ಸಿಂದಗಿ: ಕಳೆದ ತಿಂಗಳು ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ನಕಲಿ ಪತ್ರಕರ್ತರು, ನಮಗೆ ಕಿರುಕುಳ ಅವಾಚ್ಯ ಶಬ್ದಗಳಿಂದ ಬಯುತ್ತ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಹೇಳಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. ಆದರೆ ಅವರು ಮಾಡಿರುವ ಪ್ರಕರಣ ಸತ್ಯಕ್ಕೆ ದೂರವಾದದ್ದು ಎಂದು ಪತ್ರಕರ್ತ ನಿಂಗರಾಜ ಅತನೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಲವಾರು ವರ್ಷಗಳಿಂದ ನಾನು ಪತ್ರಿಕಾ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಇದೆ. ನೀವು ಯಾಕೆ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ನಮ್ಮ ಬಳಿ ಹೇಳಿಕೊಂಡಾಗ ನಾವುಗಳು ನೇರವಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗೆ ಮಾತನಾಡಬಾರದು ಎಂಬ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದ್ದೇವೆ. ಸುಮಾರು ದಿನಗಳಾದ ಬಳಿಕ ಮಾಹಿತಿ ನೀಡಲಿಲ್ಲ. ಅದರ ನೆಪದಲ್ಲಿ ಅಲ್ಲಿನ ಸಿಬ್ಬಂದಿಗಳ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದೇವೆ ಎಂದು ಅವರು ದೂರು ದಾಖಲಿಸಿದ್ದಾರೆ. ಅದು ಸತ್ಯಕ್ಕೆ ದೂರವಾಗಿದ್ದು, ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಕರ್ತರಿಗೆ ಈ ರೀತಿಯಾದರೆ ಇನ್ನು ಜನ ಸಾಮಾನ್ಯರ ಪಾಡೇನು. ಸರಕಾರಿ ಸೇವೆ ಮಾಡಲು ಬಂದ ಅಧಿಕಾರಿಗಳು ಸೇವೆ ಮಾಡುವುದು ಬಿಟ್ಟು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ಯಾವ ರಾಜ್ಯ ಅಥವಾ ತಾಲೂಕು ಎಂದು ತಿಳಿಯಬೇಕು. ಪ್ರಶ್ನೆ ಮಾಡದಿರುವಷ್ಟು ವೈದ್ಯರು ಬಲಿಷ್ಟವಾಗಿದ್ದಾರೆ ಎಂದರೆ ಆಸ್ಪತ್ರೆಗೆಂದು ಬರುವ ರೋಗಿಗಳ ಹಣೆಬರಹ ಹೇಗೆ ಎಂದು ಪ್ರಶ್ನಿಸಿದರು.
ನಮ್ಮ ಮೇಲೆ ಆಸ್ಪತ್ರೆಯ ಸಿಬ್ಬಂದಿಗಳು ಮಾಡಿರುವ ದಾಖಲೆ ಸುಳ್ಳಿದೆ. ಅಲ್ಲಿ ಸುಮಾರು ೩೫ ಸಿಸಿ ಟಿವಿ ಕ್ಯಾಮರಾಗಳಿವೆ ಅವುಗಳನ್ನು ನೋಡಿ ಸಂಪೂರ್ಣ ತನಿಖೆ ಮಾಡಿ. ತಪ್ಪು ಯಾರದಿದೆ ಎನ್ನುವ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳು ನಮ್ಮದು ಒಂದು ಕೌಂಟರ್ ಕೇಸ್ ದಾಖಲು ಮಾಡಿಕೊಂಡು ಸತ್ಯ ಅಸತ್ಯತೆ ಏನೆಂಬುದನ್ನು ತನಿಖೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಕಳೆದ ತಿಂಗಳ ತಾಲೂಕು ಸಾರ್ವಜನಿಕ ಆಸ್ಪತ್ರಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಸಮಸ್ಯೆ ಮತ್ತು ಒಂದು ಬಾಣಂತಿ ಸಾವಿನ ವಿಷಯದ ಬಗ್ಗೆ ಅವರ ಜೊತೆಗೆ ಚರ್ಚೆ ಮಾಡಿದ ಸಲುವಾಗಿ ಈ ರೀತಿಯಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಇನ್ನೋರ್ವ ಪತ್ರಕರ್ತ ಶಿವಕುಮಾರ ಬಿರಾದಾರ ಮಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರಿಂದ ಮಾಹಿತಿ ತಿಳಿದಾಗ ಮಾಹಿತಿ ಹಕ್ಕು ಅಧಿನಿಯಮದಡಿ ನ.೧೪ರಂದು ಆಸ್ಪತ್ರೆಯ ೬ಜನ ಸಿಬ್ಬಂದಿಗಳ ಸಂಬಳ ಮತ್ತು ಬಯೋಮೆಟ್ರಿಕ್ ಹಾಜರಾತಿ ನಕಲು ಪ್ರತಿ ಒದಗಿಸುವಂತೆ ಮಾಹಿತಿ ಕೇಳಲಾಗಿತ್ತು. ಕೊಡುವುದಕ್ಕೆ ಬರುವುದಿಲ್ಲ ಎಂದು ಹೇಳಿದರು. ಅದಕ್ಕೆ ಹಿಂಬರಹ ನೀಡಿ ಎಂದಾಗ ನ.೨೭ರಂದು ನೀಡಿದರು. ಬರದೆ ಇರುವುದಕ್ಕೆ ಉತ್ತರ ನೀಡಿದಾಗ ಒಂದು ವರ್ಷದ ೩೬೫ದಿನಗಳಲ್ಲಿ ಡಾ.ರಾಜಶೇಖರ ಎಸ್. ೧೫೦, ಡಾ.ರಮೇಶ ರಾಠೋಡ ೭೭, ಡಾ.ಸಾಯಬಣ್ಣ ಗುಣಕಿ ೫೮, ಡಾ.ಶಂಕರರಾವ್ ದೇಶಮುಖ ೨೧೭, ಡಾ.ವಿಜಯಮಹಾಂತೇಶ ೬೬ ದಿನ ಗೈರು ಹಾಜರಾಗಿ ವರ್ಷದ ಸಂಪೂರ್ಣ ಸಂಬಳ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಮಾಧ್ಯಮಕ್ಕೆ ಪ್ರಚುರ ಪಡಿಸಿದರು. ಹೀಗೆ ನಮ್ಮ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದು ಕಾರಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಸೂಕ್ತ ತನಿಖೆ ಮಾಡಿ ಕಾನೂನು ಕೈಗೊಳ್ಳಬೇಕು ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.