ರಾಮದುರ್ಗ ತಾಲೂಕಿನ ಸಾಹಿತ್ಯ ಸಮ್ಮೇಳನಗಳು

0
90

ರಾ ಮದುರ್ಗ ತಾಲೂಕು ಪೌರಾಣಿಕವಾಗಿ, ಐತಿಹಾಸಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ, ಬೌಧ್ಧಿಕವಾಗಿ ಪ್ರಸಿಧ್ಧಿ ಪಡೆದಂತೆ ಸಾಂಸ್ಕೃತಿಕ ವಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.ಅದರಲ್ಲೂ ವಿಶೇಷವಾಗಿ ಸಾಹಿತ್ಯಿಕವಾಗಿ ಸಾಕಷ್ಟು ಬೆಳವಣಿಗೆ ಕಂಡಿದೆ.ಇದಕ್ಕೆ ಉದಾಹರಣೆಯಾಗಿ ತಾಲೂಕಿನಲ್ಲಿ ನಡೆದ ಹನ್ನೊಂದು ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ. ಎಂಟು ತಾಲೂಕಾ ಸಮ್ಮೇಳನಗಳು, ಒಂದು ಹೋಬಳಿ ಮಟ್ಟದಲ್ಲಿ ( ಸಾಲಹಳ್ಳಿ ),ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ,ಇನ್ನೊಂದು ಬೆಳಗಾವಿ ಜಿಲ್ಲೆಯ ೩ ನೇ ಚುಟುಕು ಸಾಹಿತ್ಯ ಸಮ್ಮೇಳನ.

೨೦೦೪ ನೇ ಇಸ್ವಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ ರಾಮದುರ್ಗದಲ್ಲಾಗಲಿ, ತಾಲೂಕಿನ ಯಾವುದೇ ಭಾಗದಲ್ಲಾಗಲಿ, ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದದ್ದು ಗಮನಕ್ಕೆ ಬರಲಿಲ್ಲ.ಹಾಗಾಗಿ ೨೦೦೪ ರಲ್ಲಿ ( ಆಗಸ್ಟ್ ತಿಂಗಳು ) ರಾಮದುರ್ಗದಲ್ಲಿ ಪ್ರಪ್ರಥಮವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.ಇದರ ವೈಶಿಷ್ಟ್ಯ,ವಿಶೇಷತೆ ಏನೆಂದರೆ,ವಿವಿಧ ಗೋಷ್ಠಿಗಳು ಎರಡು ದಿನ ನಡೆದವು. “ದರ್ಪಣ”ಎಂಬ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಿತ್ತು.(ಆರ್.ಎಂ.ಪಾಟೀಲರು ಪ್ರಧಾನ ಸಂಪಾದಕರು, ಪ್ರೊ.ವೆಂಕಟೇಶ ಹುಣಶೀಕಟ್ಟಿ ಅವರು ಸಂಪಾದಕರಾಗಿದ್ದರು). ಅಂದಿನಿಂದ ಇಲ್ಲಿಯವರೆಗೂ ಜರುಗಿದ ತಾಲೂಕಾ ಸಮ್ಮೇಳನಗಳು ಒಂದು ದಿನಕ್ಕೆ ಮಾತ್ರ ಸೀಮಿತಗೊಂಡಿವೆ.ಸ್ಮರಣ ಸಂಚಿಕೆಯಂತೂ ಇಲ್ಲವೇ ಇಲ್ಲ.ವ್ಹಿ.ಜಿ ಪೂಜೇರ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಸಮ್ಮೇಳನಕ್ಕೆ ಪರಿಷತ್ತಿನಿಂದ ಯಾವುದೇ ಧನ ಸಹಾಯ ಇರಲಿಲ್ಲ. ಜಾಹೀರಾತು ಹಾಗೂ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಲಾಗಿತ್ತು.ಸಾಹಿತ್ಯ ಗೋಷ್ಠಿಯಲ್ಲಿಎಂ.ಪಿ.ಪ್ರಕಾಶ (ಮಂತ್ರಿಗಳು ) ಅವರು ಭಾಗವಹಿಸಿದ್ದು ಮತ್ತೊಂದು ವಿಶೇಷವಾಗಿತ್ತು.ಪ್ರೊ.ವೆಂಕಟೇಶ ಹುಣಶೀಕಟ್ಟಿಯವರು ಗೋಷ್ಠಿಯ ಅಧ್ಯಕ್ಷರಾಗಿದ್ದರು.

ಅಬ್ಬಾ !ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೈಭವವನ್ನು ಮೀರಿಸುವಂತಿತ್ತು ತಾಲೂಕಾ ಸಮ್ಮೇಳನ ಎಂಬ ಉದ್ಗಾರ ಹೊರಟಿತ್ತು ಸಾಹಿತಿಗಳಿಂದ, ಸಾಹಿತ್ಯಾಸಕ್ತರಿಂದ, ಜನರಿಂದ.

ಮುಂದೆ ಒಂಬತ್ತು ವರ್ಷಗಳ ಕಾಲ ಯಾವುದೇ ಸಮ್ಮೇಳನ ನಡೆಯಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಧನ ಸಹಾಯ ದೊರಕತೊಡಗಿದಾಗ ಸಮ್ಮೇಳನಗಳಿಗೆ ಮತ್ತೆ ಚಾಲನೆ ಸಿಕ್ಕಿತು.

೨೦೧೩ ರಲ್ಲಿ ರಾಮದುರ್ಗ ತಾಲೂಕಿನ ಎರಡನೇ ಸಮ್ಮೇಳನ ಹಸನ್ ನಯೀಂ ಸುರಕೋಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು( ರಾಮದುರ್ಗ )

ತಾಲೂಕಿನ ಮೂರನೇ ಸಮ್ಮೇಳನ ಪದ್ಮರಾಜ ದಂಡಾವತಿಯವರ ಅಧ್ಯಕ್ಷತೆಯಲ್ಲಿ ರಾಮದುರ್ಗದಲ್ಲೇ ಜರುಗಿತು. ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಬೇಕು,ಸಾಹಿತ್ಯಾಭಿರುಚಿ ಬೆಳೆಯಬೇಕು ಎಂಬ ದೃಷ್ಟಿಯಿಂದ ಸಮ್ಮೇಳನಗಳು ಗ್ರಾಮೀಣ ಭಾಗದಲ್ಲಿ ನಡೆದವು.

(೨)

ನಾಲ್ಕನೇ ಸಮ್ಮೇಳನ ರಾಮಣ್ಣ ಬ್ಯಾಟಿ ಅಧ್ಯಕ್ಷತೆಯಲ್ಲಿ ಸುರೇಬಾನದಲ್ಲಿ ಜರುಗಿತು.

೨೦೧೭ ಜುಲೈ ಒಂದರಂದು ಸುನ್ನಾಳದಲ್ಲಿ ಜರುಗಿದ ೫ ನೇ ಸಮ್ಮೇಳನದ ಅಧ್ಯಕ್ಷತೆಯನ್ನು ಹಲಗತ್ತಿಯ ( ಹೊಸಕೋಟಿ )ಹಿರಿಯ ಸಾಹಿತಿಗಳಾದ ಪ್ರೊ.ವೆಂಕಟೇಶ ಹುಣಶೀಕಟ್ಟಿ ಅವರು ವಹಿಸಿದ್ದರು.

೬ ನೇ ಸಮ್ಮೇಳನ ಡಾ.ಆರ್.ಬಿ.ಚಿಲುಮಿಯವರ (ಹೊಸಕೋಟಿ) ಅಧ್ಯಕ್ಷತೆಯಲ್ಲಿ ಬಟಕುರ್ಕಿ ಗ್ರಾಮದಲ್ಲಿ ನಡೆಯಿತು.ಇದರಲ್ಲೂ ಒಂದು ವಿಶೇಷತೆ ಇತ್ತು. ಪ್ರೊ.ವೆಂಕಟೇಶ ಹುಣಶೀಕಟ್ಟಿಯವರು ಮೂಲತಃ ಹೊಸಕೋಟಿಯವರು.ಅವರು ಹೊಸಕೋಟಿಯವರೇ ಆದ ಡಾ.ಚಿಲುಮಿಯವರಿಗೆ ಪರಿಷತ್ತಿನ ಧ್ವಜ ಹಸ್ತಾಂತರಿಸಿದ್ದರು.

ಮಹಿಳೆಯರಿಗೂ ಪ್ರಾತಿನಿಧ್ಯ ಕೊಡಬೇಕೆಂಬ ದೃಷ್ಟಿಯಿಂದ ಕಟಕೋಳದಲ್ಲಿ ಜರುಗಿದ ಏಳನೇ ಸಾಹಿತ್ಯ ಸಮ್ಮೇಳನಕ್ಕೆ ಶ್ರೀಮತಿ ಕಲ್ಯಾಣಮ್ಮ ಲಂಗೋಟಿ ಅವರನ್ನು ಸರ್ವಾಧ್ಯಕ್ಷೆಯನ್ನಾಗಿ ಮಾಡಲಾಗಿತ್ತು.

ಎಂಟನೇ ಸಮ್ಮೇಳನ ಡಾ.ಆರ್.ಜಿ.ಅಣ್ಣಾನವರ ಅಧ್ಯಕ್ಷತೆಯಲ್ಲಿ ಹುಲಕುಂದ ಗ್ರಾಮದಲ್ಲಿ ನಡೆಯಿತು.

ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವಲ್ಲಿಯೂ ರಾಮದುರ್ಗ ಹಿಂದೆ ಬಿದ್ದಿಲ್ಲ. ಶ್ರೀಮತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆಯಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ ರಾಮದುರ್ಗದಲ್ಲೇ ನಡೆದಿತ್ತು.ಎರಡು ದಿನಗಳವರೆಗೆ ವಿವಿಧ ಗೋಷ್ಠಿಗಳು ನಡೆದವು.

ಹೋಬಳಿ ಮಟ್ಟದಲ್ಲೂ ಒಂದು ಸಮ್ಮೇಳನ ನಡೆಯಿತು.ಸಾಲಹಳ್ಳಿಯಲ್ಲಿ ಜರುಗಿದ ಸಮ್ಮೇಳನಕ್ಕೆ ಆರ್.ಎಸ್.ಪಾಟೀಲರು ಅಧ್ಯಕ್ಷರಾಗಿದ್ದರು.

ಈ ಎಲ್ಲ ಹತ್ತೂ ಸಮ್ಮೇಳನಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದವು. ೨೦೨೨ ,ಅಕ್ಟೋಬರ ೧೫-೧೬ ರಂದು ಬೆಳಗಾವಿ ಜಿಲ್ಲೆಯ ಮೂರನೇಯ ಚುಟುಕು ಸಾಹಿತ್ಯ ಸಮ್ಮೇಳನ ಎಲ್.ಎಸ್.ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ರಾಮದುರ್ಗದಲ್ಲಿ ನಡೆಯಿತು.ಎರಡು ದಿನ ವಿವಿಧ ಗೋಷ್ಠಿಗಳು ನಡೆದವು.

***********************

ಪ್ರೊ.ವೆಂಕಟೇಶ ಹುಣಶೀಕಟ್ಟಿ
ಹಿರಿಯ ಸಾಹಿತಿಗಳು,ಹಲಗತ್ತಿ

LEAVE A REPLY

Please enter your comment!
Please enter your name here