದೆಷ್ಟೋ ಮನಗಳ ವ್ಯಭಿಚಾರ ಮಾಡಲು

ಉರಿದ ಜೀವಗಳ ಬೂದಿಯಲಿ ದೇಶದ ಚರಿತೆ ಬರೆಯಲು,

ಅಸಮಾನತೆಗಳ ಪಟ್ಟಿ ಬರೆಯುತ್ತಿದ್ದಾರೆ ಸರ್ಕಾರದ

ಕಮಿಷನರುಗಳು , ಸಲಹಾ ತಜ್ಞರು

ಇತ್ತ ನೋಡು ಕಣೋ…?

ಕೈಯಲ್ಲಿ ಕೂಸಿದೆ

ಸೆರಗು ಹಾಸಿ ಮಲಗಿಸಿದ್ದಾಳೆ

ಅವರಿವರ ಗಾಸಿ ತೊಗಲಿಗೆ  

ಜೀವ ಹಿಚುಕಿಕೊಳ್ಳುವಷ್ಟು

ಹಿಂಸೆಯಾದರೂ ಸಹಕರಿಸಿದ್ದಾಳೆ

“ವೀಡಿಯೋ ಮಾಡು”

“ಬೇಡ ಕಣೋ”

ಗಹಗಹಿಸಿ ನಿಂತಿದೆ ಬುಲೆಟ್ ತುಂಬಿದ ಬಂದೂಕು

ಖಾಕಿ,ಕಾವಿ, ಖಾದಿ ಜೊತೆ

ನಮ್ಮ ಸಂಪಾದಕರೂ ಆಮಂತ್ರಿತರು ಕಣೋ…

ಸಾವಿರಾರು ಕನಸುಗಳ

ಕತ್ತು ಹಿಸುಕಲಿ ಅವರು

ನಾವೂ ಬಾಳಿ ಬದುಕಬೇಕಿದೆ

ಅಭಿಮನ್ಯುವಿನ ಸಾವಿಗೆ

ಅಳುವ ದುರ್ಯೋಧನನಂತಲ್ಲ ಇವರು,

ಹೊಸ ಹೊಸ ಹಸಿವು

ಲಂಚ,ಮುಂಚ,ಲೇವಾದೇವಿ  ಸಾಕು

ಬಟವಾಡೆ,ಬಾಡೂಟವೆ ಬದುಕು


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಂಗಾವತಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group