Homeಲೇಖನಕೊಡಗು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ. ಆಲೂರ

ಕೊಡಗು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ. ಆಲೂರ

ವ್ಯಕ್ತಿತ್ವದ ಪರಿಚಯ ಮಾಡುವುದಕ್ಕಿಂತ ಮೊದಲು ಒಂದೆರಡು ಮಾತುಗಳು. ಡಾ. ಶಶಿಕಾಂತ ಪಟ್ಟಣ ಅವರು ನಮ್ಮವರನ್ನು ನಮ್ಮವರಿಗೇ ಪರಿಚಯ ಮಾಡಿಕೊಡುವ ಸಲುವಾಗಿ ಈ ಅಂಕಣವನ್ನು ಬರೆಯಲು ಸೂಚಿಸಿದರು. ನಮ್ಮ ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರದ ಅಡಿಯಲ್ಲಿರುವ ಅಕ್ಕನ ಅರಿವು ವೇದಿಕೆಯಲ್ಲಿ ಒಬ್ಬರಿಗಿಂತ ಒಬ್ಬರು ಅಪ್ಪಟ ಬಸವಾಭಿಮಾನಿಗಳು, ಗೃಹಿಣಿ, ಕೃಷಿಕರು,ಲೇಖಕಿಯರು, ಸಾಹಿತಿಗಳು, ವಿಮರ್ಶಕರು, ಚಿಂತಕರು ಪ್ರಬುದ್ಧ ಉಪನ್ಯಾಸಕರು, ಪಿಎಚ್ಡಿ ಪದವೀಧರರು, ಶಿಕ್ಷಕರು, ಪ್ರೊಫೆಸರ್, ಪ್ರಾಚಾರ್ಯರು, ವಿಜ್ಞಾನಿಗಳು, ಡಾಕ್ಟರ್, ಇಂಜಿನಿಯರ್, ಸರ್ಕಾರಿ ಅಧಿಕಾರಿಗಳು, ಸಂಗೀತಗಾರರು, ಉಪಕುಲಪತಿಗಳು, ಹೀಗೆ ಅವರಿವರೆನ್ನದೆ ಪ್ರತಿಯೊಂದು ಸಾಮಾಜಿಕ ವಲಯದ ಶ್ರೇಷ್ಠ ಗಣ್ಯರು ನಮ್ಮೊಂದಿಗಿದ್ದಾರೆ.

ಈಗ ನಾನು ಮೊದಲು ಪರಿಚಯ ಮಾಡಲು ಹೊರಟಿರುವುದು ಪ್ರೊ. ಅಶೋಕ ಸಂಗಪ್ಪ ಆಲೂರ
ಗೌರವಾನ್ವಿತ ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ, ಕೊಡಗು ಇವರನ್ನು. ನಮ್ಮ ವೇದಿಕೆಯ ಅತ್ಯಂತ ಸಜ್ಜನ, ಸುಶೀಲ, ಸರಳ ವ್ಯಕ್ತಿತ್ವದವರು ಎಂದರೆ ತಪ್ಪಾಗಲಾರದು. ಶರಣ ಸಂಸ್ಕೃತಿಯ ಮನೆಯಲ್ಲಿ ಹುಟ್ಟಿದ ಇವರು ನಮ್ಮ ವೇದಿಕೆ ಯಲ್ಲಿ ನಡೆಯುವ ಗೂಗಲ್ ಮೀಟ ಉಪನ್ಯಾಸ ಮಾಲಿಕೆಗಳಿಗೆ ತಮ್ಮ ತಂದೆ ಮತ್ತು ತಾಯಿಯವರ ಹೆಸರಿನಲ್ಲಿ ದತ್ತಿ ದಾಸೋಹ ವನ್ನಿಟ್ಟ ಮಹನೀಯರು. ಇವರ ತಂದೆಯವರು ಸಾಮಾಜಿಕ ಕಳಕಳಿ, ಬಡವರ ಬಗೆಗೆ ಕಾಳಜಿ ಬಂಧು-ಬಾಂಧವರ ಮತ್ತು ಸಹಪಾಠಿಗಳ ಮಕ್ಕಳ ಉನ್ನತ ಶಿಕ್ಷಣದ ಜವಾಬ್ದಾರಿ, ಹೀಗೆ ಹತ್ತು ಹಲವಾರು ರೀತಿಯಲ್ಲಿ ಸಮಾಜಮುಖಿ ಕೆಲಸಮಾಡಿ, ಎಲ್ಲ ಮಕ್ಕಳು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಗಳಿಸುವಂತೆ ಮಾಡಿದವರು. ಡಾ. ಆಲೂರ ಅವರ ಮಾತೋಶ್ರೀಯವರು ಸಹ ಸುಸಂಸ್ಕೃತ ಮಹಿಳೆ ಯಾಗಿ, ಸಂಸ್ಕಾರದಿಂದ ಕೂಡಿದ ತಾಯಿಯಾಗಿ ಐದು ಜನ ಮಕ್ಕಳಿಗೂ ಶಿಕ್ಷಣದ ಜೊತೆಗೆ ನಯ-ವಿನಯದ ಧಾರೆಯನ್ನು ಎರೆದಿದ್ದಾರೆ. ಕೂಡುಕುಟುಂಬದಲ್ಲಿ ಬೆಳೆದ ಡಾ. ಆಲೂರ ಅವರು ಸುತ್ತ ಮುತ್ತಲಿನ ಎಲ್ಲರೂ ಅಭಿಮಾನ ಪಡುವಂತಹ ವ್ಯಕ್ತಿತ್ವದವರು.

ಪ್ರೊ. ಅಶೋಕ ಸಂಗಪ್ಪ ಆಲೂರರವರು, ಕೃಷಿ, ತೋಟಗಾರಿಕೆ. ಉನ್ನತ ಶಿಕ್ಷಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಸುಮಾರು 25 ವರ್ಷಗಳ ಅನುಭವವನ್ನು ಹೊಂದಿರುವ ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೇವೂರಿನ ಲಿಂಗೈಕ್ಯ ಶ್ರೀಮತಿ ದಾನಮ್ಮ ಹಾಗೂ ಲಿಂಗೈಕ್ಯ ಶ್ರೀ ಸಂಗಪ್ಪ ಆಲೂರ ಇವರ ಕಿರಿಯ ಸುಪುತ್ರರು.

ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೇವೂರಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಹಾಗೂ ಬಿಎಸ್ಸಿ (ಕೃಷಿ), ಎಂ.ಎಸ್ಸಿ (ಕೃಷಿ) ಹಾಗೂ ಪಿ.ಹೆಚ್ಚಿ (ಕೃಷಿ) ಪದವಿಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಇದರೊಂದಿಗೆ ಎಂ.ಬಿ.ಎ ಹಾಗೂ ಪಿಜಿಡಿಎಇಎಂ ಪದವಿಗಳನ್ನು ಪಡೆದ ಇವರು ಆಮೇರಿಕಾ, ಜರ್ಮನಿ, ಕೀನ್ಯಾ ಹಾಗೂ ಭಾರತದಲ್ಲಿ 10ಕ್ಕೂ ಹೆಚ್ಚು ಉನ್ನತ ನಿರ್ವಹಣಾ ತರಬೇತಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಪ್ರೊ. ಅಶೋಕ ಸಂಗಪ್ಪ ಆಲೂರರವರು, ಉನ್ನತ ಶಿಕ್ಷಣ, ಮಣ್ಣು ಆರೋಗ್ಯ, ಜಲಾಯನ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಅಂತಾರಾಷ್ಟ್ರೀಯ ಸಹಕಾರ, ಆಹಾರ ಭದ್ರತೆ, ಸಾಂಸ್ಥಿಕ ಅಭಿವೃದ್ಧಿ, ವಾಣಿಜ್ಯೋದ್ಯಮ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ರೈತ ಉತ್ಪಾದಕ ಸಂಘಗಳ ಸ್ಥಾಪನೆ, ಅಭಿವೃದ್ಧಿ ಹಾಗೂ ನೀತಿ-ನಿಯಮ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು, 6 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು 6 ರಾಜ್ಯ ಪ್ರಶಸ್ತಿಗಳನ್ನು ನೀಡಲಾಗಿದೆ. ಅಂತರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಮುಖವಾದವುವೆಂದರೆ, ಥೈಲ್ಯಾಂಡ್ ಸರ್ಕಾರದಿಂದ ಗೌರವ ಪ್ರಶಸ್ತಿ, ಚೈನಾ ಸರ್ಕಾರದ ಲಿಯಾನಿಂಗ್ ಕೃಷಿ ವಿಜ್ಞಾನ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಮತ್ತು ಚೀನಾದ ಜೋಳ ಸಂಶೋಧನಾ ಸಂಸ್ಥೆ ಪ್ರಶಸ್ತಿ, ಆಹಾರ ಭದ್ರತೆಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸ್ವಾಜಿಲ್ಯಾಂಡ್ ಮತ್ತು ಮೊಜಾಂಬಿಕ್ ಸರ್ಕಾರಗಳಿಂದ ಗೌರವ ಸನ್ಮಾನ ಹೀಗೆ ಹಲವು ರಾಷ್ಟ್ರಗಳಿಂದ ಮೆಚ್ಚುಗೆಯ ಪ್ರಮಾಣಪತ್ರ, ನಿಷ್ಠೆ ಪ್ರಶಸ್ತಿ ಹಾಗೂ ಚಿನ್ನದ ಪದಕವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಕರ್ನಾಟಕ ಸರ್ಕಾರ ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ, ವಿಜ್ಞಾನ ಸಂವಹನಕಾರ ಪ್ರಶಸ್ತಿ ಹಾಗೂ ಸ್ವಾತಂತ್ರೋತ್ತರ ಸನ್ಮಾನ ನೀಡಿ ಗೌರವಿಸಿದೆ. ಹಾಗೂ ಆಂಧ್ರಪ್ರದೇಶ ಸರ್ಕಾರ ಇವರಿಗೆ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರು ಹಲವಾರು ಸರ್ಕಾರಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಿತಿಗಳು ಮತ್ತು ಮಿಷನ್‌ಗಳಲ್ಲಿ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಅರೆಶುಷ್ಕ ಪ್ರದೇಶಗಳ ಸಂಶೋಧನಾ ಸಂಸ್ಥೆ, ಸ್ವಿಜರ್‌ಲ್ಯಾಂಡ್ ರಾಯಭಾರ, ವಿಶ್ವ ಆಹಾರ ಸಂಸ್ಥೆ ಹಾಗೂ ವಿಶ್ವಬ್ಯಾಂಕ್‌ನ ಹಲವಾರು ಯೋಜನೆಗಳ ಅನುಷ್ಠಾನದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.

50ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಲ್ಲದೇ ಹಲವಾರು ಅಂತಾರಾಷ್ಟ್ರೀಯ ಯೋಜನೆಗಳಲ್ಲಿ, ನಿಯೋಗಗಳಲ್ಲಿ, ಕಾರ್ಯಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ನೂರಾರು ರಾಷ್ಟ್ರೀಯ-ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಧಾನ ಭಾಷಣಗಳನ್ನು ನೀಡಿದ್ದಾರೆ.

ಕೃಷಿ ಮಾನವ ಪರಿಸರ ಸಂಸ್ಥೆ, ಸ್ಟಿರ್ ಅಭಿವೃದ್ಧಿ ಸಂಸ್ಥೆ, ಇಕ್ರೆಸ್ಯಾಟ್ ಹಾಗೂ ತೋಟಗಾರಿಕೆ ವಿಶ್ವವಿದ್ಯಾಯಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಇವರು ಅನಂತಪುರದ ಭಾರತೀಯ ಇಂಜಿನಿಯರಿಂಗ್ ಹಾಗೂ ವಿಜ್ಞಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಪ್ರಥಮ ನಿರ್ದೇಶಕರಾಗಿ ರಾಜ್ಯದಲ್ಲಿ 1250ಕ್ಕೂ ಹೆಚ್ಚು ರೈತ ಉತ್ಪಾದಕರ ಸಂಸ್ಥೆಗಳನ್ನು ಬೆಳೆಸಲು ಸೇವೆ ನೀಡಿದ್ದಾರೆ.

ಇವರು 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನೂ, 50ಕ್ಕೂ ಹೆಚ್ಚು ಪುಸ್ತಕಗಳನ್ನೂ, 250ಕ್ಕೂ ಅಧಿಕ ಪ್ರಖ್ಯಾತ ಲೇಖನಗಳನ್ನೂ, 225ಕ್ಕೂ ಅಧಿಕ ಮಣ್ಣು ಸಂಶೋಧನಾ ಅಟ್ಲಾಸ್‌ಗಳನ್ನು ಹಾಗೂ 250 ಕ್ಕೂ ಅಧಿಕ ರೈತರ ಸಾಮಾಜಿಕ-ಆರ್ಥಿಕ ಅಧ್ಯಯನಗಳನ್ನು ಕೈಗೊಂಡು ವಿವಿಧ ಪ್ರಕಟಣೆಗಳನ್ನು ಹೊರ ತಂದಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ‘ವಿಶೇಷ ಅಂಕಣಗಳನ್ನು’ ಬರೆದಿದ್ದಾರೆ.

ಕೊಡಗು ವಿಶ್ವದ್ಯಾಲಯದ ಪ್ರಥಮ ಕುಲಪತಿಗಳಾಗಿ ಬಹಳಷ್ಟು ಪ್ರಗತಿದಾಯಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕೊಡಗಿನಾದ್ಯಂತ ಮನೆ ಮಾತಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಸರ್ ಅವರ ಸೇವೆ ಅವಿಸ್ಮರಣೀಯ ಮತ್ತು ಶ್ಲಾಘನೀಯವಾದುದು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group