ಕನ್ನಡ ಸಾಹಿತ್ಯದಲ್ಲಿ ಶರಣರ ಕಾಲಘಟ್ಟಕ್ಕೆ ವಿಶೇಷ ಮಾನ್ಯತೆ ಇದೆ. ಅವರು ಮಾಡಿದ ಚಳವಳಿ ಅಭೂತಪೂರ್ವವಾದುದು. ಇಂದಿನ ಕಾಲದಲ್ಲಿಯೂ ಸಾಧಿತವಾಗಲಾರದ ಸಮಾಜ ಧಾರ್ಮಿಕ ಸುಧಾರಣೆ 12ನೇ ಶತಮಾನದಲ್ಲಿ ಯಶಸ್ವಿಯಾಯಿತು. ಒಂದು ಕಾಲಘಟ್ಟದಲ್ಲಿ ವ್ಯವಸ್ಥೆ ಸರಿ ಇಲ್ಲವೆಂದು ದೂಷಿಸುವುದು ಸುಲಭ. ಒಂದು ದುರ್ವ್ಯವಸ್ಥೆಯನ್ನು ತೆಗೆದು ಹಾಕಿದ ಮೇಲೆ ಅದರ ಜಾಗದಲ್ಲಿ ಹೊಸದೊಂದನ್ನು ತರಬೇಕಾಗುತ್ತದೆ. ಅಂತಹ ಹೊಸ ಸಮಾಜ ನಿರ್ಮಾಣವನ್ನು ಶರಣರು ಮಾಡಿದರು.
ಜಾತಿ ಮತ ಕುಲ ವರ್ಗ ವರ್ಣ ಲಿಂಗಗಳಲ್ಲಿ ಸಮಾನತೆಯನ್ನು ಉಂಟುಮಾಡುವುದು ಸರಳ ಮಾತಲ್ಲ. ಅದನ್ನು ಬದುಕಿಗೆ ಅಕ್ಷರಶಃ ಅಳವಡಿಸಿದರು. ಅವರ ಪ್ರಸಿದ್ಧಿ ನಾಡಿನ ಹತ್ತಾರು ಕಡೆ ಹಬ್ಬಿತು. ಅವರ ವ್ಯಕ್ತಿತ್ವಕ್ಕೆ ಆಕರ್ಷಿತರಾಗಿ ಹಲವಾರು ಸಾಧಕರು ಕಲ್ಯಾಣಕ್ಕೆ ಆಗಮಿಸಿದರು. ಅಂತಹ ಶರಣರಲ್ಲಿ ಗಾವುದಿ ಮಾಚಯ್ಯ ಒಬ್ಬನಾಗಿದ್ದಾನೆ. ಇವನ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬರುವುದಿಲ್ಲ. ಆತನೊಬ್ಬ ಶ್ರೇಷ್ಠ ಭಕ್ತ ಎಂಬ ವಿಷಯ ಅವನ ವಚನಗಳಿಂದ ತಿಳಿದು ಬರುತ್ತದೆ.
ಮಾಚಯ್ಯ ದಿನನಿತ್ಯ ಶಿವಪೂಜೆ ಮಾಡಿ ದೈನಂದಿನ ಕೆಲಸದಲ್ಲಿ ತೊಡಗುತ್ತಿದ್ದನು. ಒಮ್ಮೆ ಈತ ಪೂಜೆ ಮಾಡುತ್ತಾ ಲಿಂಗಾನುಸಂಧಾನದಲ್ಲಿರಲು ಕೊಂಡೆಯರು ಇವನು ಮರಣ ಹೊಂದಿದ್ದಾನೆಂದು ಬಿಜ್ಜಳ ರಾಜನಿಗೆ ಹೇಳ ಹೋದರು. ಬಿಜ್ಜಳ ರಾಜನು ಪರೀಕ್ಷಿಸಲು ಬಂದನು. ಶಿವಪೂಜೆಯಲ್ಲಿಯೇ ತನ್ನನ್ನು ಮರೆತು ಹೋಗಿದ್ದ ಮಾಚಯ್ಯ ಧೂಪ ದೀಪಾದಿಗಳಿಂದ ಪರಿಮಳ ವಸ್ತುಗಳಿಂದ ಬಹಿರ್ಮುಖನಾದನು.
ಸದ್ಯಕ್ಕೆ ಆತನ 11 ವಚನಗಳು ಉಪಲಬ್ಧವಾಗಿವೆ. ಪರರ ದ್ರವ್ಯ ಸಂಪತ್ತು, ಹಣಕ್ಕೆ ಆಸೆ ಮಾಡಬಾರದು ಎಂಬ ಮೌಲ್ಯವನ್ನು ತೀವ್ರವಾಗಿ ಪ್ರತಿಪಾದಿಸುವಂತೆ ತೋರುತ್ತದೆ. ತ್ರಿಪುರಾಂತಕ ಗಾವುದಿ ಮಾಚಯ್ಯ ಎಂಬುವುದು ಇವರ ಅಂಕಿತವಾಗಿದೆ.
ಭಕ್ತರು ದ್ರವ್ಯವ ಗಳಿಸಿದಲ್ಲಿ
ತಮ್ಮ ತನುವಿದ್ದಲ್ಲಿಯೇ ಗುರುಲಿಂಗ ಜಂಗಮಕ್ಕೆ ಅರ್ಪಿಸುವುದು
ಇದೇ ಸದ್ಭಕ್ತಿಯ ಹೊಲಬು.
ತಾ ನಡೆದು ಮತ್ತೆ ಮನೆ ಮಕ್ಕಳಿಗೆಂದಡೆ
ಅದೇ ಆಚಾರಕ್ಕೆ ಭಂಗ
ಆತ ಸ್ವಾಮಿಗೆ ಸ್ವಾಮಿದ್ರೋಹಿ
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದ ಕೇಳಿ ಎಲ್ಲರೂ
ಸತ್ಯವೆನ್ನಿರಯ್ಯ.
ಭಕ್ತ ಹೇಗೆ ಬದುಕು ನಡೆಸಬೇಕೆಂಬುದನ್ನು ಒಂದು ಪುಟ್ಟ ವಚನದಲ್ಲಿ ಕಟ್ಟಿಕೊಟ್ಟಿದ್ದಾನೆ. ಭಕ್ತನಾದವನು ಜೀವನ ನಿರ್ವಹಣೆಗಾಗಿ ದುಡಿದು ಹಣ ಸಂಪಾದಿಸುತ್ತಾನೆ. ಸಂಪಾದಿಸಿದ ಹಣದ ಬಗ್ಗೆ ಸಹಜವಾಗಿ ವ್ಯಾಮೋಹ ಮೂಡುತ್ತದೆ. ಕೂಡಿಡಬೇಕೆಂಬ ದುರಾಸೆ ಹೆಚ್ಚುತ್ತದೆ. ವೈಯಕ್ತಿಕ ಬದುಕಿಗೆ ಹೆಂಡತಿ ಮಕ್ಕಳಿಗೆ ಎಂದು ಜತನ ಮಾಡಿಡುವ ಹುಚ್ಚು ಮನಸ್ಸನ್ನು ಹೊಕ್ಕು ಬಿಡುತ್ತದೆ. ಬಂದ ದ್ರವ್ಯದಲ್ಲಿ ಗುರುಲಿಂಗ ಜಂಗಮ ಪೂಜೆಯ ಬಗ್ಗೆ ಮನಸ್ಸು ಆಲೋಚಿಸುವುದೇ ಇಲ್ಲ. ಇದೇ ಮರೆವು. ಇದನ್ನು ದಾಟಿ ಅರಿವಿನತ್ತ ಸಾಗಬೇಕು. ಗುರುವಿಗೆ ಜಂಗಮಕ್ಕೆ ಲಿಂಗಕ್ಕೆ ಸಲ್ಲಬೇಕಾದುದನ್ನು ನಿರಪೇಕ್ಷ ಭಾವದಿಂದ ನೀಡಿ ಏನು ಮಾಡಿಯೇ ಇಲ್ಲ ಎನ್ನುವಂತೆ ಸುಮ್ಮನಿದ್ದು ಬಿಡಬೇಕು ಅದನ್ನು ಬಹಿರಂಗಗೊಳಿಸಬಾರದು. ಅಹಂ ಭಾವ ಪಡಬಾರದು.
ಮಾಡಿದೆನೆಂಬುದು ಮನದಲ್ಲಿ ಹೊಡೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆ ನೆನ್ನದಿರಾ ಲಿಂಗಕ್ಕೆ,
ಮಾಡಿದೆ ನೆನ್ನದಿರಾ ಜಂಗಮಕ್ಕೆ …..
ಎಂಬ ಬಸವಣ್ಣನವರ ವಚನವೂ ಇದೆ ಅಂಶವನ್ನು ಪುಷ್ಟೀಕರಿಸುತ್ತದೆ.
ಸ್ವಾರ್ಥಕ್ಕಾಗಿ ಹಪಾಪಿಸಿದರೆ ಅದು ಆಚಾರಕ್ಕೆ ಭಂಗ ಬಂದಂತೆ, ಅಷ್ಟೇ ಅಲ್ಲ ಅದು ಸ್ವಾಮಿ ದ್ರೋಹವು ಆಗುತ್ತದೆ. ಭಕ್ತ ಯಾವಾಗಲೂ ನನ್ನ ಹೆಂಡತಿ,ನನ್ನ ಮಕ್ಕಳು ಎಂದು ತನಗೋಸ್ಕರ ದುಡಿಯಕೂಡದು. ಆತ ಮಾಡುವ ಕೆಲಸ, ಕಾಯಕ ಎಂಬ ವ್ಯಾಪಕಾರ್ಥ ಪಡೆಯಬೇಕಾದರೆ ದಾಸೋಹ ಗುಣ ಬೆಳೆಸಿಕೊಳ್ಳಬೇಕು. ಆದ್ದರಿಂದ ಸತ್ಯ, ಶುದ್ಧ ಕಾಯಕ ಮಾಡಿ ಶಿವನೊಲುಮೆ ಪಡೆಯಬೇಕು. ( ಚಿತ್ರ ಕೃಪೆ : ಅಂತರ್ಜಾಲ)
ಡಾ. ಸುಧಾ ಕೌಜಗೇರಿ ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ