ಬೀದರ: ಬೀದರ ಜಿಲ್ಲೆಯ ಔರಾದ ಪಟ್ಟಣವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪಟ್ಟಣ. ಔರಾದ ತಾಲೂಕಿನ ಗಂಗನಬೀಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ.
ರೈತರು ಬೆಳಿಗ್ಗೆ ಹೊತ್ತು ಹೊಲದಲ್ಲಿ ಕೆಲಸ ಮಾಡುವಾಗ ಚಿಪ್ಪು ಹಂದಿಯನ್ನು ಕಂಡು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪ್ರಭಾರ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ರೈತರೊಬ್ಬರು ತಮ್ಮ ಹೊಲಕ್ಕೆ ಹಾಕಲಾದ ಬೇಲಿಗೆ ಸಿಕ್ಕಿಕೊಂಡಿದ್ದ ಚಿಪ್ಪುಹಂದಿಯನ್ನು ಹೊರ ತೆಗೆದು ಅದನ್ನು ಪುನಃ ಕಾಡಿಗೆ ಬಿಟ್ಟಿದ್ದಾರೆ.
ಮೈತುಂಬ ಕಂದುಬಣ್ಣದ ಚಿಪ್ಪು ಹೊಂದಿದ ಸುಮಾರು 3 ಅಡಿ ಉದ್ದದ ಚಿಪ್ಪು ಹಂದಿಯನ್ನು ನೋಡಲು ಸುತ್ತಲಿನ ಹೊಲಗಳ ರೈತರು ಸೇರಿದ್ದರು.
ಚಿಪ್ಪುಹಂದಿಯನ್ನು ಆಂಗ್ಲ ಭಾಷೆಯಲ್ಲಿ “ಪೆಂಗೋಲಿನ್” ಎಂದು ಕರೆಯುತ್ತಾರೆ.
ಇದೊಂದು ಅಳಿವಿನ ಅಂಚಿನಲ್ಲಿರುವ ಪ್ರಾಣಿ. ಅಪರೂಪಕ್ಕೆ ಸಿಗುತ್ತವೆ. ಇವು ಪ್ರಾಣಿಗಳು ಮನುಷ್ಯನಿಗೆ ಅಪಾಯವಲ್ಲ. ರಾತ್ರಿ ವೇಳೆ ಓಡಾಡುತ್ತವೆ. ಇರುವೆಗಳು, ಗೆದ್ದಲು ಹುಳು ಇವುಗಳ ಆಹಾರ. ಔಷಧ ತಯಾರಿಸಲು ಚಿಪ್ಪು ಹಂದಿ ಬಳವುದರಿಂದ ಇವುಗಳಿಗೆ ಭಾರಿ ಬೇಡಿಕೆಯೂ ಇದೆ ಎಂದು ಪ್ರಭಾರ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ಮಾಹಿತಿ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ