ಮೈಸೂರು – ಕವಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ದಾರಿ ದೀಪಗಳಾಗಬೇಕು ಎಂದು ಹಿರಿಯ ಸಾಹಿತಿ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಅವರು ಸಿರಿಗನ್ನಡ ವೇದಿಕೆಯ ಮೈಸೂರು ಜಿಲ್ಲಾ ಘಟಕ ಹಾಗೂ ಮೈಸೂರು ಜಿಲ್ಲಾ ಮಹಿಳಾ ಘಟಕಗಳು ಏರ್ಪಡಿಸಿದ್ದ ರಾಜ್ಯಮಟ್ಟದ ಆನ್‌ಲೈನ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಮಾಜವನ್ನು ಕಾಡುತ್ತಿರುವ ಅನಕ್ಷರತೆ, ಜಾತೀಯತೆ, ವರದಕ್ಷಿಣೆ ಸಮಸ್ಯೆ, ಭ್ರಷ್ಟಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ದ ಕವಿಗಳು ತಮ್ಮ ಕವನಗಳ ಮೂಲಕ ಜಾಗೃತಿ ಮೂಡಿಸಬೇಕು. ಅದೇ ರೀತಿ ಮಾನವನ ದುರಾಸೆಯ ಫಲವಾಗಿ ಪರಿಸರ ವಿನಾಶವಾಗುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಸರ ಉಳಿಸುವ ಬಗ್ಗೆ ಕವಿಗಳು ತಮ್ಮ ಕೃತಿಗಳಲ್ಲಿ ಜಾಗೃತಿ ಮೂಡಿಸಬೇಕೆಂದವರು ಕಿವಿಮಾತು ನುಡಿದರು.
ರಾಜ್ಯದ ಗಡಿಜಿಲ್ಲೆಗಳಲ್ಲಿ ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಭಾಷೆ ಹಾಗೂ ಸಂಸ್ಕೃತಿಗಳ ಹಾವಳಿ ತೀವ್ರವಾಗಿದೆ. ಇನ್ನು ಬೆಂಗಳೂರು ಅನ್ಯಭಾಷಿಕರ ಬೀಡಾಗುತ್ತಿದ್ದು, ಮುಂದೆ ಅಲ್ಲಿ ಕನ್ನಡಿಗರ ಸಂಖ್ಯೆಯೇ ಅಲ್ಪಸಂಖ್ಯಾತ ವಾಗುವ ಭೀತಿಯಿದೆ. ಅದೇ ರೀತಿ ಬೆಂಗಳೂರು, ಜಿಲ್ಲಾ ಕೇಂದ್ರ ಗಳು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಆಂಗ್ಲಭಾಷಾ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದಾಗಿ ಮುಂದಿನ ತಲೆಮಾರಿನ ಜನರು ಕನ್ನಡ ನಾಡು -ನುಡಿಯನ್ನೇ ಮರೆತು ಬಿಡುವ ಅಪಾಯವಿದೆ. ಈ ಬಗ್ಗೆ ಕವಿಗಳು ಆಲೋಚಿಸಬೇಕು. ಜನರಲ್ಲಿ ಕನ್ನಡ ನಾಡು-ನುಡಿ ಬಗ್ಗೆ ಚಿಂತನೆ ಮೂಡಿಸುವಂತಹ ಕವನಗಳನ್ನು ಹೆಚ್ಚು ಬರೆಯಬೇಕು. ಆ ಮೂಲಕ ಕನ್ನಡ ಜಾಗೃತಿ ಮೂಡಿಸಬೇಕೆಂದವರು ಕರೆ ನೀಡಿದರು.ಸಿರಿಗನ್ನಡ ವೇದಿಕೆ, ಮೈಸೂರು ಜಿಲ್ಲೆಯ ಉಪಾಧ್ಯಕ್ಷರೂ, ಕವಿ ಹಾಗೂ ನಿವೃತ್ತ ಪೋಲಿಸ್ ಅಧಿಕಾರಿಗಳೂ ಆದ ಕೆ. ಮಹದೇವನಾಯಕ್ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಕವಿಗಳು ತಮ್ಮ ಕವನಗಳ ಮೂಲಕ ಓದುಗರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಸಿರಿಗನ್ನಡ ವೇದಿಕೆಯ ಕಾರ್ಯಾಧ್ಯಕ್ಷರಾದ ಡಾ.ಸೌಗಂಧಿಕಾ ಜೋಯಿಸ್ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದರು. ಸಿರಿಗನ್ನಡ ವೇದಿಕೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ರಾಜ್ಯಾಧ್ಯಕ್ಷರಾದ ಶ್ರೀಮತಿ ಎ.ಹೇಮಗಂಗಾ ಪ್ರಾಸ್ತಾವಿಕ ಭಾಷಣ ಮಾಡಿ ಸಿರಿಗನ್ನಡ ವೇದಿಕೆಯ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿದರು. ಸಿರಿಗನ್ನಡ ವೇದಿಕೆಯ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ರಜನಿ ಜೀರಗ್ಯಾಳ ,ಮೈಸೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶ್ರೀಮತಿ ಶೋಭಾ ನಾಗಭೂಷಣ ಕವಿಗೋಷ್ಠಿ ನಿರ್ವಹಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಕವಿಗಳಾದ ಸುಮತಿ ಸುಬ್ರಹ್ಮಣ್ಯ, ಹೇಮಾವತಿ ಚಂದ್ರಶೇಖರ್, ದೀಪಾಲಿ ಸುಮಂತ್, ನಾಗಲಕ್ಷ್ಮಿ ಕಡೂರು, ವಿಜು ಆನಂದ್ ಸಾದನಿ, ಮಂಜುಳಾ ಮರಳ್ಳವರ ,ಪೂಜಾ ಮಂಡ್ಯ, ದೀಪಿಕಾ ಬಾಬು ಚಿತ್ರದುರ್ಗ, ಪ್ರಕಾಶ್ ಶಿವಮೊಗ್ಗ, ಉಷಾ ಪ್ರಕಾಶ್ ಸಾಗರ ,ಶೈಲಾ ಪಿ.ಪಡುಕೋಟೆ , ರತ್ನಾ ಕೆ.ಭಟ್ ,ಬಸವೇಶ್ವರಿ ಕೆ.,ಝರಿನಾ ಬಿ.ಎನ್.ದಾವಣಗೆರೆ, ಸಂಧ್ಯಾ ಕುಮಾರಿ, ಲಲಿತಾ ಶಿರಸಿ, ಜಯಮಂಗಲ, ವೀಣಾ ಆರ್.ಕಾರಂತ ಮೊದಲಾದವರು ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಸಿರಿಗನ್ನಡ ವೇದಿಕೆಯ ಮೈಸೂರು ಘಟಕ ಹಾಗೂ ಮೈಸೂರು ಜಿಲ್ಲಾ ಮಹಿಳಾ ಘಟಕಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಪ್ರಪ್ರಥಮ ಕವಿಗೋಷ್ಠಿಯು ಅತ್ಯುತ್ತಮ ವಾಗಿ ಮೂಡಿಬಂದಿತು.
ಸಿರಿಗನ್ನಡ ವೇದಿಕೆ, ಮೈಸೂರು ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ ಎಲ್ಲರಿಗೂ ವಂದಿಸಿದರು. ಕಾರ್ಯದರ್ಶಿ ಸುಹಾಸ್ ಕಾರ್ಯಕ್ರಮಕ್ಕೆ ತಾಂತ್ರಿಕ ನೆರವನ್ನು ನೀಡಿದರು.