ಮೂಡಲಗಿ: ‘ಸಮಾಜದ ಸ್ವಾಸ್ಥ್ಯ ಕಾಯುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ’ ಎಂದು ಯುವ ನಾಯಕ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಲಗಿ ಘಟಕದ ಗೌರವ ಅಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘದ ಸದಸ್ಯರಿಗೆ 2023-24ನೇ ಸಾಲಿನ ಸದಸ್ಯತ್ವ ಗುರುತಿನ ಕಾರ್ಡಗಳನ್ನು ವಿತರಿಸಿ ಮತ್ತು ಸಂಘದವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂಕುಶವಿದ್ದಂತೆ ಇರುವ ಮಾಧ್ಯಮವು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸುವುದು ಅವಶ್ಯವಿದೆ ಎಂದರು.
ಮೂಡಲಗಿಯು ತಾಲ್ಲೂಕು ಕೇಂದ್ರವಾಗಿದ್ದರಿಂದ ಪತ್ರಕರ್ತರಿಗಾಗಿ ಪತ್ರಿಕಾ ಭವನದ ಅವಶ್ಯವಿದ್ದು, ಅದಕ್ಕಾಗಿ ಬೇಕಾದ ನಿವೇಶನ ಮತ್ತು ಕಟ್ಟಡಕ್ಕಾಗಿ ಎಲ್ಲರೂ ಸಂಘಟಿತರಾಗಿ ಕಾರ್ಯಮಾಡುವುದು ಅವಶ್ಯವಿದೆ. ಪತ್ರಿಕಾ ಭವನದ ನಿವೇಶನಕ್ಕಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ತಂದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನ ಮಾಡೋಣ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡಿದ ಗುರುತಿನ ಪತ್ರಗಳನ್ನು ಸಂಘದ ಸದಸ್ಯರಿಗೆ ಸವೋತ್ತಮ ಜಾರಕಿಹೊಳಿ ಅವರು ವಿತರಿಸಿದರು.
ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಇದೇ ಜುಲೈ ತಿಂಗಳ ಮೊದಲ ವಾರದಲ್ಲಿ ಪತ್ರಿಕಾ ದಿನಾಚರಣೆಯೊಂದಿಗೆ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.
ಮೂಡಲಗಿಯಲ್ಲಿ ಪತ್ರಿಕಾ ಭವನದ ಅವಶ್ಯವಿದ್ದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮತ್ತು ಬೇರೆ ಬೇರೆ ಮುಖಂಡರ ಸಹಕಾರದೊಂದಿಗೆ ಅದನ್ನು ಕಾರ್ಯರೂಪಕ್ಕೆ ಬರುವಂತೆ ಸಾಂಘಿಕವಾಗಿ ಪ್ರಯತ್ನ ಮಾಡೋಣ ಎಂದರು.
ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಎಲ್.ಸಿ. ಗಾಡವಿ, ಲಕ್ಷ್ಮಣ ಅಡಿಹುಡಿ ವೇದಿಕೆಯಲ್ಲಿದ್ದರು.
ಶಿವಾನಂದ ಹಿರೇಮಠ, ಹನಮಂತ ಸತರಡ್ಡಿ, ಶಂಕರ ಹಾದಿಮನಿ, ಈಶ್ವರ ಢವಳೇಶ್ವರ ಇದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳನ್ನವರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಸುಧಾಕರ ಉಂದ್ರಿ, ಚಂದ್ರಶೇಖರ ಪತ್ತಾರ ನಿರೂಪಿಸಿದರು, ಸಂಘದ ಕಾರ್ಯದರ್ಶಿ ಅಲ್ತಾಫ ಹವಾಲ್ದಾರ್ ವಂದಿಸಿದರು.