spot_img
spot_img

ಸಾಮಾಜಿಕ ಪೌರಾಣಿಕ ನಾಟಕ ಎರಡಕ್ಕೂ ಸೈ ರಮೇಶ್.ಕೆ

Must Read

- Advertisement -

ಆಕಸ್ಮಿಕವಾಗಿ ನಿರ್ದೇಶಕರಾದ ಎಂ.ಪಿ.ಪದ್ಮರಾಜ್‍ರವರಿಂದ ಪ್ರಥಮವಾಗಿ ಹೊಳೆನರಸೀಪುರದಲ್ಲಿ ಪೊಲೀಸ್ ಸಿಬ್ಬಂದಿಯವರ ಕುರುಕ್ಷೇತ್ರ ನಾಟಕದಲ್ಲಿ ಸೂತ್ರದಾರಿ ಮತ್ತು ವಿಧುರನ ಪಾತ್ರದಿಂದ ಪ್ರಾರಂಭಿಸಿ ದಿವಂಗತ ರಂಗಪ್ಪದಾಸ್‍ರ ನಿರ್ದೇಶನದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ತ್ರಿಜನ್ಮ ಮೋಕ್ಷದಲ್ಲಿ ಶ್ರೀ ಕೃಷ್ಣನ ಪಾತ್ರ ನಿರ್ವಹಿಸಿ ಕಲಾಜನ್ಮ ಪಾವನಗೊಳಿಸಿಕೊಂಡೆ ಎಂದರು ನಿವೃತ್ತ ಎ.ಎಸ್.ಐ. ರಮೇಶ್ ಕೆ.

ಹಿಂದೊಮ್ಮೆ ಇವರ ಸೂತ್ರದಾರಿ ಪಾತ್ರದ ಎರಡು ಹಾಡು ಕೇಳಿದ್ದೆ. ಆ ಶಿವ ಹಾಡಲು ತಕ್ಕಮಟ್ಟಿನ ಉತ್ತಮ ಕಂಠ ಸಿರಿ ಕೊಟ್ಟಿದ್ದಾನೆ. ಅದನ್ನು ದುಡಿಸಿಕೊಳ್ಳಬೇಕಿದೆ ಅಷ್ಟೇ. ಇವರು ರಂಗ ಗೀತೆ ಹೊರತಾಗಿ ಬೇರೆ ಜನಪದ ಗೀತೆ ಬಾವಗೀತೆ ಹಾಡಿದನ್ನು ನಾನು ಕೇಳಿಲ್ಲ. ಈ ಬಗ್ಗೆ ಕೇಳಿದೆ. ಇದಕ್ಕೆ ನಾನು ಪ್ರಯತ್ನಿಸಿಲ್ಲ. ಮುಂದೆ ಈ ಪ್ರಕಾರದಲ್ಲೂ ಗಮನ ಹರಿಸುತ್ತೇನೆ ಅವಕಾಶ ಕೊಡಿ ಎಂದರು.

ಪ್ರತಿ ತಿಂಗಳು ನಡೆಯುವ ಮನೆ ಮನೆ ಕವಿಗೋಷ್ಠಿಗೆ ಬನ್ನಿ ಅಲ್ಲಿ ಹಾಡಲು ಅವಕಾಶ ಸಿಕ್ಕುವುದು ಎಂದೆ. ಮೊನ್ನೆ ಬೂದೇಶ್ವರ ಮಠದಲ್ಲಿ ಹಾಸನದ ಹೆಚ್.ಜಿ.ಗಂಗಾಧರ ತಮ್ಮ ಶ್ರೀ ಶಾರದ ಕಲಾಸಂಘದಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ನೃತ್ಯ ಸಂಗೀತ ಕಾರ್ಯಕ್ರಮದಲ್ಲಿ ವಿಧುರನ ಭಕ್ತಿ ಗೀತೆಯನ್ನು ಕೇಳಿ ಇಷ್ಟಪಟ್ಟಿದ್ದೆ. ವಿಧುರನ ಭಕ್ತಿ ಪಾತ್ರಕ್ಕೆ ಬೇಕಾದ ವಿನಯ ವಿಧೇಯತೆ ಇವರ ಅಭಿನಯದಲ್ಲಿ ಸಹಜವಾಗಿಯೇ ಮೈಗೂಡಿದೆ. ಹೀಗಾಗಿಯೇ ಇವರಿಗೆ ಸೂತ್ರದಾರಿ ಮತ್ತು ವಿಧುರ ಪಾತ್ರ ಫಿಕ್ಸ್ ಆಗಿದೆ ಎನಿಸಿತು.

- Advertisement -

ಹಾಸನ ತಾ. ಯರೇಹಳ್ಳಿ ಗ್ರಾಮದ ರೈತ ಕುಟುಂಬ ಕರಿಗೌಡ ಪುಟ್ಟಮ್ಮ ದಂಪತಿಗಳ 7ನೇ ಸುಪುತ್ರರಾಗಿ ತಾ. 17-3-1959ರಂದು ಜನಿಸಿದ ರಮೇಶ್ ಕೆ. ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಅಕ್ಕನ ಮನೆಯಲ್ಲಿ ಕಂದಲಿ ಶಾಲೆಯಲ್ಲಿ 7ನೇ ತರಗತಿ ತನಕ ಓದಿ ಸಕಲೇಶಪುರದಲ್ಲಿ ಹೈಸ್ಕೂಲು, ಅರಸೀಕೆರೆಯಲ್ಲಿ ಪಿಯುಸಿ ನಂತರ ಹಾಸನದ ಎನ್‍ಡಿಆರ್‍ಕೆ ಕಾಲೇಜಿನಲ್ಲಿ ಬಿ.ಕಾಂ ಓದುವಾಗ ರಂಗಣ್ಣನ ರಾದ್ಧಾಂತ ನಾಟಕದಲ್ಲಿ ಯುವತಿ ಪಾತ್ರಕ್ಕೆ ಮೇಕಪ್ ಮಾಡಿಕೊಂಡರು. 1989ರಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಸೌಮ್ಯ ಸ್ವಭಾವದಿಂದ ಇಲಾಖೆಗೆ ಗೌರವ ತಂದು ಸಾರ್ವಜನಿಕರಿಂದ ಉತ್ತಮ ಆರಕ್ಷಕ ಮನ್ನಣೆ ಪಡೆದು ನಿವೃತ್ತಿ ನಂತರವೂ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಂಘದ ಕಾರ್ಯದರ್ಶಿಯಾಗಿ ಕಲಾಸೇವೆ ಮುಂದುವರಿಸಿದ್ದಾರೆ. ಇವರು ನಿರ್ವಹಿಸಿರುವ ಪೌರಾಣಿಕ ಪಾತ್ರಗಳು ಶನಿಪ್ರಭಾವದ 7ನೇ ಬ್ರಾಹ್ಮಣ, ಕುರುಕ್ಷೇತ್ರದ ದ್ರೋಣ, ದೃತರಾಷ್ಟ್ರ, ಸತ್ಯ ಹರಿಶ್ಚಂದ್ರದಲ್ಲಿ ನಾರದ, ರಾಮಾಯಣದ ಆಂಜನೇಯ, ಗುಹ, ದಾನಶೂರಕರ್ಣ ಮತ್ತೆ ಸೂತ್ರದಾರಿ. ಪೌರಾಣಿಕ ನಾಟಕದಲ್ಲಿ ಸೂತ್ರದಾರಿ ಮೊದಲಿಗೆ ಜನರ ಮನಸೆಳದು ಮುಂದಿನ ದೃಶ್ಯಗಳಿಗೆ ಉತ್ತಮ ಚಾಲನೆ ನೀಡಲು ಶಕ್ತನಾದ್ದರಿಂದ ಚಿಕ್ಕದಾದರೂ ಈ ಪಾತ್ರಕ್ಕೆ ವಿಶೇಷ ಮನ್ನಣೆ ಇದೆ. ಪಾತ್ರದ ಡೈಲಾಗ್ ಮರೆತರೂ ತನಗೆ ಪಾತ್ರ ನೀಡಿದ ನಿರ್ದೇಶಕರ ಹೆಸರು ಸ್ಮರಿಸುವುದು ಮರೆಯುವುದಿಲ್ಲ. ಇದು ಇವರ ವಿನಯವಂತಿಕೆ. ಹಾಸನದ ಎ.ಸಿ.ರಾಜು, ಸೀಗೆನಾಡು ಪಾಲಾಕ್ಷಾಚಾರ್, ಚನ್ನರಾಯಪಟ್ಟಣ ಸಚಿನ್ ರಂಗನಾಥ್, ಪ್ರಸನ್ನಮೂರ್ತಿ, ರಾಮೋಜಿರಾವ್, ಅಣಚಿಹಳ್ಳಿ ಶ್ರೀನಿವಾಸಮೂರ್ತಿ, ಬೆಳ್ಳೂರು ಕ್ರಾಸ್ ಮಂಜುನಾಥ್, ಪುಟ್ಟರಾಜು, ಅಣ್ಣಪ್ಪ, ಗುಂಡುರಾಜ್, ನಾಗರಾಜಚಾರ್ಯ, ಹೇಮಂತ್ ಹೀಗೆ ಹತ್ತಾರು ನಿರ್ದೇಶಕರು ರಮೇಶ್‍ರನ್ನು ರಂಗಮಂಚವೇರಿಸಿದ್ದಾರೆ. ಕೇವಲ ಪೌರಾಣಿಕ ನಾಟಕಕ್ಕೆ ಸೀಮಿತವಾಗದೇ ಸಾಮಾಜಿಕ ನಾಟಕದಲ್ಲಿ ಮಂಡ್ಯ ಶಿವಪ್ರಕಾಶ್ ನಿರ್ದೇಶನದ ರತ್ನ ಮಾಂಗಲ್ಯದಲ್ಲಿ ರಾಷ್ಟ್ರಪತಿ ಪಾತ್ರ, ಗ್ಯಾರಂಟಿ ರಾಮಣ್ಣರ ಸಂಕೋಲೆಯಲ್ಲಿ ಶಂಕ್ರಣ್ಣ, ಬಾಡಿದ ಬದುಕುನಲ್ಲಿ ಚಂದ್ರಣ್ಣನಾಗಿ ಪೌರಾಣಿಕ ಸಾಮಾಜಿಕ ಎರಡಕ್ಕೂ ಸೈ ಎಂದಿದ್ದಾರೆ. ಅನಂತು, ನಿಮ್ಮ ಸಾಮಾಜಿಕ ನಾಟಕದಲ್ಲೂ ಆಭಿನಯಿಸಲು ನನಗೆ ಇಚ್ಛೆ ಇದೆ. ನಾಟಕಕ್ಕೆ ಹಿನ್ನಲೆ ಹಾಡು ಕೂಡ ಹಾಡುವೆ ಎಂದರು. ನೋಡೋಣ ಎಂದು ಒಂದಿಷ್ಟು ನೋಟ್ಸ್ ಮಾಡಿಕೊಂಡು ಸಾಹಿತ್ಯ ಪರಿಷತ್ತು ಭವನದ ಗೇಟ್‍ನಲ್ಲಿರುವ ಓ. ಮಹಾಂತಪ್ಪ ಅವರ ಟೀ ಶಾಪ್‍ನಲ್ಲಿ ಬೈಟು ಟೀ ಸಿಪ್ ಮಾಡಿ ಹೊರಬಂದೆ.

ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group