ಮೂಡಲಗಿ :
ಕಾಮನಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ !
ಬಣ್ಣಗಳೇಳನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚೆಂದವನೂಡಿದೆ !
ಎಂಬ ಕುವೆಂಪುರವರ ಕವಿತೆಯನ್ನು ನೆನಪಿಸುವಂತೆ ಮೂಡಲಗಿಯಲ್ಲಿ ಮೂಡಣದ ಆಗಸದಲ್ಲಿ ಸುಂದರವಾದ ಕಾಮನಬಿಲ್ಲು ಕಂಡುಬಂದು ಎಲ್ಲರಲ್ಲಿ ಆಹ್ಲಾದ ಮೂಡಿಸಿತು.
ಕಳೆದ ಕೆಲವು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಇಂದು ಎಳೆ ಬಿಸಿಲಿನ ಜೊತೆ ತುಂತುರು ಮಳೆಯಾಗುತ್ತಿದ್ದುದನ್ನೇ ಕಾಯುತ್ತಿದ್ದ ಮಾರನ ಬಿಲ್ಲು ಹೆದೆಯೇರಿಸಿದಂತೆ ಏಳು ಬಣ್ಣಗಳೊಡನೆ ಆಗಸಕ್ಕೆ ರಂಗು ತಂದಿತು.
ದಿಗಂತದ ಎರಡು ತುದಿಗಳನ್ನು ಬೆಸೆಯುವಂತೆ ಹರವಿಕೊಂಡಿದ್ದ ಆಕರ್ಷಕ ಕಾಮನಬಿಲ್ಲನ್ನು ಕಂಡು ಮಕ್ಕಳು ಖುಷಿಪಟ್ಟವು. ಕೆಲವೇ ಕ್ಷಣಗಳು ಮೂಡಿದ್ದ ಕಾಮನಬಿಲ್ಲು ಬಿಸಿಲು ಸರಿಯುತ್ತಿದ್ದಂತೆ ಮೆಲ್ಲಗೆ ಸರಿದು ಆಕಾಶವೆಲ್ಲ ಬಯಲಾಗಿ ನಿರಾಶೆ ಮೂಡಿಸಿತು
ಉಮೇಶ ಬೆಳಕೂಡ



