spot_img
spot_img

ಹೊಸ ಪುಸ್ತಕ ಓದು

Must Read

spot_img
- Advertisement -

ಕರ್ನಾಟಕ ರಾಜ್ಯ ಉದಯ… ಕರ್ನಾಟಕದಲ್ಲಿ ಕನ್ನಡ’ : ಒಂದು ಮೌಲಿಕ ಆಕರ ಗ್ರಂಥ


‘ಕರ್ನಾಟಕ ರಾಜ್ಯ ಉದಯ… ಕರ್ನಾಟಕದಲ್ಲಿ ಕನ್ನಡ’

ಲೇಖಕರು : ಡಾ. ಜಿ. ಆರ್. ತಮಗೊಂಡ
ಪ್ರಕಾಶಕರು : ಅವಿರತ ಪುಸ್ತಕ, ವಿಜಯನಗರ, ಬೆಂಗಳೂರು
ಬೆಲೆ : ೧೬೦/-
(ಲೇಖಕರ ಸಂಪರ್ಕ ನಂ: ೯೪೪೮೪೩೫೬೫೫)


ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಮೆರೆಯಬೇಕು. ಆಗ ಮಾತ್ರ ಕನ್ನಡಿಗರ ಸಮಗ್ರ ಸಮೃದ್ಧಿಯ ಉನ್ನತಿ ಎಂಬುದನ್ನು ತಿಳಿಸಿಕೊಡುವ ಒಂದು ಮಹತ್ವದ ಕೃತಿಯಾಗಿದೆ- ‘ಕರ್ನಾಟಕ ರಾಜ್ಯ ಉದಯ… ಕರ್ನಾಟಕದಲ್ಲಿ ಕನ್ನಡ’ (ಶಿಕ್ಷಣ ಮಾಧ್ಯಮ ಹಾಗೂ ಆಡಳಿತದಲ್ಲಿ ಕನ್ನಡ ಅನುಷ್ಠಾನ). ಇಂಥ ಮಹತ್ವಪೂರ್ಣ ಕೃತಿಯನ್ನು ರಚಿಸಿದವರು ಶ್ರೇಷ್ಠ ವೈದ್ಯರೂ ಕನ್ನಡಾಭಿಮಾನಿಗಳೂ ಆದ ಡಾ. ಜಿ. ಆರ್. ತಮಗೊಂಡ ಅವರು.

- Advertisement -

ವಿಜಯಪುರ ಜಿಲ್ಲೆಯ ಬಬಲೇಶ್ವರದ ಡಾ. ಗುರುಪಾದ ತಮಗೊಂಡ (ಬಬಲೇಶ್ವರದಲ್ಲಿ ಬಹುತೇಕ ಜನರ ಹೆಸರು ‘ಗುರುಪಾದ’ವೇ ಆಗಿರುವುದು ವಿಶೇಷ. ಪ್ರೊ. ಗುರುಪಾದ ಎಚ್. ಕಾಖಂಡಕಿ ಅವರು ಒಮ್ಮೆ ನನಗೆ ಈ ವಿಷಯ ಕುರಿತು ಹೇಳಿದ್ದರು) ಅವರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ನಾಡು-ನುಡಿಗಳ ಅಭಿಮಾನಿಗಳು. ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಹೋರಾಟಕ್ಕಿಳಿದ ಧೀಮಂತರು. ೧೯೫೩-೫೪ರಲ್ಲಿ ಅವರು ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಆಗ ಜರುಗಿದ್ದ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದವರು. ಕನ್ನಡದ ಶ್ರೇಷ್ಠ ವಿದ್ವಜ್ಜನರ ಸಾಮಿಪ್ಯ ಸಾನ್ನಿಧ್ಯದಲ್ಲಿ ಕನ್ನಡದ ಅರಿವನ್ನು ಬೆಳೆಸಿಕೊಂಡವರು. ಹುಬ್ಬಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಕಾಲಕ್ಕೆ ಹುಬ್ಬಳ್ಳಿಯಲ್ಲಿರುವ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ‘ಕರ್ನಾಟಕ ಮೆಡಿಕಲ್ ಕಾಲೇಜು’ ಎಂಬ ಹೆಸರು ಬರುವಲ್ಲಿ ಹೋರಾಟ ಮಾಡಿದ ಮುಂಚೂಣಿಯ ನಾಯಕರು. ಕನ್ನಡದ ಕಟ್ಟಾಳು ಎನಿಸಿದ ಡಾ. ಪಾಟೀಲ ಪುಟ್ಟಪ್ಪನವರ ಪರಮಾಪ್ತರಲ್ಲಿ ಡಾ. ಜಿ. ಆರ್. ತಮಗೊಂಡ ಅವರು ಒಬ್ಬರಾಗಿದ್ದು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.

ಡಾ. ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ೧೯೮೦ರ ದಶಕದಲ್ಲಿ ನಡೆದ ಗೋಕಾಕ ಚಳುವಳಿ ಕಾಲಕ್ಕೆ ಸ್ವಯಂ ಪ್ರೇರಣೆಯಿಂದ ಧನ ಸಹಾಯ ಮಾಡಿದ ಡಾ. ಜಿ. ಆರ್. ತಮಗೊಂಡ ಅವರು ಬಾಗಲಕೋಟೆಯಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ಆಸ್ಪತ್ರೆಯಲ್ಲಿ ಕನ್ನಡ ಭಾಷೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಅನುಷ್ಠಾನ ತಂದವರು. ವೈದ್ಯಕೀಯ ಕ್ಷೇತ್ರದಲ್ಲಿಯೂ ಕನ್ನಡ ಭಾಷೆಯ ಪಾರಮ್ಯ ಬೆಳೆಯಬೇಕೆಂಬುದು ಅವರ ಮನದಾಳದ ತುಡಿತವಾಗಿತ್ತು. ಅದಕ್ಕಾಗಿ ಪಾಟೀಲ ಪುಟ್ಟಪ್ಪನವರು ಡಾ. ತಮಗೊಂಡ ಅವರ ಕನ್ನಡ ಅನುಷ್ಠಾನದ ಪರಿಕಲ್ಪನೆಯನ್ನು ಪ್ರಶಂಸಿಸುತ್ತ ಹೀಗೆ ಹೇಳುತ್ತಾರೆ- “ಒಂದು ಆಸ್ಪತ್ರೆ ಹಾಗೂ ಒಬ್ಬ ವೈದ್ಯಾಧಿಕಾರಿ ಹೇಗೆ ಇರಬೇಕೆಂಬುದಕ್ಕೆ ಡಾ. ತಮಗೊಂಡ ಸೂಕ್ತ ನಿದರ್ಶನ. ಡಾ. ಜಿ. ಆರ್. ತಮಗೊಂಡ ಅವರು ರೋಗಿಗಳ ಕೆಲಸವನ್ನು ಮಾಡುತ್ತಲೇ ಕನ್ನಡದ ಕೆಲಸವನ್ನು ಮಾಡಿರುತ್ತಾರೆ. ಕನ್ನಡ ಅಭಿಮಾನ ಇರಿಸಿಕೊಂಡ ಒಬ್ಬ ವ್ಯಕ್ತಿ ಕನ್ನಡಕ್ಕೋಸುಗ ಏನು ಮಾಡಬಲ್ಲ ಎನ್ನುವುದನ್ನು ಅವರು ತೋರಿಸಿದ್ದಾರೆ. ವೈದ್ಯಕೀಯ ಇಲಾಖೆ ಮೆಚ್ಚುವಂತಹ ಮಾದರಿಯ ಕೆಲಸವನ್ನು ಅವರು ಮಾಡಿದ್ದಾರೆ’. ಇದು ಪುಟ್ಟಪ್ಪನವರ ಉತ್ಪ್ರೇಕ್ಷೆಯ ಮಾತಲ್ಲ, ಡಾ. ತಮಗೊಂಡರ ಸೇವಾತತ್ಪರತೆ, ಕನ್ನಡ ಪ್ರಜ್ಞೆಯನ್ನು ಕುರಿತು ಹೇಳಿದ ಮನದಾಳದ ಮಾತು!

ಡಾ. ತಮಗೊಂಡ ಅವರು ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿದ್ದಾಗ ಕನ್ನಡದಲ್ಲಿಯೇ ಪ್ರಶ್ನೆ ಕೇಳಿ, ಕನ್ನಡದಲ್ಲಿಯೇ ಉತ್ತರ ಪಡೆದ ನಿಷ್ಠುರ ನಿಲುವಿನ ಕನ್ನಡಾಭಿಮಾನಿಗಳು. ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅದನ್ನು ಖಂಡಿಸುವ ಕಾರ್ಯವನ್ನು ಮಾಡಿದ್ದಾರೆ.

- Advertisement -

ಮೂಲತಃ ಸಾಹಿತಿಗಳಲ್ಲದಿದ್ದರೂ ಡಾ. ತಮಗೊಂಡರು ಈಗಾಗಲೇ ಮರ‍್ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಡಾ. ಹುಬ್ಬಳ್ಳಿ ಸಾಹೇಬರು’, ‘ಬಬಲೇಶ್ವರದ ಶಾಂತವೀರ ಸ್ವಾಮಿಗಳು’ ‘ಎ.ಸಿ.ಅಂಗಡಿ ವಕೀಲರು’, ‘ಡಾ.ಬಿ.ಡಿ.ಜತ್ತಿ’ ಈ ಕೃತಿಗಳ ನಂತರ ಈಗ ‘ಕರ್ನಾಟಕ ರಾಜ್ಯ ಉದಯ… ಕರ್ನಾಟಕದಲ್ಲಿ ಕನ್ನಡ’ ಎಂಬ ಮಹತ್ವಪೂರ್ಣ ಆಕರ ಕೃತಿಯೊಂದನ್ನು ರಚಿಸಿದ್ದಾರೆ.

ತಮ್ಮ ಆರು ದಶಕಗಳ ಅನುಭವದ ತಳಹದಿಯ ಮೇಲೆ, ಕರ್ನಾಟಕದಲ್ಲಿ ಕನ್ನಡ ಭಾಷೆಯು ಬೆಳೆಯಬೇಕಾಗಿದ್ದ ರೀತಿ, ಸಾಗಿ ಬಂದ ರೀತಿ, ಮುಂದೆ ಭವಿಷ್ಯದಲ್ಲಿ ಅದು ಕಂಡುಕೊಳ್ಳಬೇಕಾದ ಮಾರ್ಗ ಕುರಿತು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಪ್ರಸ್ತುತ ಕೃತಿಯನ್ನು ರಚಿಸಿದ್ದಾರೆ.

ಒಟ್ಟು ಹತ್ತು ಅಧ್ಯಾಯಗಳಲ್ಲಿ ಕೃತಿಸೌಧ ನಿರ್ಮಾಣಗೊಂಡಿದೆ. ಮೊದಲನೆಯ ಅಧ್ಯಾಯದಲ್ಲಿ ಕರ್ನಾಟಕ ಏಕೀರಕಣದಿಂದಾಗಿ ಕರ್ನಾಟಕ ರಾಜ್ಯ ಉದಯ-ನಾಮಕರಣ ನಂತರ ಇಂದು ಏನಾಗಿದೆ ಎಂಬುದರ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಎರಡನೆಯ ಅಧ್ಯಾಯದಲ್ಲಿ ಬ್ರಿಟಿಷರು ಭಾರತಕ್ಕೆ ವ್ಯಾಪರಕ್ಕಾಗಿ ಬಂದಾಗ, ಅವರು ವ್ಯವಹಾರಕ್ಕಾಗಿ ಬಳಸಿದ ಭಾಷೆ ಪರ್ಶಿಯನ್ ಆಗಿತ್ತು. ಆದರೆ ರಾಜಾರಾಮ ಮೋಹನ್‌ರಾಯ ಅವರ ಮೊಟ್ಟಮೊದಲನೆಯ ಪ್ರಯತ್ನದ ಫಲವಾಗಿ ಇಂಗ್ಲಿಷ್ ಭಾಷೆ ಭಾರತೀಯರಿಗೂ ಬ್ರಿಟಿಷರಿಗೂ ಸಂಪರ್ಕ ಭಾಷೆಯಾಯಿತು. ನಂತರ ಇಂಗ್ಲಿಷ್ ಭಾಷೆಯನ್ನು ಕಲಿಕೆಯ ಭಾಷೆಯನ್ನಾಗಿ ಭಾರತೀಯರ ಮೇಲೆ ಹೇರಿದ ವ್ಯಕ್ತಿ ಬ್ರಿಟಿಷ್ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ. ಆಂಗ್ಲ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರುವ ಮೂಲಕ ಬ್ರಿಟಿಷ್ ಆಡಳಿತಕ್ಕೆ ಭಾರತೀಯರು ನೌಕರರಾಗಿ ಸೇರಿದ ಸಂಗತಿಯನ್ನು ಡಾ. ತಮಗೊಂಡ ಅವರು ತುಂಬ ರಸವತ್ತಾಗಿ ನಿರೂಪಿಸಿದ್ದಾರೆ.

ಮೂರನೆಯ ಅಧ್ಯಾಯದಲ್ಲಿ ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಅನೇಕ ‘ಕರ್ನಾಟಕ ಸರಕಾರ’ಗಳು ಬಂದಿವೆ. ಆದರೆ ಕನ್ನಡ ಸರಕಾರ ಬಂದಿಲ್ಲವೆಂಬುದು ಡಾ. ತಮಗೊಂಡ ಅವರ ಪ್ರಮುಖ ವಾದ. ಕರ್ನಾಟಕ ಏಕೀಕರಣವಾಗಿ ಹದಿನೇಳು ವರ್ಷಗಳ ನಂತರ ‘ಕರ್ನಾಟಕ ರಾಜ್ಯ’ ಎಂಬ ನಾಮಕರಣವಾದ ಘಟನೆಯನ್ನು ಡಾ. ತಮಗೊಂಡ ಅವರು ಸುದಿರ್ಘವಾಗಿ ಚರ್ಚಿಸಿದ್ದಾರೆ.

ಹಾಗೆಯೇ ರಾಮಕೃಷ್ಣ ಹೆಗಡೆ ಅವರು ಕನ್ನಡ ಕಾವಲು ಸಮಿತಿಯನ್ನು ರಚಿಸಿ, ಕನ್ನಡ ಭಾಷೆಯ ಬೆಳವಣಿಗೆಗೆ ಸರಕಾರದ ಮಟ್ಟದಲ್ಲಿ ಕ್ರಿಯಾತ್ಮಕವಾಗಿ ಕೆಲಸ ಮಾಡಿದ ವಿಷಯವನ್ನು ತಿಳಿಸುತ್ತ, ಈ ಕಾವಲು ಸಮತಿಗೆ ಅಧ್ಯಕ್ಷರಾದವರು ಮಾಡಿದ ಕಾರ್ಯಗಳನ್ನು ಪುನರಾವಲೋಕನ ಮಾಡಿದ್ದಾರೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀ ಸಿದ್ಧರಾಮಯ್ಯ (ಮಾಜಿ ಮುಖ್ಯಮಂತ್ರಿ) ಮೊಟ್ಟ ಮೊದಲು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಅವರು ಆಸಕ್ತಿಯನ್ನೇ ತೋರಿಸಲಿಲ್ಲ. ಒಬ್ಬ ತಹಶೀಲ್ದಾರ ತನಗೆ ಕುರ್ಚಿ ಕೊಡಲಿಲ್ಲವೆಂಬ ಸಂಗತಿಯನ್ನೇ ಮುಖ್ಯಮಂತ್ರಿ ಮುಂದೆ ಹೇಳಿ ನಗೆಪಾಟಲಾದ ಸಂಗತಿಯನ್ನು ಡಾ. ತಮಗೊಂಡ ಅವರು ನೇರವಾಗಿ ವಿವರಿಸಿದ್ದಾರೆ. ತದನಂತರ ‘ಕಾವಲು ಸಮಿತಿ’ಗೆ ಅಧ್ಯಕ್ಷರಾಗಿ ಬಂದ ಜ್ಞಾನದೇವ ದೊಡ್ಡಮೇಟಿ, ಕೆ.ಎಚ್.ಶ್ರೀನಿವಾಸ, ಜಿ. ನಾರಾಯಣ ಅವರಿಗೆ ಯಾವುದೇ ಕಾನೂನಾತ್ಮಕ ಅಧಿಕಾರವಿರಲಿಲ್ಲವೆಂದು ಅದಕ್ಕಾಗಿ ಕನ್ನಡ ಅನುಷ್ಠಾನಕ್ಕಾಗಿ ಅವರು ಮಾಡಿದ ಪ್ರಯತ್ನಗಳೂ ಅಷ್ಟೇನು ಪರಿಣಾಮಕಾರಿಯಾಗಲಿಲ್ಲವೆಂದು ಡಾ. ತಮಗೊಂಡ ಅವರು ಹೇಳುತ್ತಾರೆ.

ಜೆ.ಎಚ್.ಪಟೇಲ ಅವರು ಕನ್ನಡ ಕಾವಲು ಸಮಿತಿ ಬದಲಾಗಿ ಶಾಸನಬದ್ಧ ಅಧಿಕಾರವಿರುವ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ವನ್ನು ಪ್ರಾರಂಭಿಸಿದರು. ಅದಕ್ಕೆ ಮೊದಲ ಅಧ್ಯಕ್ಷರಾದವರು ಚಂಪಾ ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡಿದರು. ಚಂಪಾ ನಂತರ ಬಂದ ಬರಗೂರು ರಾಮಚಂದ್ರಪ್ಪ ಕನ್ನಡ ಅನುಷ್ಠಾನಕ್ಕಾಗಿ ಏನೂ ಮಾಡಲಿಲ್ಲ. ರಾಜಧಾನಿಯಲ್ಲಿಯೇ ಕುಳಿತು ಸುತ್ತೋಲೆ ಹೊರಡಿಸುವುದನ್ನು ಬಿಟ್ಟು ಅವರು ಏನನ್ನೂ ಮಾಡಲಿಲ್ಲವೆಂದು ಡಾ. ತಮಗೊಂಡ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷರಾಗಿ ಬಂದ ಡಾ. ಸಿದ್ಧಲಿಂಗಯ್ಯನವರ ಸಾಧನೆಯನ್ನೂ ಪರಮಾರ್ಶಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು ಎರಡು ಅವಧಿಗೆ ಅಧ್ಯಕ್ಷರಾಗಿ ಬಂದರೂ ಅಂಥ ಹೇಳಿಕೊಳ್ಳುವ ಯಾವುದೇ ಸಾಧನೆ ಮಾಡಲಿಲ್ಲವೆಂದು ಡಾ. ತಮಗೊಂಡ ಅವರು ನಿಷ್ಠುರವಾಗಿ ಬರೆದಿದ್ದಾರೆ.

ಎಸ್.ಜಿ. ಸಿದ್ಧರಾಮಯ್ಯನವರ ಕಾಲಕ್ಕೆ ಒಂದಿಷ್ಟು ಒಳ್ಳೆಯ ಕಾರ್ಯಗಳು ನಡೆದವು ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಡಾ. ತಮಗೊಂಡ ಅವರು ಒಪ್ಪಿಕೊಂಡಿದ್ದಾರೆ. ಹಿಂದಿನ ಎಲ್ಲ ಅಧ್ಯಕ್ಷರ ದೋಷ ದೌರ್ಬಲ್ಯಗಳನ್ನು ಕನ್ನಡದ ಬಗೆಗಿನ ಅವರ ನಿರಾಸಕ್ತಿಯನ್ನು ತಮ್ಮ ಪ್ರಖರ ಮಾತುಗಳಿಂದ ಖಂಡಿಸಿದ್ದಾರೆ.

ನಾಲ್ಕನೆಯ ಅಧ್ಯಾಯದಲ್ಲಿ ‘ಮಾತೃಭಾಷೆ’ ‘ಶಿಕ್ಷಣ ಮಾಧ್ಯಮ ಹಾಗೂ ಆಡಳಿತ ಭಾಷೆ’ ಕುರಿತು ಮಹರ್ಷಿ ಅರವಿಂದ, ರವೀಂದ್ರನಾಥ ಟ್ಯಾಗೋರ, ಗಾಂಧೀಜಿಯವರನ್ನು ಮೊದಲುಗೊಂಡು ಕನ್ನಡದ ಅನೇಕ ಚಿಂತಕರ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

ಐದನೆಯ ಅಧ್ಯಾಯದಲ್ಲಿ ಶಿಕ್ಷಣ ಮಾಧ್ಯಮ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ತಲಸ್ಪರ್ಶಿಯಾಗಿ, ಆಳವಾಗಿ, ಕೂಲಕಂಷವಾಗಿ ವಿವರಿಸಿದ್ದಾರೆ.

ಆರನೆಯ ಅಧ್ಯಾಯ ‘ಕನ್ನಡ ವ್ಯಾಮೋಹಿ ಆಂಗ್ಲ ಅಧಿಕಾರಿಗಳು’ ಹಾಗೂ ‘ಇಂಗ್ಲಿಷ್ ವ್ಯಾಮೋಹಿ ಕನ್ನಡ ಅಧಿಕಾರಿಗಳು’ ಎಂಬ ಅಧ್ಯಾಯ ತುಂಬ ಸ್ವಾರಸ್ಯಕರವಾಗಿದೆ. ಆಂಗ್ಲ ಅಧಿಕಾರಿಗಳು ಕನ್ನಡದ ಬಗೆಗೆ ಇಟ್ಟುಕೊಂಡ ಪ್ರೀತಿ ಕಾಳಜಿಗಳು ಅನ್ಯಾದೃಶವಾದುದು. ಹಾಗೆಯೇ ಕರ್ನಾಟಕದಲ್ಲಿಯೇ ಹುಟ್ಟಿ ಕನ್ನಡವನ್ನೇ ಕಲಿತು ಬೆಳೆದ ಕೆಲವು ಅಧಿಕಾರಿಗಳು ಇಂಗ್ಲಿಷ್ ಭಾಷೆಯ ಕಡು ವ್ಯಾಮೋಹಿಗಳಾಗಿ ಕನ್ನಡವನ್ನು ತಿರಸ್ಕರಿಸಿದ ಘಟನೆಗಳನ್ನು ವಿವರಿಸಿ, ಅವರ ನಿಲುವು ಆಲೋಚನೆಗಳನ್ನು ಯುಕ್ತವಾದ ಶಬ್ದಗಳಿಂದ ಖಂಡಿಸಿದ್ದಾರೆ.

ಏಳನೆಯ ಅಧ್ಯಾಯದಲ್ಲಿ ‘ಮಾತೃಭಾಷೆ-ಕನ್ನಡ-ಆಡಳಿತ ಭಾಷೆಯಾಗಿ ಅನುಷ್ಠಾನ ಅವಶ್ಯಕತೆ’ ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. ಇಲ್ಲಿಯವರೆಗಿನ ಸರಕಾರದ ಆಜ್ಞೆ-ಆದೇಶಗಳು-ಕುಂಟುತನಗಳು ಸಾಕು; ಅನುಷ್ಠಾನಕ್ಕೆ ಬೇಕು ಬದ್ಧತೆ ಬೇಕು ಎಂಬುದು ಲೇಖಕರ ಆಶಯವಾಗಿದೆ.

ಕರ್ನಾಟಕದಲ್ಲಿ ಕನ್ನಡ ತಲೆ ಎತ್ತಿ ನಿಲ್ಲುವ ಬಗೆ ಹೇಗೆ? ಎಂಬುದು ಎಂಟನೆಯ ಅಧ್ಯಾಯವಾಗಿದೆ. ಇಲ್ಲಿಯ ಕೆಲವು ವಿಚಾರಗಳು ಚಿಂತನಾರ್ಹವಾಗಿವೆ. ಕನ್ನಡ ಭಾಷೆಯ ಅಕ್ಷರಶಃ ಅನುಷ್ಠಾನಕ್ಕೆ ಬೇಕಾದ ಮಾರ್ಗೋಪಾಯಗಳನ್ನು ಡಾ. ತಮಗೊಂಡ ಅವರು ತಿಳಿಸಿಕೊಟ್ಟಿದ್ದಾರೆ.

ಒಂಬತ್ತನೆಯ ಅಧ್ಯಾಯದಲ್ಲಿ ಕನ್ನಡ ಭಾಷೆ ಉದ್ಧಾರಕರಾಗಿ ಶರಣರ ಕೊಡುಗೆಯನ್ನು ವಿವರಿಸಿದ್ದಾರೆ. ಪಂಪ-ರನ್ನ ಮೊದಲಾದವರು ಉತ್ತರ ಭಾರತದ ರಾಮಾಯಣ ಮಹಾಭಾರತಗಳನ್ನು ಅನುಕರಣೆ ಮಾಡಿ, ಕನ್ನಡದ ಅಸ್ತಿತ್ವವನ್ನು ಉಳಿಸಿಕೊಟ್ಟರು, ಆದರೆ ಅಸ್ಮಿತೆಯನ್ನು ಹಾಳು ಮಾಡಿದರು. ೧೨ನೇ ಶತಮಾನದ ಬಸವಾದಿ ಶರಣರು ಕನ್ನಡದ ಸ್ವಯಾರ್ಜಿತ ಸಂಪತ್ತೆನಿಸಿದ ವಚನಗಳ ಮೂಲಕ ಕನ್ನಡದ ಅಸ್ತಿತ್ವದ ಜೊತೆಗೆ ಅಸ್ಮಿತೆಯನ್ನೂ ಉಳಿಸಿದರು. ಹೀಗಾಗಿ ಕನ್ನಡ ಇಂದು ಸಶಕ್ತ ಭಾಷೆಯಾಗಿ ಉಳಿಯುವಲ್ಲಿ ಶರಣರ ಕಾಣಿಕೆ-ಕೊಡುಗೆ ಅಪಾರವಾದುದು ಎಂಬುದನ್ನು ಡಾ. ತಮಗೊಂಡ ಅವರು ಅತ್ಯಂತ ಪರಿಣಾಮಕಾರಿ ವಿವರಿಸಿದ್ದಾರೆ.

ಕೊನೆಯ ಅಧ್ಯಾಯದಲ್ಲಿ ‘ಲೇಖಕನ ನುಡಿಸೇವೆ : ಆಸ್ಪತ್ರೆಗಳ ಆಡಳಿತದಲ್ಲಿ ಕನ್ನಡ ಅನುಷ್ಠಾನ’ ಕುರಿತು ಡಾ. ತಮಗೊಂಡ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಲೇ ಕನ್ನಡ ಭಾಷೆಯ ಉಳಿವಿಗಾಗಿ ಮಾಡಿದ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಕೊಟ್ಟಿದ್ದಾರೆ. ತಮ್ಮ ಅನೇಕ ಜೀವನಾನುಭವಗಳನ್ನು ಓದುಗರೊಂದಿಗೆ ಆಪ್ತವಾಗಿ ಹಂಚಿಕೊಂಡಿದ್ದಾರೆ. ಕನ್ನಡದ ಬಗ್ಗೆ ತಮಗಿರುವ ಅಪರಿಮಿತವಾದ ಕಳಕಳಿ, ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಕೃತಿಗೆ ದಲಿತ ಕವಿ ಡಾ. ಸಿದ್ಧಲಿಂಗಯ್ಯ ಮುನ್ನುಡಿ ತೋರಣ ಕಟ್ಟಿದ್ದಾರೆ. ಪಾಟೀಲ ಪುಟ್ಟಪ್ಪನವರ ಬೆನ್ನುಡಿ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಡಾ. ತಮಗೊಂಡ ಅವರು ಮೂಲತಃ ಸಾಹಿತಿಗಳಲ್ಲ, ಇಲ್ಲಿ ವರ್ಣರಂಜಿತ ಭಾಷೆಯ ಬಳಕೆಯಾಗಿಲ್ಲ, ಹೇಳಬೇಕಾದುದನ್ನು ನೇರವಾಗಿ-ನಿರ್ಭೀತವಾಗಿ ಅಭಿವ್ಯಕ್ತಿಸಿದ್ದಾರೆ. ಕೆಲವು ಕಡೆ ಕರ್ತೃ-ಕರ್ಮಣಿ-ಕ್ರಿಯಾಪದಗಳು ಲೋಪ-ಆಗಮ-ಆದೇಶಗಳಾಗಿದ್ದರೂ ಓದುಗರಿಗೆ ಬೇಸರವೆನಿಸುವುದಿಲ್ಲ. ಹೇಳಬೇಕಾದ ಅಂಕಿ ಅಂಶಗಳನ್ನು, ಹೇಳಿಕೆಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಕನ್ನಡ ಭಾಷೆಯು ಆಡಳಿತ ಭಾಷೆ- ಶೈಕ್ಷಣಿಕ ಭಾಷೆ-ತಂತ್ರಜ್ಞಾನದ ಭಾಷೆಯಾಗಿ ಬೆಳಗಬಲ್ಲ ಸಕಲ ಸಲ್ಲಕ್ಷಣಗಳನ್ನು ಹೊಂದಿದ್ದರೂ, ಅತುಲ ಸಾಮರ್ಥ್ಯವನ್ನೂ ಹೊಂದಿದ್ದರೂ, ರಾಜಕಾರಣಿಗಳ-ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನುಷ್ಠಾನದಲ್ಲಿ ತೊಡಕಾಗಿರುವುದನ್ನು ಡಾ. ತಮಗೊಂಡ ಅವರು ಸೂಕ್ತವಾಗಿ ವಿಶ್ಲೇಷಿಸಿದ್ದಾರೆ. ಇವರ ಈ ಚಿಂತನೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾದ ಅನಿವರ‍್ಯತೆ ಇದೆ.

ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಅತ್ಯುನ್ನತ ಸ್ಥಾನವಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ನಮ್ಮ ಸಾಹಿತಿಗಳು ಕನ್ನಡದ ಘನತೆ ಮತ್ತು ಗೌರವವನ್ನು ಹೆಚ್ಚಿಸಿದ್ದಾರೆ. ಜೊತೆಗೆ ಶಾಸ್ತ್ರೀಯ ಸ್ಥಾನಮಾನವೂ ನಮ್ಮ ಭಾಷೆಗೆ ಲಭ್ಯವಾಗಿರುವುದರಿಂದ ಬಂಗಾರಕ್ಕೆ ಕುಂದಣವಿಟ್ಟಂತಾಗಿದೆ. ನಮ್ಮ ಕನ್ನಡ ಭಾಷೆ ತುಂಬ ಮೃದುವಾದುದು. ಹಾಗೆಯೇ ಮಧುರವಾದುದು. ೧೭ನೇ ಶತಮಾನದ ಕವಿ ಮಹಲಿಂಗರಂಗನು- ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ? ಎಂದು ಅಂದೇ ಹೇಳಿದ್ದಾನೆ. ಆಧುನಿಕ ಕವಿ ಬೆಟಗೇರಿ ಕೃಷ್ಣಶರ್ಮರು ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಹೇಳಿ ನಮ್ಮ ಭಾಷೆಯನ್ನು ಅಮೃತಕ್ಕೆ ಹೋಲಿಸಿದ್ದಾರೆ. ಪಂಪ-ರನ್ನ, ಬಸವಾದಿ ಶರಣರು, ದಾಸ ಶ್ರೇಷ್ಠರು, ಹರಿಹರ ರಾಘವಾಂಕ, ಕುಮಾರವ್ಯಾಸ ಮುಂತಾದ ಪ್ರಾಚೀನ ಕವಿಗಳಿಂದ, ಕುವೆಂಪು, ದ.ರಾ.ಬೇಂದ್ರೆ, ಚನ್ನವೀರ ಕಣವಿ, ಜಿ.ಎಸ್. ಶಿವರುದ್ರಪ್ಪ, ಕೆ.ಎಸ್.ನರಸಿಂಹಸ್ವಾಮಿ ಮುಂತಾದ ಆಧುನಿಕ ಕವಿ ಸಾಹಿತಿಗಳಿಂದ ನಮ್ಮ ಭಾಷೆ ಸಮೃದ್ಧವಾಗಿದೆ. ಇಂತಹ ಕನ್ನಡ ಭಾಷೆಯ ಬಗ್ಗೆ ನಮ್ಮಲ್ಲಿ ಪ್ರೀತಿ ಅಭಿಮಾನಗಳು ಉಕ್ಕಿ ಹರಿಯಬೇಕು. ಯಾವುದೇನೇ ಇರಲಿ ಪ್ರೀತಿಯಂತಹ ವಸ್ತು, ಭವದಲ್ಲಿ ಕಾಣೆ ಮನಗಂಡ ಮಾತು ಎಂಬ ಮಧುರಚೆನ್ನರ ನುಡಿಯನ್ನು ಸ್ಮರಿಸಿಕೊಂಡು ನಮ್ಮ ಭಾಷೆಯ ಬಗ್ಗೆ ಪ್ರೀತಿಯನ್ನು ತೋರಿದಲ್ಲಿ ಕರ್ನಾಟಕದಲ್ಲಿ ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ. ಏಕೆಂದರೆ ಪ್ರೀತಿಯು ಎಲ್ಲರನ್ನೂ ಎಲ್ಲವನ್ನೂ ಬೆಳೆಸುತ್ತದೆ. ಆದರೆ ಇಂದು ದುರ್ದೈವದಿಂದ ಕರ್ನಾಟಕದಲ್ಲಿಯೇ ಕನ್ನಡವನ್ನು ರಕ್ಷಿಸಿರಿ ಎಂದು ಹೇಳುವ ಕಾಲ ಬಂದೊದಗಿದೆ. ‘ಕನ್ನಡಕೆ ಹೋರಾಡು ಕನ್ನಡದ ಕಂದ’ ಎಂದು ಕವಿ ಕುವೆಂಪು ಹೇಳಿದ್ದರು, ಆದರೆ ‘ಕನ್ನಡವ ಕಾಪಾಡು ಕನ್ನಡಿಗರಿಂದ’ ಎಂದು ನಾವು ಹೇಳಬೇಕಾಗಿದೆ. ಅತಿಯಾದ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡವನ್ನು ಪಾತಾಳಕ್ಕೆ ತಳ್ಳಬಾರದು. ಕನ್ನಡಕ್ಕೆ ಕರ್ನಾಟಕವನ್ನು ಬಿಟ್ಟರೆ ಬೇರೆಲ್ಲಿಯೂ ಸ್ಥಳವಿಲ್ಲ. ಹಾಗಾಗಿ ಅದು ಉಳಿದರೆ ಕರ್ನಾಟಕದಲ್ಲಿಯೇ ಉಳಿಯಬೇಕು. ಬೆಳೆದರೆ ಕರ್ನಾಟಕದಲ್ಲಿಯೇ ಬೆಳೆಯಬೇಕು. ಆದ್ದರಿಂದ ಕರ್ನಾಟಕ ಕರಗಿ ಹೋಗದಂತೆ ನೋಡಿಕೊಳ್ಳಬೇಕಾದ ನಾವು ಕನ್ನಡವು ಕರ್ನಾಟಕದಲ್ಲಿ ಕಳೆದು ಹೋಗದಂತೆ ನೋಡಿಕೊಳ್ಳಬೇಕು ಎಂಬ ಆಶಯವನ್ನು ಡಾ. ತಮಗೊಂಡ ಅವರ ಪ್ರಸ್ತುತ ಕೃತಿಯಲ್ಲಿ ಕಾಣಬಹುದು.

ಡಾ. ತಮಗೊಂಡ ಅವರ ಮಾಗಿದ ಈ ಇಳಿವಯಸ್ಸಿನಲ್ಲಿಯೂ ಬತ್ತದ ಉತ್ಸಾಹದಿಂದ ಈ ಕೃತಿಯನ್ನು ರಚಿಸಿದ್ದಾರೆ. ಇವರ ಈ ನಿರಂತರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಮತ್ತೊಮ್ಮೆ ವಂದಿಸಿ, ಈ ಕೃತಿ ರಚನೆಗಾಗಿ ಅವರನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group