ಸವದತ್ತಿ: ಗ್ರಾಮೀಣ ಪ್ರದೇಶದಲ್ಲಿ ಬಡವರ ಹಾಗೂ ನಿರ್ಗತಿಕ ಕುಟುಂಬಗಳ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಇದೀಗ ಆರ್ಥಿಕವಾಗಿ ಸಂಕಷ್ಠ ಅನುಭವಿಸುತ್ತಿವೆ. ಈ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕೆಂದು ಸಂಘದ ಅಧ್ಯಕ್ಷ ಜಗದೀಶ ತೋಟಗಿ ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರಕ್ಕೆ ಮಂಗಳವಾರ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನರಹಿತ ಶಾಲೆಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಿದ ವೇಳೆ ಅವರು ಮಾತನಾಡಿದರು.
ಕೋವಿಡ್ ಕಾರಣದಿಂದ ಸದ್ಯ ಎಲ್ಲ ರಂಗಗಳು ಸಂಕಷ್ಟ ಅನುಭವಿಸುತ್ತಿವೆ. ಅದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಹೊರತಾಗಿಲ್ಲ. 2 ಅವಧಿ ಶೈಕ್ಷಣಿಕ ವರ್ಷಗಳಲ್ಲಿ ಶಾಲಾ ಸಿಬ್ಬಂದಿಗಳಿಗೆ ವೇತನ ಭರಿಸದಂಥ ಸ್ಥಿತಿ ಇದೆ. ಕಾರಣ ತಾವುಗಳು ನಮ್ಮ ಮನವಿ ಪರಿಗಣಿಸಿ ಸರಕಾರದ ಮೇಲೆ ಒತ್ತಡ ತಂದು ಕನ್ನಡ ಶಾಲೆ ಹಾಗೂ ಕನ್ನಡ ಭಾಷೆಯ ಉಳಿವಿಗೆ ಪ್ರಾಶಸ್ತ್ಯ ನೀಡಬೇಕು.
ಖಾಸಗಿ ಶಾಲೆಗಳನ್ನು ಅನುದಾನಕ್ಕೊಳಪಡಿಸದೇ 2 ದಶಕಗಳೇ ಗತಿಸಿದ್ದು, ಅನುದಾನರಹಿತ ಶಾಲೆಗಳೆಂಬ ಹಣೆಪಟ್ಟಿ ಶಾಶ್ವತವಾಗಿ ಉಳಿಯಬಾರದು. ಇತ್ತೀಚಿನ ಅನೇಕ ಸರಕಾರಗಳಿಗೆ ಈ ಕುರಿತು ಮನವಿ ಮಾಡಿದರೂ ಯಾವುದೇ ಪರಿಣಾಮವಾಗಿಲ್ಲ. ಆದರೆ ಕಳೆದ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶಕುಮಾರ ಅನುದಾನಕ್ಕೆ ಒಳಪಡಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ಆದ್ದರಿಂದ 1995 ರ ನಂತರದ ಅನುದಾನರಹಿತ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿರಿ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು, “ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ಬಗ್ಗೆ ಅರಿವಿದೆ. ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಚಿಂತನೆಯಲ್ಲಿ ಯಡಿಯೂರಪ್ಪನವರ ಸರಕಾರ ಅಂತಿಮ ಹಂತ ತಲುಪಿತ್ತು. ಬಳಿಕ ಸರಕಾರ ಬದಲಾವಣೆಗೊಂಡು ಹೊಸ ಶಿಕ್ಷಣ ಮಂತ್ರಿಗಳಿಗೆ ಈ ಕುರಿತು ಮನದಟ್ಟು ಮಾಡಲಾಗುವದು.” ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ ಅವರು, ಕೋವಿಡ್ 3ನೇ ಅಲೆ ಬರದೇ ಶಾಲೆಗಳು ಸುರಕ್ಷಿತವಾಗಿ ನಡೆದು ಎಂದಿನಂತೆ ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗುವಂತೆ ಆಶಿಸುತ್ತೇನೆ ಎಂದರು
ಈ ವೇಳೆ ಚಿದಂಬರ ಮಠದ, ಪ್ರಸನ್ ದಿಕ್ಷೀತ್, ಬಸಪ್ಪ ಜೋಗಿಹಳ್ಳಿ, ರಮೇಶ ದೇವರಡ್ಡಿ, ಬಿ.ಎಸ್.ಪುಟ್ಟಿ, ಎಸ್.ಎಮ್.ವಾರೆಪ್ಪನವರ, ಡಿ.ಎಸ್.ಕೊಪ್ಪದ, ಎಮ್.ಎಸ್. ಕಲಾಲ, ಮಹಾಂತೇಶ ಕೊಟ್ಟರಶೆಟ್ಟಿ, ನಾಗರತ್ನ ಮಠ, ಅಂಗಡಿ, ಆನಂದ ಹಿರೆಹೊಳಿ, ಸೋಮೇಶ ಕಂಕಣವಾಡಿ, ಬಸವರಾಜ ತಳವಾರ ಸೇರಿದಂತೆ ಇತರರು ಇದ್ದರು.