ಬೆಳಗಾವಿ-ಮಿರಜ್ ವಿಶೇಷ ರೈಲನ್ನು ಪ್ಯಾಸೆಂಜರ್ ರೈಲು ಎಂದು ಪರಿಗಣಿಸಿ ನಿರಂತರ ಸಂಚಾರಕ್ಕೆ ಅನುಮತಿ ನೀಡುವುದು ಸೇರಿದಂತೆ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕವನ್ನು ಆದಷ್ಟು ಬೇಗ ಘೋಷಿಸಲು ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ಮಂಗಳವಾರ ಲೋಕಸಭೆಯ ಸಚಿವರ ಕಾರ್ಯಾಲಯದಲ್ಲಿ ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಮಂಗಳವಾರ ಫೆ-11 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ಮತ್ತು ಮೀರಜ್ ನಡುವಿನ ಈಗಿರುವ ವಿಶೇಷ ರೈಲಿನ ದರ ಅತ್ಯಂತ ದುಬಾರಿಯಾಗಿದ್ದು ಇದು ಜನ ಸಾಮಾನ್ಯರು ಒಡಾಡುವ ರೈಲು ಆಗಿರುವ ಕಾರಣ ಇದನ್ನು ಅತಿಶೀಘ್ರವಾಗಿ ಪ್ಯಾಸೆಂಜರ್ ರೈಲಾಗಿ ಪರಿವರ್ತಿಸಿ ನಿರಂತರ ಒಡಾಟಕ್ಕೆ ಅವಕಾಶ ನೀಡುವ ಮತ್ತು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವುದು ಅತ್ಯಂತ ಅವಶ್ಯವಾಗಿದೆ.
ಜೊತೆಗೆ ಈ ಹಿಂದೆ ಧಾರವಾಡದಿಂದ ಬೆಳಗಾವಿಯವರೆಗೆ ವಂದೇ ಭಾರತ ರೈಲನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದು ಕೆಲವು ತಾಂತ್ರಿಕ ತೊಂದರೆಗಳ ಕಾರಣದಿಂದ ಆ ರೈಲು ಒಡಾಟಕ್ಕೆ ಇನ್ನೂ ಹಸಿರು ನಿಶಾನೆ ತೋರಿಸಲಾಗಿಲ್ಲ. ಈಗ ಆ ಎಲ್ಲ ತಾಂತ್ರಿಕ ತೊಂದರೆಗಳ ನಿವಾರಣೆಯಾಗಿದ್ದು, ಆದಷ್ಟು ಬೇಗ ರೈಲಿನ ವೇಳಾಪಟ್ಟಿ ಮತ್ತು ದಿನಾಂಕ ಘೋಷಿಸಬೇಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಂಸದ ಈರಣ್ಣ ಕಡಾಡಿ ಆಗ್ರಹಿಸಿದರು.
ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವರು ನೂತನ ಮೆಮು ರೈಲುಗಳ ನಿರೀಕ್ಷೆಯಲ್ಲಿದ್ದು ಇಲಾಖೆಯ ಸುಪರ್ದಿಗೆ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದರು. ಈ ಹಿಂದೆ ನಾನು ಮೆಮು ರೈಲು ಸಂಚಾರ ಕುರಿತು ಭರವಸೆ ನೀಡಿದ್ದೇನೆ. ನಿಮ್ಮ ಒತ್ತಾಯದ ಹಿನ್ನೆಲೆಯಲ್ಲಿ ಆದಷ್ಟು ಬೇಗ ಮೆಮು ರೈಲು ಒದಗಿಸಲಿಕ್ಕೆ ವಿಶೇಷ ಶ್ರಮ ಹಾಕಿ ಆ ಭಾಗದ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆಯನ್ನು ನೀಡಿದ್ದಾರೆ ಮತ್ತು ಈ ಹಿಂದೆ ಪ್ರಾಯೋಗಿಕ ಪರೀಕ್ಷೆ ನಡೆಸಿದ ವಂದೇ ಭಾರತ ರೈಲಿನ ಎಲ್ಲ ತಾಂತ್ರಿಕ ತೊಂದರೆಗಳನ್ನು ಹಂತ ಹಂತವಾಗಿ ನಿವಾರಿಸಲಾಗಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ದಿನಾಂಕ ಮತ್ತು ವೇಳಾಪಟ್ಟಿಯನ್ನು ಘೋಷಿಸಲಾಗುವುದು ಎಂದು ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.