ಮೂಡಲಗಿ: ಸಿಐಟಿಯು ಸಂಘಟನೆಯ ಸಹಯೋಗದಲ್ಲಿ ಮೂಡಲಗಿ-ಗೋಕಾಕ ತಾಲೂಕಾ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೌಕರ ಹಾಗೂ ಸ್ವಚ್ಚ ವಾಹಿನಿ ಸಂಘಟನೆಯಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರದಂದು ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದವರೆಗೆ ತೆರಳಿ ರಸ್ತೆ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ಪ್ರತಿಭಟಿಸಿ ನಂತರ ತಾ.ಪಂ ಕಛೇರಿ ಮುಂಭಾಗ ಪ್ರತಿಭಟಿಸಿ ತಹಶೀಲ್ದಾರ ಶಿವಾನಂದ ಬಬಲಿ ಮತ್ತು ಸಿಡಿಪಿಒ ಯಲ್ಲಪ್ಪ ಗದಾಡಿ ಹಾಗೂ ತಾ.ಪಂ ಎಒ ಎಸ್.ಎಸ್.ರೊಡನ್ನವರ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಮಯದಲ್ಲಿ ಗ್ರಾ.ಪಂ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಡ್ಡೆಪ್ಪ ಭಜಂತ್ರಿ ಮಾತನಾಡಿ, ಗ್ರಾ.ಪಂ ನೌಕರರ ಪ್ರಮುಖವಾದ ೧೯ ಬೇಡಿಕೆಗಳನ್ನು ಬಗೆಹರಿಸಬೇಕು ಎಂದು ಕಳೆದ ಜುಲೈ ಮತ್ತು ವಿವಿಧ ಸಮಯದಲ್ಲಿ ಬೆಂಗಳೂರಿನ ಧರಣಿ ಸತ್ಯಾಗ್ರಹದಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು ಇನ್ನೂ ಪ್ರಮುಖ ಬೇಡಿಕೆಗಳು ಈಡೇರಿಸಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ಅವರು ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮತ್ತು ಅಕ್ಷರ ದಾಸೋಹ ನೌಕರರ ಹಾಗೂ ಸ್ವಚ್ಚವಾಹಿನಿ ನೌಕರರ ವಿವಿಧ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸದಿದ್ದರೆ ರಾಜ್ಯ ಮತ್ತು ದೇಶಾದ್ಯಾಂತ ಸಿಐಟಿಯ ಸಂಘಟನೆ ಸಹಯೋಗದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಅಧ್ಯಕ್ಷ ದೊಡ್ಡವ್ವ ಪೂಜೇರಿ ಮಾತನಾಡಿ, ಅಂಗನವಾಡಿ ನೌಕರರನ್ನು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಖಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು, ಫಲಾನುಭವಿಗಳ ಘಟಕವೆಚ್ಚ ಹೆಚ್ಚು ಮಾಡಬೇಕು, ೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾಗಿ ತಂದಿರುವ ೪ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಹಾಗೂ ವಿವಿಧ ನೌಕರರ ವಿವಿಧ ಬೇಡಿಕೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಪಾರ್ವತಿ ಕೌಜಲಗಿ ಮತ್ತು ಆಶಾ ಕಾರ್ಯಕರ್ತೆಯರ ಸಂಘದ ತಾಲೂಕಾ ಅಧ್ಯಕ್ಷೆ ರೇಣುಕಾ ಪಾಟೀಲ ಮಾತನಾಡಿ, ನಮ್ಮ ವಿವಿಧ ಬೇಡಿಕೆಯನ್ನು ಸರಕಾರ ಪರಿಹರಿಸಬೇಕು ಇಲ್ಲದೆ ಹೋದರೆ ಉಗ್ರ ಹೋರಾಟದ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಗ್ರಾ.ಪಂ ನೌಕರರ ಮೂಡಲಗಿ ತಾಲೂಕಾ ಅಧ್ಯಕ್ಷ ರಮೇಶ ಹೂಲಿ, ಉಪಾಧ್ಯಕ್ಷ ಬಸವರಾಜ ಮಿರ್ಜಿ, ಕಾರ್ಯದರ್ಶಿ ಗುಲಾಬ ಪಿರ್ಜಾದೆ, ಗೋಕಾಕ ತಾಲೂಕಾ ಕಾರ್ಯದರ್ಶಿ ಬಾಳೇಶ ದುಂಡಾನಟ್ಟಿ, ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಮಹಾದೇವಿ ಹನಬರ, ಎಮ್.ಮುದೆನ್ನವರ, ಪವಿತ್ರಾ ಮಾದರ, ಸುಮಿತ್ರಾ ಮೇತ್ರಿ, ಸುರೇಶ ಖಾನಸಿ, ಧರೆಪ್ಪ ಬೆಳವಿ, ಸುನೀಲ ನಾಯ್ಕ, ಗುಳಪ್ಪ ಹೊಸೂರ, ಸಿಧಾರೋಡ ಹುಲಕುಂದ, ಮಹಾದೇವ ಮಾದರ ಹಾಗೂ ಗ್ರಾಮ ಪಂಚಾಯತ, ಅಕ್ಷರ ದಾಸೋಹ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೌಕರ ಮತ್ತು ಸ್ವಚ್ಚವಾಹಿನಿ ನೌಕರ ಸಂಘಟನೆಯವರು ಭಾಗವಹಿಸಿದ್ದರು.