ರಾಯಚೂರಿನ ಎಮ್.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಜರುಗಿದ ಇಂಧನ ಉಳಿತಾಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ನಿಶಾಂತ ಎಲಿ ಯವರು ಇಂಧನ ಉಳಿತಾಯ ಪ್ರಕ್ರಿಯೆಯಲ್ಲಿ ಜನಸಾಮಾನ್ಯರಲ್ಲಿ ಜಾಗೃತಿ ಉಂಟು ಮಾಡಲು ರಾಷ್ಟ್ರೀಯ ಸ್ಥರದಲ್ಲಿ ಆಂದೋಲನವನ್ನು ಆಯೋಜಿಸಲಾಗುತ್ತಿರುವದು ನಿಜಕ್ಕೂ ಶ್ಲ್ಯಾಘನೀಯವಾಗಿದ್ದು ನಾವೆಲ್ಲರೂ ಕೈಜೋಡಿಸಿದಾಗ ಸಫಲಗೊಳ್ಳುವುದಲ್ಲದೇ ನೈಜ ಅರ್ಥದಲ್ಲಿ ಪರಿಸರ ಸಂರಕ್ಷಣೆಯಾಗುತ್ತದೆಯೆಂದರು.
ಬ್ಯೂರೋ ಆಫ್ ಎನರ್ಜಿ ಎಫೀಸಿಯೆನ್ಸಿ, ಕರ್ನಾಟಕ ರಿನೀವೇಬಲ್ ಎನರ್ಜಿ ಡೆವಲಪ್ಮೆಂಟ್ ಲಿಮಿಟೆಡ್, ಸರ್.ಎಮ್.ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನೀಯರಿಂಗ್ ರಾಯಚೂರ ಹಾಗೂ ಸೆಂಟರ್ ಫಾರ್ ಆ್ಯಶ್ ಯಟಿಲೈಜೇಶನ್ ಆ್ಯಂಡ್ ಎನ್ವಿರಾನ್ಮೆಂಟ್ ಕನ್ಸರ್ವೇಶನ್ ಶಕ್ತಿನಗರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಇಂಧನ ಉಳಿತಾಯ ಸಪ್ತಾಹ ದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ತರಬೇತಿ ಸಲಹೆಗಾರ ಭಾಲಚಂದ್ರ ಜಾಬಶೆಟ್ಟಿ ವಿಷಯ ಮಂಡಿಸಿದರು.
ಹಗಲು ಮತ್ತು ಇಡೀ ರಾತ್ರಿ ಸೌರ ವಿದ್ಯುತ್ ಉತ್ಪಾದಿಸಿ ಬಳಸುವ ದಿನಗಳು ದೂರವಿಲ್ಲ. ಈ ಕುರಿತು ಸಂಶೋಧನೆಗಳು ನಡೆದಿದ್ದು, ಜಗತ್ತಿನಾದ್ಯಂತ ಒಂದೇ ವಿದ್ಯುತ್ ಗ್ರಿಡ್ ಸ್ಥಾಪಿಸುವ ಕುರಿತು ಚರ್ಚೆಗಳು ಆರಂಭವಾಗಿದ್ದು, ಆ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ಮುಂಚೂಣಿಯಲ್ಲಿವೆಯೆಂದರು.
ಸೌರ ವಿದ್ಯುತ್ ಉತ್ಪಾದಿಸಲು ಸ್ಥಳಾವಕಾಶ ಹೊಂದಿರದ ಜಪಾನ ಭಾರತದಲ್ಲಿ ಉತ್ಪಾದನೆಗೊಳ್ಳುವ ಹಸಿರು ಹೈಡ್ರೋಜೆನ್, ಹಸಿರು ಅಮೋನಿಯಾ ಹಾಗೂ ಹಸಿರು ಯುರಿಯಾ ಉತ್ಪಾದಿಸಲು ಒಡಂಬಡಿಕೆ ಮಾಡಿಕೊಂಡಿದೆ. ಹಸಿರು ಹೈಡ್ರೋಜೆನ್ ಉತ್ಪಾದಿಸಲು ಬೇಕಾಗುವ ಹಸಿರು ವಿದ್ಯುತ್ ಉತ್ಪಾದಿಸಲು 74,000 ಕೋಟಿ ರೂಗಳ ವೆಚ್ಚದಲ್ಲಿ ಭಾರತ ಸರಕಾರವು ಸೌರ ವಿದ್ಯುತ್ ಘಟಕಗಳನ್ನು ಲಡಾಖನಲ್ಲಿ ಸ್ಥಾಪಿಸಲು ಉದ್ದೇಶಿಸಿದೆಯೆಂದು ನುಡಿದರು.
ಸೌರ ವಿದ್ಯುಚ್ಛಕ್ತಿಯ ಪರಸ್ಪರ ವಿನಿಮಯದಿಂದ ದೇಶ ವಿದೇಶಗಳ ಮಧ್ಯ ಹೆಚ್ಚಿನ ಬಾಂಧವ್ಯ ಬೆಳೆಯುವುದಲ್ಲದೇ, ಉತ್ಪಾದನಾ ವೆಚ್ಚದಲ್ಲಿ ಗಣನೀಯ ಕಡಿತವಾಗುವುದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ.
ಜೊತೆಗೆ ಇಂಗಾಲದ ಹೆಜ್ಜೆಗಳು ಕಡಿತಗೊಳ್ಳುವುದರಿಂದ ಜಾಗತಿಕ ತಾಪಮಾನದ ಏರುವಿಕೆಯನ್ನು ನಿಯಂತ್ರಿಸಬಹುದಾಗಿದೆಯೆಂದು ಅಭಿಪ್ರಾಯ ಪಟ್ಟರು
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಆರ್ ರವರು ಅಧ್ಯಕ್ಷೀಯ ಭಾಷಣದಲ್ಲಿ ಪಳೆಯುಳಿಕೆ ಆಧಾರದ ಇಂಧನಗಳ ಮೇಲಿನ ಅವಲಂಬನೆಯನ್ನು ನಿಲ್ಲಿಸಿ, ಸೌರ ವಿದ್ಯುತ್ ನ್ನು ಹೆಚ್ಚು ಹೆಚ್ಚು ಬಳಸಲು ಕರೆ ನೀಡಿದರು.
ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಜೊತೆಗೆ ಉತ್ಪಾದಿತ ವಿದ್ಯುಚ್ಛಕ್ತಿ ಯ ಉಳಿತಾಯ ಮಾಡುವುದಕ್ಕೆ ಪ್ರೇರಪಣೆ ಮಾಡುವ ಹಲವಾರು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.
ಸಿವಿಲ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಂಕರಗೌಡರವರು ಭಾಲಚಂದ್ರ ಜಾಬಶೆಟ್ಟಿ ಯವರನ್ನು ಸನ್ಮಾನಿಸಿದರು.
ಕ್ರಾಷುಟೆಕ್ ನ ಸಂಶೋಧನಾ ಅಭಿಯಂತರ ಸುರೇಂದ್ರ ಪಾಟೀಲ, ಪ್ರಾಧ್ಯಾಪಕ ಡಾ. ಕೃಷ್ಟಯ್ಯ ಶೆಟ್ಟಿ, ಭೌತಶಾಸ್ತ್ರದ ಪ್ರಾಧ್ಯಾಪಕ ಗುರುನಾಥ, ಹಾಗೂ ಮಹಾವಿದ್ಯಲಯದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.