spot_img
spot_img

ನಟ ಮಲ್ಲಪ್ಪ ದೂರ ವೀರಪ್ಪನ್ ಭೂತ ರಸ ಪ್ರಸಂಗ

Must Read

spot_img
- Advertisement -

ಇಂದು ಬೆಳಿಗ್ಗೆ ಯಾವುದೋ ಒಂದು ಹೊಸ ನಂಬರ್‌ನಿಂದ ಪೋನ್ ಬಂತು. ‘ಹೇ ಅನಂತ, ನಾನು ಕಣೋ ಮಲ್ಲಪ್ಪ ದೂರ..ಎಂದಾಗ ಆಶ್ಚರ್ಯವಾಯಿತು. ‘ಏನ್, ಮಲ್ಲಪ್ಪಣ್ಣ ಚೆನ್ನಾಗಿದ್ದಿರಾ..ಎಂದೆ. ಚೆಂದ ಏನ್ ಬಂತು. ರಿಟೈರ್ಡ್ ಆಯ್ತು. ಮನೆಯಲ್ಲಿದ್ದೀನಿ. ನೀನು ಏನ್ ಮಾಡ್ತ ಇದ್ದಿಯಾ. ಇನ್ನೂ ನಾಟಕ ಅಂತ ಕೂತಿದ್ದಿಯ. ತಂಡ ಕಟ್ಕೊಂಡು ತಿರುಗ್ತಿದ್ದಿಯಾ ಹೇಗೆ..? ಹೀಗೆ ನಮ್ಮ ಮಾತು ಮುಂದುವರೆದು ಪ್ಲಾಷ್ ಬ್ಯಾಕ್‌ಗೆ ಬಂದೆವು. ಮಲ್ಲಪ್ಪದೂರ ಉತ್ತಮ ನಟರು. ಅವರ ಊರು ಮೈಸೂರು ತಾ. ದೂರ. ಅದು ನಂಜನಗೂಡು ಕಡೆ ಬರುತ್ತದೆಯಂತೆ.!

ನಮ್ಮೂರಿನಲ್ಲಿ ಹೇಮಾವತಿ ನದಿ ಅಣೆಕಟ್ಟೆ ಕೆಲಸ ಪ್ರಾರಂಭವಾಗಿ ಸರ್ಕಾರಿ ದಿನಗೂಲಿ ಕೆಲಸ ಸೇರಿ ಹೇಮಾವತಿ ವಸತಿ ಕಾಲೋನಿಯಲ್ಲಿ ವಾಸವಿದ್ದರು. ಆಗ ನಾನು ಹೈಸ್ಕೂಲು ವಿದ್ಯಾರ್ಥಿ. ಊರಿನಲ್ಲಿ ಜಿ.ಎಸ್.ಪ್ರಕಾಶ್ ಗಣರಾಜ್ಯೋತ್ಸವ, ಸ್ವಾತಂತ್ರೊತ್ಸವ, ರಾಜ್ಯೋತ್ಸವ ದಿನ ಸಾಮಾಜಿಕ ನಾಟಕ ಕಲಿತು ಹೆಚ್‌ಆರ್‌ಪಿ ಮನರಂಜನಾ ಮಂದಿರದಲ್ಲಿ ಪ್ರದರ್ಶಿಸುತ್ತಿದ್ದರು. ಬೇಲೂರು ಕೃಷ್ಣಮೂರ್ತಿಯವರ ಲಚ್ಚಿ, ತ್ಯಾಗಿ, ಕಂಬನಿ, ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿದ ನೆನಪು. ಈ ಎಲ್ಲಾ ನಾಟಕಗಳಲ್ಲಿ ಮಲ್ಲಪ್ಪದೂರ ಅಭಿನಯಿಸಿದ್ದರು. ಈ ತಂಡ ಪ್ರದರ್ಶಿಸಿದ ಸುಳಿಯಲ್ಲಿ ಸಿಕ್ಕವರು ನಾಟಕ ರಂಗದ ಮೇಲೆ ಅದ್ಭುತವಾಗಿ ಮೂಡಿಬಂದಿತ್ತು. ತ್ಯಾಗಿ ನಾಟಕದ ಅಭಿನಯದಿಂದ ತ್ಯಾಗಿಮಂಜು ಎಂದೇ ಊರಿನಲ್ಲಿ ಹೆಸರಾಗಿದ್ದರು ಬ್ರದರ್ ಜಿ.ಆರ್.ಮಂಜುನಾಥ್. ನವೆಂಬರ್ ೧ಕ್ಕೆ ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿ ನನಗೆ ಸ್ಟೂಡೆಂಟ್ ಆಗಿ ಗುರುಗಳನ್ನು ನೋಡಲು ಬರುವಂತೆ ರಂಗದ ಮೇಲೆ ಮಂಜಣ್ಣ ಹೇಳಿದ್ದರು. ಯಾವುದೇ ಡೈಲಾಗ್ ಇಲ್ಲದೆ ರಂಗ ಪ್ರವೇಶಿಸಿದ್ದ ನನ್ನನ್ನು ಬ್ರದರ್ ಕಾಮಿಡಿಗೆ ಬಳಸಿಕೊಂಡು ಗೇಲಿ ಮಾಡಿ ಪ್ರೇಕ್ಷಕರನ್ನು ನಗಿಸಿದ್ದರು. ಪ್ರಥಮ ರಂಗ ಪ್ರವೇಶವೇ ನನಗೆ ಶೇಮ್.! ಬಹುಶ: ನನಗೆ ಗೊತ್ತಿಲ್ಲದೇ ಇದನ್ನೇ ಸವಾಲಾಗಿ ಸ್ವೀಕರಿಸಿ ನಟ ನಾಟಕಕಾರ, ರಂಗ ವಿಮರ್ಶಕನಾಗಿ ಬೆಳೆದೆನು. ಮುಂದೆ ಮಂಜಣ್ಣ ನಾನೇ ಬರೆದಾಡಿಸಿದ ವೀರಪ್ಪನ್ ಭೂತ ನಾಟಕದಲ್ಲಿ ನಟಿಸಿದ್ದರು.

ಈ ನಾಟಕಕ್ಕೆ ನಿಜವಾಗಿಯೂ ಜೀವ ತುಂಬಿ ಜನಪ್ರಿಯತೆಗೆ ಕಾರಣರಾದವರು ಮಲ್ಲಪ್ಪದೂರ. ಆಗ ಡಿಸೆಂಬರ್ ಜನವರಿ ತಿಂಗಳಲ್ಲಿ ಹಾಸನ, ಸಕಲೇಶಪುರ, ಹೊಳೆನರಸೀಪುರ ಜಾತ್ರೆಗಳಲ್ಲಿ ಈ ನಾಟಕ ಪ್ರದರ್ಶಿಸಿದೆವು. ಹಾಸನ ಜಾತ್ರೆ ವಸ್ತು ಪ್ರದರ್ಶನದಲ್ಲಿ ಸಂಜೆ ಆರರಿಂದ ಏಳು ಗಂಟೆಯವರೆಗೆ ಜಿಲ್ಲಾ ನಾಟಕ ತಂಡಗಳಿಗೆ ಸ್ಫರ್ಧಾ ನಾಟಕಕ್ಕೆ ಅವಕಾಶ. ಅಂದು ನಮ್ಮ ನಾಟಕದ ನಂತರ ಮಾಸ್ಟರ್ ಹಿರಣ್ಣಯ್ಯನವರ ನಾಟಕ. ನಾಟಕದ ಹೆಸರು ನೆನಪಿಲ್ಲ. ನಮ್ಮ ನಾಟಕದ ಮಧ್ಯೆ ನಿರೂಪಕರು ಸ್ವರೂಪ್ ಬಂದು ನಾಟಕ ಬೇಗ ಮುಗಿಸಿ ಮಾಸ್ಟರ್ ಹಿರಣ್ಣಯ್ಯನವರ ನಾಟಕ ಇದೆ ಎಂದು ಅವಸರಿಸಿ ನನಗೆ ಸಿಟ್ಟು ಬಂತು. ಆಗ ಹಿರಣ್ಣಯ್ಯನವರೇ ಏಕೆ ಅವರ ನಾಟಕಕ್ಕೆ ತೊಂದರೆ ಕೊಡ್ತಿರಿ. ಅವರು ಕಲಾವಿದರೇ ಚೆನ್ನಾಗಿ ಮಾಡ್ತಿದ್ದಾರೆ ಬಿಡಿ. ನನ್ನ ನಾಟಕ ನೋಡುವ ಆಸಕ್ತಿ ಇದ್ದವರು ಕಾಯುತ್ತಾರೆ. ನಾನು ನಾಟಕದಲ್ಲಿ ರಾಜಕಾರಣಿಗಳು ನೇರಾ ಟೀಕಿಸಿ ವಿಡಂಬಿಸಿದರೆ ಇವರು ಚಪ್ಪಲಿ ಸುತ್ತಿ ಹೊಡೆಯುತ್ತಿದ್ದಾರೆ ಅಷ್ಟೇ ಬಿಡಿ ಎಂದಿದ್ದರು. ಮಾಸ್ಟರ್ ಹಿರಣ್ಣಯ್ಯರಂತೆ ಮಲ್ಲಪ್ಪ ದೂರ ಕೂಡ ಸಂದರ್ಭೋಚಿತ ಹೊಸ ಡೈಲಾಗ್ ಹೊಡೆದು ಎದುರು ಪಾತ್ರದಾರಿಯನ್ನು ಗಲಿಬಿಲಿಗೊಳಿಸುತ್ತಿದ್ದರು. ಈ ವೀರಪ್ಪನ್ ಭೂತ ನಾಟಕ ನಾನು ಬರೆದು ಪ್ರಥಮ ಪ್ರದರ್ಶನ ತಾ. ೩೦-೧೧-೧೯೯೧ರಂದು ಗೊರೂರಿನಲ್ಲಿ ನಡೆದಿತು. ನಾಟಕ ನೋಡಿ ಕೃಪಾ ಎಂಬುವರು ತಾ. ೬-೧೨-೧೯೯೧ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಒಳ್ಳೆಯ ವಿಮರ್ಶೆ ಬರೆದಿದ್ದರು. ಯಾರಪ್ಪ ಕೃಪಾ ಇಷ್ಟು ಚೆನ್ನಾಗಿ ಬರೆದಿದ್ದಾರಲ್ಲಾ ಎಂದು ಆಶ್ಚರ್ಯ ಪಟ್ಟಿದ್ದೆ. ಇರಲಿ ಅಂದು ನಾನು ಸೃಷ್ಟಿಸಿದ ನಾಟಕದ ಪಾತ್ರಗಳು ಮುಂದಿನ ದಿನಗಳಲ್ಲಿ ವಾಸ್ತವವಾಗಿ ಗೋಚರಿಸಿದ್ದವು.

- Advertisement -

ಆಗ ಯಾರ ಕಣ್ಣಿಗೂ ಬೀಳದ ವೀರಪ್ಪನ್ ಭೂತವಾಗಿ ಪೊಲೀಸರನ್ನು ಕಾಡುತ್ತಿದ್ದನು. ನನ್ನ ನಾಟಕದಲ್ಲೂ ವೀರಪ್ಪನ್ ಬರುವುದಿಲ್ಲ. ಬದಲು ಕಾಡಿನಲ್ಲಿ ಈರಪ್ಪ ಎಂಬ ವ್ಯಕ್ತಿ ಗಾರ್ಡ್ಗಳ ಕೈಗೆ ಸಿಕ್ಕಿ ನಡೆಯುವ ಘಟನೆಗಳು ಕಾಲ್ಪನಿಕವಾಗಿ ರೂಪು ತೆಳೆದಿದ್ದವು. ಮುಂದೆ ಅವುಗಳಲ್ಲಿ ಒಂದಿಷ್ಟು ನಿಜವಾಗಿ ಘಟಿಸಿದವು. ಇದೇ ವರ್ಷ ೧೯೯೧ರಲ್ಲಿ ನಿಜ ವೀರಪ್ಪ ಮತ್ತು ಈರಪ್ಪ ಮುಖಾಮುಖಿ ಆಗಿದ್ದ ಸನ್ನಿವೇಶವನ್ನು ಜಿ.ಬಿ.ಅಶೋಕಕುಮಾರ್ ಅವರು ತಮ್ಮ ಹುಲಿಯ ನೆನಪು ಪುಸ್ತಕದಲ್ಲಿ ಬರೆದಿದ್ದಾರೆ.

ಬೂದುಮಲೈ ಅತ್ಯಂತ ಎತ್ತರವಾದ ಬೆಟ್ಟ. ಅದರ ಬುಡದ ಸುತ್ತಳತೆ ಸುಮಾರು ೨೫ ಕಿ.ಮೀ. ಇತ್ತು. ನಮ್ಮ ಎಲ್ಲಾ ಟೀಮ್‌ಗಳಲ್ಲಿ ಒಬ್ಬರು ಕೋಲಿಗೆ ಬಿಳಿ ಬಟ್ಟೆ ಕಟ್ಟಿಕೊಂಡು ಸಾಗುತ್ತಿದ್ದರು. ಅಕಸ್ಮಾತ್ ನಮ್ಮ ಟೀಮ್‌ಗಳು ಎದುರು ಬದುರಾದಾಗ ಕನ್‌ಪ್ಯೂಸ್ ಆಗದಿರಲಿ ಎಂಬ ಮುನ್ನೆಚ್ಚರಿಕೆಯ ಕ್ರಮ ಇದು. (ಇದೇ ರೀತಿ ನಾಟಕದಲ್ಲಿ ಎರಡು ಗಾರ್ಡ್ಗಳು ಕನ್ ಪ್ಯೂಸ್ ಆಗಿ ಎದುರುಬದುರಾಗುವ ಹಾಸ್ಯ ದೃಶ್ಯ ನಾಟಕದಲ್ಲಿ ರಂಜಿಸುತ್ತದೆ.) ಸಂಜೆ ಐದು ಗಂಟೆ ಸುಮಾರಿಗೆ ಕೆ.ಎಸ್.ಆರ್.ಪಿ.ಪೊಲೀಸರ ೧೦ ಜನರ ಒಂದು ಟೀಂ ನಮಗೆ ಎದುರಾಯಿತು. ಅದರ ನೇತೃತ್ವ ವಹಿಸಿದ್ದವರು ಕೊಡಗು ಮೂಲದ ಎಸ್.ಐ.ಈರಪ್ಪ. ನಾವು ಸಿಗುತ್ತಿದ್ದಂತೆ ಅವರು ಬಾರಿ ಗಡಿಬಿಡಿ ಆತಂಕದಿಂದ ನಡೆದ ಸಂಗತಿ ವಿವರಿಸಿದರು. ಆಗಿದ್ದೇನೆಂದರೆ ಈರಪ್ಪ ಅವರ ತಂಡ ಬೂದಿಮಲೈ ಬೆಟ್ಟದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾಗ ಹಾದಿಯ ತಿರುವಿನಲ್ಲಿ ಉದ್ದ ಮೀಸೆಯ ಒಬ್ಬ ವ್ಯಕ್ತಿ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಬರುತ್ತಿದ್ದ. ಆತ ಖಾಕಿ ಪ್ಯಾಂಟ್ ಹಾಗೂ ಸ್ಯಾಂಡೋ ಬನಿಯನ್ ಧರಿಸಿದ್ದ. ಆತನ ಹಿಂದೆ ಮತ್ತೊಬ್ಬ ಎರಡೂ ಕೈಗಳಲ್ಲಿ ಸತ್ತ ಮೊಲಗಳನ್ನು ಹಿಡಿದುಕೊಂಡು ಬರುತ್ತಿದ್ದ. ಎಸ್.ಐ.ಈರಪ್ಪ ಅವರಿಗೆ ನೆರ ಮುಖಾಮುಖಿ ಆದರು. ಮೀಸೆಯ ವ್ಯಕ್ತಿಯೇ ವೀರಪ್ಪನ್. ಈ ದಿಡೀರ್ ಮುಖಾಮುಖಿಗೆ ವೀರಪ್ಪನ್ ಮತ್ತು ಈರಪ್ಪ ಇಬ್ಬರೂ ವಿಚಲಿತರಾಗಿಬಿಟ್ಟರು. ತಮಾಷೆ ಎಂದರೆ ಈರಪ್ಪ ಕೂಡ ವೀರಪ್ಪನಂತೆ ಉದ್ದ ಮೀಸೆ ಬಿಟ್ಟಿದ್ದರು. ಧೈರ್ಯ ತಂದುಕೊAಡ ಅವರು ತಮ್ಮ ಪಾಯಿಂಟ್ ೩೦೩ ರೈಫಲ್ ಅನ್ನು ವೀರಪ್ಪನ್ ಕಡೆ ಗುರಿಯಾಗಿಟ್ಟು ಸರೆಂಡರ್ ಆಗು ಎಂದು ಕೂಗಿದರು. ಏನು ಮಾಡಬೇಕೆಂದು ತೋಚದೆ ಬಂದೂಕು ಸಮೇತ ಎರಡು ಕೈಗಳನ್ನು ಮೇಲಕ್ಕೆತ್ತಿ ನಿಂತ ವೀರಪ್ಪನ್ ಶರಣಾಗುವಂತೆ ನಟಿಸಿದ. ಆತ ಕ್ಷಣಮಾತ್ರದಲ್ಲಿ ತನ್ನ ಎಡಗಡೆಯ ಇಳಿಜಾರು ಪ್ರದೇಶದ ಪೊದೆಗಳತ್ತ ಜಿಗಿದು ಪರಾರಿಯಾದ..

ಇದೇ ರೀತಿಯ ಸನ್ನಿವೇಶದಲ್ಲಿ ಇನ್ನೊಂದು ಸ್ವರೂಪದಲ್ಲಿ ವೀರಪ್ಪನ್ ಭೂತ ನಾಟಕದ ಗಾರ್ಡ್ ಪಾತ್ರಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ನಾನು ಈ ನಾಟಕ ಬರೆದಾಗ ವೀರಪ್ಪನ ನಿಜರೂಪದ ಕಲ್ಪನೆ ಯಾರಿಗೂ ಇರಲಿಲ್ಲ. ತದನಂತರ ನಕ್ಕಿರನ್ ಪತ್ರಿಕೆಯ ಗೋಪಾಲನ್ ಮುಖಾಂತರ ವೀರಪ್ಪನ್ ಪೋಟೋ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದೇ ರೀತಿ ನಮ್ಮೂರಿನಲ್ಲಿ ತಿಮ್ಮೇಗೌಡ ಎಂಬುವರು ಮೀಸೆ ಬಿಟ್ಟಿದ್ದರು. ನೋಡಲು ವೀರಪ್ಪನ್ ತರಹವೇ ಇದ್ದರು. ಮಲ್ಲಪ್ಪದೂರ ಹೋಂಗಾರ್ಡ್ ಲೀಡರ್ ಆಗಿದ್ದರು. ತಿಮ್ಮೇಗೌಡ ಇವರ ಕೆಳಗೆ ಹೋಂಗಾರ್ಡ್ ಆಗಿದ್ದರು. ಒಮ್ಮೆ ಮಲ್ಲಪ್ಪದೂರ ಅನಂತು, ಈ ತಿಮ್ಮೇಗೌಡರನ್ನೇ ವೀರಪ್ಪನ್ ಪಾತ್ರಕ್ಕೆ ಹಾಕಿ ಹೊಸದಾಗಿ ನಾಟಕ ಬರಿ ಎಂದಿದ್ದರು. ಆದರೆ ಅಷ್ಟರಲ್ಲಾಗಲೇ ೧೯೯೨ರಲ್ಲೇ ಈ ನಾಟಕ ಪುಸ್ತಕ ಪಬ್ಲಿಶ್ ಮಾಡಿದ್ದೆ. ಇಂದು ಪೋನ್‌ಗೆ ಸಿಕ್ಕ ಮಲ್ಲಪ್ಪ ಈ ವಿಚಾರ ಪ್ರಸ್ತಾಪಿಸಿ ಅಂದು ಮೈಸೂರು ದಸರಾಕ್ಕೆ ಹೋಂ ಗಾರ್ಡ್ಸ್ ತಂಡ ಮೈಸೂರಿಗೆ ಹೋಗಿತಂತೆ. ಪೊಲೀಸರು ಈ ತಿಮ್ಮೇಗೌಡರನ್ನೇ ವೀರಪ್ಪನ್ ಎಂದು ಹಿಡಿದು ಕೊಂಡಿದ್ದರಂತೆ. ಆಮೇಲೆ ಐಡಿ ಕಾರ್ಡ್ ತೋರಿಸಿ ಬಿಡಿಸಿಕೊಂಡರಂತೆ. ನಾನು ಆ ನಾಟಕದಲ್ಲಿ ಊಹಿಸಿ ಬರೆದಿದ್ದ ಪತ್ರಕರ್ತನಿಂದ ಸತ್ಯ ಹೊರಬರುತ್ತದೆ. ಅಲ್ಲಿ ನಕ್ಕಿರನ್ ಗೋಪಾಲನ್ ವೀರಪ್ಪನ್ ಮುಖವನ್ನು ಹೊರ ಜಗತ್ತಿಗೆ ಮೊಟ್ಟಮೊದಲು ತೋರಿದ್ದನು. ಹಾಸ್ಯ ಪಾತ್ರಕ್ಕೆ ಹೆಸರಾಗಿದ್ದ ಮಲ್ಲಪ್ಪದೂರ ಸುಮಾರು ೬೦೦ ನಾಟಕಗಳಲ್ಲಿ ನಟಿಸಿರಬಹ್ಮದೆಂದು ಹೇಳಿದಾಗ ಆಶ್ಚರ್ಯಗೊಂಡೆನು. ಸಿನಿಮಾ ನಿರ್ಮಾಪಕ ಸಾ.ರ.ಗೋವಿಂದ್ ಅವರ ಓದಿನ ದಿನಗಳಲ್ಲಿ ಕೆಲವು ದಿನ ಗೊರೂರಿನಲ್ಲಿದ್ದರು. ಆಗ ಹೈಸ್ಕೂಲು ಮೈದಾನದಲ್ಲಿ ದಾರಿ ಯಾವುದಯ್ಯ ಮುಂದೆ ನಾಟಕ ಪ್ರದರ್ಶಿತವಾಯಿತು. ಈ ನಾಟಕದಲ್ಲಿ ಗೋವಿಂದ್ ಮತ್ತು ಮಲ್ಲಪ್ಪದೂರ ನಟಿಸಿದ್ದರು. ಈಗ ಇಬ್ಬರೂ ನಮ್ಮಿಂದ ದೂರವಿದ್ದಾರೆ.

- Advertisement -

ಇರಲಿ ೧೯೯೭ರಲ್ಲಿ ಹಾಸನ ಜಿಲ್ಲೆಗೆ ಸಾಕ್ಷರತಾ ಆಂದೋಲನ ಕಾಲಿರಿಸುವ ಮೊದಲು ಬಿಜೆವಿಎಸ್‌ನಿಂದ ಸಾಕ್ಷರತಾ ಜಾಥಾ ನಡೆಯಿತು. ಆಗ ಪ್ರದರ್ಶಿತಿ ಬೀದಿ ನಾಟಕಗಳಲ್ಲಿ ಮಲ್ಲಪ್ಪ ನಟಿಸಿದ್ದರು. ಇಲಿಬೋನು ನಾಟಕ ಉಡುಪಿಯ ರಂಗಭೂಮಿ ನಾಟಕ ಸ್ಫರ್ಧೆಯಲ್ಲಿ ನೆರಳು ಬೆಳಕಿಗೆ ಬಹುಮಾನ ಪಡೆದಿದೆ. ಸುಳಿಯಲ್ಲಿ ಸಿಕ್ಕವರು ಐದಾರು ಪ್ರದರ್ಶನ ಕಂಡಿದೆ. ಬೇಲೂರು ಜಿಲ್ಲಾ ನಾಟಕ ಸ್ಫರ್ದೆಯಲ್ಲಿ ಭಾಗವಹಿಸಿದೆ. ಆಗ ಸ್ಫರ್ಧಾ ನಾಟಕಗಳಲ್ಲಿ ನಮ್ಮ ಪ್ರತಿಭೆಗಳನ್ನು ಓರೆಗಲ್ಲಿಗೆ ಹಚ್ಚುತ್ತಿದ್ದವು. ನಾನು ಕೂಡ ಇಂತಹ ಅವಕಾಶಗಳಿಂದಲೇ ಸೋಲು ಗೆಲುವಿನ ಸರಪಳಿಯಲ್ಲಿ ಸೋತು ಗೆದ್ದಿರುವುದು ನಿಜ. ಮಲ್ಲಪ ಸಾಮಾಜಿಕ ನಾಟಕ ಅಷ್ಟೇ ಅಲ್ಲಾ ಪೌರಾಣಿಕ ನಾಟಕ ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆಯಲ್ಲಿ ಶಕುನಿ, ಆದಿಮೂರ್ತಿ, ವಶಿಷ್ಟರು ಹೀಗೆ ಹತ್ತುಹಲವು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಗಳನ್ನು ಕಲಾವಿದರು ಹಣ ಹಾಕಿ ಹಂಚಿಕೊಂಡರೆ ಉಳಿದವು ಉಚಿತವಾಗಿ ಅಭಿನಯಿಸಲು ಇವರನ್ನು ಹುಡುಕಿ ಬರುತ್ತಿದ್ದವಂತೆ. ಎನ್.ಎಸ್.ರಾವ್ ವಿರಚಿತ ವಿಷಜ್ವಾಲೆ ಮತ್ತು ಕರ್ನಾಟಕ ರಮಾರಮಣ ಎಂಬ ಐತಿಹಾಸಿಕ ನಾಟಕಗಳÀಲ್ಲೂ ನಟಿಸಿದ್ದಾರೆ. ಹಿಂದೆ ಉತ್ತರ ಕರ್ನಾಟಕದಿಂದ ಯಂಕಂಚಿ ನಾಟಕ ಕಂಪನಿ ಗೊರೂರಿನಲ್ಲಿ ಕ್ಯಾಂಪ್ ಮಾಡಿ ಮುದುಕನ ಮದುವೆ, ಬಸ್ ಕಂಡಕ್ಟರ್, ಗೌಡ್ರು ಗದ್ಲ ಮೊದಲಾದ ಸಾಮಾಜಿಕ ನಾಟಕ ಪ್ರದರ್ಶಿಸಿತು. ಈ ವೇಳೆ ನರಸಿಂಹರಾಜು, ಶೈಲಶ್ರೀ, ಸುದರ್ಶನ್ ಮೊದಲಾದ ಸಿನಿ ನಟರು ಈ ಕಂಪನಿಗೆ ಪಾತ್ರದಾರಿಗಳಾಗಿ ಬಂದು ಅಭಿನಯಿಸಿದ್ದರು. ಆಗ ಒಬ್ಬ ಕಲಾವಿದರಿಗೆ ಉಷಾರಿಲ್ಲದಂತಾಗಿ ನಾಟಕದವರು ಮಲ್ಲಪ್ಪನವರನ್ನು ಡ್ಯಾಂ ಬಳಿ ಹುಡುಕಿಕೊಂಡು ಹೋಗಿ ಆ ಪಾತ್ರ ನಿರ್ವಹಿಸಲು ಕರೆದು ನಟಿಸಿದ್ದಾಗಿ ತಿಳಿಸಿದರು. ಡ್ಯಾಂ ಬಳಿ ಮಲ್ಲಪ್ಪ ವರ್ಕ್ ಇನ್ಸ್÷ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುಟ್ಟಿದ ದಿನಾಂಕ ಕೇಳಿದೆ. ತಾ. ೧೧.೨.೧೯೫೨ ಎಂದರು. ತಂದೆ ಡಿ.ಕೆ.ಜಮನಪ್ಪ, ತಾಯಿ ಮಹಾದೇವಮ್ಮ. ಮಿಡಲ್ ಸ್ಕೂಲ್ ವಿದ್ಯೆ ದೂರದಲ್ಲಿ ಓದಿ ಹೈಸ್ಕೂಲು ದೇವನೂರು .ಪಿಯುಸಿ ನಂಜನಗೂಡು ಮುಗಿಸಿ ದಿನಗೂಲಿ ಸೇವೆಯಿಂದ ಖಾಯಂಗೊAಡು ಮೈಸೂರು ಜಿಲ್ಲಾ ಪಂಚಾಯತ್‌ನಲ್ಲಿ ಎಸ್‌ಡಿಎ ಆಗಿ ನಿವೃತ್ತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group