ಕೃಷಿ ಅಧಿಕಾರಿಗಳ ದಾಳಿ; ಅಕ್ರಮ ರಸಗೊಬ್ಬರ ದಾಸ್ತಾನು ವಶ

Must Read

ಸಿಂದಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕೀಟನಾಶಕ, ಬೀಜ ಮತ್ತು ರಸಗೊಬ್ಬರ ಮಾರಾಟ ಅಂಗಡಿಗಳ ಮೇಲೆ ವಿಜಯಪುರ ಕೃಷಿ ಜಾಗೃತ ದಳದ ಅಧಿಕಾರಿಗಳ ತಂಡ ಹಾಗೂ ಸಿಂದಗಿ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ದಾಳಿ ಮಾಡಿ ಅಂದಾಜು 45 ಸಾವಿರ ರೂ. ಮೌಲ್ಯದ 50 ಕೆಜಿ ತೂಕದ ಒಟ್ಟು 43 ಬ್ಯಾಗ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ಹೇಳಿದರು.

ತಾಲೂಕಿನ ಕನ್ನೊಳ್ಳಿ ಗ್ರಾಮದ ಸದಾನಂದ ಅಗ್ರೋ ಕೇಂದ್ರದಲ್ಲಿ ಕೃಷಿ ಇಲಾಖೆಯ ಓ ಫಾರ್ಮ ಅನುಮತಿ ಪಡೆಯದೆ 17:17:17 ಗ್ರಾನ್ಯುಲೆಟೆಡ್ ಮಿಕ್ಸರ್ ರಸಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಅಂಗಡಿಯ ಗೋದಾಮಿನ ಮೇಲೆ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ರಸಗೊಬ್ಬರ ಜಪ್ತಿ ಮಾಡಲಾಗಿದೆ ಅಲ್ಲದೆ ಒಟ್ಟು 25 ಅಂಗಡಿಗಳನ್ನು ಪರಿಶೀಲನೆ ಮಾಡಿದ್ದು ನಿಯಮ ಉಲ್ಲಂಘಿಸಿದ ರಸಗೊಬ್ಬರ ಮಾರಾಟ ಅಂಗಡಿಗಳನ್ನು ಪತ್ತೆ ಹಚ್ಚಿ ಅವುಗಳಲ್ಲಿ  8 ಅಂಗಡಿಗಳ ಮಾಲಿಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಕೀಟನಾಶಕ, ಬೀಜ, ರಸಗೊಬ್ಬರ ದೊರೆಯಬೇಕೆನ್ನುವ ಸರ್ಕಾರ ಮತ್ತು ಕೃಷಿ ಇಲಾಖೆಯ ಆಕಾಂಕ್ಷೆಯಾಗಿದ್ದು ಆದರೆ ಇದನ್ನು ದುರ್ಬಳಕೆ ಮಾಡಿಕೊಂಡು ಕೆಲ ಅಂಗಡಿಯವರು ನಕಲಿ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದ ಉತ್ಪನ್ನಗಳು ಎಂದು ನಂಬಿಸಿ ರೈತರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದ್ದರಿಂದ ತಪಾಸಣೆಗೆ ಮುಂದಾಗಿದ್ದು ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ದೃಢಪಟ್ಟರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಿಂದಗಿ ಕೃಷಿ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಮಾತನಾಡಿ, ನಿಷೇಧಿತ ಕೀಟನಾಶಕ, ಬೀಜ, ರಸಗೊಬ್ಬರ ಮಾರಾಟ ನಿಯಂತ್ರಣಕ್ಕಾಗಿ ಕೃಷಿ ಇಲಾಖೆ ವಿಶೇಷ ಕಾನೂನು ರೂಪಿಸಿದ್ದು ಅದರನ್ವಯ ತಾಲೂಕಿನಲ್ಲಿ ಒಟ್ಟು 25 ಕಡೆ ಈ ದಾಳಿ ನಡೆಸಿದ್ದು ಸಂಶಯಕ್ಕೊಳಪಟ್ಟ 8 ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಸ್ಟಾಕ್ ಮತ್ತು ಮಾರಾಟದ ಅಂಕಿಸಂಖ್ಯೆ ಪಡೆದುಕೊಂಡಿದೆ. ತಪ್ಪು ಮಾಡಿದ ಬಗ್ಗೆ ಸಾಬೀತಾದಲ್ಲಿ ನಿಯಮದ ಪ್ರಕಾರ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಂಟಿ  ಕೃಷಿ ನಿರ್ದೇಶಕರ ಕಾರ್ಯಾಲಯದ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ಎ.ಪಿ. ಬಿರಾದಾರ, ಸಹಾಯಕ ಕೃಷಿ ನಿರ್ದೇಶಕಿ ರೇಷ್ಮಾಸುತಾರ, ಕೃಷಿ ಇಲಾಖೆಯ ರಸಗೊಬ್ಬರ, ಕೀಟನಾಶಕ, ಬೀಜ ಗುಣಮಟ್ಟ ಪರಿಣಿತರು ಸೇರಿದಂತೆ ಅನೇಕರು ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group