ನಾವು – ನಮ್ಮವರು
ಡಾ. ಶರಣಮ್ಮ ಗೊರೆಬಾಳ ಅವರು ನಮ್ಮ ವೇದಿಕೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಯಾವತ್ತೂ ನಗುಮೊಗದ, ಎಲ್ಲರನ್ನೂ ಪ್ರೀತಿಸುವ,ಹೊಂದಿಕೊಳ್ಳುವ ಗುಣದ,ಖುಷಿಯಾಗಿರುವ, ನಿರ್ಮಲ ಮನಸ್ಸಿನ ಸಾತ್ವಿಕ ಚಿಂತನೆಯ ಮಹಿಳೆ ಎಂದರೆ ತಪ್ಪಾಗಲಾರದು.
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದಲ್ಲಿ ಅವರ ಮಾವನವರಾದ ಲಿಂಗಬಸಪ್ಪ ಗೊರೆಬಾಳ ಅವರ ಹೆಸರಿನಲ್ಲಿ ಮತ್ತು ತಂದೆಯವರಾದ ಕಲ್ಮೇಶ್ವರ ಶಿವಪ್ಪ ಕೆಂಗಾಪುರ ಅವರ ಹೆಸರಿನಲ್ಲಿ ದತ್ತಿ ದಾಸೋಹ ನೀಡಿದ್ದಾರೆ.
ಡಾ. ಶರಣಮ್ಮ ಗೊರೆಬಾಳ ಪ್ರಾಚಾರ್ಯರು ವಿದ್ಯಾರಣ್ಯ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ
ಇವರು ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಾವರಗೇರಿಯವರು,ಹುಟ್ಟಿದ್ದು ತಾಯಿಯ ತವರೂರಾದ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಎತ್ತಿನ ಹಳ್ಳಿಯಲ್ಲಿ,ಅವರ ತಂದೆ ಕಲ್ಮೇಶ್ವರ ಕೆಂಗಾಪುರ ಗ್ರಾಮ ಸೇವಕರಾಗಿ ಸೇವೆ ಸಲ್ಲಿಸಿದ್ದು ರಾಯಚೂರು ಜಿಲ್ಲೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಮುಗಿಸಿದರು. ಮುಂದೆ ಪಿಯುಸಿ ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಮಹಾ ಮಹಾವಿದ್ಯಾಲಯ, ಬಿ.ಎ ಪದವಿಯನ್ನು ಕಿಟಲ್ ಕಲಾ ಮಹಾವಿದ್ಯಾಲಯದಲ್ಲಿ ಮುಗಿಸಿದರು. ಬಿ.ಎ ಓದುತ್ತಿರುವಾಗಲೇ 1988ರಲ್ಲಿ ಎ. ಎಲ್. ಗೊರೆಬಾಳ ಅವರ ಜೊತೆ ಮದುವೆ ಆಯಿತು, ನಂತರ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು
ತಂದೆ ಕಲ್ಮೇಶ್ವರ ಕೆಂಗಾಪೂರ,ತಾಯಿ ಕಮಲಾಕ್ಷಿ ಕೆಂಗಾಪೂರ. ಶರಣಮ್ಮ ಅವರೇ ಹಿರಿಯ ಮಗಳು, ಇಬ್ಬರು ತಮ್ಮಂದಿರು. B.A,M.A,phd ಮಾಡಿ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿದರು.
ಮನೆಯವರು ಅಖಂಡಪ್ಪ ಎಲ್. ಗೊರೆಬಾಳ, ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, (KSFC), ಒಬ್ಬಳೇ ಮಗಳು ಪ್ರಜ್ಞಾ ಗೊರೆಬಾಳ, ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.
ಡಾ. ಶರಣಮ್ಮ ಅವರು ಎಂ.ಎ ಕನ್ನಡ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಪಿ.ಎಚ್. ಡಿ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಡಾ. ಎಚ್.ಎಮ್. ಮಹೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ 1997 ರಲ್ಲಿ ಕನ್ನಡ ಸಾಹಿತ್ಯದಲ್ಲಿ ಆತ್ಮ ಚರಿತ್ರೆಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದರು.1998 ರಿಂದ ತಾವೇ ಕಲಿತ ವಿದ್ಯಾರಣ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ವಿಷಯದ ಉಪನ್ಯಾಸಕಿಯಾಗಿ ಸೇವೆ ಪ್ರಾರಂಭಿಸಿದರು. 2009 ರಲ್ಲಿ ಬಡ್ತಿ ಹೊಂದಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2005 ರಿಂದ 2008 ರ ವರೆಗೆ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
2018 ರಿಂದ 2020ರ ವರೆಗೆ ಉತ್ತರ ಕರ್ನಾಟಕದ ಲೇಖಕಿಯರ ಸಂಘದ ಉಪಾಧ್ಯಕ್ಷಯಾಗಿ ಸೇವೆ ಸಲ್ಲಿಸಿದ್ದಾರೆ.
2021- 2022ರ ಸಾಲಿಗೆ ಧಾರ ವಾಡ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ನಾಲ್ಕು ವರ್ಷ ಧಾರವಾಡ ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಪುಸ್ತಕ ಪ್ರಕಟಣೆ
1..ಕನವರಿಕೆ ಕವನ ಸಂಕಲನ
2..ಅಂಕುರ ಲೇಖನ ಸಂಗ್ರಹ
3..ಅಪ್ಪನೂ ನನಗಿಷ್ಟ ಸಂಪಾದಿತ ಕೃತಿ
4..ಕನ್ನಡ ಸಾಹಿತ್ಯದಲ್ಲಿ ಆತ್ಮ ಚರಿತ್ರೆ-ಸಂಶೋಧನಾ ಪ್ರಬಂಧ
5..ಮತ್ತೆ ನಕ್ಕಿತು ಭೂಮಿ ಎಂಬ ಕವನ ಸಂಕಲನ ಪ್ರಕಟಗೊಂಡಿವೆ.
ಸಂಪಾದಕ ಮಂಡಳಿ ಸದಸ್ಯರು
1) ಮಕ್ಕಳ ಸಾಹಿತ್ಯ ಮಾಲೆ,
ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ, ಮಕ್ಕಳ ನಾಟಕಗಳು ಮೂರು ಭಾಗಗಳು
2) ಕನ್ನಡ – ಕರ್ನಾಟಕ ಪಾಟೀಲ ಪುಟ್ಟಪ್ಪನವರ ಶತಮಾನೋತ್ಸವದ ಅಭಿನಂದನಾ ಗ್ರಂಥ.
3)ಪ್ರತೀಕ , ಡಾ.ಎಚ್ ಎಮ್ ಮಹೇಶ್ವರಯ್ಯ ಅವರ ಅಭಿನಂದನ ಗ್ರಂಥ
3)ವಚನ ಸಿರಿ _ ವಚನಗಳ ವಿಶ್ಲೇಷಣಾ ಗ್ರಂಥ
4)ಅನುಭವ ಸಿರಿ
5) ಅವಲೋಕನ
6)ತಾಯಿ ಇದ್ದರೆ ತವರೆಚ್ಚು
ಲೇಖನಗಳು
ಡಾ. ಶರಣಮ್ಮ ಅವರ ಅನೇಕ ಲೇಖನಗಳು ಪ್ರಸಿದ್ಧ ಪ್ರಮುಖ ಪುಸ್ತಕಗಳಲ್ಲಿ ಪ್ರಕಟವಾಗಿವೆ. ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಪ್ರಕಟಗೊಂಡ ಪುನರಾವಲೋಕನ ಪುಸ್ತಕದಲ್ಲಿ ಆತ್ಮಕಥೆ ಮತ್ತು ಜೀವನ ಚರಿತ್ರೆ ಕನ್ನಡ ಸಾಹಿತ್ಯ ಅಕಾಡೆಮಿ ಯಿಂದ ನಮ್ಮ ಕಣ್ಣಲ್ಲಿ ನೀವು ಎಂಬ ಪುಸ್ತಕದಲ್ಲಿ, ಚದುರಂಗ ಹಾಗೂ ವ್ಯಾಸರಾಯ ಬಲ್ಲಾಳರ ಕೃತಿಗಳಲ್ಲಿ ಸ್ತ್ರೀ ಪರ ಕಾಳಜಿ ಲೇಖನ, ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟಗೊಂಡ ಪುಸ್ತಕದಲ್ಲಿ ದಲಿತೇತರ ಆತ್ಮ ಚರಿತ್ರೆಗಳಲ್ಲಿ ದಲಿತರ ಚಿತ್ರಣ ಧಾರವಾಡದ ಮುರುಘಾ ಮಠದಿಂದ ಪ್ರಕಟಗೊಂಡ ಶಿವಶರಣೆಯರ ಜೀವನ ದರ್ಶನ ಪುಸ್ತಕದಲ್ಲಿ, ಅಕ್ಕ ನಾಗಮ್ಮನ ಜೀವನ ಚರಿತ್ರೆ,
ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡ ಕನಕದಾಸರ ಪುಸ್ತಕದಲ್ಲಿ, ಕನಕದಾಸ ಹಾಗೂ ಅಂಬಿಗರ ಚೌಡಯ್ಯ ತೌಲನಿಕ ಅಧ್ಯಯನ ಎಂಬ ಲೇಖನ, ಅಲ್ಲದೇ ವಚನ ಸಾಹಿತ್ಯ ಕುರಿತು ವಚನಗಳಲ್ಲಿ ಮಾನವೀಯ ಮೌಲ್ಯಗಳು, ಶರಣ ಘಟ್ಟಿವಾಳಯ್ಯ, ಸತ್ಯಕ್ಕ, ಹೇಮಗಲ್ ಹಂಪ ಮುಂತಾದ ಲೇಖನಗಳು ಪ್ರಕಟಗೊಂಡಿವೆ.
ಪ್ರಶಸ್ತಿಗಳು
1..ಗೊರೂರು ಪ್ರತಿಷ್ಠಾನದ ಅತ್ತಿಮಬ್ಬೆ ಪ್ರಶಸ್ತಿ.
2..2015 ರ ಲ್ಲಿ ಧಾರವಾಡ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಉತ್ತಮ ಪ್ರಾಚಾರ್ಯರ ಪ್ರಶಸ್ತಿ ಸಂದಿದೆ.
3..ಚಿತ್ರದುರ್ಗದ ಮುರುಘಾಮಠದಿಂದ ಶಿಕ್ಷಣ ಪ್ರೇಮಿ ಪ್ರಶಸ್ತಿ.
4..ನವಿಲುಗರಿ ವೇದಿಕೆಯಿಂದ ಶಿಕ್ಷಣ ಸಿಂಧೂ ಪ್ರಶಸ್ತಿ.
5..ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ
ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.
ಡಾ. ಶರಣಮ್ಮ ಅವರು ಅನೇಕ ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಅನೇಕ ಲೇಖನಗಳು ಬೇರೆ ಬೇರೆ ಪುಸ್ತಕದಲ್ಲಿ ಪ್ರಕಟಗೊಂಡಿವೆ. ಸಾಕಷ್ಟು ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ಅನೇಕ ಚಿಂತನಪರ ವಿಷಯಗಳ ಮೇಲೆ ಮಾತನಾಡಿದ್ದಾರೆ.
ಉಪನ್ಯಾಸಗಳು
1..ಮಹಿಳಾ ಸಬಲೀಕರಣ
ಕನ್ನಡ ನಾಡು ನುಡಿ ಸಂಸ್ಕೃತಿ
2..ಸಾರ್ಥಕ ಬದುಕು
ಮಹರ್ಷಿ ವಾಲ್ಮೀಕಿ ಋಷಿಗಳ ಜೀವನ ಚರಿತ್ರೆ,
3..ಮಾನವೀಯ ಮೌಲ್ಯಗಳನ್ನು ಸಾರುವ ವಾಲ್ಮೀಕಿ ರಾಮಾಯಣ
4..ಕನ್ನಡ ಸಾಹಿತ್ಯದಲ್ಲಿ ತಾಯಿ
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ ವಚನ ಸಾಹಿತ್ಯ
5..ಅಕ್ಕನ ಅರಿವು ಮತ್ತು ಬಸವ ಚಿಂತನ ವೇದಿಕೆಯ ಗೂಗಲ್ ಮೀಟಿಂಗ್ ನಲ್ಲಿ, ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಸಜ್ಜಲಗುಡ್ಡದ ಶರಣಮ್ಮ ನವರು, ಸಾವಿಲ್ಲದ ಶರಣರು ಮಾಳವಾಡ ದಂಪತಿಗಳು, ಸಾವಿಲ್ಲದ ಶರಣರು ಪಾಟೀಲ ಪುಟ್ಟಪ್ಪ, ಎಚ್ ತಿಪ್ಪೇರುದ್ರಸ್ವಾಮಿ ಹೀಗೆ ಅನೇಕ ವಿಷಯದ ಕುರಿತು ಮಾತನಾಡಿದ್ದಾರೆ.
6..ಧಾರವಾಡ, ಗದಗ ,ಮತ್ತು ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಉತ್ತಮ ವಾಗ್ಮಿಗಳಾದ ಡಾ. ಶರಣಮ್ಮ ಗೊರೆಬಾಳ ಅವರು ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿ ಎಂಬುದು ಹೆಮ್ಮೆಯ ವಿಷಯ. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಹೆಸರಿನಲ್ಲಿ 25000 ರೂ ಕನ್ನಡ ಆತ್ಮಚರಿತ್ರೆಗಳ ಕುರಿತು ಉಪನ್ಯಾಸ ನಡೆಯುವಂತೆ ದತ್ತಿ ಇಟ್ಟಿದ್ದಾರೆ.
ಮಂದಿ ಮಕ್ಕಳೊಳಗ ಚಂದಾಗಿ ಒಂದಾಗಿರಬೇಕು, ನಂದಿ ಬಸವನ ದಯದಿಂದ ಹೋಗುವಾಗ ನಾಕು ಮಂದಿ ಬಾಯಾಗ ಇರಬೇಕು, ಎಂದು ಜನಪದರು ಹೇಳುವಂತೆ, ಇವ ನಮ್ಮವ ಇವ ನಮ್ಮವ ಎಂದು ಎನ್ನರನ್ನೂ ಹಚ್ಚಿಕೊಂಡು ಪ್ರೀತಿಯಿಂದ ಎಲ್ಲರಿಗೂ ಬೇಕಾಗಿ ಬದುಕಬೇಕು, ಬರುವಾಗ ತರಲಿಲ್ಲ, ಹೋಗುವಾಗ ಒಯ್ಯಲಾರೆ ಎಂದ ಮೇಲೆ, ಇದ್ದಾಗ ಸಾರ್ಥಕ ಬದುಕು, ಆದರ್ಶ ಬದುಕು ನಮ್ಮದಾಗಬೇಕು.ಸಾಧ್ಯವಿದ್ದಷ್ಟು ಸಮಾಜ ಸೇವೆ ಮಾಡಬೇಕು, ಶರಣರು, ಸಂತರು ಕೊಟ್ಟು ಹೋದ ಮೌಲ್ಯಗಳನ್ನ ಇಂದಿನ ಯುವ ಪೀಳಿಗೆಗೆ ತಿಳಿಸಿ, ಉಳಿಸುವ ಕಾರ್ಯ ಮಾಡಬೇಕು ಎನ್ನುವುದು ಇವರ ಜೀವನ ಸಂದೇಶ.
ಸದಾ ಕಾಲ ತಮ್ಮ ಕೆಲಸದಲ್ಲಿ ತಾವು ಮಗ್ನರಾಗಿ ಯಾವಾಗಲೂ ಹಸನ್ಮುಖಿಯಾಗಿರುವ, ಯಾವುದೇ ಭೇದಭಾವವಿಲ್ಲದೆ ಎಲ್ಲರ ಜೊತೆಗೆ ಕೂಡಿ ಬಾಳುವ ಮನೋಭಾವದ ಮಹಿಳೆ ಎಂದು ಪರಿಚಯ ಮಾಡಲು ಸಂತೋಷವೆನಿಸುತ್ತದೆ
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ