ಹುಣಶ್ಯಾಳ ಪಿಜಿ ಇಂಚರ ತೋಟದ ಶಾಲೆಯ ಗಣಿತ ಪ್ರಯೋಗಾಲಯಕ್ಕೆ ಶಾಭಾಷ್ ಗಿರಿ
ಮೂಡಲಗಿ- ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದೇ ಶೂನ್ಯ ಬಂಡವಾಳದೊಂದಿಗೆ ಆರಂಭಿಸಲಾದ ಹುಣಶ್ಯಾಳ ಪಿಜಿ ಗ್ರಾಮದ ಇಂಚಲ ತೋಟದ ಶಾಲೆಯ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿರುವ ಇಂಚಲ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶ್ರೀನಿವಾಸ ರಾಮಾನುಜನ ಗಣಿತ ಪ್ರಯೋಗಾಲಯದ ಕುರಿತು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಗಣಿತ ಪ್ರಯೋಗಾಲಯವನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ ವಿಷಯವನ್ನು ಅತೀ ಸಲೀಸಾಗಿ ಹೇಳಿಕೊಡುತ್ತಿದ್ದಾರೆ. ಯಾವುದೇ ಹಣಕಾಸಿನ ನೆರವಿಲ್ಲದೇ ಶಾಲೆಯ ಕೊಠಡಿಯೊಂದರಲ್ಲಿ ಗಣಿತದ ಎಲ್ಲ ಪ್ರಕಾರಗಳ ಪರಿಕಲ್ಪನೆಗಳನ್ನು ಅಳವಡಿಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅದಕ್ಕಾಗಿ ಇಡೀ ಶಿಕ್ಷಕ ಸಮೂಹವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದು. ಕಲಿಯುವ ವಯಸ್ಸನ್ನು ಎಂದಿಗೂ ಹಾಳು ಮಾಡಿಕೊಳ್ಳಬೇಡಿ. ಕಳೆದು ಹೋದ ಸಮಯವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳಬೇಡಿ. ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತವಾದ ಸ್ಥಾನಮಾನಗಳನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಲಿ- ಕಲಿ ಕೊಠಡಿಗೆ ೧.೫೦ ಲಕ್ಷ ರೂ. ವಂತಿಗೆಯನ್ನು ಸಾರ್ವಜನಿಕರು ನೀಡಿರುವುದು ಶೈಕ್ಷಣಿಕ ಕಾಳಜಿಯನ್ನು ಬಿಂಬಿಸುತ್ತದೆ. ಪ್ರತಿಯೊಂದು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಇಲ್ಲಿಯ ಜನರು ಅತಿ ಉತ್ಸಾಹದಿಂದ ಭಾಗವಹಿಸಿ ಉತ್ತೇಜಿಸುವ ಕೆಲಸವನ್ನು ಮಾಡುತ್ತಿರುವುದಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಬಿಇಓ ಎ.ಸಿ. ಮನ್ನಿಕೇರಿ, ಮುಖಂಡರಾದ ಅವ್ವಣ್ಣ ಡಬ್ಬನ್ನವರ. ಶಂಕರ ಇಂಚಲ, ಪುಂಡಲೀಕ ಸುಂಕದ, ರಾಮನಾಯಿಕ ನಾಯಿಕ, ಶಬ್ಬೀರ ತಾಂಬಿಟಗಾರ, ಬಸು ಕಾಡಾಪೂರ, ಲಾಲಸಾಬ ಜಮಾದಾರ, ಮಹಾದೇವ ಖಡಿ, ಸುರೇಶ ಚಿಕ್ಕೋಡಿ, ಪಿಡಿಓ ಶಿವಾನಂದ ಗುಡಸಿ, ಸಿಅರ್ಪಿ ಆನಂದ ಹಮ್ಮಣ್ಣವರ್ ,ಶಾಲೆಯ ಪ್ರ.ಗುರು ಮಹಾಂತೇಶ ಮಾಳಗೆ, ಎಸ್ ಡಿ ಎಂ ಸಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವರು, ತಾಯಿ -ತಂದೆಯವರು ಮತ್ತು ಜನರ ಆಶೀರ್ವಾದದಿಂದ ಬರುವ ಮೇ ತಿಂಗಳದOದು ಅರಭಾವಿ ಕ್ಷೇತ್ರದ ಶಾಸಕನಾಗಿ ೨೧ ವರ್ಷ ಪೂರ್ತಿಯಾಗುತ್ತೆ. ಶಾಸಕನಾಗಿ ಜನಸೇವೆ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ. ನನ್ನ ಅವಧಿಯಲ್ಲಿ ಎಲ್ಲ ಕೆಲಸಗಳಿಗಿಂತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದೇನೆ. ನಂತರ ಬೇರೆ ಬೇರೆ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ಸಮಾಜದ ಪ್ರಗತಿಯಲ್ಲಿ ಶಿಕ್ಷಣವೊಂದೇ ಪ್ರಮುಖ ಸಾಧನವಾಗಿದೆ.
ಬಾಲಚಂದ್ರ ಜಾರಕಿಹೊಳಿ, ಶಾಸಕರು