ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ
ಮೂಡಲಗಿ – ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪ ರಂದು ಮೂಡಲಗಿಯಲ್ಲಿ ನಡೆಯುತ್ತಿದ್ದು ಸಮ್ಮೇಳನಾಧ್ಯಕ್ಷ ಸಾಹಿತಿ ಚಂದ್ರಶೇಖರ ಅಕ್ಕಿಯವರನ್ನು ಅವರ ಗೋಕಾಕದ ನಿವಾಸದಲ್ಲಿ ಭೇಟಿಯಾಗಿ ಆತ್ಮೀಯವಾಗಿ ಸಂದರ್ಶಿಸಲಾಯಿತು.
ತಮ್ಮ ಸಂದರ್ಶನದಲ್ಲಿ ಅಕ್ಕಿಯವರು ತಮ್ಮ ಸಾಹಿತ್ಯ ಸಾಧನೆ ಸೇರಿದಂತೆ ಸಾಹಿತ್ಯ ಸಮ್ಮೇಳನಗಳ ಔಚಿತ್ಯ, ಉಪಯೋಗ, ಕನ್ನಡ ಭಾಷಾ ಬೆಳವಣಿಗೆ, ಕನ್ನಡ ಮಾಧ್ಯಮ ಶಿಕ್ಷಣ ಕುರಿತು ಮಾತನಾಡಿದರು.
ಅವರ ಸಂದರ್ಶನದ ಸಂಕ್ಷಿಪ್ತ ಪಾಠ ಇಲ್ಲಿದೆ.
“50 ವರ್ಷದ ಹಿಂದೆ ಪುಸ್ತಕ ಪ್ರೀತಿ ಇತ್ತು. ಅದು ಬಹಳ ದೊಡ್ಡದು ಯಾವಾಗ ಒಂದು ಪುಸ್ತಕ ಹೊರ ಬಂದೀತೋ ಎಂದು ದಾರಿ ಕಾಯುತ್ತಿದ್ದೆವು. ಈಗ ಓದುವಿಕೆ ಕಡಿಮೆ. ಆಗ ಬರೆಯುವವರು ಇದ್ದರು ಓದುವವರೂ ಇದ್ದರು. ಆದರೆ ಈಗ ಅವಸರದ ಸಾಹಿತ್ಯ ಗಂಭಿರ ಸಾಹಿತ್ಯ ಬರುತ್ತಿಲ್ಲ” ಎಂದು ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಅಕ್ಕಿ ವಿಷಾದ ವ್ಯಕ್ತಪಡಿಸಿದರು.
ಈಗಿನ ಕಾಲದಲ್ಲಿ ಕೃತಿಗಳನ್ನು ಯಾರೂ ವಿಮರ್ಶೆಗೆ ಒಡ್ಡುವುದಿಲ್ಲ. ಬರವಣಿಗೆ ಹೆಚ್ಚಿದೆ, ಬರೆಯುವವರು ಹೆಚ್ಚಾಗಿದ್ದಾರೆ ಆದರೆ ಗುಣಮಟ್ಟ ಇಲ್ಲ. ಸರ್ಕಾರದಿಂದ ಪುಸ್ತಕ ಖರೀದಿ ಆಗುತ್ತದೆ ದುಡ್ಡು ಬಂದರೆ ಸಾಕು ಎಂಬ ಮನೋಭಾವ ಎಲ್ಲ ಬರಹಗಾರರಲ್ಲಿ ಇದೆ. ಗಂಭಿರ ಓದುವಿಕೆ ಇಲ್ಲ. ಸಾಹಿತ್ಯದ ಅಧ್ಯಯನ ಗಟ್ಟಿಯಾಗಿದ್ದರೆ ಅದಕ್ಕೊಂದು ವೈಚಾರಿಕ ನೆಲೆಗಟ್ಟು ಇರುತ್ತದೆ. ಆದರೆ ಈಗಿನ ಬರವಣಿಗೆ ಜಾಳು ಜಾಳಾಗಿದೆ. ಆಗ ಶಾಲೆಗಳಲ್ಲಿ ಪಂಪ, ರನ್ನ ರಾಘವ, ಲಕ್ಷ್ಮೀಶ ರನ್ನು ಕಲಿಸುತ್ತಿದ್ದೆವು ಈಗ ಕಲಿಸುವವರಿಲ್ಲ. ಕಲಿಯಲು ಯಾರಿಗೂ ಆಸಕ್ತಿ ಕೂಡ ಇಲ್ಲ ಹಳಗನ್ನಡ ಅರ್ಥವಾಗುವುದಿಲ್ಲ. ವಿಶ್ವವಿದ್ಯಾಲಯ ಮಟ್ಟದಲ್ಲಿ ಹಳಗನ್ನಡ ಸಾಹಿತ್ಯ ಕಡಿಮೆಯಾಗಿದೆ.
ಕನ್ನಡಕ್ಕಾಗಿ ಹೋರಾಟ ಮಾಡುವ ಕಾಲ ಇನ್ನೂ ಇದೆಯೆಂದರೆ ಅದಕ್ಕಿಂತ ವಿಷಾದನೀಯ ಯಾವುದು ? ಏಕೀಕರಣದ ಉದ್ದೇಶ ಕನ್ನಡ ಉಳಿಯಬೇಕೆನ್ನುವುದಾಗಿತ್ತು. ಕನ್ನಡ ಸಂಸ್ಕೃತಿ ಉಳಿದರೆ ನಮ್ಮ ಬದುಕು. ಆಲೂರರು, ದೇಶಪಾಂಡೆ, ಶಾಮರಾಯರು ಹೇಳಿದಂತೆ ಕನ್ನಡ ಮಾಧ್ಯಮ ಬೇಕಾಗಿತ್ತು ದುರ್ದೈವವೆಂದರೆ ಇಂದು ಎಲ್ ಕೆ ಜಿ ಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭವಾಗುತ್ತದೆ ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಹೇಳುವವರೇ ಇಲ್ಲ. ಕನ್ನಡದಲ್ಲಿ ಕಲಿತರೆ ನಮಗೆ ಬದುಕಿಲ್ಲ ಎಂಬ ಭಾವನೆ ಇದೆ. ಇದಕ್ಕೆ ಪರಿಹಾರವೆಂದರೆ ಕನ್ನಡ ಕಡ್ಡಾಯ ಮಾಡಬೇಕು ಇಲ್ಲವಾದರೆ ಕನ್ನಡ ಹೋಗುತ್ತದೆ.
ಸಮ್ಮೇಳನವನ್ನು ಜಾತ್ರೆಯ ರೂಪದಲ್ಲಿ ನೋಡುವ ಉದ್ದೇಶವೇನೆಂದರೆ ಹೆಚ್ಚು ಜನ ಕೂಡಿದರೆ ಜನರಿಗಾಗಿ ವಿವಿಧ ಗೋಷ್ಠಿಗಳನ್ನಿಟ್ಟು ಆಹ್ವಾನಿಸಬೇಕು. ಸಾಹಿತ್ಯ ಸಮ್ಮೇಳನವೆಂದರೆ ಕೇವಲ ಸಾಹಿತ್ಯ ಅಷ್ಟೇ ಅಲ್ಲ. ಕೃಷಿ, ತಂತ್ರಜ್ಞಾನ ಕುರಿತಂತೆ ಗೋಷ್ಠಿಗಳು ನಡೆದರೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉಪಯೋಗವಾಗುತ್ತದೆ. ಸಾಹಿತ್ಯ ಒಂದಕ್ಕೇ ಸೀಮಿತವಾಗಬಾರದು.
ಯುವ ಪೀಳಿಗೆಗೆ, ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸಬೇಕಾದರೆ ಮೊದಲು ಪಾಲಕರು ಮೊಬೈಲ್ ಬಿಡಬೇಕು. ನಾವು ಏನು ಪಾಲಿಸುತ್ತೇವೋ ಅದನ್ನೇ ಮಕ್ಕಳು ಪಾಲಿಸುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಬಾಯಿಪಾಠ ಸಂಸ್ಕೃತಿ ಇದೆ. ಕನ್ನಡದಲ್ಲಿ ತಿಳಿವಳಿಕೆ ಸಂಸ್ಕೃತಿ ಇದೆ.
ಜನ್ಮ ಮತ್ತು ಸಾಹಿತ್ಯ ಸಾಧನೆ :
ಸ್ವಾತಂತ್ರ್ಯ ಹೋರಾಟಗಾರ ದುಂಡಪ್ಪ ಅಕ್ಕಿ ಮತ್ತು ಅಂಬವ್ವ ದಂಪತಿಗಳ ಚೊಚ್ಚಲ ಮಗನಾಗಿ ಚಂದ್ರಶೇಖರ ಅಕ್ಕಿ ಜನಿಸಿದ್ದು ೨೪.೧೨.೧೯೪೮ ರಂದು ಗೋಕಾಕ ತಾಲೂಕಿನ ಶಿಲ್ತಿಭಾವಿಯಲ್ಲಿ. ಸಮೀಪದ ಖನಗಾವಿಯಲ್ಲಿ ಪ್ರಾಥಮಿಕ ಶಿಕ್ಷಣ. ಗೋಕಾಕದ ಜವಳಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಕೆಲಸ ಮಾಡುತ್ತಲೇ ಕಾಲೇಜು ಮುಗಿಸಿದರು. ಕಾಲೇಜಿನ ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು ನಂತರ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಎಮ್ ಎ ಕಲಿಯುತ್ತ ಇರುವಾಗಲೇ ಸೌಜನ್ಯಶೀಲ ಸೌ. ಸುಶೀಲಾ ಅವರನ್ನು ವಿವಾಹವಾದರು.
ಎಮ್ ಎ ವ್ಯಾಸಂಗದಲ್ಲಿ ಅಕ್ಕಿಯವರಿಗೆ ದೊರೆತದ್ದು ಡಾ. ಆರ್ ಸಿ ಹಿರೇಮಠ, ಡಾ. ಎಂ ಎಸ್ ಸುಂಕಾಪೂರ, ಡಾ. ಎಂ ಎಂ ಕಲಬುರ್ಗಿ, ಡಾ. ಎಂ ಬಿ ಕೊಟ್ರಶೆಟ್ಟಿ, ಡಾ. ಜಿ ಎಸ್ ಕುಳ್ಳಿ, ಡಾ. ಕೆ ಜಿ ಶಾಸ್ತ್ರಿ, ಪ್ತೊ. ಬಿ ಬಿ ಮಹಿಷವಾಡಗಿ, ಡಾ. ಸೋಮಶೇಖರ ಇಮ್ರಾಪೂರ ಮೊದಲಾದ ದಿಗ್ಗಜರ ಬೋಧಕತ್ವ. ಅಕ್ಕಿಯವರ ಸಾಹಿತ್ಯ ಶಿಕ್ಷಣ, ಅಧ್ಯಯನ, ಅನುಭಾದ ಕ್ಷಿತಿಜ ಹಿಗ್ಗಿತು. ಡಾ. ದ ರಾ ಬೇಂದ್ರೆ, ಡಾ. ಬೆಟಗೇರಿ ಕೃಷ್ಣಶರ್ಮ, ಡಾ. ಶಂ ಬಾ ಜೋಶಿ, ಡಾ. ಶಂಕರ ಮೊಖಾಶಿ ಪುಣೇಕರ, ಬಸವರಾಜ ಕಟ್ಟಿಮನಿ, ಚನ್ನವೀರ ಕಣವಿ ಮೊದಲಾದ ಸಾಹಿತ್ಯ ದಿಗ್ಗಜರ ಪರಿಚಯ, ಅವರೊಡನೆ ಒಡನಾಟ ಚಂದ್ರಶೇಖರ ಅಕ್ಕಿಯವರ ಸಾಹಿತ್ಯ ಸಾಧನೆಗೆ ನೆರವಾಯಿತು.
ಅಕ್ಕಿಯವರು ಸಂಪಾದನೆ ಸೇರಿದಂತೆ ೨೨ ಕೃತಿಗಳು. ಬಸವರಾಜ ಕಟ್ಟಿಮನಿಯವರ ಪ್ರತಿಷ್ಠಾನದ ಸದಸ್ಯರಾಗಿದ್ದು, ಅವರ ಪುಸ್ತಕಗಳ ಪರಿಷ್ಕರಣೆ ಮಾಡಿ ೬೪ ಪುಸ್ತಕಗಳನ್ನು ಮರು ಮುದ್ರಣ ೧೫ ಸಂಪುಟದಲ್ಲಿ ಮಾಡಿದ್ದು ಅದರ ಸಂಪಾದನೆ. ಎಲ್ಲಕ್ಕೂ ಮುನ್ನುಡಿ ರೂಪದಲ್ಲಿ ಪ್ರಸ್ತಾವನೆ ಬರೆದಿದ್ದು. ಇನ್ನುಳಿದ ೧೦ ಕೃತಿಗಳ ಅವಲೋಕನ. ಕಟ್ಟಿಮನಿ ವ್ಯಾಸಂಗ-೧ ಸರಣಿ ಮಾಡಿದ್ದು. ಇಡೀ ಗೋಕಾಕ ನಾಡಿನ ಸಾಹಿತ್ಯ ಸಮಗ್ರ ಚಿತ್ರಣ ಬರುವಂತೆ ಮಹಾಲಿಂಗ ಮಂಗಿ ಮತ್ತು ಅಕ್ಕಿಯವರು ಸೇರಿ ‘ ಗೋಕಾವಿ ಸಿರಿ ಸಂಪದ ‘ ಎಂಬ ಕೃತಿ ಬರೆದಿದ್ದು, ಅದೇ ಪುಸ್ತಕ ಪರಿಷ್ಕೃತವಾಗಿ ಗೋಕಾವಿ ಸಂಸ್ಕೃತಿ ದರ್ಶನ ಆಯಿತು.
ಕಸಿ ( ಕಥಾ ಸಂಕಲನ) ಗಡಿನಾಡ ಬೆಡಗು ಹಾಲೂಬಾನ ( ಡಾ. ನಿಂಗಣ್ಣ ಸಣ್ಣಕ್ಕಿ ಜೀವನ ಸಾಧನೆ), ಪರಿಸರ, ದರ್ಪಣ, ಬೆಳಗಾವಿ ಬೆಳಕು ಸಂಪಾದನೆಯ ಕೃತಿಗಳು. ಮೊದಲು ಮಹಾಲಿಂಗ ಮಂಗಿಯವರ ಜೊತೆ ಮೈತ್ರಿ ಪ್ರಕಾಶನದಿಂದ ಎರಡು, ನಂತರ ಶಂಕರ ತಲ್ಲೂರ ಅವರ ಜೊತೆ ಪೂರ್ಣಿಮಾ ಪ್ರಕಾಶನದಿಂದ ೧೬ ಕೃತಿಗಳು, ಮರಾಠಿಯ ಜಯವಂತ ದಳವಿಯವರ ಅನುವಾದಿತ ಕೃತಿ ‘ಮಹಾನಂದಾ’ ರಚನೆ. ‘ಕಸಿ’ ಎಂಬ ಕಥಾ ಸಂಕಲನ ಒ್ರೊ. ಅಕ್ಕಿಯವರಿಗೆ ಬಹಳ ಹೆಸರು ತಂದು ಕೊಟ್ಟಿತು. ಡಾ. ಅನುಪಮಾ ನಿರಂಜನ, ಯಶವಂತ ಚಿತ್ತಾಲರು, ಬಸವರಾಜ ಕಟ್ಟಿಮನಿ, ನಾಗತಿಹಳ್ಳಿ ಚಂದ್ರಶೇಖರ, ಸನದಿಯವರು ಕಸಿ ಕಥಾ ಸಂಕಲನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂದರ್ಶಕ : ಉಮೇಶ ಬೆಳಕೂಡ, ಮೂಡಲಗಿ ಸಹಕಾರ : ಸುಭಾಸ ಕಡಾಡಿ, ಶಿವಬಸು ಗಾಡವಿ