spot_img
spot_img

ನಮ್ಮ ಪ್ರತಿ ಭೌತಿಕ ಆಸ್ತಿ ಸಮಾಜದ ಋಣವಾಗಿರುತ್ತದೆ

Must Read

- Advertisement -

“ಊಟ ಬಲ್ಲವನಿಗೆ ರೋಗವಿಲ್ಲ.ಮಾತು ಬಲ್ಲವನಿಗೆ ಜಗಳವಿಲ್ಲ” ಇಲ್ಲಿ ಬಲ್ಲವ ಎಂದೆ ತಿಳಿದವನಿಗೆ ಎಂದರ್ಥವಾದರೆ ಯಾರಿಗೆ ಊಟ ಎಷ್ಟು ಮುಖ್ಯ, ಹೇಗೆ ಬಳಸಬೇಕು ಯಾಕೆ, ಎಲ್ಲಿ ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂಬ ಅರಿವಿರುವ ಹಾಗೆಯೇ ಮಾತೂ ಕೂಡ ಅವಲಂಬಿಸಿದೆ.

“ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು” ಎನ್ನುತ್ತಾರೆ. ಹೀಗಾಗಿ ಮಾತಿಗಿಂತ ಕೃತಿಯೇ ಮೇಲೆಂದು ಹಿಂದಿನ ಎಷ್ಟೋ ಮಹಾತ್ಮರುಗಳು ಊಟ ಮಾಡದೆ ಮಾತೂ ಆಡದೆ ತಮ್ಮ ಕೃತಿಯನ್ನು ಬಿಟ್ಟು ಹೋಗಿದ್ದಾರೆ. ಯಾವಾಗ ಮಾನವ ಕೃತಿಯನ್ನು ಅರ್ಥ ಮಾಡಿಕೊಳ್ಳದೆ ಅದನ್ನು ಮಾತಿಗೆ ಬಳಸಿಕೊಂಡು ತನ್ನ ಹೊಟ್ಟೆಪಾಡಿಗಾಗಿ ಊಟಕ್ಕೆ ಹೆಚ್ಚು ಗಮನಕೊಟ್ಟು ಮಧ್ಯೆ ನಿಂತನೋ ಅವನ ಹಿಂದೆ ಎಷ್ಟೋ ಸತ್ಯಗಳು, ಧರ್ಮಗಳು ಮರೆಯಾದವು.

ನಡೆ ನುಡಿ, ಆಹಾರ, ವಿಹಾರಗಳಲ್ಲಿ ಶುದ್ದವಾಗಿರಬೇಕಾದರೆ ಅದನ್ನು ಬಳಸುವ ಬಗ್ಗೆ ಅರಿವಿರಬೇಕು. ಜೀವನದಲ್ಲಿ ಸಾಕಷ್ಟು ಕಲಿಯುತ್ತೇವೆ. ಆದರೆ, ಅದರಿಂದ ನಮ್ಮನ್ನು ನಾವು ಶುದ್ದವಾಗಿಟ್ಟುಕೊಳ್ಳಲು ಕೆಲವರಿಗಷ್ಟೇ ಸಾಧ್ಯ. ಕಾರಣವಿಷ್ಟೆ ಸಂಸಾರದೊಳಗೆ ಸೇರುವ ಜೀವಕ್ಕೆ ಅದರ ಒಳಗಿದ್ದು ಹೊರಗಿನ ರಾಜಕೀಯವೆ ಮುಖ್ಯವಾಗಿ ಕಂಡು ಮನಸ್ಸು ಹೊರಗೆ ನಡೆಯುತ್ತದೆ.

- Advertisement -

ಮುಂದೆ ನಡೆದ ಜೀವ ಹಿಂದೆ ಬರಲಾಗದ ಸಂಕಟ, ಸಂಕಷ್ಟಗಳ ಸರಮಾಲೆಯಲ್ಲಿ ಜೀವರಕ್ಷಣೆಗಾಗಿ ಊಟದ ಜೊತೆಗೆ ಮಾತು ಸೇರುತ್ತದೆ. ಎಷ್ಟೋ ಯುಗಯುಗದಿಂದಲೂ ಭೂಮಿಯಲ್ಲಿರುವ ಎಲ್ಲಾ ಜೀವರಾಶಿಗಳಿಗೆ ತಮ್ಮದೇ ಆದ ವಿಶೇಷಶಕ್ತಿಯಿದ್ದ ಮೇಲೆ ಅದಕ್ಕೆ ತಕ್ಕಂತೆ ಆಹಾರ ವಿಹಾರವಿದೆ. ಆ ಜೀವರಾಶಿಗಳನ್ನು ಮಾನವ ತನ್ನ ಆಹಾರವಾಗಿ ಬಳಸಿ ಒಳಗೆ ಹಾಕಿಕೊಂಡಾಗ ಆ ಶಕ್ತಿ ಮಾನವನ ದೇಹವನ್ನು ಆಳುತ್ತದೆ. ಆಹಾರಕ್ಕೆ ತಕ್ಕಂತೆ ವ್ಯಕ್ತಿತ್ವವೂ ಬದಲಾಗುತ್ತಿರುತ್ತದೆ.

ಹೀಗಾಗಿ ಮಾನವನಿಗೆ ತನ್ನ ತಪ್ಪು ತನಗೆ ತಿಳಿಯದೆ ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವ ಗುಣವೇ ಹೆಚ್ಚು.ಹೀಗಾಗಿ ಸಮಾಜದಲ್ಲಿ ವಾದ ವಿವಾದಗಳಾಗಿ ಅದೇ ಮುಂದೆ ದ್ವೇಷವಾಗಿ ತಿರುಗಿ ಬರೋವಾಗ ಅದನ್ನು ತಡೆಯಲು ಮತ್ತೆ ಕಷ್ಟಪಡಬೇಕು ಹೀಗಾಗಿ ಜ್ಞಾನಿಗಳಾದವರು ಮಾತನಾಡದೆಯೆ ಎಷ್ಟೋ ಸದ್ವಿಚಾರ, ಸತ್ಯವನ್ನು ತಮ್ಮ ತಪಶ್ಯಕ್ತಿಯಿಂದ ತಿಳಿದುಕೊಂಡು ಭೂಮಿ ಮೇಲಿರುವ ಆ ಪರಾಶಕ್ತಿಯ ಅಧೀನದಲ್ಲಿರುವ‌  ಮಾನವರಿಗೆ ಜೀವನದ ಮುಖ್ಯ ಉದ್ದೇಶವನ್ನು ಆಧ್ಯಾತ್ಮದ ಪ್ರಕಾರ ತಿಳಿದು ಬಿಟ್ಟು ಮೇಲೆ ಇದ್ದಾರೆ.

ಮೇಲೆ ಎಂದಾಗ ಭೂಮಿಯಿಂದ ಮೇಲೆ ಆದರೂ ಈಗಲೂ ಮನುಕುಲವಿರೋದು ಭೂಮಿ ಮೇಲೆ. ಜೀವರಾಶಿಗಳು ಇರೋದು ಭೂಮಿಯಲ್ಲಿಯೇ ಆಹಾರ ದೊರೆಯುವುದು ಭೂಮಿಯಲ್ಲಿಯೇ. ಹೀಗಾಗಿ ಮಾನವ ಮೊದಲು ಅರ್ಥ ಮಾಡಿಕೊಳ್ಳಬೇಕಾಗಿರೋದು ಭೂ ವಿಜ್ಞಾನವನ್ನು. ಇದನ್ನು ಯಾವುದಕ್ಕಾಗಿ , ಯಾಕಾಗಿ,ಹೇಗೆ ಎಷ್ಟು, ಯಾವಾಗ ಬಳಸಬೇಕೆನ್ನುವ ಜ್ಞಾನವಿರೋದು ಮಾನವನಿಗಷ್ಟೆ.

- Advertisement -

ಇತರ ಪ್ರಾಣಿ ಸಂಕುಲಗಳಿಗಿಂತ ಭಿನ್ನ ಆಗಿದ್ದರೂ ಅವುಗಳಿಗಿಂತ ಕೀಳಾಗಿ ಬದುಕಿರುವವರ ಸಂಖ್ಯೆ ಕಲಿಯುಗದಲ್ಲಿ ಕಾಣುತ್ತಿರುವುದಕ್ಕೆ ಕಾರಣವೆ ಅಜ್ಞಾನದ ಜೀವನ ಶೈಲಿ. ಇದಕ್ಕೆ ಅವನ ಆಹಾರವೂ ಕಾರಣ, ಮಾತೂ ಕಾರಣವಾಗಿದೆ. ಇವೆರಡನ್ನು ಸರಿಯಾಗಿ ಬಳಸಿದಾಗಲೆ ಮನುಕುಲದ ಒಳಿತಾಗುತ್ತದೆ. ಮಾತಿನಲ್ಲಿ ಸತ್ಯವಿರಬೇಕು.ಆಹಾರದಲ್ಲಿ ಸಾತ್ವಿಕತೆ ಬೇಕು. ಇವೆರಡೂ ಇಲ್ಲದ ಜೀವನ ವ್ಯರ್ಥ ಎನ್ನುತ್ತಾರೆ ಮಹಾತ್ಮರು. ಸತ್ಯ ಯಾವುದು ಎಲ್ಲಿದೆ? ನಾವೆಲ್ಲರೂ ಒಂದೆ ಶಕ್ತಿಯ ಅಧೀನದಲ್ಲಿರುವ ಮಾನವರು.

ಒಂದೇ ದೇಶದ ಪ್ರಜೆಗಳು. ಒಂದೇ ಭೂಮಿಯಲ್ಲಿರುವ ಸಣ್ಣ ಅಣುಗಾತ್ರ ಜೀವವನ್ನು ಹೊಂದಿರುವ ಜೀವಾತ್ಮರು.ಆದರೆ ನಮ್ಮ ಆಹಾರ, ವಿಹಾರ, ಶಿಕ್ಷಣ, ಜ್ಞಾನವೇ ಬೇರೆ ಬೇರೆಯಾದಾಗ ನಮ್ಮೊಳಗೆ ಸೇರುವ ಹೊರಗಿನ ಸೂಕ್ಷ್ಮ ಕಣಗಳೆ ದೇಹದಲ್ಲಿ ಶಕ್ತಿಯಾಗಿ ಪರಿವರ್ತನೆ ಹೊಂದಿ ದೇಹದ ತುಂಬಾ ಆವರಿಸಿಕೊಂಡು ಮನಸ್ಸನ್ನು ಮರ್ಕಟದಂತೆ ಕುಣಿಸುತ್ತದೆ. ಹೀಗಾಗಿ ಹಿಂದಿನ ಮಹಾತಪಸ್ವಿಗಳು ತಮ್ಮ ಆಧ್ಯಾತ್ಮದ ಸಾಧನೆಗಾಗಿ ನಿರಾಹಾರ ನಿರ್ಜಲ, ನಿಸ್ಸಂಗ, ನಿರ್ಜನ ಪ್ರದೇಶದಲ್ಲಿ ವಾಸವಾಗಿ ಸ್ವತಂತ್ರ ಜ್ಞಾನದಿಂದ ಭೂಮಿ ಮೇಲಿದ್ದೇ ಆಕಾಶದ ಗ್ರಹ ನಕ್ಷತ್ರಗಳ ವಿವರಣೆ ನೀಡಲು ಸಾಧ್ಯವಾಗಿತ್ತು.

ಅವರ ಆ ಸಾಧನೆಯಿಂದ ಸಮಾಜಕ್ಕೆ ಏನು ಉಪಯೋಗವಾಯಿತು? ಎಂಬ ಪ್ರಶ್ನೆಗೆ ಉತ್ತರ ಸಮಾಜಕ್ಕೆ ಜ್ಞಾನವೇ ಆಸ್ತಿ.ಸತ್ಯವೆ ಆಸ್ತಿ. ನಮ್ಮ ಪ್ರತಿಯೊಂದು ಭೌತಿಕ ಸಂಪಾದನೆ ಸಮಾಜದ ಋಣವಾಗಿರುತ್ತದೆ.ಇದನ್ನು ತಿರುಗಿ ಕೊಡದೆ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಹೀಗಾಗಿ ಆಧ್ಯಾತ್ಮಿಕ ಸಂಪಾದನೆಯು ಆತ್ಮಜ್ಞಾನವನ್ನು ಹೆಚ್ಚಿಸಿ ಭೂಮಿಯ ಭಾರ ಕಡಿಮೆಮಾಡುತ್ತದೆ. ಭೂಮಿಯ ಋಣ ತೀರಿಸಲು ಕಷ್ಟ.ಇದಕ್ಕೆ ಜ್ಞಾನಿಗಳು ಭೂಮಿಯಲ್ಲಿರಬೇಕು. ಈಗಿನ ವಿಜ್ಞಾನಿಗಳಿಗಿರುವ ಮಹಾಶಕ್ತಿ ಈ ಕಣ್ಣಿಗೆ ಕಾಣದ ಅಣು ಪರಮಾಣುಗಳನ್ನು ಬಳಸಿ ಆಕಾಶದೆತ್ತರ ಹಾರಬಹುದು ಅಂದಿನ ಮಹಾತ್ಮರುಗಳು ಅವುಗಳಲ್ಲಿದ್ದ ದೈವಶಕ್ತಿಯನ್ನು ಗುರುತಿಸಿ ಅದನ್ನು ಮನುಕುಲದ ಒಳಿತಿಗಾಗಿ ಹೇಗೆ ಬಳಸಿದರೆ ಉತ್ತಮ ಜೀವನ ಸಾಧ್ಯ ಎನ್ನುವುದನ್ನು ತಿಳಿಸುವ ಜ್ಞಾನವಿತ್ತು.

ಒಂದು ಆಂತರಿಕ ಶಕ್ತಿ ಇನ್ನೊಂದು ಭೌತಿಕ ಶಕ್ತಿ.ಇವೆರಡೂ ಭೂಮಿಯನ್ನೇ ಆಳುತ್ತಿದೆ. ಭೌತಿಕ ಶಕ್ತಿ ಹೆಚ್ಚಾದಂತೆ ಅಸಮತೋಲನತೆ ಭೂಮಿ ನಡುಗುತ್ತದೆ. ಇದನ್ನು ಆಧ್ಯಾತ್ಮದ ಮೂಲಕ ಸರಿಪಡಿಸೋದೆ ಧರ್ಮ ಕಾರ್ಯ ವಾಗುತ್ತದೆ. ಇಲ್ಲಿ ಕೇವಲ ಧಾರ್ಮಿಕ ವಿಚಾರ ತಿಳಿದರೆ ಸಾಲದು ಅದನ್ನು ಮೈ ಮನಸ್ಸಿನೊಳಗೆ ತೆಗೆದುಕೊಂಡು ಒಳಗೆ ಅಳವಡಿಸಿ ಸತ್ಯ ತಿಳಿದಾಗಲೆ ನಮ್ಮ ಊಟದಲ್ಲಿರುವ ವಿಷ ಯಾವುದು ಅಮೃತ  ಯಾವುದು ಎನ್ನುವ ಸತ್ಯ ತಿಳಿಯಬಹುದು.ಹಾಗೆ ಮಾತನಾಡುವ ವಿಚಾರಗಳೂ ವಿಷವನ್ನು ಹರಡಿದರೆ ಅಮೃತಕ್ಕೆ ಸ್ಥಳವಿಲ್ಲದೆ ಜೀವ ಸತ್ತು ಹೋಗುತ್ತದೆ. ಸತ್ತ ಜೀವ ಬದುಕಿಸುವ ಸಂಜೀವಿನಿ ವಿದ್ಯೆ ಇಂದು ನಮಗೆ ತಿಳಿದಿಲ್ಲದ ಕಾರಣ ಆ ಸತ್ತ ದೇಹವನ್ನೂ ಬಿಡದೆ ಪರೀಕ್ಷೆ ನಡೆಸೋ ವಿಜ್ಞಾನ ಬೆಳೆದಿದೆ.

ಇದರಿಂದ ಆತ್ಮಕ್ಕೆ ತೃಪ್ತಿ, ಮುಕ್ತಿ ಸಿಗುವುದೆ? ಒಟ್ಟಿನಲ್ಲಿ ಮನುಕುಲದ ಒಳಿತು ಕೆಡುಕುಗಳು ಅಡಗಿರುವುದೆ ಜ್ಞಾನದಲ್ಲಿ. ಜ್ಞಾನ ಒಳಗಿದೆ ವಿಜ್ಞಾನ ಹೊರಗಿದೆ. ಜ್ಞಾನ ಹೆಚ್ಚಾದಂತೆ ವಿಜ್ಞಾನವಾಗುತ್ತದೆ.ವಿಜ್ಞಾನ ಹೆಚ್ಚಾದಂತೆ ಜ್ಞಾನವೂ ಬರುತ್ತದೆ. ಅಂದರೆ ಅತಿಯಾಗಿ ಬೆಳೆದಂತೆಲ್ಲಾ ಮಾನವ ತನ್ನ ಅಸ್ತಿತ್ವವನ್ನು ಪ್ರಶ್ನೆ ಮಾಡಿಕೊಳ್ಳಲು ಪ್ರಯತ್ನಪಟ್ಟು ಸತ್ಯದ ಕಡೆಗೆ ಹೋಗಲೇಬೇಕು. ಇದಕ್ಕಾಗಿ ಹೊರಗಿನ ಊಟ ಜೀವ ಉಳಿಸಿಕೊಳ್ಳಲು ಮಾತು ಆತ್ಮರಕ್ಷಿಸಿಕೊಳ್ಳಲು ಅಗತ್ಯವಿದೆ. ಜೀವ ಇದ್ದರೆ ತಾನೆ ಮಾತು. ಯಾವುದಕ್ಕೂ ಇತಿಮಿತಿ ಇದ್ದರೆ ಉತ್ತಮ. ಭೂಮಿಯ ಸಮತೋಲನತೆಗೆ ಜ್ಞಾನವಿಜ್ಞಾನದ ನಡೆ ನುಡಿ ಆಹಾರ,ವಿಹಾರ ಶಿಕ್ಷಣ ಸಮಾನವಾಗಿರಬೇಕು.

ಪರಮಾತ್ಮ ಎಲ್ಲರನ್ನೂ ನಡೆಸುತ್ತಿದ್ದರೂ ಅಜ್ಞಾನದಲ್ಲಿ ಕಾಣದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಇದೇ ಕಾರಣಕ್ಕಾಗಿಯೇ ಮಾನವನ ಆಹಾರವೆ ವಿಷವಾಗಿ,ವಿಷಯಗಳಲ್ಲಿಯೂ ವಿಷವೇ ಹೆಚ್ಚು ಪ್ರಚಾರ ಮಾಡುತ್ತಾ ಸಮಾಜಘಾತಕರು ಬೆಳೆದಿದ್ದಾರೆ. ಇದೊಂದು ಅಸುರಿತನವೆನ್ನುವುದನ್ನು ಮಾನವ ತಿಳಿದಾಗಲೆ ತನ್ನ ಒಳಗೆ ಏನು ಎಳೆದುಕೊಳ್ಳಬೇಕು? ಏನು ಮಾತಾಡಬೇಕು ಎನ್ನುವುದನ್ನು ಅರ್ಥ ಮಾಡಿಸಬಹುದು.

ಇದನ್ನು ಶಿಕ್ಷಣದಲ್ಲಿಯೇ ಮಕ್ಕಳಿಗೆ ತಿಳಿಸಿ ಬೆಳೆಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಆಗಿದ್ದು ಆಗಿಯೋಗಿದೆ,ಆಗೋದನ್ನು ತಡೆಯಲು ಸಾಧ್ಯವಿದೆ. ಆಗಬೇಕಾಗಿದ್ದನ್ನು ಈಗಲಾದರೂ ಉತ್ತಮ ಆಹಾರ, ವಿಹಾರದ ಶಿಕ್ಷಣದಿಂದ ಬೆಳೆಸುವುದೆ ಜ್ಞಾನಿಗಳ ಲಕ್ಷಣ. ನಾನು ತಪ್ಪು ಮಾಡಿದ್ದೇನೆ, ನನ್ನಿಂದ ಮಕ್ಕಳು ತಪ್ಪು ದಾರಿ ಹಿಡಿಯಬಾರದು ಎನ್ನುವ ವಿಚಾರ ನಮ್ಮೊಳಗೆ ಬರಲು ನಾವು ಹಿಂದೆ ತಿರುಗಿ ಉತ್ತಮ ದಾರಿ ಹಿಡಿಯುವುದು ಅಗತ್ಯವಿದೆ. ಇನ್ನೂ ಮುಂದೆ ನಡೆದರೆ ಇನ್ನಷ್ಟು ಅಧರ್ಮ ಹೆಚ್ಚುತ್ತದೆ. ರಾಜಕೀಯತೆ ಇರಲಿ ಅದರ ಜೊತೆಗೆ ಧರ್ಮವಿರಲಿ. ಇದು ಸಾತ್ವಿಕ ಆಹಾರ,ವಿಹಾರ ಮಾತು ಕಥೆಗಳಿಂದ ಸಿಗುತ್ತದೆ. ರಾಜಸ ಪ್ರವೃತ್ತಿಯಿಂದ ಅಧರ್ಮ ಬೆಳೆಸಬಾರದು.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಿದ್ದಯ್ಯ ಪುರಾಣಿಕರ ಸಾಹಿತ್ಯ ರಾಶಿ ವಿಪುಲವಾಗಿದೆ ; ಮೃತ್ಯುಂಜಯ ಸ್ವಾಮಿಗಳು ಹಿರೇಮಠ

ಬೆಳಗಾವಿ- ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group