ಡಾ. ಸಾವಿತ್ರಿ ಕಮಲಾಪುರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ಇಬ್ಬರು ಸಹೋದರರನ್ನೂ ಸಹ ಆಜೀವ ಸದಸ್ಯರನ್ನಾಗಿ ಮಾಡಿದ ಹೆಗ್ಗಳಿಕೆ ಇವರದು. ಇವರು ನೇರನುಡಿಯ, ದಿಟ್ಟ ಹೆಣ್ಣುಮಗಳು, ಅದರ ಜೊತೆಗೆ ಅಷ್ಟೇ ಮೃದುಸ್ವಭಾವದವರು, ಪರೋಪಕಾರಿ ಗುಣವುಳ್ಳ ಒಬ್ಬ ಕಷ್ಟ ಸಹಿಷ್ಣುತೆಯ ಜೀವಿ.
ಡಾ ಸಾವಿತ್ರಿ ಮಹದೇವಪ್ಪ ಕಮಲಾಪೂರ ಅವರು
ಒಬ್ಬ ಚಿಂತಕರು ,ಬಸವ ಭಕ್ತರು , ವಿದ್ಯಾರ್ಥಿಗಳ ಬಳಗಕ್ಕಾಗಿ ಸದಾ ದುಡಿವ ಮನಸ್ಸನ್ನು ಹೊಂದಿರುವವರು .
ಅವರು ಒಬ್ಬ ಉಪನ್ಯಾಸಕರಾಗಿ ,ಕಾಲೇಜಿನ ಆಡಳಿತ ಅಧಿಕಾರಿಯಾಗಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ಗಂಡ, ಮನೆ , ಮಕ್ಕಳು ಎನ್ನದೇ ಇಡೀ ಜೀವನವನ್ನು ಇತರರ ಸೇವೆಗಾಗಿ ಮುಡಿಪಾಗಿಡುವೆ ಎನ್ನುವ ಸಾವಿತ್ರಿ ಅವರ ಛಲ ಮೆಚ್ಚುವಂತಹದು. ದೀನರು , ದುರ್ಬಲರು , ನಿರ್ಗತಿಕರು,ಅನಾಥರಿಗೆ ಅಷ್ಟೇ ಅಲ್ಲದೇ ತಮ್ಮ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶವನ್ನು ಮಾಡಿಕೊಡು ತ್ತಾರೆ. ಸಹಾಯ ಹಸ್ತ ಚಾಚಿ ಬಂದವರಿಗೆ ಯಾವತ್ತೂ ಬರಿಗೈಯಿಂದ ಕಳಿಸುವುದಿಲ್ಲ.
ಡಾ. ಸಾವಿತ್ರಿ ಅವರು ಬೆಳಗಾವಿ ಜಿಲ್ಲೆ , ಸವದತ್ತಿ ತಾಲೂಕು ಮಹಾಂತಜ್ಜನ ಪುಣ್ಯ ನೆಲವಾದ ಮುರಗೋಡದಲ್ಲಿ ಜೂನ್ 20 1975 ರಲ್ಲಿ ಹುಟ್ಟಿದರು . ತಂದೆ ಮಹಾದೇವಪ್ಪನವರು. ಯಾವತ್ತೂ ಕೊರಳಲ್ಲಿ ಲಿಂಗ, ಹಣೆಯಲ್ಲಿ ವಿಭೂತಿ ಧರಿಸಿದವರು. ಕೈಲಾಸವಾಸಿ ತಾಯಿ ಲಕ್ಷ್ಮೀಬಾಯಿಯವರು. ತಾಯಿಯ ತವರು ರಾಮದುರ್ಗ.ಇಬ್ಬರು ಅಣ್ಣಂದಿರು ಮತ್ತು ಮೂವರು ಅಕ್ಕಂದಿರು. ತುಂಬು ಕುಟುಂಬದಲ್ಲಿ ಬೆಳೆದ ಇವರಿಗೆ ಶರಣ ಧರ್ಮದ ತಂದೆ ತಾಯಿಗಳ ಗುಣಗಳು ಬಳುವಳಿಯಾಗಿ ಬಂದಿವೆ.
ಡಾ.ಸಾವಿತ್ರಿ ಅವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮುರಗೋಡದಲ್ಲಿ ಮುಗಿಸಿ.ತಮ್ಮ ಬಿ. ಎ ಡಿಗ್ರಿಯನ್ನು ಬೈಲಹೊಂಗಲದ ಎಸ್.ಜಿ.ವಿ ಕಾಲೇಜಿನಲ್ಲಿ ಮುಗಿಸಿ ಇಡೀ ಕಾಲೇಜಿಗೆ ಪ್ರಥಮ ಬಂದುದು ಒಂದು ಹೆಗ್ಗಳಿಕೆ. ತಮ್ಮ ಬಿ. ಎಡ್ ಪದವಿಯನ್ನು ಬೈಲಹೊಂಗಲದ ಕೆ.ಆರ್. ಸಿ. ಎಸ್ ಹಾಗೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಗಿಸಿದ್ದಾರೆ. ಕನ್ನಡ ವಿಷಯದಲ್ಲಿ ಉತ್ತಮ ಅಂಕ ಪಡೆದಿದ್ದಾರೆ .
ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎಡ್ ಪದವಿ .ಅದೇ ವಿಶ್ವವಿದ್ಯಾಲಯಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ. ಎ ಮಾಡಿದ್ದಾರೆ.
ಡಾ. ಸಾವಿತ್ರಿ ಅವರು, ತಮ್ಮ ಸರಕಾರಿ ವೃತ್ತಿಯನ್ನು ಆರಂಭಿಸಿದ್ದು, 1998 ಸೆಪ್ಟೆಂಬರ್ 7 ರಂದು. ಅವರು 1998ರಲ್ಲಿ ತಮ್ಮ 23 ನೇ ವರ್ಷ ದಲ್ಲಿಯೇ ಸರಕಾರಿ ಸೇವೆಗೆ ಸೇರಿ 26 ವರ್ಷ ಆಗಿದ್ದು, ತಮ್ಮ ಸೇವಾವಧಿಯಲ್ಲಿ ಮುಂದುವರೆದಿದ್ದಾರೆ. ನಂತರ 2007 ರಲ್ಲಿ ಎಸ್.ಆರ್ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರ ದಲ್ಲಿ ಕನ್ನಡ ಉಪನ್ಯಾಸಕಿಯರು ಹಾಗೂ ಪ್ರಾಚಾರ್ಯೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಡಾ. ಸಾವಿತ್ರಿ ಕಮಲಾಪೂರ ಅವರು ಉಪನ್ಯಾಸಕರು ಅಷ್ಟೇ ಅಲ್ಲ ಒಳ್ಳೆಯ ಉತ್ತಮ ಆಟಗಾರರೂ ಹೌದು .ಅಲ್ಲಿಯೂ ತಾಲೂಕು, ಜಿಲ್ಲೆ , ರಾಜ್ಯ ಮಟ್ಟದವರೆಗೆ ಒಬ್ಬರೇ ವಿದ್ಯಾರ್ಥಿಗಳನ್ನು ಕರೆದು ಕೊಂಡು ಹೋಗಿ ಬಂದಿದ್ದಾರೆ .ಖನಗಾಂವದಲ್ಲೂ ವಿದ್ಯಾರ್ಥಿಗಳನ್ನು ಅನೇಕ ಆಟಗಳಲ್ಲಿ ಸ್ವತಃ ಮುಂದೆ ನಿಂತು ಆಟದ ತರಬೇತಿ ಕೊಡುತ್ತಾರೆ.
ಡಾ. ಸಾವಿತ್ರಿ ಅವರ ನೆನಪಿನ ಅಂಗಳದಲ್ಲಿ,
ಮೌನಗಳೇ ಮಾತನಾಡಿ,
ಬದುಕು ಒಂದು ಹೊತ್ತಿಗೆ
ಕನಸುಗಳ ಜಾತ್ರೆ, ಸಂತೆಯೊಳಗಿನ ಅಜ್ಜಿ
ಸವಿ ಮನ ಕವನಸಂಕಲನಗಳು,
ಬದುಕು ಭಾರವಲ್ಲ –
ಮಕ್ಕಳ ಕಥಾನಕ
ಸವದತ್ತಿ ತಾಲೂಕಿನ ಗ್ರಾಮ ಶಿಕ್ಷಣ ಸಮಿತಿಗಳ ಕುರಿತು
ಸಂಶೋಧನಾ ಪುಸ್ತಕ
ಎಳೆಹೂಟೆ, ಬೆಳಕಿಗೆ ಅರಳಿದ ಕಮಲ, ಜೇನು ಬಿಟ್ಟಿತ್ತ,
ಅಕ್ಕನ ಕದಡಿಯ ಚಿತ್ತದಿ
ಪಯಣ ಅಕ್ಕಮಹಾದೇವಿ ಅವರ ವಚನಗಳ ವಿಶ್ಲೇಷಣೆ
ಮನದ ಭಾವ ಮಸ್ತಕಕ್ಕೆ ಹೃದಯ ಭಾಷೆ ಕಲಿಸಿದ ಶರಣರು -ವಚನ ವಿಶ್ಲೇಷಣೆ ಪುಸ್ತಕಗಳು ಪ್ರಕಟಣೆ ಗೊಂಡಿವೆ.ಇನ್ನೂ ಮೂರು ಕೃತಿಗಳು ಅಚ್ಚಿನಲ್ಲಿವೆ
ಇಷ್ಟೇ ಅಲ್ಲದೇ .ಬಸವಣ್ಣನವರ ಬಗ್ಗೆ ಅಪಾರ ಭಕ್ತಿ ಭಾವವನ್ನು ಹೊಂದಿದ ಕಮಲಾಪೂರ ಅವರು ಅನೇಕ ಶರಣರ ಜೀವನ, ಶರಣರ ವಚನಗಳ ಕುರಿತು ಬರೆದಿದ್ದಾರೆ .
ಅನೇಕಕಥೆ ,ಕವನ ,ಲೇಖನ ,ವಚನ ವಿಶ್ಲೇಷಣೆ,ಶರಣರ ಪರಿಚಯ ,ಶಿವಯೋಗಿಗಳ ಪರಿಚಯ ಇನ್ನೂ ಮುಂತಾದ ಪುಸ್ತಕಗಳನ್ನು ಹೊರಗೆ ತರುವ ಉದ್ದೇಶ ಇದೆ.
ಡಾ.ಸಾವಿತ್ರಿ ಅವರು ವಿದ್ಯಾರ್ಥಿಗಳಿಗೆ ಶಿಸ್ತು. ಜೀವನದ ಮೌಲ್ಯಗಳನ್ನು ತಿಳಿಯಪಡಿಸುವುದರ ಜೊತೆಗೆ. ಮಕ್ಕಳೊಂದಿಗೆ ಮಕ್ಕಳಾಗಿ ಬೋಧನೆ ಮಾಡುವುದರಿಂದ ಕಾಲೇಜಿನ ಮಕ್ಕಳು ಅವರನ್ನು ಅವ್ವ ಎಂತಲೇ ಕರೆಯುತ್ತಾರೆ. ಇವರು ಬೋಧಿಸುವ ಬೋಧನಾ ಪದ್ಧತಿಯು ಮಕ್ಕಳಿಗೆ ತುಂಬಾ ಇಷ್ಟ. ಪ್ರತಿ ವರುಷ ಕಾಲೇಜಿನ ಫಲಿತಾಂಶ ಹೆಚ್ಚಾಗುತ್ತಾ ವಿಶೇಷವಾಗಿ ಪ್ರತಿ ವರುಷ ಹೆಣ್ಣು ಮಕ್ಕಳೇ ಕಾಲೇಜಿಗೆ ಪ್ರಥಮ ಬರಲು ಕಾರಣರಾಗಿರುವರು.ಇವರು ಒಳ್ಳೆಯ ಭಾಷಣಕಾರರು ಹಾಗೂ ಒಳ್ಳೆಯ ನಿರೂಪಕಿಯೂ ಆಗಿದ್ದಾರೆ. ಅನೇಕ ಸಾಹಿತ್ಯ ಚಟುವಟಿಕೆ ಮತ್ತು ಉಪನ್ಯಾಸಗಳ ಸಲುವಾಗಿ ಇವರನ್ನು ಜಿಲ್ಲೆ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಂಘ ಸಂಸ್ಥೆಗಳು ಕರೆದು ಸತ್ಕರಿಸಿವೆ.
ಡಾ. ಸಾವಿತ್ರಿ ಅವರು ಮೂಡಲಗಿ ಲೇಖಕಿಯರ ಸಂಘ, ಸಿರಿಗನ್ನಡ ಮಹಿಳಾ ವೇದಿಕೆ ಮೂಡಲಗಿ ಘಟಕ,
ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಮೂಡಲಗಿ ಘಟಕದ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಮತ್ತು ಅಕ್ಕ ನ ಅರಿವು ಹಾಗೂ ಬಸವ ತಿಳಿವಳಿಕೆ ಸಂಸ್ಥೆಯ ಅಜೀವ ಸದಸ್ಯರಾಗಿದ್ದಾರೆ.
ಡಾ. ಸಾವಿತ್ರಿ ಅವರಿಗೆ ಕನ್ನಡ ಸ್ವಾಭಿಮಾನ ಸ್ಮರಣಿಕೆ ರಾಜ್ಯ ಮಟ್ಟದ ಗೌರವ ಪುರಸ್ಕಾರ, ಕನ್ನಡ ನಿಧಿ . ಮತ್ತು ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ ಸತತ ಹತ್ತು ವರ್ಷಗಳವರೆಗೆ ನೀಡಿದೆ.
ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಸಂಘಟಕಿ ಪ್ರಶಸ್ತಿ,ಶಿಕ್ಷಣದಲ್ಲಿ ಸಾಧನೆ ಮಾಡಿದ ಸಲುವಾಗಿ ಸರ್ವ ಪಲ್ಲಿ ರಾಧಾಕೃಷ್ಣ ಸಂಸ್ಥೆಯವರು ಅಮೇರಿಕಾ ವಿಶ್ವ ವಿದ್ಯಾಲಯದಿಂದ (ಡಿ ಲಿಟ್ ) ಗೌರವ ಡಾಕ್ಟರೇಟ ಪ್ರಶಸ್ತಿಯನ್ನು ನೀಡಿದ್ದಾರೆ.
ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ, ಡಾ ಸರ್ವಪಲ್ಲಿ ರಾಧಾಕೃಷ್ಣ ರಾಷ್ಟ್ರ ಪ್ರಶಸ್ತಿ,ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಕಾವ್ಯ ಚೇತನ ಪ್ರಶಸ್ತಿ, ಕದಳಿ ಅಕ್ಕಮಹಾದೇವಿ ರಾಜ್ಯ ಸಾಹಿತ್ಯ ಪ್ರಶಸ್ತಿ,
ಅಂತಾರಾಷ್ಟ್ರೀಯ ಮಟ್ಟದ ಬಸವಶ್ರೀ ಪ್ರಶಸ್ತಿ,ರಾಜ್ಯಮಟ್ಟದ ಆದಿ ಕವಿ ಪಂಪ ಪ್ರಶಸ್ತಿ, ಅಕ್ಷರದಾತೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ, ಗುರು ದ್ರೋಣಾಚಾರ್ಯ ರಾಜ್ಯ ಪ್ರಶಸ್ತಿ, ಮಧುರಚೆನ್ನ ನುಡಿ ಸಿರಿ ಪ್ರಶಸ್ತಿ, ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ನುಡಿ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.
ಡಾ. ಸಾವಿತ್ರಿ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತಹದು. ಸಮಾಜದಲ್ಲಿ ನೊಂದು ಬೆಂದು ಬಸವಳಿದ ಜೀವಕ್ಕೆ, ಅನಾಥಾಶ್ರಮಕ್ಕೆ ಚಿಕ್ಕ ಪುಟ್ಟ ಸಹಾಯ ಮಾಡುತ್ತಾ ಬಂದಿದ್ದಾರೆ. ಅವರಿಗೆ ಆಧ್ಯಾತ್ಮಿಕ ಹಸಿವು ಧಾರ್ಮಿಕ ವೈಚಾರಿಕ ನಿಲುವು ಅದಮ್ಯವಾಗಿದೆ. ಉಸಿರು ಇರುವವರೆಗೂ ಅವರ ಆಧ್ಯಾತ್ಮಿಕ ಹಸಿವು ಹೋಗಲಾರದು ಎನ್ನುವುದು ಅವರ ಅನಿಸಿಕೆ.
ನಾನು ನನ್ನದು ಎನ್ನುವ ಅಹಂಕಾರ ತೊಲಗಿಸಿ, ನಾವು ನಮ್ಮವರು ಎಂದು ತಿಳಿದು ನಡೆದಾಗ ಮಾತ್ರ, ಶರಣ ತತ್ವ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಸಮಾಜದಲ್ಲಿ ಬಡವ ಬಲ್ಲಿದ . ಮೇಲ್ದರ್ಜೆ ಕೆಳದರ್ಜೆ ಎಂಬ ಭಾವ ದೂರಾದಾಗ ಮಾತ್ರ ಲಿಂಗಾಯತ ಧರ್ಮವು ಬೆಳೆಯುತ್ತದೆ. ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ಫಲಾಪೇಕ್ಷೆ ಬಯಸಬಾರದು.ವಿಶೇಷವಾಗಿ .ಹಡೆದ ವಯಸ್ಸಾದ ತಂದೆ ತಾಯಿಗಳಿಗೆ ಹಾಗೂ ಗುರು ಹಿರಿಯರಿಗೆ ವಿನಮ್ರವಾಗಿ ನಡೆಯಬೇಕು ಎನ್ನುವ ಡಾ. ಸಾವಿತ್ರಿ ಕಮಲಾಪುರ ಅವರ ಸಾಮಾಜಿಕ ಕಳಕಳಿ, ಶರಣ ತತ್ವದ ಬಗೆಗಿನ ಕಾಳಜಿ, ಹಿರಿಯರಿಗೆ ಕೊಡುವ ಗೌರವದ ಸಂದೇಶವನ್ನು ನಾವೆಲ್ಲರೂ ಪ್ರಶoಸೆ ಮಾಡಲೇಬೇಕು.
ಶ್ರೀಮತಿ ಸುಧಾ ಪಾಟೀಲ. ವಿಶ್ವಸ್ಥರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ



