ಬೆಂಗಳೂರು- ಮುಡಾ ಹಗರಣದಲ್ಲಿ ಸಿಎಮ್ ವಿರುದ್ಧ ತನಿಖೆ ಮಾಡಬೇಕೆಂಬ ರಾಜ್ಯಪಾಲರ ನಿರ್ಧಾರ ಸರಿಯಾಗಿದೆ ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗೆ ಸಂಕಷ್ಟ ಎದುರಾಗಿದೆ.
ಮುಡಾ ಹಗರಣದಲ್ಲಿ ಸಿದ್ಧರಾಮಯ್ಯನವರ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ ಆದ್ದರಿಂದ ಅವರ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಆದೇಶ ನೀಡಿದ್ದು ಸರಿಯಾಗಿದೆ ಎಂದು ಹೇಳಿರುವ ಹೈಕೋರ್ಟ್ ತನ್ನ ಸಮರ್ಥನೆಗೆ ಸಿದ್ಧರಾಮಯ್ಯ ಸಲ್ಲಿಸಿದ್ದ ಕಾನೂನು ಕುರಿತ ಪ್ರಶ್ನೆಗಳನ್ನು ತಳ್ಳಿಹಾಕಿದೆ.ನ್ಯಾ. ಮೂ. ಎಂ ನಾಗಪ್ರಸನ್ನ ಅವರ ಪೀಠದಿಂದ ಈ ತೀರ್ಪು ಹೊರಬಿದ್ದಿದೆ.
ಸಹಜವಾಗಿಯೇ ಈ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಗಳ ವಿರುದ್ಧ ಷಡ್ಯಂತ್ರ, ರಾಜಕೀಯ ಪಿತೂರಿ ಎಂದು ಆರೋಪ ಮಾಡಿದ್ದು ಬಿಜೆಪಿಯು ತನ್ನ ವಿರೋಧಿಗಳನ್ನು ಹಣಿಯಲು ಸಿಬಿಐ, ಈಡಿ ಯಂಥ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಹೈಕೋರ್ಟ ಆದೇಶ ಹೊರಬರುತ್ತಲೇ ಬಿಜೆಪಿ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ಧರಾಮಯ್ಯ ಇನ್ನಾದರೂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಹೈಕೋರ್ಟ್ ತೀರ್ಪು ಹೊರಬರುತ್ತಲೇ ಮುಡಾ ಹಗರಣದಲ್ಲಿ ದೂರುದಾರರು ಜನಪ್ರತಿನಿಧಿಗಳ ಕೋರ್ಟಿಗೆ ಹೋಗುವ ನಿರೀಕ್ಷೆಯಿದ್ದು ಎಫ್ಆಯ್ಆರ್ ದಾಖಲಾದರೆ ಈ ಮೂಲಕ ಸಿದ್ಧರಾಮಯ್ಯಗೆ ಇನ್ನಷ್ಟು ಸಂಕಷ್ಟ ಹೆಚ್ಚಾಗುವ ಸಂಭವವಿದೆ. ಈ ಮಧ್ಯೆ ಕಾಂಗ್ರೆಸ್ ಬಳಗವು ನಾಡಿದ್ದು ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದು ರಾಜ್ಯಪಾಲರ ವಿರುದ್ಧ ಇನ್ನಷ್ಟು ಆರೋಪಗಳೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆಯೆನ್ನಲಾಗಿದೆ.
ಇನ್ನೊಂದು ವಿಶೇಷವೆಂದರೆ, ಇದೇ ರೀತಿಯ ಮಾದರಿಯಲ್ಲಿ ಹಲವು ಸಚಿವರ ವಿರುದ್ಧ ದೂರುಗಳು ರಾಜ್ಯಪಾಲರಿಗೆ ಸಲ್ಲಿಸಲ್ಪಡುತ್ತವೆ ಎನ್ನಲಾಗಿದ್ದು ಸಚಿವ ಕೆ ಎನ್ ರಾಜಣ್ಣ, ಪ್ರಿಯಾಂಕ ಖರ್ಗೆ, ಎಂ ಬಿ ಪಾಟೀಲ, ಮುಂತಾದವರ ವಿರುದ್ಧ ದೂರುಗಳು ಬಂದಿದ್ದು ಇವುಗಳ ಬಗ್ಗೆಯೂ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಆದೇಶ ನೀಡಲು ತಯಾರಿ ನಡೆಸಿದ್ದಾರೆಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.