ಸಿಂದಗಿ: ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ಶನಿವಾರ ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಸಿಂದಗಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ ಹಾಗೂ ಅರುಣ ಶಹಾಪೂರ ಅವರು ಮಾತನಾಡಿ, ಇಂಡಿ ಜಿಲ್ಲೆಯನ್ನಾಗಿ ಸೃಜಿಸುವ ನಿಟ್ಟಿನಲ್ಲಿ, ಇಂಡಿ ಬದಲಾಗಿ ಸಿಂದಗಿಯನ್ನು ಪರಿಗಣಿಸಿ ಎಂಬ ರಾಜಕೀಯ ಕೂಗು ನಮ್ಮದಾಗಿಲ್ಲ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲಾರೆವು. ಒಂದು ವೇಳೆ ವಿಜಯಪುರ ಜಿಲ್ಲೆಯನ್ನು ಇಬ್ಭಾಗಿಸುವ ಇರಾದೆ ಸರ್ಕಾರದದ್ದಾರೆ, ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಸಿಂದಗಿಯನ್ನು ಆಧ್ಯತೆಯನ್ನಾಗಿಸಿ ಜಿಲ್ಲೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿ, ಈ ಹೋರಾಟ ಸಮಿತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತಾವುಗಳು ಅವಕಾಶ ಒದಗಿಸುವುದರೊಂದಿಗೆ ನಮ್ಮ ಬೇಡಿಕೆಯನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಮನವಿ ಸ್ವೀಕರಿಸಿದ ಸಚಿವರು, ಸದ್ಯ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲಾ ವಿಭಜನೆ ಕುರಿತು ಸರ್ಕಾರದ ಮುಂದೆ ಯಾವ ಪ್ರಸ್ತಾವಗಳು ಇಲ್ಲ. ನಿಮ್ಮ ಹೋರಾಟಕ್ಕೆ ಆದ್ಯತೆಯೂ ಸಿಗದು. ಚುನಾವಣೆ ಮುಗಿದ ನಂತರದಲ್ಲಿ ನಿಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಿಳಿಸಿ, ನಿಮ್ಮ ಸೂಕ್ತವಾದ ಜಿಲ್ಲೆ ಇಬ್ಭಾಗಿಸಿದರೆ ಮಾತ್ರ ಸಿಂದಗಿಯನ್ನು ಜಿಲ್ಲೆ ಮಾಡಿ ಎಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ ಅಲ್ಲಾಪೂರ, ಅಶೋಕ ವಾರದ, ಚಂದ್ರಶೇಖರ ನಾಗೂರ, ಯಶವಂತ್ರಾಯಗೌಡ ರೂಗಿ, ದಸ್ತಗೀರಸಾಬ ನದಾಫ, ಎಂ.ಎ.ಖತೀಬ, ಎಚ್.ಕೆ.ನದಾಫ, ಶಾಂತಪ್ಪ ರಾಣಾಗೋಳ, ಆನಂದ ಶಾಬಾದಿ, ಭೀಮಾಶಂಕರ ನೆಲ್ಲಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಸಾಯಬಣ್ಣ ದೇವರಮನಿ, ಸಂತೋಷ ಮಣಗಿರಿ, ಮಹಾಂತೇಶ ನೂಲಾನವರ, ಮೋದಿನ್ ಜಮಾದಾರ, ಅಶೀಫ ಅಂದೇಲಿ, ಸಲಿಂ ನದಾಫ್, ಶೈಲಜಾ ಸ್ಥಾವರಮಠ, ಮಹಾದೇವಿ ಬಮ್ಮಣ್ಣಿ, ಮಹಾದೇವಿ ಹಿರೇಮಠ, ಸುನಂದಾ ಯಂಪೂರೆ, ಪ್ರತಿಭಾ ಚಳ್ಳಗಿ, ಶ್ರೀಧರ ಬಮ್ಮಣ್ಣಿ, ಬಸು ಕಾಂಬಳೆ ಸೇರಿದಂತೆ ಇತರರಿದ್ದರು.