ಸೋಲಿನ ಭೀತಿಯಿಂದ ವೈಯಕ್ತಿಕ ತೇಜೋವಧೆಗೆ ಇಳಿದ ಕಾಂಗ್ರೆಸ್- ಜಿಲ್ಲೆಯ ಜನತೆ
ಬೀದರ – ಇತ್ತ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮಧ್ಯೆ ಚೊಂಬು-ಚಿಪ್ಪು ಜಾಹೀರಾತು ಸಮರ ನಡೆಯುತ್ತಿದ್ದರೆ ಅತ್ತ ಬೀದರಿನಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಂಸದ ಭಗವಂತ ಖೂಬಾ ಅವರ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿದ್ದು ಖೂಬಾ ಅವರನ್ನು ಗೂಂಡಾ ಎಂದು ಕರೆಯಲಾಗಿದೆ.
ವೈರಲ್ ಥಾಟ್ಸ್ ಎಂಬ ಫೇಸ್ ಬುಕ್ ಪೋಸ್ಟ್ ನಲ್ಲಿ ಭಗವಂತ ಖೂಬಾ ಎಂಬ ಗೂಂಡಾ ಸಂಸದ ಬೇಕಾ ? ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡಿಸುವ, ಸ್ವಾಮೀಜಿಗಳಿಗೆ ಅವಮಾನ ಮಾಡುವ, ಬೀದರ ಜನರಿಗೆ ಮಾರಿ ಮನೆಯವರಿಗೆ ಉಪಕಾರಿ ಎಂಬಂಥ ಪೋಸ್ಟ್ ಹಾಕಿ ಅವಹೇಳನ ಮಾಡಲಾಗಿದೆ.
ಅಲ್ಲದೆ ಬೀದರ ಖೂಬಾ ಕೊಡುಗೆ ಶೂನ್ಯ ಎಂದೂ ಹೇಳಿರುವ ಪೋಸ್ಟ್ ವೈರಲ್ ಆಗಿದ್ದು ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಅಲ್ಲದೆ ಸೌಜನ್ಯದ ಗಡಿ ಮೀರುತ್ತಿರುವ ಕಾಂಗ್ರೆಸ್ ಪಕ್ಷವು ಹತಾಶೆಗೊಂಡಿದೆ ಎಂದು ಕೂಡ ಜನತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ನ ಇಂಥ ಕ್ರಮದಿಂದ ಒಂದು ಸಾಂವಿಧಾನಿಕ ವ್ಯವಸ್ಥೆಯೇ ನಗೆಪಾಟಲಿಗೆ ಈಡಾಗಿದ್ದು ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಲವು ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಟೀಕೆ ಟಿಪ್ಪಣಿ ಮಾಡುವುದು ಸಹಜ ಆದರೆ ಅದು ವೈಯಕ್ತಿಕ ಮಟ್ಟಕ್ಕೆ ಹೋಗದೆ ಸೌಜನ್ಯವನ್ನು ಕಾಪಾಡಿಕೊಂಡಿರಬೇಕು. ಆದರೆ ಕಾಂಗ್ರೆಸ್ ನ ಇತ್ತೀಚಿನ ವರ್ತನೆ ನೋಡಿದರೆ ಅದು ಸೋಲಿನ ನಿರೀಕ್ಷೆಯಿಂದ ಕಂಗೆಟ್ಟಿದೆಯೇನೋ ಎಂಬಂಥ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗುತ್ತಿವೆ. ಅಲ್ಲದೆ ಈಗಲೇ ಹೀಗೆ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವರ ದುರ್ವರ್ತನೆ ಯಾವ ಮಟ್ಟಕ್ಕೆ ಹೋಗಬಹುದೆಂಬುದು ಕಳವಳಕಾರಿಯಾಗಿದೆ ಎಂದೂ ಅಭಿಪ್ರಾಯಗಳು ಬರುತ್ತಿವೆ.
ವರದಿ : ನಂದಕುಮಾರ ಕರಂಜೆ, ಬೀದರ