spot_img
spot_img

ಹೊಸಪುಸ್ತಕ ಓದು: ಕನ್ನಡದಲ್ಲಿ ಚಿರಕಾಲ ಉಳಿಯುವ ಅಭಿನಂದನ ಗ್ರಂಥ

Must Read

- Advertisement -

ಕನ್ನಡದಲ್ಲಿ ಚಿರಕಾಲ ಉಳಿಯುವ ಅಭಿನಂದನ ಗ್ರಂಥ

ಪುಸ್ತಕದ ಹೆಸರು : ದರ್ಶನ ದೀಪ್ತಿ (ಡಾ. ಎನ್. ಜಿ. ಮಹಾದೇವಪ್ಪ ಅಭಿನಂದನ ಗ್ರಂಥ)

ಸಂಪಾದಕರು : ಶಶಿಧರ ತೋಡಕರ

ಪ್ರಕಾಶಕರು : ವಚನ ಅಧ್ಯಯನ ಕೇಂದ್ರ, ನಾಗನೂರು ಶ್ರೀ ರುದ್ರಾಕ್ಷಿಮಠ, ಬೆಳಗಾವಿ, ೨೦೨೩

- Advertisement -

ಪುಟ : ೬೮೨ ಬೆಲೆ : ರೂ. ೧೦೦೦


 ಬಸವಾದಿ ಶಿವಶರಣರಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮದ ಮೂಲ ಆಧಾರ ‘ವಚನ ಸಾಹಿತ್ಯ’. ವಚನಗಳಿಂದಲೇ ಲಿಂಗಾಯತ ಧರ್ಮದ ರೂಪ-ಸ್ವರೂಪಗಳು ಮೂಡಿಬಂದಿವೆ. ಇಂತಹ ಅಪರೂಪದ ವಚನಗಳನ್ನು ಆಧುನಿಕ ಕನ್ನಡ ಸಾಹಿತ್ಯದ ಆರಂಭ ಕಾಲದಲ್ಲಿ ‘ಶಾಸ್ತ್ರ’ವೆಂದು ಮಾತ್ರ ಗುರುತಿಸಲಾಗಿತ್ತು. ಡಾ. ಹಳಕಟ್ಟಿಯವರ ‘ವಚನ ಶಾಸ್ತ್ರ ಸಾರ’, ರಂಗನಾಥ ದಿವಾಕರ ಅವರ ‘ವಚನ ಶಾಸ್ತ್ರರಹಸ್ಯ’ ಕೃತಿಗಳ ಮೂಲಕ ವಚನಗಳನ್ನು ಕೇವಲ ಶಾಸ್ತ್ರದೃಷ್ಟಿಯಿಂದ ಗಮನಿಸಲಾಗಿತ್ತು. ನವ್ಯ ಕಾಲಘಟ್ಟದಲ್ಲಿ ವಚನಗಳನ್ನು ‘ಸಾಹಿತ್ಯ’ ರೂಪದಿಂದ ಅಧ್ಯಯನ ಮಾಡುವ ಒಂದು ಪರಂಪರೆ ಬೆಳೆದು ಬಂದಿತು. ವಚನಗಳನ್ನು ‘ಶಾಸ್ತ್ರ’ದ ಚೌಕಟ್ಟಿನಿಂದ ‘ಸಾಹಿತ್ಯ’ದ ವಿಸ್ತಾರ ಭಿತ್ತಿಯಲ್ಲಿ ಅಧ್ಯಯನ ಮಾಡುವ ವಿದ್ವಾಂಸರ ಪಡೆಯೇ ನಿರ್ಮಾಣವಾಯಿತು. ಹೀಗೆ ವಚನಗಳು ‘ಶಾಸ್ತ್ರ’ವಾಗಿ, ‘ಧರ್ಮ’ವಾಗಿ, ‘ಸಾಹಿತ್ಯ’ವಾಗಿ ಅವರವರ ದರ್ಶನಕ್ಕೆ ಅವರವರ ಭಾವದಲ್ಲಿ ಗೋಚರಿಸಿದಂತಾಗಿತ್ತು. ಹೀಗಾಗಿ ವಚನಗಳನ್ನು ಹತ್ತು ಹಲವು ಆಯಾಮಗಳಿಂದ ಅಧ್ಯಯನ ಮಾಡುವ ದೃಷ್ಟಿ ಬೆಳೆದಿತ್ತು. ಆದರೆ ವಚನಗಳಲ್ಲಿ ಅಡಕವಾಗಿರುವ ದಾರ್ಶನಿಕ ವಿಚಾರಗಳನ್ನು ಗುರುತಿಸುವ ಪ್ರಯತ್ನ ನಡೆದಿರಲಿಲ್ಲ. ಈ ಬಹುದೊಡ್ಡ ಕೊರತೆಯನ್ನು ದೊಡ್ಡ ಪ್ರಮಾಣದಲ್ಲಿ ನೀಗಿಸಿದವರು, ಕನ್ನಡ ತತ್ವಶಾಸ್ತ್ರಕ್ಕೆ ಒಂದು ದಿಕ್ಕು ದಿಸೆ ತೋರಿಸಿದ ಡಾ. ಎನ್. ಜಿ. ಮಹಾದೇವಪ್ಪ ಅವರು. ವಚನಗಳನ್ನು ದಾರ್ಶನಿಕ ನೆಲೆಯಲ್ಲಿ ಅಧ್ಯಯನ ಮಾಡಿ, ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮ. ಅದು ಯಾವುದೇ ಧರ್ಮದ ಶಾಖೆಯಲ್ಲ, ಅಂಗವಲ್ಲ. ಅದು ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಒಂದು ಪರಿಪೂರ್ಣ ಧರ್ಮ ಎಂಬುದನ್ನು ತತ್ವಶಾಸ್ತ್ರೀಯ ನೆಲೆಯಲ್ಲಿ ಶೋಧಿಸಿದ ಕೀರ್ತಿ ಡಾ. ಮಹಾದೇವಪ್ಪನವರಿಗೆ ಸಲ್ಲುತ್ತದೆ. 

ಭಾರತೀಯ ಧರ್ಮ ಪರಂಪರೆಯನ್ನು ‘ಷಡ್ದರ್ಶನಗಳ’ ಅಧ್ಯಯನದಿಂದಲೇ ಪ್ರಾರಂಭ ಮಾಡುತ್ತಾರೆ. ಸಾಯಣ ಮಾಧವರ ‘ಸರ್ವದರ್ಶನ ಸಂಗ್ರಹ’ ಮೊದಲುಗೊಂಡು ಭಾರತದ ಬಹುತೇಕ ಅಧ್ಯಯನಗಳು ‘ದ್ವೈತ’ ‘ಅದ್ವೈತ’ ‘ವಿಶಿಷ್ಟಾದ್ವೈತ’ ‘ದ್ವೈತಾದ್ವೈತ’ ಈ ನೆಲೆಯಲ್ಲಿಯೇ ಸಾಗಿ ಬಂದಿದ್ದವು. ಇವುಗಳಿಗಿಂತ ಭಿನ್ನವಾಗಿ ರೂಪುಗೊಂಡಿದ್ದು, ಬಸವಾದಿ ಶಿವಶರಣರ ‘ಲಿಂಗಾದ್ವೈತ’ ಎಂಬ ಹೊಸ ದಾರ್ಶನಿಕ ವಿಚಾರಧಾರೆಯನ್ನು ಲಿಂಗಾಯತರಿಗೆ ಮೊಟ್ಟ ಮೊದಲು ತಿಳಿಸಿದ ಮಹಾನುಭಾವರು ಡಾ. ಮಹಾದೇವಪ್ಪನವರು. ಅಂತೆಯೆ ಮೊದಲ ಬಾರಿಗೆ ಡಾ. ಹಳಕಟ್ಟಿಯವರು ನಮಗೆ ವಚನಗಳನ್ನು ದೊರಕಿಸಿಕೊಟ್ಟರು, ಆ ವಚನಗಳಲ್ಲಿರುವ ತತ್ವಶಾಸ್ತ್ರವನ್ನು ಮೊದಲ ಬಾರಿಗೆ ಶೋಧಿಸಿದವರು ಡಾ. ಮಹಾದೇವಪ್ಪನವರು. ಹೀಗಾಗಿ ಈ ಇಬ್ಬರೂ ಮಹನೀಯರನ್ನು ಸಮಸ್ತ ಲಿಂಗಾಯತರು ಸದಾವಕಾಲ ಸ್ಮರಿಸಬೇಕಾದುದು ಅವರ ಕರ್ತವ್ಯದ ಒಂದು ಭಾಗವೇ ಆಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

- Advertisement -

ಕನ್ನಡದಲ್ಲಿ ತತ್ವಶಾಸ್ತ್ರಿಯ ಸಿದ್ಧಾಂತ ಗ್ರಂಥಗಳನ್ನು ಸರಳವಾಗಿ ತಿಳಿಸಿಕೊಟ್ಟವರು ಡಾ. ಮಹಾದೇವಪ್ಪನವರು. ತತ್ವಶಾಸ್ತ್ರವೆಂಬುದು ಕಬ್ಬಿಣದ ಕಡಲೆ ಎಂಬುದು ಸರ್ವವಿದಿತ. ಇಂತಹ ಕಬ್ಬಿಣದ ಕಡಲೆಯನ್ನು ರಸಗಬ್ಬವಾಗಿ ಪರಿವರ್ತಿಸಿ ತಿಳಿಸುವ ಒಂದು ಅಪೂರ್ವ ಕಲೆ ಅವರಿಗೆ ಸಿದ್ಧಿಸಿದೆ. ಪ್ರಾಯಶಃ ೧೯೮೦ರ ದಶಕದವರೆಗೆ ತತ್ವಶಾಸ್ತ್ರದ ಅನೇಕ ಇಂಗ್ಲಿಷ್ ಪಾರಿಭಾಷಿಕ ಪದಗಳಿಗೆ ಕನ್ನಡದಲ್ಲಿ ಸರಿಯಾದ ಅರ್ಥ ವಿವರಣೆ ಇರಲಿಲ್ಲ. ಈ ಕೊರತೆಯನ್ನು ನೀಗಿ ‘ಡಿಕ್ಶನರಿ ಆಫ್ ಟೆಕ್ನಿಕಲ್ ಟರ‍್ಮಸ್ ಇನ್ ಫಿಲಾಸಫಿ’ ಎಂಬ ಕೃತಿಯನ್ನು ರಚಿಸುವ ಮೂಲಕ ಕನ್ನಡದಲ್ಲಿಯೂ ದಾರ್ಶನಿಕ ಗ್ರಂಥಗಳ ರಚನೆ ಮಾಡಬಹುದು ಎಂಬುದು ಸಿದ್ಧಗೊಳಿಸಿದವರು ಡಾ. ಮಹಾದೇವಪ್ಪನವರು. ಇಂತಹ ಹಿರಿಯ ವಿದ್ವಾಂಸರಿಗೆ ಅರ್ಪಿಸಿದ ಒಂದು ಅನನ್ಯ ಅಭಿನಂದನ ಗ್ರಂಥ ‘ದರ್ಶನ ದೀಪ್ತಿ’.

ಡಾ. ಎನ್. ಜಿ. ಮಹಾದೇವಪ್ಪನವರು ಅತ್ಯಂತ ಸರಳ ಜೀವಿಗಳು. ಅವರೆಂದೂ ಪದವಿ, ಪದವಿ, ಪ್ರಶಸ್ತಿ, ಪುರಸ್ಕಾರ, ಹಾರ ತುರಾಯಿಗಳಿಗೆ ಆಸೆ ಪಟ್ಟವರಲ್ಲ. ಪ್ರಶಸ್ತಿಗಳು ಬಂದಾಗಲೂ ಅತ್ಯಂತ ನಿರ್ಲಿಪ್ತ ಮನೋಭಾವದಿಂದ ಸ್ವೀಕರಿಸಿದವರು.  ನಿಜವಾದ ಶರಣರ ಜೀವನ ನಡೆಸಿದವರು. ಶರಣರ ವಚನಗಳನ್ನು ಬರೆದಂತೆ, ತಮ್ಮ ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವರು. ಇಂತಹ ನಿರ್ಲಿಪ್ತ ನಿರ್ಮೋಹತ್ವದ ನಿಜ ಶರಣರಿಗೆ ಅಭಿನಂದನ ಗ್ರಂಥ ಅರ್ಪಿಸಿರುವುದು ನಿಜಕ್ಕೂ ಅಭಿನಂದನೀಯ ಕಾರ್ಯ. ಗದಗ ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಗೌರವಾಧ್ಯಕ್ಷತೆಯಲ್ಲಿ, ಡಾ. ವೀರಣ್ಣ ರಾಜೂರ ಅವರ ಅಧ್ಯಕ್ಷತೆಯಲ್ಲಿ ಅಭಿನಂದನ ಸಮಿತಿ ರೂಪುಗೊಂಡು, ಡಾ. ಶಶಿಧರ ತೋಡಕರ ಅವರ ಸಮರ್ಥ ಸಂಪಾದನೆಯಿಂದ ಈ ಅಭಿನಂದನ ಗ್ರಂಥ ಮೂಡಿಬಂದಿದೆ. ಈ ಅಭಿನಂದನ ಸಂಪುಟವನ್ನು  ನಾಗನೂರು ಶ್ರೀ ರುದ್ರಾಕ್ಷಿಮಠದ ವಚನ ಅಧ್ಯಯನ ಕೇಂದ್ರದಿಂದ ಪ್ರಕಟಿಸಿದವರು ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರು. ಈ ಎಲ್ಲ ಹಿರಿಯರ ಪ್ರೀತಿ ಆಸಕ್ತಿ ಗೌರವದ ದ್ಯೋತಕವಾಗಿ ಅಭಿನಂದನ ಸಂಪುಟ ಸರ್ವಾಂಗ ಸುಂದರವಾಗಿ ಪ್ರಕಟವಾಗಿದೆ. 

ನಾಲ್ಕು ಭಾಗಗಳಲ್ಲಿ ಅರವತ್ತು ಲೇಖನಗಳನ್ನು ಒಳಗೊಂಡ ಈ ಬೃಹತ್ ಅಭಿನಂದನ ಗ್ರಂಥ ಲಿಂಗಾಯತ ದರ್ಶನವನ್ನು ಅಧ್ಯಯನ ಮಾಡುವವರಿಗೆ ಒಂದು ಅಪರೂಪದ ಆಕರ ಗ್ರಂಥವಾಗಿಯೂ ರೂಪುಗೊಂಡಿದೆ. ಮೊದಲ ಭಾಗದಲ್ಲಿ ಸಿದ್ಧೇಶ್ವರ ಸ್ವಾಮೀಜಿ, ಸುತ್ತೂರು, ತುಮಕೂರು, ಭಾಲ್ಕಿ, ಧಾರವಾಡ ಮುರುಘಾಮಠದ ಪೂಜ್ಯರ ಸಂದೇಶಗಳಿವೆ. ಎರಡನೆಯ ಭಾಗದಲ್ಲಿ ಡಾ. ಮಹಾದೇವಪ್ಪನವರ ಒಡನಾಡಿಗಳು ಬರೆದ ೨೧ ಲೇಖನಗಳಿವೆ. ಗದುಗಿನ ಜಗದ್ಗುರು ಮಹಾಸನ್ನಿಧಿಯವರಿಗೆ ‘ತತ್ವಶಾಸ್ತ್ರದ ಅನನ್ಯ ಪ್ರಾಧ್ಯಾಪಕ’ರಾಗಿ ಕಂಡರೆ, ಗೊ.ರು.ಚ ಅವರಿಗೆ ‘ಸದುವಿನಯದ ತುಂಬಿದ ಕೊಡ’ವಾಗಿ ಕಂಡಿದ್ದಾರೆ. ಡಾ. ಎಸ್. ಆರ್. ಗುಂಜಾಳ ಅವರಿಗೆ ‘ವಿದ್ವತ್ತಿನ ಮೇರು ಶಿಖರ’ವಾಗಿ, ವೀರಣ್ಣ ರಾಜೂರ ಅವರಿಗೆ ‘ತತ್ವಾನ್ವೇಷಕ’, ಕಿರಣ ಬೆಲ್ಲದ ಅವರಿಗೆ ‘ಲಿಂಗಾಯತ ಧರ್ಮದ ಆಸ್ತಿ’ ಆಗಿ ಕಂಡಿದ್ದಾರೆ.

ಹಾಗೆಯೇ ಅವರ ಕುಟುಂಬ ವರ್ಗದವರ ಅತ್ಯಾಪ್ತ ಲೇಖನಗಳು ಮಹಾದೇವಪ್ಪನವರ ಶರಣಘನದ ವ್ಯಕ್ತಿತ್ವವನ್ನು ತೆರೆದು ತೋರಿಸುತ್ತವೆ. 

ಮೂರನೆಯ ಭಾಗದಲ್ಲಿ ಡಾ. ಮಹಾದೇವಪ್ಪನವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಮೂವತ್ತು ಮಹತ್ವದ ಕೃತಿಗಳ ಸಮೀಕ್ಷೆ ಇದೆ. ‘ತರ್ಕಶಾಸ್ತ್ರ’, ‘ಈಶ್ವರ ಮತ್ತು ಅನಿಷ್ಟ’, ‘ತತ್ವಶಾಸ್ತ್ರ ಪಾರಿಭಾಷಿಕ ಕೋಶ’, ‘ಧಾರ್ಮಿಕ ನಂಬಿಕೆಗಳು ಮತ್ತು ದಾರ್ಶನಿಕ ವಿಶ್ಲೇಷಣೆ’, ‘ವಚನಗಳಲ್ಲಿ ತತ್ವಮೀಮಾಂಸೆ’, ‘ವಚನಗಳಲ್ಲಿ ಧರ್ಮ ಮತ್ತು ನೀತಿ’, ‘ಲಿಂಗಾಯತ ಧರ್ಮದ ಪರಿಚಯ’, ‘ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರು’, ‘ಲಿಂಗಾಯತ ಸಿದ್ಧಾಂತಗಳು’ ಮೊದಲಾದ ಮಹತ್ವದ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ, ಸಮೀಕ್ಷಾತ್ಮಕ ಲೇಖನಗಳು ಈ ಭಾಗದಲ್ಲಿವೆ. ನಮ್ಮ ವಿದ್ವತ್‌ಲೋಕ ಅವರ ಕೃತಿಗಳಲ್ಲಿ ಗುರುತಿಸಿದ ‘ಕಾಣ್ಕೆ’ ಅವರೆಷ್ಟು ಪ್ರಬುದ್ಧ ಪರಿಣತ ಬರಹಗಾರರೆಂಬುದಕ್ಕೆ ಸಾಕ್ಷಿ ಒದಗಿಸುತ್ತವೆ. 

ನಾಲ್ಕನೆಯ ಭಾಗದಲ್ಲಿ ‘ಲಿಂಗಾಯತ ದರ್ಶನಗಳು’ ಕುರಿತು ಹದಿನಾಲ್ಕು ಮಹತ್ವಪೂರ್ಣ ಲೇಖನಗಳಿವೆ. ‘ಲಿಂಗಾಯತ ಧರ್ಮದ ಉಗಮ ವಿಕಾಸ ಮತ್ತು ಸ್ವರೂಪ’ (ಜೆ. ಎಸ್. ಪಾಟೀಲ), ಅಷ್ಟಾವರಣ (ಸಿದ್ಧಣ್ಣ ಲಂಗೋಟಿ), ಪಂಚಾಚಾರ ಲಿಂಗಾಯತ ಧರ್ಮದ ಕ್ರಿಯಾಶಕ್ತಿ (ರಂಜಾನ್ ದರ್ಗಾ), ಷಟ್‌ಸ್ಥಲ (ಕಲ್ಯಾಣಮ್ಮ ಲಂಗೋಟಿ), ವಚನಕಾರರಲ್ಲಿ ಆತ್ಮ ಸ್ವರೂಪ (ಎನ್. ಜಿ. ಮಹಾದೇವಪ್ಪ), ಪರವಸ್ತು (ಆಯ್. ಎಸ್. ಕುಂಬಾರ, ಎನ್. ಜಿ. ಮಹಾದೇವಪ್ಪ), ಲಿಂಗಮಯ ಜಗತ್ತು (ವೆಂಕಟೇಶ ಜನಾದ್ರಿ), ಲಿಂಗಾಂಗ ಸಾಮರಸ್ಯ (ಎನ್. ಜಿ. ಮಹಾದೇವಪ್ಪ), ಅನುಭಾವ ಮತ್ತು ಯೋಗ (ಜಯಶ್ರೀ ಹಸಬಿ) ಈ ಲೇಖನಗಳಲ್ಲದೆ, ಜಯಶ್ರೀ ದಂಡೆ ಅವರು ಬರೆದ ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಜಾತಿಭೇದ ನಿರಸನ, ಮೌಢ್ಯ ನಿರಾಕರಣೆ ಎಂಬ ಐದು ಸುದೀರ್ಘ ಲೇಖನಗಳಿವೆ. ಈ ಎಲ್ಲ ಲೇಖನಗಳು ಲಿಂಗಾಯತ ದರ್ಶನದ ಅಧ್ಯಯನಕ್ಕೆ ಒಂದು ವ್ಯವಸ್ಥಿತವಾದ ಮಾರ್ಗವನ್ನು ತೋರುತ್ತವೆ. 

ಕೊನೆಯಲ್ಲಿ ಡಾ. ಮಹಾದೇವಪ್ಪನವರ ಆತ್ಮಕಥೆ ‘ಹಿಂದಿರುಗಿ ನೋಡಿದಾಗ’ ಅತ್ಯಂತ ಹೃದಯಸ್ಪರ್ಶಿಯಾಗಿದೆ. ತತ್ವಶಾಸ್ತçದ ಪ್ರಾಧ್ಯಾಪಕರಾದರೂ, ಸೃಜನಶೀಲ ಸಾಹಿತಿಗಳಿಗೆ ಕಡಿಮೆಯಿಲ್ಲದಂತೆ ರಸವತ್ತಾಗಿ ತಮ್ಮ ಬದುಕಿನ ದಿವ್ಯಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಬಾಲ್ಯದಲ್ಲಿ ಅವರಿಗೆ ಹಿರಿಯ ವಿದ್ವಾಂಸರಾದ ಡಾ. ಗೊ. ರು. ಚ. ಅವರು ಗುರುಗಳಾಗಿ ದೊರಕಿದ್ದು ಒಂದು ಯೋಗಾಯೋಗ. ಕಷ್ಟಪಟ್ಟು ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ವಿವರಗಳನ್ನು ಸೂಕ್ಷ್ಮ ಸಂವೇದನಾಶೀಲತೆಯಿಂದ ನಿರೂಪಿಸಿದ್ದಾರೆ. ಕೆಲವು ಘಟನೆಗಳಲ್ಲಿ ಹಾಸ್ಯ ತನ್ನಿಂದ ತಾನೇ ಮೂಡುವುದರಿಂದ ಓದುಗರಲ್ಲಿ ಕುತೂಹಲ ಹೆಚ್ಚುತ್ತ ಹೋಗುತ್ತದೆ. ಅವರು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದ ನಿರ್ದೇಶಕರಾಗಿ ಬಂದಾಗ ಅವರೊಂದಿಗೆ ಕೆಲಸ ಮಾಡುವ ಭಾಗ್ಯ ನನ್ನದಾಗಿತ್ತು. ಈ ವಿಷಯವಾಗಿ ಅವರು ತಮ್ಮ ಆತ್ಮಕಥೆಯಲ್ಲಿ “ಪ್ರಕಾಶ ಗಿರಿಮಲ್ಲನವರ ಸಹಾಯದಿಂದ ಲಿಂಗಾಯತ ಧರ್ಮದ ಬಗೆಗಿನ ನನ್ನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡೆ” (ಪು. ೬೦೬) ಎಂದು ಬರೆದಿರುವುದು ನನ್ನಲ್ಲಿ ನಿಜಕ್ಕೂ ರೋಮಾಂಚನವನ್ನುಂಟು ಮಾಡಿತು. ವಿದ್ವತ್ತಿನ ಮೇರು ಶಿಖರವಾಗಿರುವ ಅವರು ನನ್ನನ್ನು ತುಂಬ ಪ್ರೀತಿಯಿಂದ ಕಂಡರು. ಅದು ನನ್ನ ಜೀವನದ ಸೌಭಾಗ್ಯವೆಂದು ಭಾವಿಸಿದ್ದೇನೆ. 

ಡಾ. ಮಹಾದೇವಪ್ಪ ಅವರಿಗೆ ಈಗ ೮೬ ವಯಸ್ಸು. ಈ ವಯಸ್ಸಿನಲ್ಲಿಯೂ ಅವರದು ಬತ್ತದ ಉತ್ಸಾಹ. ಲಿಂಗಾಯತ ಧರ್ಮ-ಸಂಸ್ಕೃತಿಗಳನ್ನು ಕುರಿತು ಇನ್ನೂ ಹತ್ತಾರು ಉತ್ತಮೋತ್ತಮ ಗ್ರಂಥಗಳ ರಚನೆಗೆ ಮುಂದಾಗಿದ್ದಾರೆ. ‘ವಚನಗಳಲ್ಲಿ ಅನುಭಾವ’ ಎಂಬ ನಿಯೋಜಿತ ಕೃತಿ ರಚನೆಯ ಕುರಿತು ಆತ್ಮಕಥೆಯಲ್ಲಿ ಪ್ರಸ್ತಾಪಿಸಿದ್ದಾರೆ. ಬಸವಾದಿ ಶಿವಶರಣರ ವಚನಗಳನ್ನು ಇಂಗ್ಲಿಷ್ ಭಾಷೆಗೆ ತರುವ ಮಹಾಮಣಿಹದಲ್ಲಿಯೂ ಅವರು ತೊಡಗಿಸಿಕೊಂಡ ವಿವರಗಳನ್ನು ಹೇಳಿದ್ದಾರೆ. ಇಂತಹ ಮಹಾನ್ ವಿದ್ವಾಂಸರು ಇನ್ನೂ ಹತ್ತಾರು ಮಹತ್ವದ ಗ್ರಂಥಗಳನ್ನು ರಚಿಸುವಂತಾಗಲಿ, ಆ ಮೂಲಕ ಲಿಂಗಾಯತ ಧರ್ಮ ಸಂಸ್ಕೃತಿಗಳ ಕುರಿತಾದ ಸಮಗ್ರ ದೃಷ್ಟಿಕೋನ ಜನತೆಗೆ ತಿಳಿಯುವಂತಾಗಲಿ ಎಂದು ಆಶಿಸುವೆ.

ಇಂತಹ ಬೃಹತ್ ಸಂಪುಟವನ್ನು ಪ್ರಕಟಿಸಿದ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರು  ಕೃತಿ ಶೀರ್ಷಿಕೆ ಕುರಿತು ಹೇಳಿದ ಮಾತುಗಳು ತುಂಬ ಮೌಲಿಕವಾಗಿವೆ : “ತತ್ವಶಾಸ್ತ್ರ ಶಬ್ದಕ್ಕೆ ‘ದರ್ಶನ’ವೆಂಬುದು ಪರ್ಯಾಯ ಹೆಸರು. ‘ದರ್ಶನ’ದ ಅರ್ಥ ಅಪರೋಕ್ಷಾನುಭವ ಅಥವಾ ಪರಮ ಸತ್ಯದ ಅನ್ವೇಷಣೆ ಎಂದಾಗುತ್ತದೆ. ಈ ವಿಷಯವನ್ನು ಕುರಿತು ವೈದಿಕ-ಅವೈದಿಕ, ಆಸ್ತಿಕ-ನಾಸ್ತಿಕ, ಪ್ರಾಚ್ಯ-ಪಾಶ್ಚಾತ್ಯ ಎಂಬ ಅನೇಕ ಬೌದ್ಧಿಕ ವಿಚಾರಧಾರೆಗಳು ಬೆಳೆದು ಬಂದಿವೆ. ಅವೆಲ್ಲವೂ ತಮ್ಮದೇ ಆದ ರೀತಿಯಲ್ಲಿ ‘ತತ್ವ’ (ಪರಮ ಸತ್ಯ)ವನ್ನು ಕುರಿತು ಖಂಡನ-ಮಂಡನ, ಚಿಂತನ-ಮಂಥನ ನಡೆಸಿರುವುದನ್ನು ಕಾಣುತ್ತೇವೆ. ಈ ಎಲ್ಲ ದಾರ್ಶನಿಕ ವಿಚಾರಧಾರೆಗಳ ಆಳವಾದ ಅಧ್ಯಯನ ಮಾಡಿ ಪಡೆದ ದೀಪ್ತಿ(ಜ್ಞಾನಜ್ಯೋತಿ)ಯನ್ನು ತಮ್ಮ ಬದುಕಿನುದ್ದಕ್ಕೂ ಬೆಳಗುತ್ತ ಬಂದವರು ಡಾ. ಎನ್. ಜಿ. ಮಹಾದೇವಪ್ಪ. ಈ ಕಾರಣಕ್ಕಾಗಿಯೇ ಅವರಿಗೆ ಗೌರವಾದರಪೂರ್ವಕ ಸಮರ್ಪಿಸಿದ ಈ ಅಭಿನಂದನ ಸಂಪುಟಕ್ಕೆ ‘ದರ್ಶನ ದೀಪ್ತಿ’ ಎಂದು ಹೆಸರಿಸಲಾಗಿದೆ” ಶ್ರೀಗಳ ಈ ನುಡಿಗಳು ಒಟ್ಟು ಗ್ರಂಥದ ಸಾರವನ್ನು ತಿಳಿಸುತ್ತವೆ. ಸಂಪಾದಕರಾದ ಶಶಿಧರ ತೋಡಕರ ಅವರು ಈ ಸಂಪುಟ ಸಿದ್ಧತೆಯ ಅಮೂಲ್ಯ ವಿವರಗಳನ್ನು ಸಂಪಾದಕೀಯದಲ್ಲಿ ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. 

ಒಟ್ಟಾರೆ, ಲಿಂಗಾಯತ ಧರ್ಮ ಸಾಹಿತ್ಯ ಸಂಸ್ಕೃತಿಗಳ ಉಳವಿಗಾಗಿ ತಮ್ಮ ಸಮಸ್ತ ಬದುಕನ್ನು ಸರ್ವಾರ್ಪಣ ಮನೋಭಾವದಿಂದ ಸಮರ್ಪಿಸಿಕೊಂಡ ಡಾ. ಎನ್. ಜಿ. ಮಹಾದೇವಪ್ಪ ಅವರಿಗೆ ಅರ್ಪಿಸಿದ ಈ ಅಭಿನಂದನ ಗ್ರಂಥ ಬಿ. ಎಂ. ಶ್ರೀ ಅವರ ಅಭಿನಂದನ’ ಗ್ರಂಥ “ಸಂಭಾವನೆ” ಮಾದರಿಯಲ್ಲಿ, ಕನ್ನಡ ಸಾಹಿತ್ಯದಲ್ಲಿ ಚಿರಕಾಲ ಉಳಿಯುವ ಮೌಲಿಕ ಕೃತಿಯಾಗಿದೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ನೆತ್ತಿಗೇರಿದ ಸಿಟ್ಟು ಇಳಿಸೋದು ಹೀಗೆ

ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group