ಅವಿರಳ ವಚನಕಾರ್ತಿಯರು ಎಲೆಮರೆಯ ಕಾಯಿಯಂತಿರುವ, ವೈಚಾರಿಕ ಪ್ರಪಂಚಕ್ಕೆ ಅವರದೇ ಆದ ಕೊಡುಗೆಗಳನ್ನು, ಮೌಲಿಕ ವಿಚಾರಗಳನ್ನು ಕಟ್ಟಿಕೊಟ್ಟ ಶರಣೆಯರು ಎಂದು ಡಾ. ಬಸಮ್ಮ ಗಂಗನಳ್ಳಿ ಹೇಳುತ್ತಾ, ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 20 ನೆಯ ದಿವಸದ ಮೀಟ್ ನಲ್ಲಿ ಮಾತನಾಡಿದರು.
ಮೂವತ್ತೈದಕ್ಕೂ ಹೆಚ್ಚು ಶರಣೆಯರ ಹೆಸರನ್ನು ಉಲ್ಲೇಖಿಸುತ್ತಾ, ಕದಿರೆ ರೆಮ್ಮವ್ವೆ, ದುಗ್ಗಳೆ, ಸತ್ಯಕ್ಕ, ಕಾಳವ್ವೆ, ಗುಡ್ಡವ್ವೆ, ಗೊಗ್ಗವ್ವೆ, ರೇಕಮ್ಮ, ಮುಕ್ತಾಯಕ್ಕ, ಬೊಂತಾದೇವಿ, ಕೇತಲಾದೇವಿ, ಹೀಗೆ ಪ್ರತಿಯೊಬ್ಬರ ಹೆಸರನ್ನೂ ಹೇಳುತ್ತಾ, ದಾಂಪತ್ಯದ ಜೊತೆಗೆ ಆಧ್ಯಾತ್ಮಿಕ ಸಾಧನೆಗೆ ವೈಯಕ್ತಿಕ ಅಭಿಪ್ರಾಯಕ್ಕೆ ಸಾಮೂಹಿಕ ಬದುಕಿಗೆ ಒತ್ತು ಕೊಡುವುದನ್ನು ಶರಣರು ಅವರಿಗೆಲ್ಲ ಹೇಗೆ ಕಲಿಸಿದರು ಎಂದು ಸ್ಮರಿಸಿದರು.
ಶರಣೆಯರ ಪ್ರಖರವಾದ ನಿಲುವು, ವಿಡಂಬನಾತ್ಮಕ ವ್ಯಂಗ್ಯೋಕ್ತಿ, ವಿಚಾರ ಸಾಹಿತ್ಯ, ಸ್ಪಷ್ಟವಾದ ಉಲ್ಲೇಖಗಳು, ಆಧ್ಯಾತ್ಮಿಕದ ಪ್ರಖರತೆ ಬಹಳಷ್ಟು ಎತ್ತರ ಮಟ್ಟದಲ್ಲಿದ್ದವು ಎನ್ನುವುದನ್ನು ಹಂಚಿಕೊಂಡರು.
ಶೀಲ-ವ್ರತ, ನೇಮ-ಆಚಾರ, ಟೀಕೆ -ವಿಡಂಬನೆ, ಮೌಢ್ಯ ವಿಚಾರಗಳು ಹೀಗೆ ಸಾಕಷ್ಟು ವಿಷಯಗಳು ಶರಣೆಯರ ವಚನಗಳ ಆಶಯಗಳಾಗಿದ್ದವು ಎಂದು ಹೇಳುತ್ತಾ, ಅಂತರಂಗ -ಬಹಿರಂಗ ಶುದ್ಧಿಯೇ ವೃತಾಚರಣೆ, ನಮಗೆ ನಾವೇ ಕಟ್ಟಳೆ ಹಾಕಿಕೊಳ್ಳಬೇಕು, ಒಳ್ಳೆಯ ವಿಚಾರ ಅಳವಡಿಸಿಕೊಳ್ಳಬೇಕು, ಮನೋನಿಯಂತ್ರಣದಲ್ಲಿರಬೇಕು, ಪರಿಶುದ್ಧವಾದ ನಡೆ -ನುಡಿಯಿರಬೇಕು, ಅಂದಾಗ ಮಾತ್ರ ಬದುಕು ಹಸನಾಗುತ್ತದೆ ಸಾಮಾಜಿಕ ಸ್ವಾಸ್ಥ್ಯ ಹೆಚ್ಚುತ್ತದೆ ಎನ್ನುವ ಶರಣೆಯರ ಅರಿವನ್ನು ಮೂಡಿಸಿದರು.
ಇಂದಿನ ತಾಯಂದಿರು ತಮ್ಮ ಮಕ್ಕಳಿಗೆ ವಚನಗಳ ಮೌಲ್ಯವನ್ನು ಕಟ್ಟಿಕೊಡಬೇಕು, ಶರಣರ ಪ್ರಭಾವ ಮಕ್ಕಳಮೇಲೆ ಬೀರುವಂತಾಗಬೇಕು ಎನ್ನುವ ಕಿವಿಮಾತು ಹೇಳುತ್ತಾ, ತಮ್ಮ ಉಪನ್ಯಾಸ ಮುಗಿಸಿದರು.
ಡಾ. ವೀಣಾ ಎಲಿಗಾರ ಮೇಡಂ ಅವರು ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರ ಬಗೆಗೆ ಚಿಂತನ-ಮಂಥನ ನಡೆಯಬೇಕು ಮೌಲ್ಯಗಳ ಮತ್ತು ವೈಚಾರಿಕತೆಯ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳುತ್ತಾ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ದೇವತೆಯೂ ಅಲ್ಲ, ಹೆಣ್ಣು ಅಬಲೆಯೂ ಅಲ್ಲ, ಎಂದು ಹೇಳುತ್ತಾ ,ಶರಣರು ಹೆಣ್ಣಿಗೆ ಹೇಗೆ ಸಮಾನತೆಯನ್ನು ಸಾರಿದರು ಎನ್ನುವ ಅಂಶವನ್ನು ಒತ್ತಿ ಹೇಳಿದರು. ಆಗಿನ ಕಾಲದಲ್ಲಿಯೇ ಶರಣೆಯರು ಸ್ತ್ರೀ ವಾದವನ್ನು ಅತ್ಯಂತ ಎತ್ತರಮಟ್ಟಕ್ಕೆ ಕೊಂಡೊಯ್ದರು. ಆಗಲೇ ಶರಣೆಯರಲ್ಲಿ ವ್ರತ-ಆಚಾರ -ವಿಚಾರಕ್ಕೆ ಸಂಬಂಧಪಟ್ಟಂತೆ ವೈಚಾರಿಕ ಪಲ್ಲಟಗಳು ನಡೆದು ಸಮಾಜದಲ್ಲಿ ತೀವ್ರತರ ಬದಲಾವಣೆ ಆಯಿತು, ಅಕ್ಕಮಹಾದೇವಿ ಲೌಕಿಕ ವಿವಾಹವನ್ನು ತ್ಯಜಿಸಿ, ಅಲೌಕಿಕ ದೈವವನ್ನು ಹುಡುಕುತ್ತ ಹೋಗುವ ಆಯ್ಕೆಯ ಸ್ವಾತಂತ್ರದ ಗಟ್ಟಿತನವನ್ನು ತಮ್ಮ ಮಾರ್ಗದರ್ಶನದಲ್ಲಿ ನಮ್ಮೆಲ್ಲರ ಜೊತೆಗೆ ಹಂಚಿಕೊಂಡರು.
ಶರಣೆ ವಿದ್ಯಾ ಮುಗ್ದುಮ ಅವರ ವಚನ ಪ್ರಾರ್ಥನೆ, ಡಾ.ಶೈಲಜಾ ಪವಾಡಶೆಟ್ಟರ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ಶರಣೆ ರತ್ನಕ್ಕ ಕಾದ್ರೊಳ್ಳಿ ಅವರ ಶರಣು ಸಮರ್ಪಣೆ,ಡಾ. ಕಸ್ತೂರಿ ದಳವಾಯಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣೆ ಸುಧಾ ಪಾಟೀಲ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ