spot_img
spot_img

ಹೊಸ ಪುಸ್ತಕ ಓದು: ಶಿವ ಸಂಪದ (ಡಾ. ಸಿ.ಶಿವಕುಮಾರಸ್ವಾಮಿ ಷಷ್ಟ್ಯಬ್ದಿ ಅಭಿನಂದನಾ ಸಂಪುಟ)

Must Read

- Advertisement -

ಶಿವ ಸಂಪದ (ಡಾ. ಸಿ.ಶಿವಕುಮಾರಸ್ವಾಮಿ ಷಷ್ಟ್ಯಬ್ದಿ ಅಭಿನಂದನಾ ಸಂಪುಟ)

ಸಂಪಾದಕರು: ಡಾ. ಎಂ. ಶಿವಕುಮಾರ ಸ್ವಾಮಿ, ಡಾ. ಬಿ. ನಂಜುಂಡಸ್ವಾಮಿ

ಪ್ರಕಾಶಕರು: ಶ್ರೀ ವೀರಭದ್ರಸ್ವಾಮಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು, ೨೦೨೨

- Advertisement -

ನೂರು-ನೂರಿಪ್ಪತ್ತು ವರ್ಷಗಳ ಹಿಂದೆ ಆಂಗ್ಲರ ಆಡಳಿತ ಕಾಲದಲ್ಲಿ ವೀರಶೈವರು ಶೂದ್ರರು ಎಂದು ಪರಿಗಣಿಸಿದ ಸಂದರ್ಭದಲ್ಲಿ ಶ್ರೇಣೀಕೃತ ಸಮಾಜದಲ್ಲಿ ವೀರಶೈವ ಸಮುದಾಯವು ಹಿಂದೂ ಪರಂಪರೆಯಲ್ಲಿ ಶ್ರೇಷ್ಠವಾದುದು ಎಂದು ಸಿದ್ಧಪಡಿಸಬೇಕಾದ ಒಂದು ಅನಿವರ್ಯತೆ ನಿರ್ಮಾಣವಾಗಿತ್ತು.

ಆ ಸಂದರ್ಭದಲ್ಲಿ ಎನ್. ಆರ್. ಕರಿಬಸವ ಶಾಸ್ತ್ರಿಗಳು, ಪಿ. ಆರ್. ಕರಿಬಸವ ಶಾಸ್ತ್ರಿಗಳು, ಯಜಮಾನ ವೀರಸಂಗಪ್ಪನವರು, ವಾರದ ಮಲ್ಲಪ್ಪನವರು ಮೊದಲಾದ ಮಹನೀಯರು ತಮ್ಮ ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಯಿಂದ ನೂರಾರು ವೀರಶೈವ ಸಂಸ್ಕೃತ ಗ್ರಂಥಗಳನ್ನು ಶೋಧಿಸಿ, ಸಂಪಾದಿಸಿ, ಪ್ರಕಟಿಸುವ ಮಹಾಮಣಿಹವನ್ನು ಕೈಕೊಂಡಿದ್ದರು.

ಆ ಎಲ್ಲ ಪ್ರಾತಃಸ್ಮರಣೀಯ ಮಹನೀಯರ ಪರಿಶ್ರಮದ ಫಲವಾಗಿ ನಾವಿಂದು ಸಮಾಜದಲ್ಲಿ ಒಂದು ಘನತೆ ಗೌರವಗಳಿಂದ ಗುರುತಿಸಿಕೊಳ್ಳುವಂತಾಯಿತು. ಸಂಸ್ಕೃತ ದೇವ ಭಾಷೆ. ಅದು ಮೇಲ್ವರ್ಗದವರ ಭಾಷೆ ಎಂಬ ಅಭಿಪ್ರಾಯವನ್ನು ಬದಲಾಯಿಸಿ, ಸಕ್ಕರೆ ಕರೆಡೆಪ್ಪನವರು ಬಳ್ಳಾರಿಯಲ್ಲಿ ಮೊಟ್ಟಮೊದಲು ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭ ಮಾಡುವ ಮೂಲಕ ವೀರಶೈವ-ಲಿಂಗಾಯತರು ಸಂಸ್ಕೃತವನ್ನು ಕಲಿಯಲು ಒಂದು ಅಪೂರ್ವ ಅವಕಾಶವನ್ನು ಕಲ್ಪಿಸಿಕೊಟ್ಟರು. ಅವರ ಸಂಸ್ಕೃತ ಪಾಠಶಾಲೆಯಲ್ಲಿ ಮೂಡಿಬಂದ ಅಚ್ಚಮೌಕ್ತಿಕ ರತ್ನಗಳಲ್ಲಿ ಒಬ್ಬರು ಇಳಕಲ್ ವಿಜಯಮಹಾಂತ ಶಿವಯೋಗಿಗಳು. ನಂತರ ವೀರಶೈವ ಮಠಗಳಲ್ಲಿ ಸಂಸ್ಕೃತ ಅಧ್ಯಯನ ಪರಂಪರೆ ಪ್ರಾರಂಭವಾಯಿತು.

- Advertisement -

ಸ್ವಾತಂತ್ರ್ಯಾನಂತರ ಸಂಸ್ಕೃತ ಭಾಷೆಯ ಬಗೆಗಿನ ಒಲವು ಕಡಿಮೆಯಾಗಿ, ಸಂಸ್ಕೃತ ಭಾಷೆಯಲ್ಲಿದ್ದ ಅಪೂರ್ವ ಕೃತಿಗಳು ಕಣ್ಮರೆಯಾಗುತ್ತಿರುವ ಸಂಕ್ರಮಣ ಘಟ್ಟದಲ್ಲಿ ಡಾ. ಸಿ. ಶಿವಕುಮಾರ ಸ್ವಾಮಿ ಅವರಂತಹ ವಿದ್ವಜ್ಜನರು ಅದಕ್ಕೊಂದು ಗಟ್ಟಿಯಾದ ನೆಲೆಯನ್ನು ಒದಗಿಸಿದರು. ಡಾ. ಸಿ. ಶಿವಕುಮಾರ ಸ್ವಾಮಿ ಅವರು ನಮ್ಮ ದಿನಮಾನದ ಶ್ರೇಷ್ಟ ಸಂಸ್ಕೃತ ವಿದ್ವಾಂಸರು. ಇತ್ತೀಚೆಗೆ ಅವರು ಕುವೆಂಪು ಭಾಷಾ ಭಾರತಿಯಿಂದ ೨೫ ಮೌಲಿಕ ಸಂಸ್ಕೃತ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದು ಕನ್ನಡಿಗರ ಸೌಭಾಗ್ಯವೆಂದೇ ಹೇಳಬೇಕು.

ಇಂತಹ ಹಿರಿಯ ವಿದ್ವಾಂಸರಿಗೆ ಅರವತ್ತು ವಸಂತಗಳು ಸಂದ ಸಂದರ್ಭದಲ್ಲಿ ಅವರ ಶಿಷ್ಯರು-ಅಭಿಮಾನಿಗಳು ಪ್ರೀತಿಪೂರ್ವಕವಾಗಿ ಅರ್ಪಿಸಿದ ‘ಶಿವಸಂಪದ’ ಅಭಿನಂದನ ಗ್ರಂಥ ಇತ್ತೀಚೆಗೆ ಕನ್ನಡದಲ್ಲಿ  ಬಂದ ಒಂದು ಅಪರೂಪದ ಅಮೂಲ್ಯ ಆಕರ ಗ್ರಂಥವಾಗಿದೆ. ಇಂದು ನೂರಾರು ಅಭಿನಂದನ ಗ್ರಂಥಗಳು ಪ್ರಕಟಗೊಳ್ಳುತ್ತಿವೆ. ಆಯಾ ವ್ಯಕ್ತಿಯ ವೈಶಿಷ್ಟ್ಯಗಳನ್ನು ಕುರಿತು ಬರುವ ಅಭಿನಂದನ ಗ್ರಂಥಗಳು ಆ ವ್ಯಕ್ತಿಗಳ ಬದುಕಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ಡಾ. ಸಿ. ಶಿವಕುಮಾರ ಸ್ವಾಮಿ ಅವರ ಅಭಿನಂದನ ಗ್ರಂಥ ಒಂದು ನೂರು ಮೌಲಿಕ ಗ್ರಂಥಗಳ ಪರಿಚಯ-ವಿಮರ್ಶೆಯ ಒಳನೋಟಗಳನ್ನು ಹೊಂದಿರುವುದು ಗಮನಾರ್ಹ ಸಂಗತಿಯಾಗಿದೆ. 

ರಾಮನಗರ ಜಿಲ್ಲೆಯ ದೊಡ್ಡಗಂಗವಾಡಿ ಗ್ರಾಮದಲ್ಲಿ ಜನಿಸಿದ ಡಾ. ಸಿ. ಶಿವಕುಮಾರ ಸ್ವಾಮಿ ಅವರು ಸಿದ್ಧಗಂಗಾ ಮಠದ ವಿದ್ಯಾರ್ಥಿಯಾಗಿ ಸಂಸ್ಕೃತ ಅಧ್ಯಯನವನ್ನು ಮಾಡಿದವರು. ಬೆಂಗಳೂರಿನ ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೂವತ್ತಾರು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ೨೦೧೮ರಲ್ಲಿ ವೃತ್ತಿಜೀವನದಿಂದ ನಿವೃತ್ತರಾದವರು. 

ಕನ್ನಡ-ಸಂಸ್ಕೃತ-ಇಂಗ್ಲಿಷ್ ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಶಿವಕುಮಾರ ಸ್ವಾಮಿ ಅವರು ಮೂರೂ ಭಾಷೆಗಳಲ್ಲಿ ಗ್ರಂಥ ರಚನೆ ಮಾಡಿರುವುದು ಅವರ ವಿದ್ವತ್ತು ಪಾಂಡಿತ್ಯ ಪ್ರತಿಭೆಗಳಿಗೆ ಉಜ್ವಲ ನಿದರ್ಶನವೆನಿಸಿದೆ. ‘ಕಾಳಿದಾಸನ ಮೇಘದೂತ’, ‘ಶ್ರೀಹರ್ಷನ ರತ್ನಾವಳಿ, ಭಾಸನ ಪಂಚರಾತ್ರಮ್’, ಅಶ್ವಘೋಷನ ‘ಸೌಂದರನಂದಮ್’, ಲಬ್ದಪ್ರಣಾಶಮ್’, ‘ವಿಶ್ವಗುಣಾದರ್ಶ ಚಂಪೂ’, ಬಾಣಭಟ್ಟನ ‘ಹರ್ಷಚರತೆ’, ಭಾಸನ ‘ಪ್ರತಿಜ್ಞಾಯೌಗಂಧರಾಯಣಮ್’ ಮೊದಲಾದ ಕೃತಿಗಳು ಅವರಿಗೆ ರಾಷ್ಟಿçÃಯಮಟ್ಟದ ಖ್ಯಾತಿಯನ್ನು ತಂದುಕೊಟ್ಟಿವೆ. 

ಡಾ. ಶಿವಕುಮಾರ ಸ್ವಾಮಿ ಅವರ ಬಹುಪಾಲ ಸಾಹಿತ್ಯಸೇವೆ ಸಂದದ್ದು ವೀರಶೈವ ಸಾಹಿತ್ಯ ಸಂಶೋಧನೆಗೆ. ಮಾಯಿದೇವನ ‘ಅನುಭವ ಸೂತ್ರ’ ಮೊದಲು ಮಾಡಿಕೊಂಡು ‘ಶಕ್ತಿವಿಶಿಷ್ಟಾದ್ವೈತತ್ವತ್ರಯ ವಿಮರ್ಶೆ’ ವರೆಗೆ ಅನೇಕ ಸಂಸ್ಕೃತ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದಿಸಿ, ಕನ್ನಡ ಸಾಹಿತ್ಯದ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ.

ಅನೇಕ ಶಿವಾಗಮ ಗ್ರಂಥಗಳನ್ನು ಸಂಪಾದಿಸಿ, ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಇವರು ರಚಿಸಿದ ‘ವೀರಶೈವ ವಿವೇಚನೆ’ ಕೃತಿಗೆ ಸಂಸ್ಕೃತ ವಿಶ್ವವಿದ್ಯಾಲಯದ ಸಂಶೋಧನಾ ಪ್ರಶಸ್ತಿ, ‘ವೇದಾಗಮಗಳು ಮತ್ತು ಚೆನ್ನಬಸವಣ್ಣ’ ಕೃತಿಗೆ ಸುತ್ತೂರಿನ ಶ್ರೀಮಠ ನೀಡುವ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’, ಅವರ ಅನುವಾದ ಸೇವೆಗೆ ‘ಕುವೆಂಪು ಭಾಷಾ ಭಾರತಿ ಗೌರವ ಪುರಸ್ಕಾರ’ಗಳು ದೊರೆತಿವೆ. ಇಂತಹ ಬಹುಶ್ರುತ ವಿದ್ವಾಂಸರಿಗೆ ಸಮರ್ಪಿಸಿದ ‘ಶಿವ ಸಂಪದ’  ಅವರ ಬದುಕು-ಬರಹಗಳ ಚಿಂತನೆಯ ಜೊತೆಗೆ ನೂರು ವೀರಶೈವ ಗ್ರಂಥಗಳ ಅವಲೋಕನವನ್ನು ಒಳಗೊಂಡಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ. 

ಅಭಿನಂದನ ಗ್ರಂಥವು ಒಟ್ಟು ನಾಲ್ಕು ಭಾಗಗಳಲ್ಲಿ ವಿಸ್ತಾರಗೊಂಡಿದೆ. ಮೊದಲನೆಯ ಭಾಗದಲ್ಲಿ ಡಾ. ಶಿವಕುಮಾರ ಸ್ವಾಮಿ ಅವರನ್ನು ಕುರಿತು ನಮ್ಮ ನಾಡಿನ ಎಲ್ಲ ಹಿರಿಯ ಪರಮಪೂಜ್ಯರು ಬರೆದ ಆಶೀರ್ವಚನ ಸಂದೇಶಗಳಿಗೆ. ಎರಡನೆಯ ಭಾಗದಲ್ಲಿ ಡಾ.ಶಿವಕುಮಾರ ಸ್ವಾಮಿ ಅವರ ಆತ್ಮೀಯರು ಬರೆದ ಆಪ್ತ ಒಡನಾಟದ ಕ್ಷಣಗಳನ್ನು ಮೆಲಕು ಹಾಕುವ ಲೇಖನಗಳಿವೆ. ಡಾ. ಚಿದಾನಂದಮೂರ್ತಿ, ಜಿ. ಎಸ್. ಸಿದ್ಧಲಿಂಗಯ್ಯ, ಸಿ. ಮಹಾದೇವಪ್ಪ, ಎಂ.ಜಿ.ನಾಗರಾಜ್ ಮೊದಲಾದ ಹಿರಿಯ ವಿದ್ವಾಂಸರು ಬರೆದ ಲೇಖನಗಳಲ್ಲಿ ಡಾ. ಸ್ವಾಮಿ ಅವರ ಸಂಶೋಧನಾ ವಿಚಕ್ಷಣತೆ, ಪಾಂಡಿತ್ಯದ ಬೆರಗು ಗೋಚರಿಸುತ್ತದೆ. ಒಟ್ಟು ೬೦ ಲೇಖನಗಳು ಡಾ. ಶಿವಕುಮಾರ ಸ್ವಾಮಿ ಅವರ ಸಾಧನಾ ಸಂಪದವನ್ನು ತಿಳಿಸಿಕೊಡುತ್ತವೆ.

ಮೂರನೆಯ ಭಾಗ- ಡಾ. ಶಿವಕುಮಾರ ಸ್ವಾಮಿ ಅವರ ಕೃತಿಗಳ ವಿಮರ್ಶಾತ್ಮಕ ಚಿಂತನೆಯ ಲೇಖನಗಳನ್ನು ಒಳಗೊಂಡಿದೆ. ಈ ಭಾಗದಲ್ಲಿ ಅವರು ರಚಿಸಿದ ಕೆಲವು ಕೃತಿಗಳ ವಿವರ ಮಾತ್ರ ಇಲ್ಲಿದೆ. ಎಲ್ಲ ಕೃತಿಗಳ ಪರಿಚಯ-ವಿಮರ್ಶೆಯ ಲೇಖನಗಳಿರಬೇಕಾಗಿತ್ತು. ಅದೊಂದು ಕೊರತೆ ಇಲ್ಲಿದೆ.

ನಾಲ್ಕನೆಯ ಭಾಗ ಶಾಸ್ತç ಸಂಪದ ಅತ್ಯಂತ ಮೌಲಿಕವಾಗಿದೆ. ೧೦ ಆಗಮ ಕೃತಿಗಳು, ೧೨ ಶೈವೋಪನಿಷತ್ತುಗಳು, ಏಳು ಉಪನಿಷತ್ತು ವ್ಯಾಖ್ಯಾನ ಕೃತಿಗಳು, ಸಿದ್ಧಾಂತ ಶಿಖಾಮಣಿ, ಕ್ರಿಯಾಸಾರ, ಶಿವಾದ್ವೈತ ದರ್ಪಣ, ಶಿವಯೋಗ ಪ್ರದೀಪಿಕೆ, ಕೈವಲ್ಯಸಾರ, ಶೈವ ರತ್ನಾಕರ, ಶಿವತತ್ವ ರತ್ನಾಕರ, ಶಿವಾದ್ವೈತ ಪರಿಭಾಷಾ, ಶಿವಸಿದ್ಧಾಂತ ಚಂದ್ರಿಕಾ, ವೀರಶೈವೇಂದು ಶೇಖರ, ಲಿಂಗಧಾರಣ ಚಂದ್ರಿಕಾ, ವೀರಶೈವ ಸದಾಚಾರ ಸಂಗ್ರಹ, ಏಕೋತ್ತರ ಶತಸ್ಥಲಸಾರಿಚಿಂತಾಮಣಿ, ಶ್ರೀ ಬಸವೋದಾಹರಣಮ್, ಕಂಚಿ ಶಂಕರಾರಾಧ್ಯರ ಬಸವ ಪುರಾಣಮ್, ವ್ಯಾಸೋಕ್ತ ಬಸವ ಪುರಾಣ, ಬಸವ ಭಾಸ್ಕರೋದಯ, ಬಸವಗೀತಾ, ಬಸವೇಶ್ವರ ಶತಕಂ, ಅಕ್ಕಮಹಾದೇವಿ ಶತಕಂ ಮೊದಲಾದ ನೂರು ಕೃತಿಗಳ ಸಮಗ್ರವೂ ಸಮೃದ್ಧವೂ ಆದ ಮಾಹಿತಿಯನ್ನು ಒಳಗೊಂಡ ಲೇಖನಗಳಿವೆ. 

‘ಷಟ್ಸ್ಥಲ ಜ್ಞಾನ ಚಿಂತಾಮಣಿ’ ವಿರಕ್ತ ತೋಂಟದಾರ್ಯ ಬರೆದ ಒಂದು ಅಪರೂಪದ ಅಪ್ರಕಟಿತ ಕೃತಿ. ಈ ಕೃತಿಯ  ಪರಿಚಯವೂ ಇಲ್ಲಿದೆ. ಈ ಕೃತಿ ಈವರೆಗೆ ಪ್ರಕಟನೆಯ ಭಾಗ್ಯವನ್ನೇ ಕಂಡಿಲ್ಲ. ಈಗ ಡಾ. ಶಿವಕುಮಾರ ಸ್ವಾಮಿ ಅವರೇ ಅದನ್ನು ಸಂಪಾದಿಸಿ ಪ್ರಕಟಿಸುವ ಸಿದ್ಧತೆಯಲ್ಲಿದ್ದಾರೆ.

ಗ್ರಂಥದ ಪ್ರಾರಂಭದಲ್ಲಿಯೇ ‘ಅಭಿನಂದಿತರ ಸ್ಮೃತಿಪಟಲದಿಂದ…’ ಎಂಬ ಬರೆಹವು ಡಾ. ಶಿವಕುಮಾರ ಸ್ವಾಮಿ ಅವರ ಸಂಕ್ಷಿಪ್ತ ಆತ್ಮಚರಿತ್ರೆಯಾಗಿದ್ದರೂ ಸಮಗ್ರ ಮತ್ತು ಸಮೃದ್ಧ ವಿವರಗಳನ್ನು ಒಳಗೊಂಡಿದೆ. ತಾವು ಮಾಡಿದ ಸಾಹಿತ್ಯ ಶೈಕ್ಷಣಿಕ ಸೇವಾ ವಿವರಗಳನ್ನು ತುಂಬ ಆಪ್ತವಾಗಿ ಹೃದಯರ್ಶಿಯಾಗಿ ವಿನಮ್ರಭಾವದಿಂದ ಕಟ್ಟಿಕೊಟ್ಟಿದ್ದಾರೆ. ಎಲ್ಲಿಯೂ ಅತಿಯಾದ ಆತ್ಮಪ್ರಶಂಸೆಗೆ ಒಳಗಾಗದೆ, ಸಮಚಿತ್ತದಿಂದ ಕೂಡಿದ ಸಮತೂಕದ ಬರೆಹ ಇದಾಗಿದೆ.

ವೀರಶೈವ ಸಾಹಿತ್ಯವನ್ನು ಅಧ್ಯಯನ ಮಾಡುವ ಯಾರೇ ಆಗಲಿ ಈ ಶಿವ ಸಂಪದ ಕೃತಿಯನ್ನು ಗಮನಿಸದೆ ಮುಂದೆ ಹೋಗಲಾರರು. ಅಷ್ಟರಮಟ್ಟಿಗೆ ಇದು ವಿಪುಲ ಆಕರ ಸಾಮಗ್ರಿಯನ್ನು ಒದಗಿಸುವ ಗ್ರಂಥವಾಗಿದೆ. ಈ ಅಭಿನಂದನ ಕೃತಿ ಒಂದು ಕಿರು ವೀರಶೈವ ಸಾಹಿತ್ಯದ ವಿಶ್ವಕೋಶವಾಗಿ ಮೂಡಿಬಂದಿದೆ. 

ಇಂತಹ ಒಂದು ಮೌಲಿಕ ಅಭಿನಂದನ ಸಂಪುಟದಲ್ಲಿ ನಾನು ಬರೆದ ‘ವಾರದ ಮಲ್ಲಪ್ಪನವರ ವೀರಶೈವ ಲಿಂಗೀಬ್ರಾಹ್ಮಣ ಗ್ರಂಥಮಾಲಾ’ ಎಂಬ ಲೇಖನವೂ ಸೇರ್ಪಡೆಯಾಗಿರುವುದು ನನ್ನ ಸೌಭಾಗ್ಯವೆಂದು ಭಾವಿಸಿರುವೆ. 

ಈ ಅಭಿನಂದನ ಗ್ರಂಥದ ಸಿದ್ಧತೆಯ ಹಿಂದೆ ಡಾ. ಎಂ. ಶಿವಕುಮಾರ ಸ್ವಾಮಿ ಡಾ. ಬಿ. ನಂಜುಂಡಸ್ವಾಮಿ, ಸಾಸಲು ಜೆ. ವಿಶ್ವನಾಥ, ಸೆಲ್ವಪ್ಪ, ಬಿ. ಎಸ್. ಜಗದೀಶ್ ಅವರ ಶ್ರಮ ಶ್ರದ್ಧೆಗಳು ಅನನ್ಯ. 

೭೧೨ ಪುಟಗಳ ಬೃಹತ್ ಅಭಿನಂದನ ಸಂಪುಟವನ್ನು ಸಂಪಾದಿಸಿದ ಎಲ್ಲ ಹಿರಿಯರಿಗೆ, ಪ್ರಕಟಿಸಿದ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಪೂಜ್ಯರಿಗೆ, ಅಭಿನಂದಿತರಾದ ಡಾ. ಶಿವಕುಮಾರ ಸ್ವಾಮಿ ಅವರಿಗೆ ಹೃತ್ಪೂರ್ವಕವಾದ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group