ಬೆಳಗಾವಿ : ಪ್ರಸಕ್ತ ಮುಜರಾಯಿ ಖಾತೆ ಸಚಿವೆಯಾಗಿರುವ ಶಶಿಕಲಾ ಜೊಲ್ಲೆಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿದ್ದಾಗ ಶಾಲಾ ಮಕ್ಕಳಿಗೆ ಮೊಟ್ಟೆ ಪೂರೈಸುವವರಿಂದ ಕಮಿಶನ್ ಕೇಳಿದ್ದರ ಬಗ್ಗೆ ತನಿಖೆಯಾಗಬೇಕೆಂದು ದೂರು ಸಲ್ಲಿಸಿದ್ದರೂ ಇನ್ನೂವರೆಗೂ ತನಿಖೆ ಕೈಗೊಳ್ಳದ ಭ್ರಷ್ಟಾಚಾರ ನಿಗ್ರಹ ದಳದ ಇಬ್ಬರು ಅಧಿಕಾರಿಗಳ ವಿರುದ್ಧವೇ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಬೆಳಗಾವಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಎಸ್ ಪಿ ಬಿ.ಎಸ್ ನ್ಯಾಮಗೌಡ ಹಾಗೂ ಡಿ ವೈ ಎಸ್ ಪಿ ಜೆ ಎಮ್ ಕರುಣಾಕರ ಶೆಟ್ಟಿ ವಿರುದ್ಧ ಬೆಳಗಾವಿ ಜೆಎಮ್ ಎಫ್ ಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ ಗಡಾದ ಅವರು, ಮೊಟ್ಟೆ ಖರೀದಿಯಲ್ಲಿ ಭಾರೀ ಪ್ರಮಾಣದ ಕಮಿಶನ್ ಗಾಗಿ ಬೇಡಿಕೆಯಿಟ್ಟಿರುವ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸಿ ದಾಖಲೆ ಸಮೇತ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿತ್ತು ಆದರೆ ಇನ್ನೂವರೆಗೂ ಸಚಿವೆ ಜೊಲ್ಲೆ ಹಾಗೂ ಶಾಸಕ ಪರಣ್ಣ ಮುನವಳ್ಳಿಯವರ ವಿರುದ್ಧ ಈ ಅಧಿಕಾರಿಗಳು ದೂರು ದಾಖಲು ಮಾಡಿಕೊಂಡು ವಿಚಾರಣೆ ನಡೆಸಿಲ್ಲ. ಸಚಿವೆ ಹಾಗೂ ಶಾಸಕರ ಅನುಕೂಲಕ್ಕಾಗಿ ಈ ಇಬ್ಬರು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು ಇವರ ವಿರುದ್ಧ ಸೆ.೧೬೬ ಎ ಪ್ರಕಾರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಭ್ರಷ್ಟಾಚಾರ ನಿಗ್ರಹಕ್ಕಾಗಿಯೇ ಇರುವ ಸಂಸ್ಥೆಗೆ ನೇರವಾಗಿ ದೂರು ಕೊಟ್ಟಿದ್ದರೂ ಇಬ್ಬರೂ ಅಧಿಕಾರಿಗಳು ಮೊಟ್ಟೆ ಖರೀದಿ ಹಗರಣದಲ್ಲಿ ಸಿಲುಕಿಕೊಂಡಿದ್ದ ಸಚಿವೆ ಶಶಿಕಲಾ ಜೊಲ್ಲೆಯವರೇ ಅಧಿಕಾರದಲ್ಲಿ ಇರುವರೆಂದು ತನಿಖೆಯನ್ನು ಕೈಬಿಟ್ಟಿರುವರೇನೋ ಎಂಬ ಅನುಮಾನಗಳಿವೆ.
ಆಡಳಿತ ಪಕ್ಷದ ಸಚಿವೆಯಾಗಿ ಶಶಿಕಲಾ ಜೊಲ್ಲೆಯವರು ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಕಮಿಶನ್ ನಿರೀಕ್ಷೆ ಮಾಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಸಾರ್ವಜನಿಕರಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು ಹಗರಣ ಹೊರಬಿದ್ದಾಗ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಆಗ್ರಹಗಳೂ ಕೇಳಿಬಂದಿದ್ದವು ಆದರೆ ಯಾವುದಕ್ಕೂ ಜಗ್ಗದ ಸಚಿವರು ಅಧಿಕಾರದಲ್ಲಿ ಮುಂದುವರೆದದ್ದೂ ಅಲ್ಲದೆ ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಂತಾಗಿದೆ.
ಬೆಳಗಾವಿ ನ್ಯಾಯಾಲಯವು ಗಡಾದ ಅವರ ದೂರಿನ ವಿಚಾರಣೆಯನ್ನು ಇದೇ ದಿ. ೨೦ ರಂದು ನಿಗದಿ ಪಡಿಸಿದ್ದು ಯಾವ ಫಲಿತಾಂಶ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕು.